More

    ಗಂಗೊಳ್ಳಿಯಲ್ಲಿ ಆಧಾರ್ ಸಮಸ್ಯೆ

    ರಾಘವೇಂದ್ರ ಪೈ ಗಂಗೊಳ್ಳಿ
    ಪ್ರಮುಖ ಮೀನುಗಾರಿಕಾ ಬಂದರು ಪ್ರದೇಶವಾಗಿರುವ ಗಂಗೊಳ್ಳಿಯ ಜನರು ಆಧಾರ್ ಕಾರ್ಡ್ ನೋಂದಣಿ ಅಥವಾ ತಿದ್ದುಪಡಿ ಮಾಡಿಸಬೇಕಾದರೆ 26 ಕಿ.ಮೀ. ದೂರದ ವಂಡ್ಸೆಗೆ ಇಲ್ಲವಾದರೆ 20 ಕಿ.ಮೀ. ದೂರದ ಕುಂದಾಪುರಕ್ಕೆ ಹೋಗಬೇಕು. ಕೆಲ ಕಾಲ ಗಂಗೊಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಆರಂಭಿಸಿದ್ದರೂ ಬಳಿಕ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿದೆ. ಕೆಲ ತಿಂಗಳಿನಿಂದ ಗಂಗೊಳ್ಳಿ ಅಂಚೆ ಕಚೇರಿಯಲ್ಲಿ ಆರಂಭಿಸಿದ್ದರೂ ಸಿಬ್ಬಂದಿ ಕೊರತೆಯಿಂದ ಅಲ್ಲಿಯೂ ಕಾರ್ಯಾಚರಿಸುತ್ತಿಲ್ಲ.

    ಗಂಗೊಳ್ಳಿ ಗ್ರಾಮ ವಂಡ್ಸೆ ಹೋಬಳಿ ವ್ಯಾಪ್ತಿಯಾಗಿದ್ದು, ಅಲ್ಲಿನ ನಾಡಕಚೇರಿಯಲ್ಲಿ ತೆರೆಯಲಾದ ಆಧಾರ್ ಕಾರ್ಡ್ ನೋಂದಣಿ ಕೇಂದ್ರಕ್ಕೆ ಇಲ್ಲಿನ ನಾಗರಿಕರು ನೋಂದಣಿ ಅಥವಾ ತಿದ್ದುಪಡಿಗೆ ಹೋಗಬೇಕು. ಇಲ್ಲದಿದ್ದಲ್ಲಿ ಬೈಂದೂರು, ಕುಂದಾಪುರದ ಅಂಚೆ ಕಚೇರಿಗಳಲ್ಲಿಯೂ ಅಥವಾ ಕುಂದಾಪುರ ನೆಮ್ಮದಿ ಕೇಂದ್ರದಲ್ಲಿ ಮಾಡಿಸಬಹುದು.

    ವಂಡ್ಸೆ ಆಧಾರ್ ಕೇಂದ್ರಕ್ಕೆ ಗಂಗೊಳ್ಳಿ, ತ್ರಾಸಿ, ಸಹಿತ 39 ಗ್ರಾಮಗಳ ಜನ ಬರುತ್ತಾರೆ. ಪ್ರತಿದಿನ ಇಲ್ಲಿ 50ರಿಂದ 70 ಆಧಾರ್ ಕಾರ್ಡ್‌ಗಳ ತಿದ್ದುಪಡಿ ಹಾಗೂ ಹೊಸ ಕಾರ್ಡ್‌ಗಳ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ದೂರದ ಗಂಗೊಳ್ಳಿ, ಹೊಸಾಡುವಿನಿಂದ ಬರುವ ಗ್ರಾಮಸ್ಥರು ಇಲ್ಲಿ ಆಧಾರ್ ನೋಂದಣಿ, ತಿದ್ದುಪಡಿಗೆ ತಾಸುಗಟ್ಟಳೆ ಕಾಯಬೇಕು. ಇಲ್ಲಿ ಕಾರ್ಯದ ಒತ್ತಡ ಎಷ್ಟಿದೆಯೆಂದರೆ ಕೆಲವರಿಗೆ ಮಾರ್ಚ್‌ಗೆ ಆಧಾರ್ ತಿದ್ದುಪಡಿಗೆ ಬರಲು ಟೋಕನ್ ನೀಡಲಾಗಿದೆ.

    ಗಂಗೊಳ್ಳಿ ಗ್ರಾಪಂ ಕಚೇರಿಯಲ್ಲಿ 2018ರ ಆ.28ಕ್ಕೆ ಆಧಾರ್ ಸೇವೆ ಆರಂಭಿಸಲಾಗಿತ್ತು. ಆದರೆ ಅದು ಫೆ.11ಕ್ಕೆ ಸ್ಥಗಿತಗೊಂಡಿದೆ. ಇಲ್ಲಿ ಆಧಾರ್ ತಿದ್ದುಪಡಿ, ನೋಂದಣಿ ಮಾಡಿಸಿಕೊಂಡವರು 450 ಮಂದಿ ಮಾತ್ರ. ಕಳೆದ ತಿಂಗಳು ಉಡುಪಿಯ ಪ್ರಧಾನ ಅಂಚೆ ಕಚೇರಿ ಸಹಯೋಗದಲ್ಲಿ ಇಲ್ಲಿನ ವೀರ ಸಾವರ್ಕರ್ ದೇಶಪ್ರೇಮಿಗಳ ಬಳಗದ ಆಶ್ರಯದಲ್ಲಿ ಆಧಾರ್ ಅದಾಲತ್ ಶಿಬಿರ ಮಾಡಲಾಗಿದ್ದು 494 ಮಂದಿ ನೋಂದಣಿ ಮಾಡಿದ್ದಾರೆ.

    ಸಿಬ್ಬಂದಿ ಕೊರತೆಯಿಂದ ತೊಂದರೆ: ಅವಿಭಜಿತ ಕುಂದಾಪುರ ತಾಲೂಕಿನ ಕುಂದಾಪುರ ಮುಖ್ಯ ಅಂಚೆ ಕಚೇರಿ, ಬೈಂದೂರು, ವಂಡ್ಸೆ, ಕೋಟೇಶ್ವರ, ತಲ್ಲೂರು, ಗಂಗೊಳ್ಳಿ, ತ್ರಾಸಿ, ಕಂಬದಕೋಣೆ, ಶಿರೂರು, ಕೊಲ್ಲೂರು, ಸಿದ್ದಾಪುರದ ಅಂಚೆ ಕಚೇರಿಗಳಲ್ಲಿ ಆಧಾರ್ ಸೇವೆಯನ್ನು ಕೆಲ ತಿಂಗಳಿನಿಂದ ಆರಂಭಿಸಲಾಗಿದೆ. ಆದರೆ ಇದರಲ್ಲಿ ಕುಂದಾಪುರ, ಬೈಂದೂರು, ವಂಡ್ಸೆ, ಕೋಟೇಶ್ವರದಲ್ಲಿ ಮಾತ್ರ ಸಕ್ರಿಯವಾಗಿದೆ. ಇನ್ನುಳಿದ ಗಂಗೊಳ್ಳಿ, ಕೊಲ್ಲೂರು, ತಲ್ಲೂರು, ತ್ರಾಸಿ, ಕಂಬದಕೋಣೆ, ಶಿರೂರು, ಸಿದ್ದಾಪುರದ ಅಂಚೆ ಕಚೇರಿಗಳು ಬಿ ಕ್ಲಾಸ್ (ಇಬ್ಬರು ಸಿಬ್ಬಂದಿ ಮಾತ್ರ) ಆಗಿದ್ದು, ಅದರಲ್ಲಿ ಒಬ್ಬರನ್ನು ಬೇರೆಡೆಗೆ ನಿಯೋಜಿಸಿದರೆ, ಆಗ ಆಧಾರ್ ಕೆಲಸ ಮಾಡುವುದು ಕಷ್ಟ. ಇದರಿಂದ ಇಲ್ಲೆಲ್ಲ ಕಂಪ್ಯೂಟರ್, ಬಯೋಮೆಟ್ರಿಕ್ ಕೊಟ್ಟರೂ ಸಿಬ್ಬಂದಿ ಕೊರತೆಯಿಂದ ಸಮಸ್ಯೆಯಾಗಿದೆ. ಒಟ್ಟಿನಲ್ಲಿ ಜನರಿಗೆ ಅಗತ್ಯವಾಗಿರುವ ಆಧಾರ್ ನೋಂದಣಿ ಹಾಗೂ ತಿದ್ದುಪಡಿಗೆ ಗಂಗೊಳ್ಳಿ ಅಂಚೆ ಕಚೇರಿಯಲ್ಲಿ ಎಲ್ಲ ಸೌಲಭ್ಯಗಳಿದ್ದರೂ ಜನರು ದೂರದ ಪ್ರದೇಶಗಳಿಗೆ ಅಲೆದಾಡಬೇಕಾಗಿದೆ.

    ಗಂಗೊಳ್ಳಿ ಅಂಚೆ ಕಚೇರಿಯಲ್ಲಿ ಕೆಲ ದಿನಗಳಿಂದ ಆಧಾರ್ ತಿದ್ದುಪಡಿ ಅಥವಾ ನೋಂದಣಿ ಕಾರ‌್ಯ ಆಗುತ್ತಿಲ್ಲ. ಅಲ್ಲಿಗೆ ಹೋಗಿ ಕೇಳಿದರೆ ಸಿಬ್ಬಂದಿ ಕೊರತೆ ಹಾಗೂ ತರಬೇತು ಆಗಿರುವ ಸಿಬ್ಬಂದಿ ಇಲ್ಲದಿರುವುದರಿಂದ ಆಧಾರ್ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ ಅಂತ ಹೇಳುತ್ತಾರೆ. ಪ್ರತಿದಿನ ಕಾರಣ ಹೇಳುವುದೇ ಆಯಿತು. ಇರುವಂತಹ ಸಿಬ್ಬಂದಿಗೆ ತರಬೇತಿ ನೀಡಿ ಆಧಾರ್ ಸೇವೆ ನೀಡಿದರೆ ಜನರಿಗೆ ಅನುಕೂಲವಾಗುತ್ತದೆ.
    ಎಚ್.ಎಸ್.ಚಿಕ್ಕಯ್ಯ ಪೂಜಾರಿ
    ಅಧ್ಯಕ್ಷರು ನಾಗರಿಕ ಹೋರಾಟ ಸಮಿತಿ ಗಂಗೊಳ್ಳಿ

     

    ಕೆಲವು ಅಂಚೆ ಕಚೇರಿಗಳಲ್ಲಿ ಆಧಾರ್ ಸೇವೆ ಆರಂಭಿಸಿದ್ದರೂ ಅಲ್ಲಿ ಇರುವಂತಹ ಸಿಬ್ಬಂದಿಯನ್ನು ಬೇರೆಡೆಗೆ ನಿಯೋಜಿಸಿದಾಗ ಸಮಸ್ಯೆಯಾಗುತ್ತದೆ. ಇರುವಂತಹ ಎಲ್ಲರಿಗೂ ತರಬೇತಿ ಇರುವುದಿಲ್ಲ. ಎಲ್ಲರಿಗೂ ತರಬೇತಿ ಕೊಡುವ ಕೆಲಸ ಇಲಾಖೆಯಿಂದ ಆಗುತ್ತಿದೆ. ಸಿಬ್ಬಂದಿ ಕೊರತೆಯಿಂದ ಕೆಲವು ಅಂಚೆ ಕಚೇರಿಗಳಲ್ಲಿ ಆಧಾರ್ ಸೇವೆ ನೀಡಲಾಗುತ್ತಿಲ್ಲ. ಆ ಕಾರಣಕ್ಕಾಗಿ ಅಲ್ಲಲ್ಲಿ ಆಧಾರ್ ಅದಾಲತ್ ಶಿಬಿರ ಆಯೋಜಿಸಲಾಗುತ್ತಿದೆ.
    ಸುಧಾಕರ ದೇವಾಡಿಗ
    ಸೂಪರಿಟೆಂಡೆಂಟ್ ಆಫ್ ಪೋಸ್ಟ್ ಆಫೀಸ್ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts