More

    ಕೆವೈಸಿ ಮಾಡದಿದ್ದರೆ ಖಾತೆ ಬಂದ್! ಹೊಸ ವರ್ಷಕ್ಕೆ ಆರ್​ಬಿಐ ಹೊಸ ನಿಯಮ ಗ್ರಾಹಕರು ಅಗತ್ಯ ದಾಖಲೆ ನೀಡುವುದು ಕಡ್ಡಾಯ

    ಮುಂಬೈ: ಬ್ಯಾಂಕ್ ಖಾತೆಗಳ ಕೆವೈಸಿ (ಗ್ರಾಹಕರ ಅಗತ್ಯ ಮಾಹಿತಿ) ನಿಯಮ ಪಾಲಿಸದ ವ್ಯಕ್ತಿಗಳಿಗೆ ಹೊಸ ವರ್ಷದಲ್ಲಿ ಶಾಕ್ ಕಾದಿದೆ. ಇಂಥವರ ಖಾತೆಯನ್ನು ಬ್ಯಾಂಕ್​ಗಳು ನಿಷ್ಕ್ರಿಯಗೊಳಿಸುವ ಸಾಧ್ಯತೆ. ಆರ್​ಬಿಐ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಈ ನಿಯಮ ಜ.1ರಿಂದಲೇ ಜಾರಿಗೆ ಬರಲಿದೆ.

    ದೇಶದಲ್ಲಿ ಲಕ್ಷಾಂತರ ಬ್ಯಾಂಕ್ ಖಾತೆಗಳು ಇನ್ನೂ ಅಗತ್ಯ ಕೆವೈಸಿ ನಿಯಮ ಪಾಲನೆ ಮಾಡಿಲ್ಲ. ವೈಯಕ್ತಿಕ ಖಾತೆಗಳ ಜತೆಗೆ ದೊಡ್ಡ ಹಣಕಾಸು ಸಂಸ್ಥೆಗಳ ಖಾತೆಗಳೂ ಇದರಲ್ಲಿ ಸೇರಿವೆ ಎನ್ನಲಾಗಿದೆ. ಕೆವೈಸಿ ಕಡ್ಡಾಯ ನಿಯಮವನ್ನು ಆರ್​ಬಿಐ ಈ ಹಿಂದೆಯೇ ಜಾರಿ ಮಾಡಿದೆ. ಕೆವೈಸಿ ಆಗದ ಖಾತೆಗಳನ್ನು ಸ್ಥಗಿತ ಮಾಡಲು ಹಲವು ತಿಂಗಳ ಹಿಂದೆಯೇ ಆದೇಶ ಹೊರಡಿಸಿತ್ತು. ಆದರೆ ಕರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಈ ಆದೇಶವನ್ನು ಡಿ. 31ರ ವರೆಗೆ ಮುಂದೂಡಿತ್ತು. ಈಗ ಅವಧಿ ಮುಕ್ತಾಯ ವಾಗುತ್ತಿದ್ದು, ಲಕ್ಷಾಂತರ ಖಾತೆಗಳು ಕ್ರಮ ಎದುರಿಸುವ ಸಾಧ್ಯತೆ ಇದೆ.

    ಯಾಕೆ ನಿಯಮ?: ಹಣಕಾಸು ಅಕ್ರಮಗಳನ್ನು ನಿಯಂತ್ರಿಸಲು ಆರ್​ಬಿಐ ಈ ನಿಯಮ ರೂಪಿಸಿದೆ. ಬೇನಾಮಿ, ನಕಲಿ ಖಾತೆಗಳ ಮೂಲಕ ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆ ತಡೆ ಇನ್ನಿತರ ಉದ್ದೇಶಕ್ಕೆ ಖಾತೆದಾರರ ಪೂರ್ಣ ವಿವರ ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ಖಾತೆದಾರರ ಅಧಿಕೃತ ಗುರುತು, ವಿಳಾಸ, ಪ್ಯಾನ್, ಆಧಾರ್ ಸಂಖ್ಯೆ ಇನ್ನಿತರ ವಿವರವನ್ನು ಬ್ಯಾಂಕ್​ಗಳಿಗೆ ನೀಡಬೇಕಿದೆ.

    ಮೋಸದ ಕರೆಗೆ ಎಚ್ಚರ: ಕೆವೈಸಿ ನೆಪದಲ್ಲಿ ಹಣ ಲಪಟಾಯಿಸುವ ಸೈಬರ್ ಕಳ್ಳರ ಬಗ್ಗೆ ಗ್ರಾಹಕರು ಎಚ್ಚರದಿಂದ ಇರಬೇಕು. ದೂರವಾಣಿ ಮೂಲಕವೇ ಪಾಸ್​ವರ್ಡ್, ಎಟಿಎಂ ಪಿನ್, ಸಿವಿವಿ ಸಂಖ್ಯೆಗಳನ್ನು ಪಡೆದು ಖಾತೆಯಿಂದ ಹಣ ದೋಚುವ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಗ್ರಾಹಕರು ಈ ಬಗ್ಗೆ ಜಾಗೃತಿ ಹೊಂದುವುದು ಅಗತ್ಯ.

    ಯಾರಿಗೆ ಅಗತ್ಯ?: ಸಾಮಾನ್ಯ ಉಳಿತಾಯ ಖಾತೆಗಳನ್ನು ಹೊಂದಿ ರುವ ವ್ಯಕ್ತಿಗಳು ನಿಯಮ ಪ್ರಕಾರ 10 ವರ್ಷಕ್ಕೆ ಒಮ್ಮೆ ಕೆವೈಸಿ ಅಪ್​ಡೇಟ್ ಮಾಡಿದರೆ ಸಾಕು. ಖಾತೆ ತೆರೆಯುವಾಗಲೇ ಪೂರ್ಣ ಕೆವೈಸಿ ಪ್ರಕ್ರಿಯೆ ಮುಗಿಸಿದ್ದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಅತ್ಯಧಿಕ ಮೊತ್ತದ ವಹಿವಾಟು ಹೊಂದಿರುವ, ಹೈರಿಸ್ಕ್ ಎಂದು ಪರಿಗಣಿಸಲಾಗುವ ಖಾತೆಗೆ 2 ವರ್ಷಕ್ಕೊಮ್ಮೆ ಕೆವೈಸಿ ದಾಖಲೆ ನೀಡಬೇಕು.

    ಗ್ರಾಹಕರೇನು ಮಾಡಬೇಕು?: ಕೆವೈಸಿ ಆಗದ ಖಾತೆದಾರರು ಸಮೀಪದ ಬ್ಯಾಂಕ್ ಶಾಖೆಗಳನ್ನು ಸಂರ್ಪಸಬಹುದು. ಪ್ರಸ್ತುತ ಬಹುತೇಕ ಬ್ಯಾಂಕ್​ಗಳು ಆನ್​ಲೈನ್ ಮೂಲಕವೇ ಕೆವೈಸಿ ಪ್ರಕ್ರಿಯೆ ನಡೆಸುತ್ತಿವೆ. ವೀಡಿಯೊ ಕಾಲ್, ಇ ಮೇಲ್, ಬ್ಯಾಂಕುಗಳ ಅಧಿಕೃತ ವೆಬ್​ಸೈಟ್ ಮೂಲಕವೂ ದಾಖಲೆಗಳನ್ನು ನೀಡಬಹುದು.

    ಅವನಿಂದ ಅವಳಿಗೆ ಕರಿಮಣಿ ಪ್ರಯೋಗ; ಮಾವನ ಮನೆಯಲ್ಲಿ ಆತನಿಗೇ ಕತ್ತರಿ ಪ್ರಯೋಗ; ತಪ್ಪಿಹೋಯ್ತು ಸಂಸಾರದ ವ್ಯಾಕರಣ!

    ಸಾರ್ವಜನಿಕರೇ ಹುಷಾರು.. ಈಗಾಗಲೇ ಜಗತ್ತಿನಲ್ಲಾಗಿದೆ ಕರೊನಾ ನಾಲ್ಕನೇ ಅಲೆ ಶುರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts