More

    ಚೀಟಿ ಹಾಕಿದ್ದ ಜನರಿಗೆ ವಂಚಿಸಿದ ಖತರ್ನಾಕ್ ಲೇಡಿ: ರಾತ್ರೋ ರಾತ್ರಿ ಮನೆಗೆ ಬೀಗ ಹಾಕಿ ಪರಾರಿ

    ಆನೇಕಲ್​: ಜನ ಎಲ್ಲಿ ತನಕ ‌ಮೋಸ ಹೋಗುತ್ತಾರೆಯೋ ಅಲ್ಲಿಯ ತನಕ ಮೋಸ ಮಾಡುವ ಜನರು ಸಹ ಇರ್ತಾರೆ, ಅದೇ ರೀತಿ ಇಲ್ಲೊಂದು ಮಹಿಳೆ ಚೀಟಿ ವ್ಯವಹಾರದ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದಾಳೆ. ಏರಿಯಾದಲ್ಲಿ ಮಹಿಳೆಯರ ವಿಶ್ವಾಸಗಳಿಸಿ ಚೀಟಿ ಹಾಕಿಸಿಕೊಂಡಿದ್ದ ವಂಚಕಿ ರಾತ್ರೋರಾತ್ರಿ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದು, ಈಗ ಬಡ ಜನರು ಮಾತ್ರ ಬೀದಿಗೆ ಬೀಳುವಂತಾಗಿದೆ.

    ಕೂಲಿ ನಾಲಿ ಮಾಡಿ ಚೀಟಿ ಹಣವನ್ನು ಕಟ್ಟಿ ಮೋಸ ಹೋಗಿರುವ ಜನರ ಈ ದೃಶ್ಯ ಕಂಡು ಬಂದಿದ್ದು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕಿತ್ತಾಗನಹಳ್ಳಿಯ ಕೃಷ್ಣಪ್ಪ ಲೇಔಟ್ ನಲ್ಲಿ. ಹೌದು ಈ ಪೋಟೋದಲ್ಲಿ ಕಾಣುತ್ತಿರುವ ಲೇಡಿ ಹೆಸರು ಶ್ಯಾಮಲಾ ಅಂತ ಮೂಲತಃ ಆಂದ್ರ ಮೂಲದ ಈಕೆ 25 ವರ್ಷಗಳ ಹಿಂದೆ ಕಿತ್ತಾಗನಹಳ್ಳಿಗೆ ಬಂದು ನೆಲೆಸಿದ್ದಳು. ಗ್ರಾಮದ ಮಹಿಳೆಯರ ವಿಶ್ವಾಸಗಳಿಸಿದ್ದ ಈಕೆ ಚೀಟಿ ವ್ಯವಹಾರ, ಸಂಘಗಳು ಹಾಗೂ ಬಡ್ಡಿ ವ್ಯವಹಾರ ಮಾಡಿಕೊಂಡಿದ್ದಳು. ಈಕೆಯ ವ್ಯವಹಾರವನ್ನ ನಂಬಿದ್ದ ಗ್ರಾಮದ 80 ಕ್ಕೂ ಹೆಚ್ಚು ಜನರು ಕೂಲಿ ನಾಲಿ ಮಾಡಿ ಒಂದಿಷ್ಟು ಹಣ ಉಳಿಸುವ ಉದ್ದೇಶದಿಂದಾಗಿ ಶ್ಯಾಮಲಾ ಬಳಿ ಚೀಟಿ ಹಾಕಿದ್ದರು.

    ಆದರೆ ಚೀಟಿ ಹಾಕಿದ್ದ ಜನರಿಗೆ ಸರಿಯಾಗಿ ಹಣ ನೀಡದೆ ದಿನಾಂಕಗಳನ್ನು ಮುಂದೂಡುತ್ತ ಬರುತ್ತಿದ್ದಳು. ಚೀಟಿ ಹಾಕಿದ್ದ ಜನರು ತಮ್ಮ ಹಣವನ್ನ ನೀಡುವಂತೆ ಹೆಚ್ಚು ಒತ್ತಡ ಹೇರುತ್ತಿದ್ದಂತೆ 2 ಕೋಟಿಗೂ ಅಧಿಕ ಮೌಲ್ಯದ ಹಣವನ್ನು ವಂಚಿಸಿ ರಾತ್ರೋರಾತ್ರಿ ಮನೆಗೆ ಬೀಗ ಹಾಕಿ ಊರು ಬಿಟ್ಟಿದ್ದಾಳೆ‌.

    ಇನ್ನೂ ಚೀಟಿ ಹಾಕಿದ್ದ ಜನರಲ್ಲಿ ಅತಿಹೆಚ್ಚು ಮಹಿಳೆಯರೇ ಆಗಿದ್ದು, ಗಾರ್ಮೆಂಟ್ಸ್ ಹಾಗೂ ಕೂಲಿ ಕೆಲಸ ಮಾಡುವ ಬಡ ಮಹಿಳೆಯರಾಗಿದ್ದಾರೆ. ಒಂದಿಷ್ಟು ಹಣವನ್ನ ಚೀಟಿ ಹಾಕಿಕೊಂಡು ಬದುಕು ಕಟ್ಟಿಕೊಳ್ಳುವ ಕನಸಿನೊಂದಿಗೆ ಚೀಟಿ ಹಾಕಿದ್ದ ಮಹಿಳೆಯರಿಗೆ ವಂಚಕಿ ಶ್ಯಾಮಲಾ ಮೋಸ ಮಾಡಿ ಹೋಗಿದ್ದಾಳೆ. ಮೋಸಗಾತಿ ಶ್ಯಾಮಲಾ ಬರಿ ಚೀಟಿ ವ್ಯವಹಾರವಲ್ಲದೆ ಸಂಘಗಳು, ಉಜ್ಜೀವನ್ ಬ್ಯಾಂಕ್ ಹಾಗೂ ಭರತ್ ಫೈನಾನ್ಸ್ ಬ್ಯಾಂಕ್ ಗಳಲ್ಲಿ ಅಮಾಯಕ ಜನರನ್ನ ನಂಬಿಸಿ ಅವರ ಹೆಸರಿನಲ್ಲಿ ವಂಚಕಿ ಹಣವನ್ನ ಪಡೆದು ಪರಾರಿಯಾಗಿದ್ದಾಳೆ. ಸುಮಾರು 80 ಕ್ಕೂ ಹೆಚ್ಚು ಜನರಿಗೆ ವಂಚಕಿ ಶ್ಯಾಮಲಾ ಮೋಸವನ್ನ ಮಾಡಿದ್ದು, ಎರಡು ಕೋಟಿಗೆ ಅಧಿಕ ಮೌಲ್ಯದ ಹಣವನ್ನು ವಂಚನೆ ಮಾಡಿದ್ದಾಳೆ ಎನ್ನಲಾಗಿದೆ.

    ಒಟ್ಟಿನಲ್ಲಿ ಚೀಟಿ ಹಾಕಿ ಮೋಸ ಹೋದ ಜನರು ಸೂರ್ಯನಗರ ಪೋಲೀಸರ ಮೊರೆ ಹೋಗಿದ್ದು, ರಾತ್ರಿ ಹಗಲು ಎನ್ನದೆ ಕಷ್ಟ ಪಟ್ಟು ಹಣ ಕಟ್ಟಿದ್ದ ಜನಕ್ಕೆ ಮೋಸ ಮಾಡಿ ಪರಾರಿಯಾಗಿರುವ ವಂಚಕಿ ಶ್ಯಾಮಲಾಳನ್ನ ಹುಡುಕಿ ತಮ್ಮ ಹಣವನ್ನು ವಾಪಸ್ ಕೊಡಿಸುವಲ್ಲಿ ಪೋಲೀಸರು ಯಶಸ್ವಿಯಾಗುತ್ತಾರ ಎಂದು ಕಾದು ನೋಡಬೇಕಿದೆ. (ದಿಗ್ವಿಜಯ ನ್ಯೂಸ್​)

    ಐಪಿಎಲ್​​​​-2022: ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಮೊತ್ತದ ಬಹುಮಾನ, ​ಸೋತರೂ ಸಿಗುತ್ತಾ ಇಷ್ಟು ಹಣ! ಇಲ್ಲಿದೆ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts