More

    ಅಪಘಾತ ವಲಯವಾದ ಬಿಕರ್ನಕಟ್ಟೆ-ಪಡೀಲ್ ರಸ್ತೆ

    ಹರೀಶ್ ಮೋಟುಕಾನ ಮಂಗಳೂರು

    ರಾಷ್ಟ್ರೀಯ ಹೆದ್ದಾರಿ 73ರ ನಗರದ ಬಿಕರ್ನಕಟ್ಟೆ-ಮರೋಳಿ-ಪಡೀಲ್ ನಡುವಿನ ರಸ್ತೆ ವಾಹನಗಳ ಅಪಘಾತ ತಾಣವಾಗಿ ಮಾರ್ಪಾಡಾಗಿದ್ದು, ಪಾದಚಾರಿಗಳು ಜೀವ ಭಯದಿಂದ ಸಂಚರಿಸುವ ಪರಿಸ್ಥಿತಿ ಇದೆ. ಬುಧವಾರ ಸ್ಕೂಟರ್‌ಗೆ ಕಾರು ಡಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡಿದ್ದರು.

    ಈಗಾಗಲೇ ಸಾಕಷ್ಟು ವಾಹನಗಳು ಅಪಘಾತಗಳು ಸಂಭವಿಸಿದ್ದು, ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮರೋಳಿಯಿಂದ ಪಡೀಲ್ ತನಕ ರಸ್ತೆ ಸಾಕಷ್ಟು ತಿರುವುಗಳಿಂದ ಕೂಡಿದೆ. ಬಿಕರ್ನಕಟ್ಟೆ ಮೇಲ್ಸೇತುವೆಯಿಂದ ಮರೋಳಿ ತನಕ ರಸ್ತೆಯ ಗೂಡ್ಸ್ ಲಾರಿಗಳ ಪಾರ್ಕಿಂಗ್, ವಿರುದ್ಧ ದಿಕ್ಕಿನಿಂದ ವಾಹನಗಳ ಸಂಚಾರ ಮೊದಲಾದ ಕಾರಣಗಳಿಂಂದ ಅಪಾಯಕಾರಿಯಾಗಿದೆ. ರಾತ್ರಿ ವೇಳೆಯಲ್ಲಿ ಕೆಲವೊಮ್ಮೆ ಬೀದಿದೀಪಗಳು ಉರಿಯದೆ ಕತ್ತಲಿನಲ್ಲಿ ಸಾಗಬೇಕಾದ ಸ್ಥಿತಿ ಇದೆ.

    ಅಪಾಯಕಾರಿ ತೆರೆದ ಚರಂಡಿ

    ಬಿಕರ್ನಕಟ್ಟೆ ಮೇಲ್ಸೇತುವೆ ಅಂತ್ಯದಲ್ಲಿ ಸರ್ವಿಸ್ ರಸ್ತೆ ಮತ್ತು ಮುಖ್ಯ ರಸ್ತೆಯ ಅಂಚಿನಲ್ಲಿ ಎಡಭಾಗದಲ್ಲಿ ತೆರೆದ ಚರಂಡಿ ಇದೆ. ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದು ಗಾಯಗೊಂಡಿರುವ ಉದಾಹರಣೆ ಇದೆ. ಈ ಮೊದಲು ಕಬ್ಬಿಣದ ತಡೆಬೇಲಿ ಅಳವಡಿಸಲಾಗಿತ್ತು. ಸದ್ಯ ಅವುಗಳು ಕೆಲವು ವಾಹನಗಳು ಗುದ್ದಿರುವ ಪರಿಣಾಮ ಅವು ಎದ್ದು ಹೋಗಿ ಗುಜರಿ ಪಾಲಾಗಿವೆ. ಶೀಘ್ರ ಇಲ್ಲಿ ತಡೆಗೋಡೆ ಅಳವಡಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಸೂಚನಾ ಫಲಕಗಳಿಲ್ಲ

    ಹೆದ್ದಾರಿ ರಸ್ತೆಯಾಗಿರುವುದರಿಂದ ಅಲ್ಲಲ್ಲಿ ಸೂಚನಾ ಫಲಕ ಅಳವಡಿಸಿ ತಿರುವುಗಳು, ವೇಗದ ಮಿತಿ, ಅಡ್ಡ ರಸ್ತೆಗಳ ಮಾಹಿತಿ ನೀಡಬೇಕು. ಆದರೆ ಈ ರಸ್ತೆಯಲ್ಲಿ ಇದ್ಯಾವುದೂ ಇಲ್ಲ. ಹೊಸದಾಗಿ ರಸ್ತೆಯಲ್ಲಿ ವಾಹನ ಚಲಾಯಿಸುವವರು ರಸ್ತೆ ಬಗ್ಗೆ ಮಾಹಿತಿ ಸಿಗುವುದಿಲ್ಲ. ರಸ್ತೆಯ ಅಂಚು ಮತ್ತು ಡಿವೈಡರ್ ಬಳಿ, ಮಧ್ಯಮದಲ್ಲಿ ಅಳವಡಿಸಲಾಗಿದ್ದ ರಿಫ್ಲೆಕ್ಟರ್‌ಗಳು ಪ್ರತಿಫಲನಗೊಳ್ಳುವುದಿಲ್ಲ. ಮೇಲ್ಸೇತುವೆ ನಿರ್ಮಾಣವಾಗಿ ವರ್ಷಗಳು ಕಳೆದರೂ ಬೀದಿದೀಪ ಇದುವರೆಗೆ ಅಳವಡಿಸಿಲ್ಲ. ಪರಿಣಾಮ ವಾಹನಗಳು ಕತ್ತಲೆಯಲ್ಲೇ ಸಾಗುವಂತಾಗಿದೆ.

    ರಾಂಗ್ ಸೈಡ್ ಸಂಚಾರ

    ಮರೋಳಿ ಕಡೆಯಿಂದ ಕುಲಶೇಖರಕ್ಕೆ ಹೋಗುವವರು ಇಲ್ಲಿ ರಾಂಗ್ ಸೈಡ್‌ನಲ್ಲಿ ಸಂಚರಿಸುವುದು ಸಾಮಾನ್ಯ. ದ್ವಿಚಕ್ರ ವಾಹನ, ಆಟೋ ರಿಕ್ಷಾಗಳು ಇಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತದೆ. ಇದು ಕೂಡ ಅವಘಡಗಳಿಗೆ ಕಾರಣವಾಗಿದೆ. ಇಂಧನ ಉಳಿಕೆ ಮತ್ತು ಹತ್ತಿರದ ದಾರಿ ಎಂದು ಎಲ್ಲರೂ ವಿರುದ್ಧ ದಿಕ್ಕಿನಲ್ಲೇ ಸಂಚರಿಸುತ್ತಿದ್ದು, ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳ ಚಾಲಕರು ಇದರಿಂದಾಗಿ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಇದೆ. ರಾತ್ರಿ ವೇಳೆ ರಾಂಗ್ ಸೈಡ್‌ನಲ್ಲಿ ಹೆಚ್ಚಾಗಿ ವಾಹನಗಳು ಸಂಚರಿಸುತ್ತಿವೆ.

    ಬಸ್ ತಂಗುದಾಣದ ಎದುರು ಪಾರ್ಕಿಂಗ್

    ಮರೋಳಿ ಜೋಡುಕಟ್ಟೆ ಬಳಿ ಬಸ್ ತಂಗುದಾಣದ ಮುಂಭಾಗದಲ್ಲೇ ಭಾರಿ ವಾಹನಗಳನ್ನು ಪಾರ್ಕ್ ಮಾಡುತ್ತಾರೆ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಇಲ್ಲಿ ಸಾಕಷ್ಟು ಗ್ಯಾರೇಜ್‌ಗಳಿದ್ದು, ಭಾರಿ ವಾಹನಗಳನ್ನು ಸಣ್ಣ ಪುಟ್ಟ ರಿಪೇರಿಗಳಿಗೆ ಇಲ್ಲಿ ನಿಲ್ಲಿಸುತ್ತಾರೆ. ಕೆಲವೊಮ್ಮೆ ಸಾಲಾಗಿ ಲಾರಿಗಳು ನಿಂತಿರುವುದೂ ಕಂಡುಬರುತ್ತವೆ. ರಾತ್ರಿ ವೇಳೆಯಲ್ಲೂ ಇದು ಸಾಮಾನ್ಯವಾಗಿದೆ. ಈ ಹಿಂದೆ ಹಲವು ಬಾರಿ ಪೊಲೀಸರು ಎಚ್ಚರಿಕೆ ನೀಡಿ ತೆರವುಗೊಳಿಸಿದ್ದರೂ, ರಸ್ತೆ ಬದಿ ಪಾರ್ಕಿಂಗ್ ಮಾಡುವುದು ಮುಂದುವರಿದಿದೆ.

    ಮರೋಳಿ ಭಾಗದ ಹೆದ್ದಾರಿ ಸಮಸ್ಯೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಸೂಚನಾ ಫಲಕಗಳು, ದುರಸ್ತಿ ಕಾರ್ಯ ಮಾಡುವಂತೆ ಸೂಚಿಸಲಾಗುವುದು. ಸಂಚಾರ ಪೊಲೀಸರು ಕೂಡ ಈ ಕಡೆಗೆ ಗಮನವಹಿಸಲು ತಿಳಿಸಲಾಗುವುದು. ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾದ ಅನಿವಾರ್ಯತೆ ಇದೆ.
    – ಸುಧೀರ್ ಶೆಟ್ಟಿ ಕಣ್ಣೂರು ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts