More

    ಹಿತ್ತಲ ಜೀವಿಗಳ ಬೆನ್ನತ್ತಿದ ಯುವಕ

    ಸಾಗರ: ಪಶ್ಚಿಮಘಟ್ಟದ ಶ್ರೇಣಿ ಎಂದರೆ ಅದು ತನ್ನ ಜೀವ ವೈವಿಧ್ಯತೆಯಿಂದಲೇ ಹೆಸರುವಾಸಿಯಾಗಿದೆ. ಇಲ್ಲಿಯ ಬೆಟ್ಟ, ಗುಡ್ಡ, ದಿಣ್ಣೆ, ಸರೋವರ, ಪಶು-ಪಕ್ಷಿ, ಪ್ರಾಣಿ ಎಲ್ಲವನ್ನೂ ಗಮನಿಸದೆ ನಮ್ಮ ಬದುಕನ್ನು ಸರಿಸಿಬಿಡುತ್ತದೆ. ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೋಡ್ಲುತೋಟ ಎನ್ನುವ ಕಾನನದ ಮಧ್ಯೆ ಬದುಕು ಮುನ್ನಡೆಸುತ್ತಿರುವ ವನ್ಯಜೀವಿ ಛಾಯಾಗ್ರಾಹಕ ಯುವಕ ಈಶಾನ್ಯ ಶರ್ಮ ಕಾಡಿನ ಸುತ್ತಮುತ್ತಲ ಹಿತ್ತಲ ಜೀವಿಗಳನ್ನು ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿದು ಸದ್ದಿಲ್ಲದೆ ಅಪರೂಪದ ಕೆಲಸ ಮಾಡುತ್ತಿದ್ದಾರೆ.
    ಕೋಡ್ಲುತೋಟದ ಕಾಡಿನಲ್ಲಿ ಅಪರೂಪದ ಜೇಡಗಳಿವೆ, ದೊಡ್ಡ ಬಲೆಗಳನ್ನು ಕಟ್ಟುತ್ತವೆ, ಒಂದೊಂದು ಜೇಡಕ್ಕೆ ಒಂದೊಂದು ರೀತಿಯ ವಿನ್ಯಾಸವಿದೆ. ಬೆಳಗಿನ ಮಂಜಿಗೆ ಜೇಡರ ಬಲೆಗಳು ಹೊಳೆಯುತ್ತವೆ. ಸಾಕಷ್ಟು ಕೀಟಗಳನ್ನು ತಿಂದು ನಮಗೆ ತೊಂದರೆಯಾಗದಂತೆ ಜೇಡಗಳು ನೋಡಿಕೊಳ್ಳುತ್ತವೆ. ದೊಡ್ಡ ಜೇಡರ ಬಲೆಗಳಲ್ಲಿ ಹಲವಾರು ಕೀಟಗಳು ಬಲಿಯಾಗಿ ನಿಂತಿರುತ್ತವೆ, ಇವೆಲ್ಲವನ್ನೂ ಈಶಾನ್ಯ ಶರ್ಮ ಅತ್ಯಂತ ವ್ಯವಸ್ಥಿತವಾಗಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದ್ದಾರೆ. ನೂರಾರು ಬಗೆಯ ಜೇಡ ಮತ್ತು ಜೇಡರ ಬಲೆಗಳನ್ನು ಸೆರೆಹಿಡಿದುಪ್ರದರ್ಶಿಸಿದ್ದಾರೆ. ಇನ್ನು ವೈವಿಧ್ಯಮಯವಾದ ಕಪ್ಪೆ, ಕಾಡುಪಾಪ, ಕಾಕರಣೆ ಹಕ್ಕಿ, ಭಾರದ್ವಾಜಾ, ಮಲೆನಾಡಿನಲ್ಲಿ ಕಂಡುಬರುವ ಮಂಗಟ್ಟೆ ಎಲ್ಲವನ್ನು ಸೆರೆಹಿಡಿಯುವಲ್ಲಿ ಯಶಸ್ಸು ಕಂಡಿದ್ದಾರೆ.
    ಪ್ರಕೃತಿಯಲ್ಲಿ ಕಂಡುಬರುವ ಜೀವಿಗಳ ಕುರಿತು ನಾವು ಅಧ್ಯಯನ ಮಾಡಬೇಕಾದ ಅವಶ್ಯಕತೆಯಿದೆ. ಇಲ್ಲಿರುವ ಕಪ್ಪೆಗಳಿಂದ ಹಿಡಿದು ಅಳಿಲುವರೆಗೆ ತಿಳಿದುಕೊಳ್ಳಬೇಕಾದುದು ಬೆಟ್ಟದಷ್ಟಿದೆ. ಕೊಠಡಿ ಶಿಕ್ಷಣಕ್ಕೆ ಅಂಟಿಕೊಂಡ ನಾವು ಕಾಡು ಪಾಠದಲ್ಲಿ ಯಾವುದೇ ಜ್ಞಾನವಿಲ್ಲದೆ ಬೆಳೆದುಬಿಡುತ್ತೇವೆ. ಈಶಾನ್ಯಶರ್ಮ ಸಾಕಷ್ಟು ಬಗೆಯ ಇಂತಹ ಜೀವಿಗಳ ಫೋಟೋಗಳನ್ನು ತೆಗೆದು ಅವುಗಳ ಬಗ್ಗೆ ಮಕ್ಕಳಿಗೆ ಪರಿಚಯಿಸುವಂತಹ ಸಚಿತ್ರದ ಪಾಠವನ್ನು ಉಚಿತವಾಗಿ ಮಾಡುತ್ತ ಬಂದಿದ್ದಾರೆ. ಕಾಡಿನ ಕೌತುಕವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಇವರ ಕಾಳಜಿ, ಪ್ರಯತ್ನ ಮೆಚ್ಚುವಂತಹದ್ದು.
    ಈಗಾಗಲೇ ಸಾಕಷ್ಟು ಕಡೆಗಳಲ್ಲಿ ತಾವು ಸೆರೆಹಿಡಿದಿರುವ ಅಪರೂಪದ ವನ ಜೀವಿಗಳ ಛಾಯಾಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಯಾವುದೋ ಅಪರೂಪದ ಹೂವು ಕುದುರೆಮುಖದಲ್ಲಿ ಬಿಟ್ಟಿದೆ, ಕೊಡಚಾದ್ರಿಯಲ್ಲಿ ಯಾವುದೋ ಅಪರೂಪದ ಹಕ್ಕಿ ಬಂದಿದೆ ಎಂದು ಸುದ್ದಿ ತಿಳಿಯುತ್ತಿದ್ದಂತೆ ಕ್ಯಾಮೆರಾ ಹೆಗಲಿಗೇರಿಸಿಕೊಂಡು ಈಶಾನ್ಯ ಶರ್ಮ ನಡೆದೇ ಬಿಡುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಈಶಾನ್ಯ ಶರ್ಮ ಛಾಯಾಗ್ರಹಣದಲ್ಲಿ ಹೆಚ್ಚಿನ ಸಾಧನೆಯನ್ನು ಕೈಗೊಂಡಿದ್ದಾರೆ. ಇತ್ತೀಚೆಗೆ ಫೋಟೋ ಆರ್ಬಿಟ್ ಆಡ್ ಬಿಹ್ಯಾಂಡ್ ವಿಜ್ಹನ್ ಬಗ್ಗೆ ಇವರಿಗೆ ಪ್ರಶಸ್ತಿ ಕೂಡ ಸಂದಿದೆ. ಸಾಗರ ಫೋಟೋಗ್ರಾಫಿಕ್ ಸೊಸೈಟಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಪಶ್ಚಿಮಘಟ್ಟದ ಅಪರೂಪದ ಸಂಗತಿಗಳನ್ನು ದಾಖಲಿಸುವ ಛಾಯಾಗ್ರಾಹಕರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ.
    ಇತ್ತೀಚಿನ ದಿನಗಳಲ್ಲಿ ಕಾಂಕ್ರೀಟ್ ಕಾಡುಗಳೇ ಹೆಚ್ಚಾಗುತ್ತಿವೆ, ಪಶ್ಚಿಮಘಟ್ಟಗಳನ್ನು ಕೂಡ ನಾವು ಅವ್ಯಾಹತವಾಗಿ ನಾಶ ಮಾಡುತ್ತಿದ್ದೇವೆ. ಮಾನವನ ಮಹದಾಸೆಗೆ ಮಳೆಕಾಡುಗಳು ಮಾಯವಾಗುತ್ತಿವೆ. ಆನೆ, ಕಾಡುಕೋಣ, ಕಪ್ಪೆ, ಹುಲಿ, ಚಿರತೆ ಮುಂತಾದ ಪ್ರಾಣಿಗಳು ನಗರಕ್ಕೆ ಬಂದು ಸದ್ದು ಮಾಡುತ್ತಿವೆ. ಇದಕ್ಕೆ ಕಾರಣ ಪ್ರಾಣಿಗಳು ಬದುಕಬೇಕಾದ ಪ್ರದೇಶಗಳನ್ನು ನಾವು ಕಸಿದುಕೊಳ್ಳುತ್ತಿದ್ದೇವೆ. ಇತ್ತೀಚೆಗೆ ಸಾಗರ ತಾಲ್ಲೂಕಿನಲ್ಲಿ ರಸ್ತೆ ಅಗಲೀಕರಣ ಮುಂತಾದ ಅಭಿವೃದ್ಧಿಯ ಜತೆಯಲ್ಲಿ ಎಲ್ಲೆಂದರಲ್ಲಿ ಬಗರ್‌ಹುಕುಂ ಹೆಸರಿನಲ್ಲಿ ನೆಲ ನುಂಗಲಾಗುತ್ತಿದೆ. ಸಾಕಷ್ಟು ಕಾಡುಕೋಣಗಳು ಅಪಘಾತದಲ್ಲಿ ಸಾವನ್ನಪ್ಪಿದ ಪ್ರಕರಣಗಳು ದಾಖಲಾಗುತ್ತಿವೆ. ಪಶ್ಚಿಮ ಘಟ್ಟದ ಶ್ರೇಣಿ ಅವನತಿ ಮತ್ತು ಆತಂಕದಲ್ಲಿರುವಾಗ ಇಲ್ಲಿಯ ಪ್ರಾಣಿ, ಪಶು-ಪಕ್ಷಿಗಳ ಛಾಯಾಚಿತ್ರಗಳನ್ನು ಸೆರೆಹಿಡಿದು ಕಾರ್ಯಾಗಾರಗಳ ಮೂಲಕ ಕಾಡು ಮತ್ತು ಪ್ರಾಣಿ ಉಳಿಸುವ ಈಶಾನ್ಯ ಅವರ ಪ್ರಯತ್ನ ಮೆಚ್ಚುವಂತದ್ದು.
    ನಾನು 7ನೇ ತರಗತಿಯಿಂದಲೇ ಕ್ಯಾಮೆರಾವನ್ನು ಕೈಯಲ್ಲಿ ಹಿಡಿದು ಫೋಟೋ ತೆಗೆಯಲು ಆರಂಭಿಸಿದೆ. ಕಾನನದ ಮಧ್ಯೆ ಇರುವ ಹಿತ್ತಲ ಜೀವಿಗಳ ಬಗ್ಗೆ ನಮಗ್ಯಾರಿಗೂ ಹೆಚ್ಚಿನ ತಿಳಿವಳಿಕೆ ಇಲ್ಲ. ಇಲ್ಲಿರುವ ಒಂದು ಜೇಡದಿಂದ ಹಿಡಿದು ದೊಡ್ಡ ಗಾತ್ರದ ಹಾರುವ ಪ್ರಾಣಿಗಳವರೆಗೆ ತಮ್ಮದೇ ಆದ ವೈವಿಧ್ಯತೆಯನ್ನು ಇಟ್ಟುಕೊಂಡಿವೆ. ನಮ್ಮ ಮಕ್ಕಳಿಗೆ ಪರಿಸರ ಮತ್ತು ಕಾಡಿನ ಶಿಕ್ಷಣದ ಅರಿವು ಮೂಡಿಸಿದರೆ ಅದರ ಮೇಲೆ ಪ್ರೀತಿ ಬೆಳೆಯುತ್ತದೆ ಎನ್ನುತ್ತಾರೆ ಈಶಾನ್ಯ ಶರ್ಮ. ಈ ಕಾಯಕದಲ್ಲಿ ನನ್ನನ್ನು ತೊಡಗಿಸಿದ ತಂದೆ ಕೋಡ್ಲುತೋಟದ ರಮೇಶ್ ಮತ್ತು ವನ್ಯಜೀವಿ ಛಾಯಾಗ್ರಾಹಕರಾದ ಸತೀಶ್ ಮತ್ತು ಉಲ್ಲಾಸ್ ಅವರ ಸಹಕಾರ ನಾನು ಎಂದಿಗೂ ಮರೆಯುವುದಿಲ್ಲ. ಪರಿಸರ ಮತ್ತು ಜೀವಿಗಳನ್ನು ಉಳಿಸಿಕೊಳ್ಳುವ ಸಣ್ಣ ಚಳವಳಿಯನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದ ಚಿತ್ರಪ್ರದರ್ಶನದ ಮೂಲಕ ಮಾಡುತ್ತಿದ್ದೇನೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts