More

    ಚಿಕ್ಕಹೆಡಿಗೆಹಳ್ಳಿ ಬಳಿ ಸೇತುವೆಯಡಿ ಮಲಗಿದ್ದ ಸ್ಥಿತಿಯಲ್ಲಿ ಹುಲಿ  ಕಳೇಬರ ಪತ್ತೆ

    ತುಮಕೂರು: ಕೊಡಗಿನಲ್ಲಿ ನರಭಕ್ಷಕ ಹುಲಿ ಅಟ್ಟಹಾಸದ ಬೆನ್ನಲ್ಲೇ ಜಿಲ್ಲೆಯಲ್ಲಿ ಮಂಗಳವಾರ ಹುಲಿ ಕಳೇಬರ ಪತ್ತೆಯಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ.

    6-7 ವರ್ಷದ ಗಂಡು ಹುಲಿಯ ಕಳೆಬರ ಪತ್ತೆಯಾಗಿದೆ. 2.6 ಮೀ., ಅಡಿ ಉದ್ದದ ದೃಢಕಾಯ, ಆರೋಗ್ಯಪೂರ್ಣ ಹುಲಿ ಇದಾಗಿದೆ. ಹುಲಿ ದೇಹದ ಹೊರಭಾಗದಲ್ಲಿ ಯಾವುದೇ ರಕ್ತಸ್ರಾವವಾಗಲಿ, ಮತ್ತೊಂದು ಪ್ರಾಣಿಯ ದಾಳಿಯಿಂದಾದ ಗಾಯದ ಗುರುತಾಗಲಿ ಕಂಡುಬಂದಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ವಾಹನ ಅಪಘಾತ ಅಥವಾ ವಿಷಮಿಶ್ರಿತ ಆಹಾರ ಸೇವನೆಯಿಂದ ಸಾವನ್ನಪ್ಪಿದೆ ಎಂದು ತಿಳಿದುಬಂದಿದ್ದು, ಭದ್ರಾ ಅಭಯಾರಣ್ಯ ಅಥವಾ ಬನ್ನೇರುಘಟ್ಟ ಜೈವಿಕ ಉದ್ಯಾನವನ ಕಡೆಯಿಂದ ಈ ಹುಲಿ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

    ಅಂಕಸಂದ್ರ ಅರಣ್ಯಪ್ರದೇಶದಲ್ಲಿ ಪತ್ತೆ: ಗುಬ್ಬಿ ತಾಲೂಕು ಚೇಳೂರು ಹೋಬಳಿ ಚಿಕ್ಕಹೆಡಿಗೆಹಳ್ಳಿ ಬಳಿ ಹುಲಿ ಕಳೇಬರ ಪತ್ತೆಯಾಗಿದ್ದು, ಚೇಳೂರು-ಶಿರಾ ಮಾರ್ಗದ ಅಂಕಸಂದ್ರ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿನ ಮೂಡಲಪಾಳ್ಯದ ರಸ್ತೆ ಸೇತುವೆಯ ಸಿಮೆಂಟ್ ಪೈಪ್‌ನೊಳಗೆ ಮಲಗಿದ್ದ ಹುಲಿಯನ್ನು ಬೆಳ್ಳಂಬೆಳಗ್ಗೆ ಕಂಡು ಗಾಬರಿಗೊಳಗಾದ ಗ್ರಾಮಸ್ಥರು ತಕ್ಷಣವೇ ಅರಣ್ಯಾಧಿಕಾರಿಗಳಿಗೆ ಸುದ್ದಿಮುಟ್ಟಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಸಿಬ್ಬಂದಿಗೂ ಹುಲಿ ಕಂಡು ಅಚ್ಚರಿ ಕಾದಿತ್ತು. ಸೇತುವೆಯಡಿ ಮಲಗಿದ್ದ ಸ್ಥಿತಿಯಲ್ಲಿನ ಹುಲಿಯ ಯಾವುದೇ ಚಲನವಲನ ಇಲ್ಲದ್ದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಮೊಬೈಲ್‌ಗಳಲ್ಲಿ ಹುಲಿ ಕಳೇಬರದ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಲ್ಲದೆ, ಅರಣ್ಯಾಧಿಕಾರಿಗಳಿಗೂ ರವಾನಿಸಿದ್ದಾರೆ. ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಹುಲಿ ನೋಡಲು ಜನದಟ್ಟಣೆ ಸೇರಿತು.

    ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ, ಎಸಿಎಫ್ ಮಹೇಶ್ ಮಾಲಗತ್ತಿ, ಆರ್‌ಎಫ್‌ಒ ದುಗ್ಗಪ್ಪ, ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ, ಸಲಹೆಗಾರ ಟಿ.ವಿ.ಎನ್.ಮೂರ್ತಿ ಸೇರಿದಂತೆ ಜಿಲ್ಲೆಯ ಎಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸ್ಥಳದಲ್ಲೇ ಬೆಳಗ್ಗೆಯಿಂದ ಮೊಕ್ಕಾಂ ಹೂಡಿ ಹುಲಿ ಹತ್ತಿರ ಯಾರೂ ಸುಳಿಯದಂತೆ ಜನರನ್ನು ನಿಯಂತ್ರಿಸಲು ಕ್ರಮವಹಿಸಿದ್ದಲ್ಲದೇ, ತಜ್ಞರು ಬರುವವರೆಗೆ ಹತ್ತಿರವೂ ಸುಳಿಯಲಿಲ್ಲ. ಸಂಜೆ ಮರಣೋತ್ತರ ಪರೀಕ್ಷೆಯನ್ನು ಹಾಸನದಿಂದ ಬಂದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಸಮ್ಮುಖದಲ್ಲಿ ನಡೆಸಲಾಯಿತು. ಭದ್ರಾ ವನ್ಯಜೀವಿ ವೈದ್ಯ ಡಾ.ವಿಶಾಲ್ ಜತೆಗೆ ಡಾ.ಯಶಸ್, ಡಾ.ಪೃಥ್ವಿ ಮರಣೋತ್ತರ ಪರೀಕ್ಷೆ ನಡೆಸಿದರು.

    ಸ್ಥಳದಲ್ಲೇ ಜಿಲ್ಲಾಧಿಕಾರಿ ಮೊಕ್ಕಾಂ: ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಹುಲಿಯ ಸಣ್ಣ ಸುಳಿವೂ ಇರಲಿಲ್ಲ. ಹಾಗಾಗಿ, ಹುಲಿ ಕಳೇಬರ ಪತ್ತೆಯಾಗಿರುವ ಸುದ್ದಿ ಕುತೂಹಲ ಮೂಡಿಸಿದ್ದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಸಂಜೆ ಮರಣೋತ್ತರ ಪರೀಕ್ಷೆ ಮುಗಿಯುವವರೆಗೆ ಅಲ್ಲಿಂದ ಕದಲಲಿಲ್ಲ. ಹುಲಿ ಎಲ್ಲಿಂದ ಬಂತು. ಅದರ ವಯಸ್ಸೆಷ್ಟು? ಗಂಡೋ ಅಥವಾ ಹೆಣ್ಣೋ? ಸಾವಿಗೆ ನಿಖರ ಕಾರಣವೇನು? ಎಂಬ ಅನೇಕ ಕುತೂಹಲಕರ ಮಾಹಿತಿಯನ್ನು ಅರಣ್ಯಾಧಿಕಾರಿಗಳು, ವನ್ಯಜೀವಿ ತಜ್ಞರ ಬಳಿ ಪಡೆದಿದ್ದು ವಿಶೇಷವಾಗಿತ್ತು. ಮರಣೋತ್ತ್ತರ ಪರೀಕ್ಷೆ ಮುಗಿದು, ಹುಲಿ ಕಳೇಬರವನ್ನು ಅರಣ್ಯಪ್ರದೇಶದಲ್ಲೇ ಅಂತ್ಯಕ್ರಿಯೆ(ದಹನ) ಮಾಡುವವರೆಗೆ ವೈ.ಎಸ್.ಪಾಟೀಲ ಅಲ್ಲಿಯೇ ಇದ್ದರು.

    ಹುಲಿ ಬಂತು ಹುಲಿ…!? ಅಂಕಸಂದ್ರ ಅರಣ್ಯ ಪ್ರದೇಶ ವ್ಯಾಪ್ತಿಗೆ ಹುಲಿ ಬಂದಿದ್ದಾದರೂ ಎಲ್ಲಿಂದ ಎಂಬ ಅನುಮಾನಗಳು ಸಹಜವಾಗಿ ಎಲ್ಲರನ್ನೂ ಕಾಡಿದೆ. ಭದ್ರಾ ಅಭಯಾರಣ್ಯದಿಂದ ಬೀರೂರು-ಕಡೂರು-ಹೊಸದುರ್ಗ-ಚಿಕ್ಕನಾಯಕನಹಳ್ಳಿ ತಾಲೂಕು ತೀರ್ಥರಾಂಪುರ ಮಾರ್ಗವಾಗಿ ಅಥವಾ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ರಾಮನಗರ, ಮಾಗಡಿ ಮಾರ್ಗವಾಗಿ ಅಂಕಸಂದ್ರ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಬಂದಿರುವ ಸಾಧ್ಯತೆಗಳಿವೆ. ಹುಲಿ ‘ಪಟ್ಟೆ’ ಚಿತ್ರಣವನ್ನು ಬೆಂಗಳೂರಿನ ಅರಣ್ಯಭವನಕ್ಕೆ ರವಾನಿಸಲಾಗಿದ್ದು ಅದರ ಹೋಲಿಕೆ ಆಧರಿಸಿ ಭದ್ರಾ ಅಥವಾ ಬನ್ನೇರುಘಟ್ಟದಿಂದ ಬಂದಿರಬಹುದೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಡಿಸಿಎಫ್ ಅನುಪಮಾ ‘ವಿಜಯವಾಣಿ’ಗೆ ತಿಳಿಸಿದರು.

    ಹುಲಿ ಹೆಜ್ಜೆ ಗುರುತು…ಜಿಲ್ಲೆಯಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಕಡೆ ಚಿರತೆ ಭೀತಿ ಇದ್ದೇ ಇದೆ. ಹುಲಿ ಕಳೇಬರ ಪತ್ತೆಯಾಗಿರುವುದು ಅಚ್ಚರಿ ಜತೆಗೆ ಜನರಲ್ಲಿ ಆತಂಕ ಮನೆ ಮಾಡುವಂತಾಗಿದೆ. ಈ ಹಿಂದೆ 1997ರಲ್ಲಿ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಅಂದು ಅರಣ್ಯಸಂರಕ್ಷಣಾಧಿಕಾರಿಯಾಗಿದ್ದ ಉದಯ್‌ವೀರ್ ಸಿಂಗ್ ಹುಲಿ ನೋಡಿದ್ದ ನಿದರ್ಶನ ಇದೆ. ಅದಾದ ನಂತರ 2000ರ ಆಗಸ್ಟ್ 8ರಂದು ನಾಮದಚಿಲುಮೆಯಲ್ಲಿ ‘ಔಷಧವನ’ ನಿರ್ಮಿಸಲು ದಟ್ಟವಾಗಿದ್ದ ನೀಲಗಿರಿ ತೋಪು ತೆರವುಗೊಳಿಸಲಾಗಿತ್ತು. ಆ ವೇಳೆ ಕುಂಬಾರಹಳ್ಳಿ ಕೆರೆ ಬಳಿ ಕೆಸರಿನಲ್ಲಿ ಮೂಡಿದ್ದ ಹುಲಿಯ ಹೆಜ್ಜೆ ಗುರುತು (ಪಂಜು), ಲದ್ದಿ ಪತ್ತೆಹಚ್ಚಿ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಸದಸ್ಯರು ಭಾರತೀಯ ವಿಜ್ಞಾನ ಮಂದಿರಕ್ಕೆ ಕಳುಹಿಸಿದ್ದರು. ಆ ಸಂದರ್ಭದಲ್ಲಿ ಹೆಜ್ಜೆ ಗುರುತು, ಲದ್ದಿ ಹುಲಿಯದ್ದೇ ಎಂದು ತಜ್ಞರು ಪ್ರಮಾಣಿಕರಿಸಿದ್ದರು.

    ಇದಾದ ಬಳಿಕ 2006ರಲ್ಲಿ ಅಂದಿನ ಆರ್‌ಎಫ್‌ಒ ಗಂಗಯ್ಯ ರಾತ್ರಿ ವೇಳೆ ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ತೆರಳಿದ್ದಾಗ 2 ಮರಿಗಳೊಂದಿಗೆ ತಾಯಿ ಕಾಣಿಸಿಕೊಂಡಿತ್ತು. ಜಿಲ್ಲೆಯಲ್ಲಿ ಹುಲಿ ಸಂತತಿ ಇತ್ತು ಎಂಬುದಕ್ಕೆ ಇವೆಲ್ಲಾ ಸ್ಪಷ್ಟ ನಿದರ್ಶನ ಎನ್ನುತ್ತಾರೆ 
    |ಬಿ.ವಿ.ಗುಂಡಪ್ಪ.ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts