More

    ವಸತಿ ನಿಲಯದ ಮೇಲ್ವಿಚಾರಕಿ ಅಮಾನತ್ತಿಗೆ ಆಗ್ರಹ; ಮಕ್ಕಳಿಂದ ಪ್ರತಿಭಟನೆ

    ರಾಣೆಬೆನ್ನೂರ: ನಗರದ ಹಳೆ ಪಿ.ಬಿ. ರಸ್ತೆಯ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಸತಿ ಶಾಲೆಯ ಮಕ್ಕಳು ವಸತಿ ನಿಲಯದ ಮೇಲ್ವಿಚಾರಕಿಯನ್ನು ಅಮಾನತುಗೊಳಿಸಲು ಆಗ್ರಹಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
    ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಮಾತನಾಡಿ, ವಸತಿ ನಿಲಯದಲ್ಲಿ 1ರಿಂದ 5ನೇ ತರಗತಿ ವರೆಗೆ ಅಭ್ಯಾಸ ಮಾಡುವ 125 ಮಕ್ಕಳು ಇದ್ದಾರೆ. ತಂದೆ ತಾಯಿಯನ್ನು ಬಿಟ್ಟು 1 ತರಗತಿಯಿಂದಲೇ ಪ್ರವೇಶ ಪಡೆದಿರುವ ಮಕ್ಕಳಿಗೆ ವಸತಿ ನಿಲಯದ ಮೇಲ್ವಿಚಾರಕಿ ಮೂಲಸೌಕರ್ಯ ನೀಡದೆ ಮಕ್ಕಳಿಗೆ ತೊಂದರೆ ಕೊಡುತ್ತಿದ್ದಾರೆ.
    ಸರಿಯಾದ ರೀತಿಯಲ್ಲಿ ಊಟ ಉಪಚಾರ ಕೊಡುತ್ತಿಲ್ಲ. ಊಟ ಕೇಳಿದ ವಿದ್ಯಾರ್ಥಿಗಳ ಮೇಲೆ ರೇಗಾಡುವುದು, ಉನ್ನತ ಅಧಿಕಾರಗಳು ಬಂದ ಮೇಲೆ ಯಾವುದೇ ಸಮಸ್ಯೆಗಳನ್ನು ಹೇಳದಂತೆ ಬೆದರಿಕೆ ಹಾಕುವುದು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಸೌಲಭ್ಯಗಳಿಂದ ವಂಚಿಸಿರುವುದು ಹಾಗೂ ವಿದ್ಯಾರ್ಥಿಗಳನ್ನು ಅಮಾನವೀಯ ರೀತಿಯಲ್ಲಿ ಥಳಿಸುತ್ತಿರುವುದು ಸರಿಯಲ್ಲ. ಆದ್ದರಿಂದ ವಸತಿ ನಿಲಯದ ಮೇಲ್ವಿಚಾರಕಿಯ ಮೇಲೆ ಸ್ವಯಂ ದೂರು ದಾಖಲಿಸಿ ಈ ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
    ಪ್ರತಿಭಟನಾ ಸ್ಥಳಕ್ಕೆ ಬಂದ ತಹಸೀಲ್ದಾರ್ ಎಚ್.ಎನ್. ಶಿರಹಟ್ಟಿ ಎದುರು ಮಕ್ಕಳು ಸಮಸ್ಯೆ ಹೇಳಿಕೊಂಡು ಮನವಿ ಸಲ್ಲಿಸಿದರು. ವಸತಿ ನಿಲಯದ ಮೇಲ್ವಿಚಾರಕಿ ಮೇಲೆ ಕೂಡಲೇ ಕ್ರಮಕ್ಕೆ ಮುಂದಾಗಬೇಕು ಎಂದು ತಹಸೀಲ್ದಾರ್ ಎಚ್.ಎನ್. ಶಿರಹಟ್ಟಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ದೇವಾನಂದ ನಾಯಕ ಅವರಿಗೆ ಸೂಚಿಸಿದರು.
    ಪ್ರಮುಖರಾದ ಹೊನ್ನಪ್ಪ ಕುದರಿಹಾಳ, ಬಸವರಾಜ ಬಿ., ವಿದ್ಯಾರ್ಥಿಗಳಾದ ಹರೀಶ ಎಸ್.ಜಿ., ರೇಣುಕಾ ಜಾಗಟಿ, ಸಂತೋಷ ಲಮಾಣಿ, ಪ್ರಗತಿ ದಾಸರೆಡ್ಡಿ, ಹನುಮಂತ ಲಮಾಣಿ, ಲಕ್ಷ್ಮೀ, ಕಿರಣ ಸೇರಿ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts