More

    ಗುದ್ದಾಡಿದ್ದಕ್ಕೆ ಕಾಂಗ್ರೆಸ್ ಶ್ಲಾಘನೆ!; ವಿಚಿತ್ರ ಪ್ರತಿಕ್ರಿಯೆ

    ಬೆಂಗಳೂರು: ವಿಧಾನಪರಿಷತ್​ನಲ್ಲಿ ಮಂಗಳವಾರ ನಡೆದ ಘಟನೆ ಬಗ್ಗೆ ಕಾಂಗ್ರೆಸ್ ವಿಚಿತ್ರವಾಗಿ ಪ್ರತಿಕ್ರಿಯೆ ನೀಡಿದೆ. ಒಟ್ಟಾರೆ ಘಟನೆ ಬಗ್ಗೆ ಕನಿಷ್ಟ ಪಶ್ಚಾತ್ತಾಪವನ್ನೂ ವ್ಯಕ್ತಪಡಿಸದೆ, ಉಪ ಸಭಾಪತಿ ಅವರನ್ನು ದರದರನೆ ಪೀಠದಿಂದ ಎಳೆದುತಂದ ಪಕ್ಷದ ಸದಸ್ಯ ನಾರಾಯಣಸ್ವಾಮಿ ಅವರನ್ನು ಹಾಡಿ ಹೊಗಳಿದೆ. ಪರಿಷತ್​ನಲ್ಲಿರುವ ಪಕ್ಷದ ಸದಸ್ಯರ ಕಾರ್ಯವೈಖರಿಯನ್ನು ಶ್ಲಾಘಿಸಿದೆ. ಕಾಂಗ್ರೆಸ್ ಹಿರಿಯ ಮುಖಂಡ, ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಈ ವಿಚಾರವಾಗಿ ಮಾತನಾಡಿದ್ದು, ರೈತರ ಪರವಾಗಿ ನಿಲುವು ತೆಗೆದುಕೊಂಡಿದ್ದಕ್ಕೆ ಕಾಂಗ್ರೆಸಿಗರನ್ನೇ ಕೆಟ್ಟದಾಗಿ ಬಿಂಬಿಸಿದರು. ಬಿಜೆಪಿ-ಜೆಡಿಎಸ್ ಸೇರಿಕೊಂಡು ಮಾಡಿದ ಪ್ಲ್ಯಾನ್​ ಇದು. ಸಂವಿಧಾನ ವಿರೋಧವಾಗಿ ಬಿಜೆಪಿಯವರು ನಡೆದುಕೊಂಡಿದ್ದು. ನಮ್ಮ ಹೀರೋ ನಾರಾಯಣಸ್ವಾಮಿ. ಅವರು ನಿನ್ನೆಯ (ಮಂಗಳವಾರ) ಮ್ಯಾನ್​ಆಫ್ ದಿ ಮ್ಯಾಚ್ ಗೆದ್ದಿದ್ದಾರೆ ಎಂದು ಹಾಡಿ ಹೊಗಳಿದರು. ಉಪ ಸಭಾಪತಿ ಅಲ್ಲಿ ಕೂರಲು ಅರ್ಹರಲ್ಲ ಎಂದು ನಾರಾಯಣಸ್ವಾಮಿ ಕರೆತಂದಿದ್ದಾರೆ ಅಷ್ಟೇ. ಹೀಗಾಗಿ ನಾವೆಲ್ಲರೂ ನಾರಾಯಣಸ್ವಾಮಿ ಪರ ಇದ್ದೇವೆ. ಮಾಧ್ಯಮಗಳಲ್ಲಿ ತಪ್ಪಾಗಿ ಬರುತ್ತಿದೆ ಎಂದ ಅವರು, ವಾಸ್ತವದಲ್ಲಿ ನಡೆದಿದ್ದೇ ಬೇರೆ ಎಂದು ಹರಿಪ್ರಸಾದ್ ಮಾಧ್ಯಮಗಳ ಮೇಲೆ ಗೂಬೆಕೂರಿಸಿದರು.

    ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಇದೇ ವಿಚಾರದಲ್ಲಿ ಹೇಳಿಕೆ ನೀಡಿದ್ದು, ನಿನ್ನೆ ಪರಿಷತ್ ಘಟನೆಯನ್ನು ರಾಜ್ಯದ ಜನರು ನೋಡಿದ್ದಾರೆ. ಘಟನೆ ತಪ್ಪು ಅಂತ ಅನೇಕರು ಹೇಳುತ್ತಿದ್ದಾರೆ. ನಾನು ಸಹ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ ಎಂದರು. ಆದರೆ, ಆಡಳಿತ ಪಕ್ಷದವರು ನಡೆದುಕೊಂಡ ರೀತಿ ಸರಿ ಇತ್ತೇ? ಅವರು ಏನು ಮಾಡಿದ್ರೋ ನಾವು ಹಾಗೇ ಮಾಡಿದೆವು. ನಮ್ಮ ಕೊಲೆ ಮಾಡಲು ಬಂದವರನ್ನು ನೋಡಿಕೊಂಡು ಸುಮ್ಮನೆ ಇರಬೇಕೇ? ಸುಮ್ಮನಿದ್ದರೆ ಸಭಾಪತಿ ಸ್ಥಾನವನ್ನು ನಾವು ಕಳೆದು ಕೊಳ್ಳಬೇಕಾಗಿತ್ತು. ಹೀಗಾಗಿ ನಮ್ಮೆಲ್ಲ ಪರಿಷತ್ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ವರದಿ ರವಾನಿಸಿದ ಕಾರ್ಯದರ್ಶಿ: ಪರಿಷತ್ ಅಧಿವೇಶನದಲ್ಲಿ ಮಂಗಳವಾರದ ಘಟನೆಗಳ ವೃತ್ತಾಂತ ಸಹಿತ ಕಲಾಪದ ಸಂಪೂರ್ಣ ವರದಿಯು ಪರಿಷತ್ ಕಾರ್ಯದರ್ಶಿಯಿಂದ ರಾಜ್ಯಪಾಲರಿಗೆ ರವಾನೆಯಾಗಿದೆ. ಪ್ರತಿಬಾರಿ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದಾಗ ರಾಜ್ಯಪಾಲರಿಗೆ ವರದಿ ಸಲ್ಲಿಸುವ ಮೂಲಕ ಅಧಿವೇಶನ ಸಮಾಪ್ತಿಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಅದರಂತೆಯೇ ರಾಜ್ಯಪಾಲರಿಗೆ ವರದಿಯನ್ನು ಪರಿಷತ್ ಕಾರ್ಯದರ್ಶಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts