More

    ಏಕರೂಪ ಶೈಕ್ಷಣಿಕ ವೇಳಾಪಟ್ಟಿ ಜಾರಿಗೆ ಎಬಿವಿಪಿ ಒತ್ತಾಯ

    ಶಿವಮೊಗ್ಗ: ಮಂಗಳೂರು ವಿಶ್ವವಿದ್ಯಾಲಯ ಮಾದರಿ ಏಕರೂಪ ಶೈಕ್ಷಣಿಕ ವೇಳಾಪಟ್ಟಿ ಜಾರಿಗೊಳಿಸುವುದು, ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಕಡಿಮೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ಸೋಮವಾರ ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.
    ಪದವಿಯ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ವಿವಿಯು ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಭಾರಿ ವಿರೋಧದ ಹಿನ್ನಲೆಯಲ್ಲಿ ಬಿಕಾಂ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕದಲ್ಲಿ 300 ರೂ. ಕಡಿಮೆ ಮಾಡಿತ್ತು. ಆದರೆ ಹಲವು ಬಾರಿ ಮನವಿ ಮಾಡಿದರೂ ಇತರೆ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಕಡಿಮೆ ಮಾಡಿದೇ, ಬಿಎಸ್ಸಿ ಎರಡನೇ ಸೆಮಿಸ್ಟರ್‌ನ ಪರೀಕ್ಷಾ ಶುಲ್ಕವನ್ನೂ ಹೆಚ್ಚಿಸಿದೆ ಎಂದು ದೂರಿದರು.
    ರಾಜ್ಯದ ಬಹುತೇಕ ಎಲ್ಲ ವಿವಿಗಳ ಎನ್‌ಇಪಿ ಬ್ಯಾಚ್‌ನ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ, ಅಂಕಪಟ್ಟಿ ಶುಲ್ಕ ಸೇರಿದಂತೆ ಬಹುತೇಕ 1 ಸಾವಿರ ರೂ. ಗಳ ಆಸುಪಾಸಿನಲ್ಲಿದೆ. ಆದರೆ ಕುವೆಂಪು ವಿವಿ ಭಾರೀ ಪ್ರಮಾಣದಲ್ಲಿ ಶುಲ್ಕ ಹೆಚ್ಚಳ ಮಾಡಿದೆ. ಹಾಗಾಗಿ ಶೀಘ್ರವೇ ಎಲ್ಲ ಕೋರ್ಸ್‌ಗಳ ಪರೀಕ್ಷಾ ಶುಲ್ಕ ಕಡಿಮೆ ಮಾಡಬೇಕೆಂದು ಒತ್ತಾಯಿಸಿದರು.
    ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಸ್ಪಷ್ಟತೆ ಇಲ್ಲದ ಕಾರಣ ವಿದ್ಯಾರ್ಥಿಗಳು ಪರದಾಟ ನಡೆಸುತ್ತಿದ್ದಾರೆ. 2022-23ನೇ ಸಾಲಿನ ಪದವಿ ಪ್ರಥಮ ಸೆಮಿಸ್ಟರ್‌ನ ತರಗತಿಗಳು ಸೆ.1ರಿಂದ ಆರಂಭವಾಗಿವೆ. ಆದರೆ ಇದೀಗ 2021-22ನೇ ಸಾಲಿನ ಪ್ರಥಮ ವರ್ಷದ ತರಗತಿಗಳು ನಡೆಯುತ್ತಿದ್ದು ಬಹುತೇಕ ಕಾಲೇಜುಗಳಲ್ಲಿ ಕೊಠಡಿಗಳ ಕೊರತೆ ಆಗುತ್ತಿದೆ. ಇದರಿಂದ ತರಗತಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಜ.4ರಂದು ಲಿಖಿತ ಪರೀಕ್ಷೆಗಳನ್ನು ಆರಂಭಿಸಲು ಆದೇಶಿಸಿತ್ತು. ವಿರೋಧಕ್ಕೆ ಮಣಿದು ಮತ್ತೆ 21 ದಿನ ಮುಂದೂಡಿದೆ. ಈ ಅವಧಿಯೂ ವಿದ್ಯಾರ್ಥಿಗಳಿಗೆ ಸಾಲುತ್ತಿಲ್ಲ. ವಿವಿ ಹೊರಡಿಸಿರುವ ವೇಳಾಪಟ್ಟಿ ಪ್ರಕಾರ ಮೊದಲ ಸೆಮಿಸ್ಟರ್‌ನ ಪರೀಕ್ಷೆ ನಡೆದರೆ ಪರೀಕ್ಷೆ ಮತ್ತು ಮೌಲ್ಯಮಾಪನಕ್ಕೆ ಅಧ್ಯಾಪಕರು ತೊಡಗುವುದರಿಂದ ಮತ್ತು ಕೊಠಡಿಗಳ ಕೊರತೆ ಎದುರಾಗುವುದರಿಂದ ಮೂರನೇ ಮತ್ತು ಐದನೇ ಸೆಮಿಸ್ಟರ್ ವಿದ್ಯಾರ್ಥಿಗಳ ತರಗತಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಈ ಕೂಡಲೇ ಮಂಗಳೂರು ವಿವಿಯು ಜಾರಿಗೊಳಿಸಿದ ಏಕರೂಪ ಶೈಕ್ಷಣಿಕ ವೇಳಾಪಟ್ಟಿ ಮಾದರಿಯಾಗಿಟ್ಟುಕೊಂಡು ಪ್ರಸಕ್ತ ಸೆಮಿಸ್ಟರ್‌ಗಳಿಗೆ ಅನ್ವಯವಾಗುವಂತೆ ವೇಳಾಪಟ್ಟಿ ಪುನರ್ ಪರಿಶೀಲಿಸಬೇಕೆಂದು ಆಗ್ರಹಿಸಿದರು.
    ಎಬಿವಿಪಿ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ, ಸಿಂಡಿಕೇಟ್ ಮಾಜಿ ಸದಸ್ಯ ಧರ್ಮಪ್ರಸಾದ್, ಶಿವಮೊಗ್ಗ ಜಿಲ್ಲಾ ಪ್ರಮುಖ ಪ್ರಮೋದ್‌ಕುಮಾರ್, ಶಿವಮೊಗ್ಗ ವಿಭಾಗ ಸಂಘಟನಾ ಕಾರ್ಯದರ್ಶಿ ವಿಜಯ್ ಗೌಡರ್, ಶಿವಮೊಗ್ಗ ನಗರ ಕಾರ್ಯದರ್ಶಿ ಎಚ್.ಕೆ.ಪ್ರವೀಣ್, ವಿಧಾತ್ರಿ, ಯಶಸ್ವಿನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts