More

    ತಂದೆಯೇ ಅತ್ಯಾಚಾರಿಯಾದಾಗ…

    ಸರ್ಕಾರದ ಒಂದು ಇಲಾಖೆಯಲ್ಲಿ ಸತ್ಯಮೂರ್ತಿ ಪ್ರಥಮ ದರ್ಜೆ ಸಹಾಯಕನಾಗಿದ್ದ. ಪತ್ನಿ ಲಲಿತಾ ಹಾಗೂ ಒಬ್ಬಳೇ ಮಗಳು ಕುಸುಮಳ ಜತೆಗೆ ಜಿಲ್ಲಾ ಕೇಂದ್ರವೊಂದರಲ್ಲಿ ವಾಸವಾಗಿದ್ದ. ಒಮ್ಮೆ ತನ್ನ ವೃದ್ಧ ತಾಯಿ ಆಸ್ಪತ್ರೆಗೆ ಸೇರಿದಾಗ ಲಲಿತಾ ಒಂಬತ್ತನೆಯ ತರಗತಿಯಲ್ಲಿ ಓದುತ್ತಿದ್ದ ಮಗಳನ್ನು ಅನಿವಾರ್ಯವಾಗಿ ಮನೆಯಲ್ಲಿಯೇ ಬಿಟ್ಟು ತವರಿಗೆ ಹೋಗಬೇಕಾಯಿತು.

    ತಂದೆಯೇ ಅತ್ಯಾಚಾರಿಯಾದಾಗ...ಅದೇ ಸಂಜೆ ಸತ್ಯಮೂರ್ತಿ ಬೇಗನೇ ಮನೆಗೆ ಬಂದು ಮಗಳನ್ನು ಸಿನಿಮಾಗೆ ಕರೆದುಕೊಂಡು ಹೋಗಿ ಆನಂತರ ಹೋಟೆಲಿನಲ್ಲಿ ಊಟ ಮಾಡಿಸಿ ಮನೆಗೆ ಕರೆತಂದ. ತಂದೆ-ಮಗಳು ಅವರವರ ಕೋಣೆಗಳಿಗೆ ಹೋಗಿ ಮಲಗಿಕೊಂಡರು. ರಾತ್ರಿ 11 ಗಂಟೆಗೆ ಲುಂಗಿ, ಬನಿಯನ್ ಧರಿಸಿದ್ದ ಸತ್ಯಮೂರ್ತಿ ಕುಸುಮಾಳ ಕೋಣೆಯ ಬಾಗಿಲು ತಟ್ಟಿ ‘ನನಗೆ ಯಾಕೋ ನಿದ್ದೆಯೇ ಬರುತ್ತಿಲ. ನನ್ನ ಕಂಪ್ಯೂಟರ್​ನಲ್ಲಿ ಒಂದು ಸಿನಿಮಾ ಹಾಕಿದ್ದೇನೆ, ನೀನೂ ನನ್ನ ಜತೆಯಲ್ಲಿ ನೋಡಲು ಬಾ’ ಎಂದು ಕರೆದ. ನಿದ್ರೆ ತಡೆಯಲಾಗದಿದ್ದರೂ ತಂದೆಯ ಮಾತಿಗೆ ಇಲ್ಲ ಎನ್ನಲಾಗದ ಕುಸುಮಾ ಆತನ ಕೋಣೆಗೆ ಹೋದಳು. ಹಾಸಿಗೆಯ ಮೇಲೆ ತನ್ನ ಪಕ್ಕದಲ್ಲಿಯೇ ಮಗಳನ್ನು ಕೂರಿಸಿಕೊಂಡ ಸತ್ಯಮೂರ್ತಿ ಲ್ಯಾಪ್​ಟಾಪ್ ಚಾಲೂ ಮಾಡಿದ. ವಿದೇಶಿ ಜೋಡಿಯೊಂದು ಮೈಥುನದಲ್ಲಿ ತೊಡಗಿದ್ದ ದೃಶ್ಯವಿದ್ದ ಒಂದು ಇಂಗ್ಲಿಷ್ ಚಿತ್ರ ಮೂಡಿಬಂದಿತು. ಹೌಹಾರಿದ ಕುಸುಮಾ ಎರಡೂ ಕಣ್ಣುಗಳನ್ನು ಮುಚ್ಚಿಕೊಂಡು, ‘ಥೂ, ಇಂತಹದನ್ನು ನಾನು ನೋಡಲಾರೆ’ ಎನ್ನುತ್ತಾ ಅಲ್ಲಿಂದ ಹೊರಡಲು ಮೇಲೆದ್ದಳು.

    ಸತ್ಯಮೂರ್ತಿ ಅವಳನ್ನು ಬಲವಂತವಾಗಿಯೇ ಕೂರಿಸಿ ‘ಶಾಲೆಗಳಲ್ಲಿ ಲೈಂಗಿಕ ಶಿಕ್ಷಣವನ್ನು ಕೊಡುತ್ತಿಲ್ಲವಾದ್ದರಿಂದಲೇ ನಿನಗೆ ಈ ಚಿತ್ರ ಅಸಹ್ಯವೆನಿಸಿದೆ, ಸೆಕ್ಸ್ ಒಂದು ಸ್ವಾಭಾವಿಕ ಕ್ರಿಯೆ, ನೀನು ಈ ಚಿತ್ರವನ್ನು ನೋಡಲೇಬೇಕು’ ಎನ್ನುತ್ತಾ ಆಕೆಯನ್ನು ಬಿಗಿದಪ್ಪಿ ಅವಳ ಅಂಗಾಂಗಗಳನ್ನು ಚುಂಬಿಸಿ ವಿಕೃತ ತೃಪ್ತಿ ಪಡೆದ. ತಂದೆಯ ಈ ಹಠಾತ್ ವರ್ತನೆಯಿಂದ ಗಲಿಬಿಲಿಗೊಂಡ ಕುಸುಮಾಳಿಗೆ ಏನು ಮಾಡುವುದೆಂದೇ ತಿಳಿಯಲಿಲ್ಲ. ಆಕೆ ಗಟ್ಟಿಯಾಗಿ ಅಳತೊಡಗಿದಳು. ಅವಳನ್ನು ಗದರಿದ ಸತ್ಯಮೂರ್ತಿ ‘ಇಲ್ಲಿ ನಡೆದ ವಿಷಯವನ್ನು ನಿನ್ನ ತಾಯಿಗೆ ಹೇಳಬಾರದು, ಪ್ರಾಮಿಸ್ ಮಾಡು’ ಎಂದು ಅವಳಿಂದ ಆಣೆ ಮಾಡಿಸಿಕೊಂಡ ನಂತರವೇ ಅವಳನ್ನು ಹೋಗಲು ಬಿಟ್ಟ.

    ಕುಸುಮಾಳಿಗೆ ಇಡೀ ರಾತ್ರಿ ನಿದ್ದೆ ಬರಲಿಲ್ಲ. ಮಾರನೆಯ ದಿನ ಸತ್ಯಮೂರ್ತಿ ಏನೂ ನಡೆಯಲೇ ಇಲ್ಲವೇನೋ ಎನ್ನುವಂತೆ ಅವಳೊಡನೆ ವ್ಯವಹರಿಸಿದ. ಮತ್ತೆ ಆತ ಅವಳ ಸನಿಹಕ್ಕೆ ಬರಲಿಲ್ಲ. ಎರಡು ದಿನಗಳ ತರುವಾಯ ತಾಯಿ ವಾಪಸಾದಾಗ ನಡೆದ ವಿಷಯವನ್ನು ಹೇಳಬೇಕು ಎಂದು ಕುಸುಮಾಳಿಗೆ ಎಷ್ಟೇ ಮನಸ್ಸಾದರೂ ತಂದೆಗೆ ಪ್ರಾಮಿಸ್ ಮಾಡಿರುವ ಕಾರಣ ಅವನನ್ನು ಹೇಗೆ ದೂರುವುದು ಎನ್ನುವ ತುಮುಲದಿಂದ ನಡೆದ ಘಟನೆಯನ್ನು ಮುಚ್ಚಿಟ್ಟಳು.

    ಇದಾದ ಮೂರು ತಿಂಗಳ ನಂತರ ಒಂದು ದಿನ ಸತ್ಯಮೂರ್ತಿ ಇದ್ದಕ್ಕಿದ್ದಂತೆ ಮಧ್ಯಾಹ್ನ ನಾಲ್ಕು ಗಂಟೆಗೇ ಕಚೇರಿಯಿಂದ ಮನೆಗೆ ವಾಪಸಾದ. ಆ ಸಮಯದಲ್ಲಿ ಲಲಿತಾ ಯಾವುದೋ ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋಗಿದ್ದಳು. ಅಕಸ್ಮಾತ್ತಾಗಿ ಕುಸುಮಾ ಕೂಡಾ ಶಾಲೆಯಿಂದ ಮನೆಗೆ ಅದೇ ಸಮಯಕ್ಕೆ ಮರಳಿದಳು. ಬಾಗಿಲು ತೆಗೆದ ಸತ್ಯಮೂರ್ತಿ ಮಗಳನ್ನು ನೋಡಿದ ಕೂಡಲೇ ಅವಳನ್ನು ಬಿಗಿಯಾಗಿ ಅಪ್ಪಿಕೊಂಡು ಚುಂಬಿಸತೊಡಗಿದ. ಈ ಹಿಂದೆ ನಡೆದಿದ್ದ ಘಟನೆಯಿಂದ ಎಚ್ಚರಗೊಂಡಿದ್ದ ಕುಸುಮಾ ತನ್ನ ರೂಮಿಗೆ ಓಡಿಹೋಗಿ ಬಾಗಿಲು ಹಾಕಿಕೊಳ್ಳಲು ಮುಂದಾದಳು. ಆದರೆ ಅವಳಿಗಿಂತ ಮುಂಚೆ ಅಲ್ಲಿಗೆ ಹೋದ ಸತ್ಯಮೂರ್ತಿ ತನ್ನ ಮುಂದೆಯೇ ಬಟ್ಟೆ ಬದಲಿಸಲು ಮಗಳನ್ನು ಆಗ್ರಹಿಸಿ ತಾನೂ ವಿವಸ್ತ್ರನಾಗಿ ವಿಕೃತ ತೃಪ್ತಿ ಅನುಭವಿಸಿದ. ‘ನಾನು ಈ ಬಾರಿಯಂತೂ ಸುಮ್ಮನಿರುವುದಿಲ್ಲ ಅಮ್ಮನಿಗೆ ಹೇಳಲೇಬೇಕಾಗುತ್ತದೆ’ ಎಂದು ಕುಸುಮಾ ಪ್ರತಿಭಟಿಸಿದಾಗ ಸತ್ಯಮೂರ್ತಿ ಮನೆಯಿಂದ ಹೊರಟುಹೋದ.

    ತಂದೆಯ ಅನುಚಿತ ವರ್ತನೆಯಿಂದ ಘಾಸಿಗೊಂಡಿದ್ದ ಕುಸುಮಾ ಮನೆಗೆ ವಾಪಸಾದ ತಾಯಿಗೆ ನಡೆದ ವಿಷಯವನ್ನು ವಿವರಿಸಿದಳು. ಲಲಿತಾ ಆಘಾತಗೊಂಡಳು. ಸತ್ಯಮೂರ್ತಿ ಆ ರಾತ್ರಿ 10 ಗಂಟೆಗೆ ಮದ್ಯಪಾನ ಮಾಡಿ ತೂರಾಡುತ್ತಾ ಮನೆಗೆ ಬಂದಾಗ ಲಲಿತಾ ಅವನನ್ನು ತರಾಟೆಗೆ ತೆಗೆದುಕೊಂಡಳು. ಗಂಡ ಹೆಂಡಿರ ಮಧ್ಯೆ ದೊಡ್ಡ ಜಗಳವಾಯಿತು. ಸತ್ಯಮೂರ್ತಿ ಲಲಿತಾಗೆ ಕೋಲಿನಿಂದ ರಪರಪನೇ ಬಾರಿಸಿದ. ಮಗಳು ಅಡ್ಡಬಂದಾಗ ಅವಳಿಗೂ ಹೊಡೆದು ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ಮಲಗಿಬಿಟ್ಟ.

    ಮುಂದೇನು ಮಾಡಬೇಕೆಂದು ತಾಯಿ-ಮಗಳಿಗೆ ತೋಚಲಿಲ್ಲ. ಮಾರನೆಯ ದಿನ ಎದ್ದಕೂಡಲೇ ಲಲಿತಾ ಗಂಡನಿಗೆ ‘ವಯಸ್ಸಿಗೆ ಬಂದ ಮಗಳಿಗೆ ಈ ರೀತಿ ನೀವು ಲೈಂಗಿಕ ಶೋಷಣೆ ಮಾಡುವುದು ಘೊರ ಪಾಪ. ಮುಂದೇನಾದರೂ ಅವಳ ತಂಟೆಗೆ ಬಂದರೆ ನಾನು ಕುಸುಮಳನ್ನೂ ಕರೆದುಕೊಂಡು ತವರಿಗೆ ಹೋಗುತ್ತೇನೆ’ ಎಂದು ಗದರಿದಳು. ಇನ್ನು ಎಂದಿಗೂ ಹೀಗೆ ಮಾಡುವುದಿಲ್ಲ ಎಂದು ದೇವರ ಮುಂದೆ ಆಣೆ ಮಾಡಿದ ಸತ್ಯಮೂರ್ತಿ. ಗಂಡನಿಗೆ ಇನ್ನೊಂದು ಅವಕಾಶ ಕೊಡಲು ಲಲಿತಾ ನಿರ್ಧರಿಸಿದಳು.

    ಮುಂದಿನ ಕೆಲವು ತಿಂಗಳುಗಳ ಕಾಲ ಸತ್ಯಮೂರ್ತಿ ತನ್ನ ಪಾಡಿಗೆ ತಾನಿದ್ದ. ಲಲಿತಾ ಮಗಳ ಕೋಣೆಯಲ್ಲಿಯೇ ಮಲಗುತ್ತಿದ್ದಳು. ಒಂದು ರಾತ್ರಿ ತಾಯಿ ಮಗಳಿಬ್ಬರು ಮಲಗಿರುವಾಗಲೇ ಸತ್ಯಮೂರ್ತಿ ಅವರ ರೂಮಿಗೆ ಬಂದು ನಿದ್ರಿಸಿದ್ದ ಕುಸುಮಳ ಅಂಗಾಂಗಗಳನ್ನು ಮುಟ್ಟಿದ. ಕೂಡಲೇ ಎಚ್ಚರಗೊಂಡ ಆಕೆ ಜೋರಾಗಿ ಅರಚಿದಳು. ಲಲಿತಾ ಮೇಲೆದ್ದಾಗ ಸತ್ಯಮೂರ್ತಿ ವಿಕಟವಾಗಿ ನಗುತ್ತಾ ಹೊರಗೆ ಓಡಿಹೋದ. ಗಂಡನನ್ನು ಕೊಂದೇಬಿಡುವಷ್ಟು ಕೋಪ ಬಂದ ಲಲಿತಾ ತಾನು ಮಾರನೆಯ ದಿನವೇ ತವರಿಗೆ ಹೋಗುತ್ತೇನೆ ಎಂದು ಹೇಳಿದಾಗ ಸತ್ಯಮೂರ್ತಿ ಅವಳ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳಿದ. ಆ ನಂತರ ಒಂದು ವಿಷದ ಬಾಟ್ಲಿ ತಂದು ‘ನೀನೇನಾದರೂ ಊರಿಗೆ ಹೋದರೆ ನಾನು ವಿಷ ಕುಡಿದು ಸಾಯುತ್ತೇನೆ, ಇದೇ ಕೊನೆಯ ಬಾರಿ. ಇನ್ನು ಮುಂದೆ ತಿದ್ದಿಕೊಳ್ಳುತ್ತೇನೆ’ ಎಂದ.

    ಗಂಡ ವಿಷ ಸೇವಿಸಿ ಸತ್ತರೆ ತನ್ನ ಹಾಗೂ ಮಗಳ ಗತಿ ಏನಾಗಬಹುದು ಎಂದು ಯೋಚಿಸಿದ ಲಲಿತಾ ಮುಂದಾದರೂ ಆತ ಸರಿಹೋಗಬಹುದು ಎಂದು ಸುಮ್ಮನಾದಳು. ಕುಸುಮಾ ತಂದೆಯ ಜತೆಗೆ ಒಂದು ಕ್ಷಣವೂ ಒಬ್ಬಳೇ ಇರಲು ಆಕೆ ಬಿಡಲಿಲ್ಲ. ಆದರೆ ಕಾಮಾಂಧನಾಗಿದ್ದ ಸತ್ಯಮೂರ್ತಿ ಸುಮ್ಮನಿರುವಂತಹ ವ್ಯಕ್ತಿಯಾಗಿರಲಿಲ್ಲ. ಒಂದು ಮಧ್ಯಾಹ್ನ ಪತ್ನಿ ಮನೆಯಲ್ಲಿರದಿದ್ದುದನ್ನು ತಿಳಿದುಕೊಂಡು ಆಫೀಸಿನಿಂದ ಏಕಾಏಕಿ ಮನೆಗೆ ವಾಪಸ್ಸಾಗಿ ಮನೆಯಲ್ಲಿದ್ದ ಮಗಳ ಮೇಲೆ ಲೈಂಗಿಕ ಶೋಷಣೆ ನಡೆಸಿದ. ‘ಈ ವಿಷಯವನ್ನು ನಿನ್ನ ತಾಯಿಗೆ ತಿಳಿಸಿದರೆ ನಿನ್ನನ್ನು ಕೊಲೆ ಮಾಡುತ್ತೇನೆ’ ಎಂದು ಚಾಕುವನ್ನು ತೋರಿಸಿ ಹೆದರಿಸಿದ. ಕುಸುಮಾಳಿಗೆ ಏನು ಮಾಡಲೂ ತೋಚಲಿಲ್ಲ. ಆಕೆ ಮೌನಕ್ಕೆ ಶರಣಾದಳು. ತಾಯಿಯಿಂದ ತನ್ನ ರಕ್ಷಣೆ ಸಾಧ್ಯವಿಲ್ಲ ಎಂದು ಆಕೆಗೆ ಅನಿಸಿತ್ತು. ಆಕೆ ಖಿನ್ನತೆಗೆ ಜಾರಿದಳು. ಆಟ-ಪಾಠಗಳಲ್ಲಿ ಆಸಕ್ತಿ ಕಳೆದುಕೊಂಡಳು.

    ಕುಸುಮಾಗೆ ಹದಿನಾರು ವರ್ಷ ವಯಸ್ಸಾದಾಗ ಒಂದು ರಾತ್ರಿ ಸತ್ಯಮೂರ್ತಿ ಆಕೆಯ ಮೇಲೆ ಅತ್ಯಾಚಾರವನ್ನೇ ಮಾಡಿದ. ಈ ವಿಷಯವನ್ನೂ ಆಕೆ ತಾಯಿಯಿಂದ ಮುಚ್ಚಿಟ್ಟಳು. ಮಾರನೆಯ ದಿನ ಆಕೆ ತನ್ನ ಗೆಳತಿ ನಳಿನಿಯ ಮನೆಗೆ ಹೋದಾಗ ತನಗಾಗಿದ್ದ ದೈಹಿಕ ಹಾಗೂ ಮಾನಸಿಕ ನೋವನ್ನು ತಡೆಯಲಾರದೆ ಅಳತೊಡಗಿದಳು. ನಳಿನಿಯ ತಾಯಿ ಏನಾಯಿತು ಎಂದು ವಿಚಾರಿಸಿದರು. ಕುಸುಮಾ ಅಲ್ಲಿಯವರೆಗೆ ಕಾಪಾಡಿಕೊಂಡು ಬಂದಿದ್ದ ಗುಟ್ಟು ಹೊರಬರುವ ಕಾಲ ಬಂದಿತ್ತು. ಆಕೆ ಕಳೆದ ಮೂರು ವರ್ಷಗಳಲ್ಲಿ ತಂದೆಯಿಂದ ತನಗಾದ ದೌರ್ಜನ್ಯವನ್ನು ವಿವರಿಸಿದಳು.

    ಕುಸುಮಾಳ ಮಾತುಗಳನ್ನು ಕೇಳಿ ಅವಾಕ್ಕಾದ ನಳಿನಿಯ ತಾಯಿ ‘ಇದೇ ರೀತಿ ನೀನು ಸುಮ್ಮನಿದ್ದರೆ ಪರಿತಪಿಸಬೇಕಾಗುತ್ತದೆ, ನಿನ್ನ ತಂದೆಗೆ ಶಿಕ್ಷೆಯಾಗಲೇಬೇಕು’ ಎಂದು ಹೇಳಿ ಅವಳ ಮನೆಗೆ ಹೋಗಿ ಸತ್ಯಮೂರ್ತಿಯ ವಿರುದ್ಧ ಪೊಲೀಸರಿಗೆ ದೂರು ನೀಡಲು ಲಲಿತಾಗೆ ಹೇಳಿದಳು. ಮೊದಲಿಗೆ ಲಲಿತಾ ಒಪ್ಪದಿದ್ದರೂ ಅವಳ ಮನವೊಲಿಸಿ ತಾಯಿ-ಮಗಳಿಬ್ಬರನ್ನೂ ತನ್ನ ಜತೆಗೇ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ದೂರನ್ನು ಕೊಡಿಸಿದಳು. ಪೋಕ್ಸೋ ಕಾಯ್ದೆಯಡಿಯಲ್ಲಿ ದೂರನ್ನು ದಾಖಲಿಸಿದ ಪೊಲೀಸರು ಕುಸುಮಾಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದರು. ಅತ್ಯಾಚಾರ ನಡೆದಿದ್ದು ಸಾಬೀತಾಗಿ ಅವಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಸತ್ಯಮೂರ್ತಿಯನ್ನು ಬಂಧಿಸಿ ಪೂರಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಯಿತು. ನ್ಯಾಯಾಲಯದಲ್ಲಿ ತಾಯಿ ಮಗಳಿಬ್ಬರೂ ಸತ್ಯಮೂರ್ತಿಯ ವಿರುದ್ಧ ಸಾಕ್ಷಿ ಹೇಳಿದರು. ಆತನಿಗೆ ಏಳು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಯಿತು.

    ತಂದೆಯೇ ತನ್ನ ಪುತ್ರಿಯನ್ನು ಕಾಮತೃಷೆಗೆ ಬಳಸಿಕೊಂಡ ಪ್ರಕರಣ ಇದು ಮೊದಲನೆಯದೂ ಅಲ್ಲ, ಕೊನೆಯದೂ ಅಲ್ಲ. ಕುಟುಂಬದ ಮರ್ಯಾದೆಗೆ ಹೆದರಿಯೋ ಅಥವಾ ಯಜಮಾನನೇ ಜೈಲಿಗೆ ಹೋದರೆ ಕುಟುಂಬದ ಪಾಡೇನು ಎನ್ನುವ ಕಾರಣಕ್ಕಾಗಿಯೋ ಇಂತಹ ಪ್ರಕರಣಗಳಲ್ಲಿ ದೂರುಗಳು ದಾಖಲಾಗುವುದು ವಿರಳ. ‘ಎಲ್ಲಿಯವರೆಗೆ ತಂದೆಯರು ಪಾಲನೆ ಮಾಡುವುದನ್ನು ಬಿಟ್ಟು ದಬ್ಬಾಳಿಕೆ ಮಾಡುತ್ತಾರೋ, ಎಲ್ಲಿಯವರೆಗೆ ತಾಯಂದಿರು ಪಾಲನೆ ಮಾತ್ರ ಮಾಡುತ್ತಾ ಆಳ್ವಿಕೆಯನ್ನು ಮರೆಯುತ್ತಾರೋ ಅಲ್ಲಿಯವರೆಗೆ ತಂದೆ-ಮಗಳ ನಿಷಿದ್ಧ ಲೈಂಗಿಕ ಸಂಬಂಧಕ್ಕೆ ಪೂರಕ ವಾತಾವರಣವಾಗುತ್ತದೆ’ ಎನ್ನುತ್ತಾಳೆ ಅಮೆರಿಕನ್ ಮನಶಾಸ್ತ್ರಜ್ಞೆ ಜುಡಿತ್ ಲೂಯಿಸ್ ಹರ್ಮನ್. ತಾಯಂದಿರು ಸದಾಕಾಲವೂ ಎಚ್ಚರದಿಂದಿರಬೇಕು. ಹೆಣ್ಣುಮಕ್ಕಳಿಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ತಿಳಿಸಬೇಕು. ಅಚಾತುರ್ಯವಾದರೆ ಸುಮ್ಮನಿರದೇ ದೂರನ್ನು ನೀಡಬೇಕು. ಇಲ್ಲದಿದ್ದರೆ ನೊಂದ ಬಾಲಕಿಯರ ಬಾಳು ಹಾಳಾಗುತ್ತದೆ.

    ಕರೊನಾ ಬಂದಿದೆ ನಮ್ಮನ್ನು ಬಿಟ್ಟು ಬಿಡಿ ಎಂದು ಹೊಡೆದಾಡಿದ ಖೈದಿಗಳು; ಅನೇಕರು ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts