More

    ಮುಷ್ಕರ ಕೈ ಬಿಟ್ಟರೂ ಸೇವೆಗೆ ಗೈರು

    ವಿಜಯಪುರ: ಹಳೆಯ ಪಿಂಚಣಿ ಯೋಜನೆ ಹಾಗೂ ಏಳನೇ ವೇತನ ಆಯೋಗ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಬುಧವಾರ ಮುಷ್ಕರ ಹಮ್ಮಿಕೊಂಡ ಹಿನ್ನೆಲೆ ಸರ್ಕಾರಿ ಕಚೇರಿಗಳು ಬಿಕೋ ಎನ್ನುತ್ತಿದ್ದವು.

    ಬೆಳಗ್ಗೆ ಎಂದಿನಂತೆ ಕಚೇರಿಗೆ ಆಗಮಿಸಿದ ನೌಕರರು ಸೇವೆಗೆ ಹಾಜರಾಗದೆ ಬೇಡಿಕೆ ಪತ್ರ ಹಿಡಿದು ಆಯಾ ಇಲಾಖೆ ಎದುರು ಮುಷ್ಕರಕ್ಕಿಳಿದರು. ಪರಿಣಾಮ ಸರ್ಕಾರಿ ಸೇವೆಯಿಂದ ಸಾರ್ವಜನಿಕರು ವಂಚಿತರಾಗಬೇಕಾಯಿತು. ಕಂದಾಯ ಇಲಾಖೆ, ಖಜಾನೆ, ಪಂಚಾಯತ್ ರಾಜ್ ವಿಭಾಗ, ಲೋಕೋಪಯೋಗಿ ಇಲಾಖೆ, ಪ್ರವಾಸೋದ್ಯಮ ಹೀಗೆ ವಿವಿಧ ಇಲಾಖೆಗಳು ಅಧಿಕಾರಿ ಹಾಗೂ ಸಿಬ್ಬಂದಿಯಿಲ್ಲದೇ ಬಣಗುಡುತ್ತಿದ್ದವು.

    ಜಿಲ್ಲಾಸ್ಪತ್ರೆ, ತಾಲೂಕಾಸ್ಪತ್ರೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತುರ್ತು ಚಿಕಿತ್ಸೆ ಹೊರತುಪಡಿಸಿ ಇನ್ನುಳಿದ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಒಪಿಡಿ ಸ್ಥಗಿತಗೊಳಿಸಲಾಗಿತ್ತು. ಅಗ್ನಿಶಾಮಕ, ಪೊಲೀಸ್ ಇಲಾಖೆಯಲ್ಲಿ ಮಾತ್ರ ಸಿಬ್ಬಂದಿ ಸೇವೆಗೆ ಹಾಜರಾಗಿದ್ದು ಕಂಡು ಬಂತು. ಸಾರಿಗೆ ನೌಕರರು ಎಂದಿನಂತೆ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಕೆಲವರು ಮುಷ್ಕರಕ್ಕೆ ಬೆಂಬಲ ಸೂಚಿಸಿ ಮತ್ತೆ ಸೇವಾನಿರತರಾದರು. ಅಂಚೆ ಇಲಾಖೆ, ಕೇಂದ್ರ ಸರ್ಕಾರಿ ಇಲಾಖೆ, ಬ್ಯಾಂಕ್‌ಗಳು ಕಾರ್ಯನಿರತವಾಗಿದ್ದವು.

    ಶಾಲೆ, ಕಾಲೇಜಿಗೆ ಬೀಗ: ಜಿಲ್ಲೆ ಎಲ್ಲ ಶಾಲೆ-ಕಾಲೇಜುಗಳಿಗೆ ಬೀಗ ಜಡಿಯಲಾಗಿತ್ತು. ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿ, ಅಂಗನವಾಡಿ ಕೇಂದ್ರಗಳ ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದರು. ಪ್ರೌಢ ಶಾಲೆ, ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳ ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದರಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಸಮಸ್ಯೆಯಾಯಿತು. ಮುಷ್ಕರದಲ್ಲಿ ಭಾಗಿಯಾದ ಹೆಚ್ಚಿನ ನೌಕರರು ಶಿಕ್ಷಕರೇ ಆಗಿದ್ದರು. ಮುಷ್ಕರದಲ್ಲಿ ಭಾಗಿಯಾಗದ ನೌಕರರು ಸಹ ಸೇವೆಗೆ ಹಾಜರಾಗದೆ ಮನೆಯಲ್ಲಿಯೇ ಉಳಿದರು.

    ಜಿಲ್ಲೆಯಾದ್ಯಂತ ಬುಧವಾರ ಪ್ರಥಮ ಪಿಯುಸಿ ಇಂಗ್ಲಿಷ್ ಪರೀಕ್ಷೆ ನಡೆಯಬೇಕಾಗಿತ್ತು. ಆದರೆ, ಉಪನ್ಯಾಸಕರ ಮುಷ್ಕರದಿಂದ ಪರೀಕ್ಷೆ ನಡೆಯಲಿಲ್ಲ. ಬಹುತೇಕ ವಿದ್ಯಾರ್ಥಿಗಳು ಕಾಲೇಜಿಗೆ ಬಂದು ಪರೀಕ್ಷೆ ಬರೆಯಲಾಗದೇ ಮರಳಿದರು. ಮುಷ್ಕರದ ಹಿನ್ನೆಲೆಯಲ್ಲಿ ಪರೀಕ್ಷೆ ನಡೆದಿಲ್ಲ, ಮಾರ್ಚ್ 4ಕ್ಕೆ ಇಂಗ್ಲಿಷ್ ಪರೀಕ್ಷೆ ಮುಂದೂಡಲಾಗಿದೆ. ಉಳಿದಂತೆ ಪೂರ್ವ ನಿಗದಿತ ವೇಳಾಪಟ್ಟಿಗೆ ಅನುಗುಣವಾಗಿ ಪರೀಕ್ಷೆಗಳು ನಡೆಯಲಿವೆ ಎಂದು ಹೇಳಿದರು.

    ಪ್ರಮುಖ ಇಲಾಖೆಗಳು ಖಾಲಿಖಾಲಿ: ಸದಾ ಜನರಿಂದ ಗಿಜಿಗುಡುತ್ತಿದ್ದ ಕಂದಾಯ ಇಲಾಖೆ, ತಹಸೀಲ್ದಾರ್ ಕಚೇರಿ, ಮಹಾನಗರ ಪಾಲಿಕೆ ಕಚೇರಿಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಆರ್‌ಟಿಒ ಕಚೇರಿ, ಉಪ ನೋಂದಣಿ ಕಚೇರಿ, ನಗರಾಭಿವೃದ್ಧಿ ಕೋಶ ಹೀಗೆ ಪ್ರಮುಖ ಇಲಾಖೆಗಳಲ್ಲಿ ರಜೆಯ ವಾತಾವರಣ ಇತ್ತು. ಇನ್ನು ಕೆಲವು ನೌಕರರು ಕಚೇರಿಗೆ ಬಂದರಾದರೂ ಸೇವೆಯಲ್ಲಿ ತೊಡಗಿಸಿಕೊಳ್ಳದೇ ಬಾಕಿ ಇರುವ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ ಮನೆಯತ್ತ ಹೆಜ್ಜೆ ಹಾಕಿದರು.

    ಬೃಹತ್ ಹೋರಾಟ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಟನೆಗಳ ಪದಾಧಿಕಾರಿಗಳು ನಗರದಲ್ಲಿ ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕಿ, ಪ್ರತಿಭಟನೆ ನಡೆಸಿ, ಎನ್‌ಪಿಎಸ್ ರದ್ದುಗೊಳಿಸಲು ಹಾಗೂ ವೇತನ ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ‘ತೊಲಗಲಿ ತೊಗಲಿ ಎನ್‌ಪಿಎಸ್ ತೊಲಗಲಿ, ಬೇಕೇ ಬೇಕು ನ್ಯಾಯ ಬೇಕು’, 7ನೇ ವೇತನ ಆಯೋಗ ಜಾರಿಯಾಗಬೇಕು’ ಎಂದು ಘೋಷಣೆ ಕೂಗಿದರು.

    ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯ್ತಿ, ಮಹಾನಗರ ಪಾಲಿಕೆ ಕಚೇರಿ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳ ಎದುರು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮಹಾನಗರ ಪಾಲಿಕೆ ಸಫಾಯಿ ಕರ್ಮಚಾರಿಗಳು ಸಹ ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಸ್ವಚ್ಛತೆ ಕಾರ್ಯಕ್ಕೆ ಸಮಸ್ಯೆಯಾಯಿತು. ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ, ಖಜಾಂಚಿ ಜುಬೇರ ಕೆರೂರ ಮತ್ತಿತರರು ಪಾಲಿಕೆ ಸಿಬ್ಬಂದಿಗೆ ಸಾಥ್ ನೀಡಿದರು.

    ಸರ್ಕಾರದ ಜೊತೆ ಮಾತುಕತೆ ಸಫಲವಾದ ಬಳಿಕ ಮಧ್ಯಾಹ್ನದ ನಂತರ ಕೆಲಸಕ್ಕೆ ಹಾಜರಾಗುವಂತೆ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕ ಕರೆ ನೀಡಿದ ಬಳಿಕ ಮುಷ್ಕರ ಹಿಂಪಡೆಯಲಾಯಿತಾದರೂ, ಬಹುತೇಕ ನೌಕರರು ಕಚೇರಿಗೆ ಹಾಜರಾಗದೇ ದಿನಪೂರ್ತಿ ಗೈರಾಗಿದ್ದರು. ಮಧ್ಯಾಹ್ನದ ಬಳಿಕ ಯಾವುದೇ ಕಚೇರಿಯಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಲಿಲ್ಲ. ಕೆಲವು ನೌಕರರು ಕಚೇರಿಗೆ ತೆರಳಿ ಹಾಜರಿ ಹಾಕಿ ಮನೆಗೆ ಮರಳಿದ್ದು ಕಂಡು ಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts