More

    ದುರ್ಬಲರಿಗೆ ಸಿಗದ ಸೂರು

    ಧಾರವಾಡ: ದೇವರಾಜ ಅರಸು ವಿಶೇಷ ವರ್ಗದ ವಸತಿ ಯೋಜನೆಯಡಿ ಮನೆ ನಿರ್ಮಾಣ ಕಾರ್ಯವನ್ನು ಸರ್ಕಾರ ಮರೆತಿದೆ. ಯೋಜನೆಯಡಿ ನೀಡಿದ್ದ ಮನೆ ನಿರ್ಮಾಣ ಗುರಿಯನ್ನು ಹಿಂಪಡೆದು ದುರ್ಬಲ ವರ್ಗದವರಿಗೆ ಅನ್ಯಾಯ ಎಸಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಆಯ್ಕೆಯಾದ ಫಲಾನುಭವಿಗಳು ಬೇರೆ ವಸತಿ ಯೋಜನೆಗಳ ಅಡಿ ಮನೆ ನಿರ್ವಿುಸಿಕೊಳ್ಳಲೂ ಆಗದೆ ಪರದಾಡುತ್ತಿದ್ದಾರೆ.

    ಬಸವ ವಸತಿ, ಪ್ರಧಾನಮಂತ್ರಿ ಆವಾಸ್, ಅಂಬೇಡ್ಕರ್ ವಸತಿ ಯೋಜನೆಗಳಡಿ ಮನೆ ಕಟ್ಟಿಕೊಳ್ಳಲು ಸರ್ಕಾರ ಯೋಜನೆ ರೂಪಿಸಿದೆ. ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳ ಮರು ನಿರ್ವಣಕ್ಕೂ ಅನುದಾನ ನೀಡಿದೆ. ಆದರೆ, ದೇವರಾಜ ಅರಸು ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳು ಅತಂತ್ರರಾಗಿದ್ದಾರೆ.

    ಯೋಜನೆಯಡಿ 2017- 18ರ ಸಾಲಿನ ಮನೆಗಳ ನಿರ್ವಣಕ್ಕೆ 2019ರ ಅಕ್ಟೋಬರ್​ನಲ್ಲಿ ಜಿಲ್ಲಾವಾರು ಗುರಿ ನೀಡಲಾಗಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿಧವಾ ಫಲಾನುಭವಿಗಳನ್ನು, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅಂಗವಿಕಲರನ್ನು ಮತ್ತು ಕುಷ್ಠರೋಗದಿಂದ ಗುಣಮುಖರಾದ ಫಲಾನುಭವಿಗಳನ್ನು ಆರೋಗ್ಯ ಇಲಾಖೆಯಿಂದ ಆಯ್ಕೆ ಮಾಡಲು ಸೂಚಿಸಲಾಗಿತ್ತು. ಆಯಾ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಫಲಾನುಭವಿಗಳನ್ನು ಆಯ್ಕೆ ಮಾಡಿ ಅನುಮೋದನೆ ನೀಡಿತ್ತು. ನಂತರ ಸಮಿತಿಯು ವರ್ಗ, ತಾಲೂಕು, ಗ್ರಾಪಂವಾರು ಗುರಿ ನಿಗದಿಪಡಿಸಲು ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮವನ್ನು ಕೋರಿತ್ತು. 2020ರ ಫೆಬ್ರವರಿಯಲ್ಲಿ ಪ್ರಕ್ರಿಯೆ ನಡೆದಿತ್ತಾದರೂ, ಮಾರ್ಚ್​ನಲ್ಲಿ ಕರೊನಾ ಹಿನ್ನೆಲೆಯಲ್ಲಿ ಯೋಜನೆ ನನೆಗುದಿಗೆ ಬಿದ್ದಿದೆ. 2020ರ ಮಾ. 31ರಂದು ನಿಗಮವು ಆಯ್ಕೆ ಅನುಮೋದನೆಯನ್ನು ತಡೆಹಿಡಿದಿದ್ದು, ಈವರೆಗೂ ಮರು ಆಯ್ಕೆಗೆ ಅವಕಾಶ ಕಲ್ಪಿಸಿಲ್ಲ. ಜಿಲ್ಲಾ ಮಟ್ಟದ ಸಮಿತಿಯಲ್ಲಿ ಆಯ್ಕೆಯಾದ ಫಲಾನುಭವಿಗಳು ನಿತ್ಯ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಗ್ರಾ.ಪಂ., ತಾ.ಪಂ., ಜಿ.ಪಂ. ಕಚೇರಿಗಳಗೆ ತೆರಳಿ ವಿಚಾರಿಸುತ್ತಿದ್ದಾರೆ.

    ಅಡಕತ್ತರಿಯಲ್ಲಿ …: ಫಲಾನುಭವಿಗಳ ವಿವರವನ್ನು ವಸತಿ ನಿಗಮದ ವೆಬ್​ಸೈಟ್​ನಲ್ಲಿ ದಾಖಲಿಸಲಾಗಿದೆ. ಹೀಗಾಗಿ ಅವರ ಮನೆಗಳು ಅತಿವೃಷ್ಟಿಗೆ ಸಿಲುಕಿ ಬಿದ್ದರೂ ಪರಿಹಾರ ಪಡೆದುಕೊಳ್ಳಲಾಗುತ್ತಿಲ್ಲ. ಅಲ್ಲದೆ, ಸರ್ಕಾರದ ವಿವಿಧ ವಸತಿ ಯೋಜನೆಯಲ್ಲೂ ಮನೆ ನಿರ್ವಿುಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಜಿಪಂ ಮುಖ್ಯ ಯೋಜನಾಧಿಕಾರಿ ಹಾಗೂ ವಸತಿ ನೋಡಲ್ ಅಧಿಕಾರಿ, ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕರಿಗೆ ಪತ್ರ ಬರೆದು ಫಲಾನುಭವಿಗಳ ಆಯ್ಕೆ ಮತ್ತು ಅನುಮೋದನೆಗಾಗಿ ದಿನಾಂಕ ವಿಸ್ತರಿಸಲು ಕೋರಿದ್ದರು.

    ಪ್ರಸ್ತಾವನೆಯನ್ನು ಪರಿಶೀಲಿಸಿದ ನಿಗಮದ ಅಧಿಕಾರಿಗಳು, ಅರಸು ವಸತಿ ಯೋಜನೆಯಡಿ ನೀಡಲಾಗಿರುವ ಮನೆಗಳ ಗುರಿಯನ್ನು ಹಿಂಪಡೆದಿದ್ದಾರೆ. ಲಾಗಿನ್​ನಲ್ಲಿರುವ ಫಲಾನುಭವಿಗಳ ಅನುಮೋದನೆಗಾಗಿ ಸರ್ಕಾರದ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಸರ್ಕಾರ ಸ್ಪಂದಿಸದ ಕಾರಣ ದುರ್ಬಲ ವರ್ಗದ ಫಲಾನುಭವಿಗಳು ಹಿಡಿಶಾಪ ಹಾಕುತ್ತಿದ್ದಾರೆ.

    ಧಾರವಾಡದಲ್ಲಿ 764 ಜನರ ಆಯ್ಕೆ

    ಅರಸು ವಸತಿ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ 385 ವಿಧವೆಯರು, 372 ಅಂಗವಿಕಲರು ಹಾಗೂ 7 ಜನ ಕುಷ್ಠ ರೋಗದಿಂದ ನಿಮೂಲನೆಗೊಂಡವರು ಸೇರಿ 764 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇದೇರೀತಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸರಾಸರಿ 500 ಫಲಾನುಭವಿಗಳನ್ನು ಅನುಮೋದಿಸಲಾಗಿದೆ. ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಮನೆ ನಿರ್ವಿುಸಿಕೊಳ್ಳಲು ತಲಾ ಒಬ್ಬರಿಗೆ ನರೇಗಾ ಅಡಿ 90 ದಿನಗಳ ಕೂಲಿ ಒಳಗೊಂಡು 1.20 ಲಕ್ಷ ರೂ. ನಿಗದಿಪಡಿಸಲಾಗಿದೆ.

    ದೇವರಾಜ ಅರಸು ವಿಶೇಷ ವರ್ಗದ ವಸತಿ ಯೋಜನೆಯಡಿ ಮನೆಗಳ ನಿರ್ಮಾಣ ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿ ಸ್ಥಗಿತಗೊಂಡಿದೆ. ಈ ಬಗ್ಗೆ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದೆ. ತಡೆಹಿಡಿಯಲಾದ ಆಯ್ಕೆ ಅನುಮೋದನೆ ಪ್ರಕ್ರಿಯೆಗೆ ಶೀಘ್ರವೇ ಮರು ಚಾಲನೆ ಸಿಗುವ ಸಾಧ್ಯತೆ ಇದೆ.

    | ದೀಪಕ ಮಡಿವಾಳರ

    ಮುಖ್ಯ ಯೋಜನಾಧಿಕಾರಿ, ಧಾರವಾಡ ಜಿ.ಪಂ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts