More

    ವೋಟರ್ ಐಡಿಗೆ ಆಧಾರ್ ಜೋಡಣೆ, ರಾಜ್ಯದಲ್ಲಿ ಹಾವೇರಿ ಜಿಲ್ಲೆಗೆ 5ನೇ ಸ್ಥಾನ

    ಪರಶುರಾಮ ಕೆರಿ ಹಾವೇರಿ

    ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆಗೆ ಚುನಾವಣಾ ಆಯೋಗ ಸೂಚಿಸಿದ್ದು, ರಾಜ್ಯದಲ್ಲಿ ಜಿಲ್ಲೆಯು ಈ ಕಾರ್ಯದಲ್ಲಿ 5ನೇ ಸ್ಥಾನದಲ್ಲಿದೆ. ಬೆಂಗಳೂರು ಬಿಬಿಎಂಪಿ(ಸೆಂಟ್ರಲ್) ಕೊನೆಯ ಸ್ಥಾನದಲ್ಲಿದೆ. ಬಾಗಲಕೋಟೆ ಜಿಲ್ಲೆ ಶೇ. 34.21ರಷ್ಟು ಸಾಧನೆ ಮಾಡಿ ಮೊದಲ ಸ್ಥಾನದಲ್ಲಿದೆ.

    ಜಿಲ್ಲೆಯಲ್ಲಿ ಆಗಸ್ಟ್ 1ರಿಂದ ಈ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, 16 ದಿನಗಳಲ್ಲಿ 12,70,440 ಮತದಾರರಲ್ಲಿ 2,71,988ರಷ್ಟು ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಆಗಿದ್ದು, ಶೇ. 21.41ರಷ್ಟು ಪ್ರಗತಿಯಾಗಿದೆ.

    ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಆಧಾರ್ ಲಿಂಕ್​ನಲ್ಲಿ ಸದ್ಯ ಹಿರೇಕೆರೂರ ಕ್ಷೇತ್ರವು ಮೊದಲ ಸ್ಥಾನದಲ್ಲಿದೆ. ಒಟ್ಟು 1,83,459 ಮತದಾರರಲ್ಲಿ ಈಗಾಗಲೇ 50,459 ಮತದಾರರ ಕಾರ್ಡ್​ಗೆ ಆಧಾರ್ ಲಿಂಕ್ ಆಗಿದ್ದು, ಶೇ. 27.50ರಷ್ಟು ಸಾಧನೆಯಾಗಿದೆ. 2ನೇ ಸ್ಥಾನದಲ್ಲಿ ರಾಣೆಬೆನ್ನೂರ ಕ್ಷೇತ್ರವಿದ್ದು, ಒಟ್ಟು 2,32,218 ಮತದಾರರಲ್ಲಿ 57,258 ಜನರ ವೋಟರ್ ಐಡಿಗೆ ಆಧಾರ್ ಲಿಂಕ್ ಆಗಿದೆ. ಶೇ. 24.66ರಷ್ಟು ಸಾಧನೆಯಾಗಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಒಟ್ಟು 2,19,703 ಮತದಾರರಿದ್ದು, 52,566 ಜನರ ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಆಗಿದ್ದು, ಶೇ. 23.93ರಷ್ಟು ಸಾಧನೆಯಾಗಿದೆ. ಹಾನಗಲ್ಲ ಕ್ಷೇತ್ರದಲ್ಲಿ ಒಟ್ಟು 2,06,402 ಮತದಾರರಿದ್ದು, 47,774 ಜನರ ವೋಟರ್ ಐಡಿಯೊಂದಿಗೆ ಆಧಾರ್ ಲಿಂಕ್ ಆಗಿದ್ದು, ಶೇ. 23.15ರಷ್ಟು ಸಾಧನೆಯಾಗಿದೆ. ಹಾವೇರಿ ಕ್ಷೇತ್ರದಲ್ಲಿ ಒಟ್ಟು 2,25,608 ಮತದಾರರಿದ್ದು, ಅದರಲ್ಲಿ 37,725 ಜನರ ವೋಟರ್ ಐಡಿಗೆ ಆಧಾರ್ ನಂಬರ್ ಲಿಂಕ್ ಮಾಡಲಾಗಿದ್ದು, ಶೇ. 16.72ರಷ್ಟು ಸಾಧನೆಯಾಗಿದೆ. ಬ್ಯಾಡಗಿ ಕ್ಷೇತ್ರವು ಕೊನೆಯ ಸ್ಥಾನದಲ್ಲಿದ್ದು, ಒಟ್ಟು 2,03,046 ಮತದಾರರಿದ್ದು, ಈವರೆಗೆ 26,216 ಜನರ ವೋಟರ್ ಐಡಿಗೆ ಆಧಾರ್ ಲಿಂಕ್ ಆಗಿದ್ದು, ಶೇ. 12.91ರಷ್ಟು ಸಾಧನೆಯಾಗಿದೆ.

    ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,470 ಮತಗಟ್ಟೆಗಳಿವೆ. ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರರು ತಮ್ಮ ಹೆಸರಿನೊಂದಿಗೆ ಆಧಾರ್​ಸಂಖ್ಯೆಯನ್ನು ಜೋಡಣೆ ಮಾಡಿಕೊಳ್ಳಬೇಕು. ನಮೂನೆ-6ಬಿ ನಲ್ಲಿ ವಿವರಗಳನ್ನು ಭರ್ತಿ ಮಾಡಿ ಸಂಬಂಧಿಸಿದ ಬಿಎಲ್​ಒಗಳಿಗೆ ಸಲ್ಲಿಸಬೇಕು. ಅಥವಾ ಸ್ವತಃ ಮತದಾರರೇ ತಮ್ಮ ಮೊಬೈಲ್​ನಲ್ಲಿ ಆಪ್ ಮುಖಾಂತರ ಆನ್​ಲೈನ್ ಮೂಲಕ ಚುನಾವಣಾ ಆಯೋಗದ ನಿಗದಿತ ಸಾಫ್ಟ್​ವೇರ್ ಮೂಲಕ ಅರ್ಜಿ ಸಲ್ಲಿಸಿ ಆಧಾರ್​ಸಂಖ್ಯೆ ಜೋಡಣೆಗೆ ಅವಕಾಶ ಕಲ್ಪಿಸಲಾಗಿದೆ.

    ಜಿಲ್ಲೆಯಲ್ಲಿ 6,51,543 ಪುರುಷ, 6,18,718 ಮಹಿಳೆಯರು ಹಾಗೂ 27 ಜನರ ತೃತೀಯ ಲಿಂಗಿಗಳು ಸೇರಿ 12,70,440 ಮತದಾರರಿದ್ದಾರೆ. ಈಗಾಗಲೇ ಜಿಲ್ಲೆಯ 18 ವರ್ಷ ಮೇಲ್ಪಟ್ಟ 13,51,232 ಜನರಿಗೆ ಆಧಾರ್ ಕಾರ್ಡ್ ನೀಡಲಾಗಿದೆ. ಎಲ್ಲರೂ ತಮ್ಮ ಆಧಾರ್ ಸಂಖ್ಯೆಗಳನ್ನು ಮತದಾರರ ಚೀಟಿಗೆ ಲಿಂಕ್ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚಿಸಿದ್ದಾರೆ.

    ಆಧಾರ್ ಪಡೆಯದವರು ಅನ್ಯ ಕಾರ್ಡ್ ಜೋಡಣೆಗೆ ಅವಕಾಶ: ಈವರೆಗೆ ಆಧಾರ್​ಕಾರ್ಡ್ ಪಡೆಯದವರು ಮತದಾರರ ಚೀಟಿಗೆ ನರೇಗಾ ಜಾಬ್​ಕಾರ್ಡ್, ಬ್ಯಾಂಕ್/ಅಂಚೆ ಕಚೇರಿಯಿಂದ ನೀಡಲಾದ ಭಾವಚಿತ್ರವಿರುವ ಪಾಸ್​ಪುಸ್ತಕಗಳು, ಕಾರ್ವಿುಕ ಮಂತ್ರಾಲಯದ ಯೋಜನೆಯಡಿಯಲ್ಲಿ ನೀಡಲಾದ ಆರೋಗ್ಯ ವಿಮೆ ಸ್ಮಾರ್ಟ್​ಕಾರ್ಡ್, ಡ್ರೖೆವಿಂಗ್ ಲೈಸೆನ್ಸ್, ಪಾನ್​ಕಾರ್ಡ್, ಎನ್​ಪಿಆರ್ ಅಡಿಯಲ್ಲಿ ಆರ್​ಜಿಐ ಮೂಲಕ ನೀಡಲಾದ ಸ್ಮಾರ್ಟ್​ಕಾರ್ಡ್, ಇಂಡಿಯನ್ ಪಾಸ್​ಪೋರ್ಟ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಕೇಂದ್ರ, ರಾಜ್ಯ ಸರ್ಕಾರ, ಸಾರ್ವಜನಿಕ ವಲಯದ ಉದ್ದಿಮೆಗಳು ಅಥವಾ ಸಾರ್ವಜನಿಕ ನಿಯಮಿತ ಕಂಪನಿಗಳಿಂದ ಉದ್ಯೋಗಿಗಳಿಗೆ ನೀಡಲಾದ ಭಾವಿಚಿತ್ರರುವ ಸೇವಾ ಗುರುತಿನ ಚೀಟಿ, ಸಂಸತ್, ವಿಧಾನಸಭೆ, ವಿಪ ಸದಸ್ಯರುಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ಮೂಲಕ ನೀಡಲಾದ ವಿಶಿಷ್ಟ ಗುರುತಿನ ಚೀಟಿ(ಯುಡಿಐಡಿ) ಈ ದಾಖಲೆಗಳಲ್ಲಿ ಯಾವುದಾದರೊಂದನ್ನು ಅಪ್​ಲೋಡ್ ಮಾಡಬಹುದು. ಮತದಾರರ ಚೀಟಿಗೆ ಆಧಾರ್ ಜೋಡಣೆ ಕುರಿತು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಹಾಗೂ ದುರ್ಬಲ ಪ್ರದೇಶಗಳಲ್ಲಿ ವಿಶೇಷ ಪ್ರಾಶಸ್ಱ ನೀಡಲು ಚುನಾವಣಾ ಆಯೋಗ ಸೂಚಿಸಿದೆ.

    ಎರಡೆರಡು ಕಡೆಗಳಲ್ಲಿ ಮತದಾರರ ಚೀಟಿಗೆ ಬೀಳಲಿದೆ ಕಡಿವಾಣ: ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಇಲ್ಲದ್ದರಿಂದ ಒಬ್ಬರೇ ಎರಡು ಕಡೆಗಳಲ್ಲಿ ಮತದಾರರ ಚೀಟಿ ಪಡೆಯುವುದಕ್ಕೆ ಕಡಿವಾಣ ಬೀಳಲಿದೆ. ಬಹಳಷ್ಟು ಪ್ರಕರಣಗಳಲ್ಲಿ ಮದುವೆಯಾದ ನಂತರ ಮಹಿಳೆಯದ್ದು ತವರು ಹಾಗೂ ಪತಿಯ ಮನೆಯಲ್ಲಿಯೂ ಮತದಾರರ ಗುರುತಿನ ಚೀಟಿಗಳು ಚಾಲ್ತಿಯಲ್ಲಿರುತ್ತವೆ. ಬಿಎಲ್​ಒಗಳು ಹುಡುಕಿ ಈಗಾಗಲೇ ಅಂತಹ ಪ್ರಕರಣಗಳನ್ನು ಡಿಲೀಟ್ ಮಾಡುತ್ತಿದ್ದಾರೆ. ಆದರೂ ಕೆಲವು ಹಾಗೆಯೇ ಉಳಿದುಕೊಂಡಿದ್ದವು. ಆಧಾರ್ ಲಿಂಕ್ ಆದರೆ ಒಂದು ಕಡೆಯಲ್ಲಿ ಮಾತ್ರ ವೋಟರ್ ಐಡಿ ಉಳಿದುಕೊಳ್ಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts