More

    ಇಂಡಿಗನತ್ತ ಗ್ರಾಮಕ್ಕೆ ಅಧಿಕಾರಿಗಳ ತಂಡ ಭೇಟಿ

    ಮಹದೇಶ್ವರಬೆಟ್ಟ: ಅಗತ್ಯ ಮೂಲ ಸೌಕರ್ಯ ಒದಗಿಸದ ಕಾರಣ ಲೋಕಸಭೆ ಚುನಾವಣೆಯ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಕುಗ್ರಾಮ ಇಂಡಿಗನತ್ತ ಗ್ರಾಮಕ್ಕೆ ಮಂಗಳವಾರ ಅಧಿಕಾರಿಗಳ ತಂಡ ಭೇಟಿ ನೀಡಿ ಅಗತ್ಯ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು.


    ಮಹದೇಶ್ವರಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಳಸಿಕೆರೆ, ಇಂಡಿಗನತ್ತ, ಮೆಂದಾರೆ, ತೇಕಣೆ ಹಾಗೂ ಪಡಸಲನತ್ತ ಗ್ರಾಮದಲ್ಲಿ ಹೆಚ್ಚಾಗಿ ಬೇಡಗಂಪಣ ಹಾಗೂ ಸೋಲಿಗ ಸಮುದಾಯ ಜನರು ವಾಸಿಸುತ್ತಿದ್ದು, ಸಮರ್ಪಕ ರಸ್ತೆ, ವಿದ್ಯುತ್, ಕುಡಿಯುವ ನೀರು, ಸಾರಿಗೆ, ಶಿಕ್ಷಣ ಹಾಗೂ ಆರೋಗ್ಯ ಸೇವೆ ಸೇರಿದಂತೆ ಇನ್ನಿತರ ಮೂಲ ಸೌಕರ್ಯದಿಂದ ವಂಚಿತರಾಗಿದ್ದರು. ಇದರಿಂದ ಈ ಗ್ರಾಮಗಳ ನಿವಾಸಿಗಳು ಕಷ್ಟದ ನಡುವೆ ಜೀವನ ಸಾಗಿಸುತ್ತಿದ್ದರು.


    ಮಹದೇಶ್ವರಬೆಟ್ಟದಿಂದ ಜೀಪ್‌ಗಳ ಮೂಲಕ ನಾಗಮಲೆಗೆ ತೆರಳುವ ಭಕ್ತರ ಸಂಚಾರವನ್ನು ಅರಣ್ಯ ಇಲಾಖೆ ಸ್ಥಗಿತಗೊಳಿಸಿತ್ತು. ಪರಿಣಾಮ ಈ ಮಾರ್ಗದಲ್ಲಿ ಸಣ್ಣ ಪುಟ್ಟ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಕುಟುಂಬಗಳ ಜೀವನ ನಿರ್ವಹಣೆಗೆ ಪೆಟ್ಟು ಬಿದ್ದಿತ್ತು. ಇತ್ತ ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಕಳಪೆಯಿಂದ ಕೂಡಿತ್ತು. ಜತೆಗೆ ಸಾಮಾಜಿಕ ಭದ್ರತಾ ಯೋಜನೆ ಕೆಲ ಫಲಾನುಭವಿಗಳಿಗೆ ತಲುಪಿರಲಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಅಗತ್ಯ ಮೂಲ ಸೌಕರ್ಯ ಒದಗಿಸುವುದರ ಜತೆಗೆ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಚುನಾವಣೆಯ ಮತದಾನ ಬಹಿಷ್ಕರಿಸುವುದಾಗಿ ನಿರ್ಧರಿಸಿದ್ದರು.


    ಈ ಬಗ್ಗೆ ಮಾ.17ರ ವಿಜಯವಾಣಿಯಲ್ಲಿ ‘ಮತದಾನ ಬಹಿಷ್ಕರಿಸಲು ಮತದಾರ ತೀರ್ಮಾನ’ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಗೊಂಡಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳ ತಂಡ ಮಂಗಳವಾರ ಇಂಡಿಗನತ್ತ ಗ್ರಾಮಕ್ಕೆ ಭೇಟಿ ನೀಡಿತ್ತು. ನೆರೆದಿದ್ದ ಸುತ್ತಮುತ್ತಲ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು.


    ಸೆಸ್ಕ್ ಎಇಇ ಶಂಕರ್ ಮಾತನಾಡಿ, ಮ.ಬೆಟ್ಟದ ತಪ್ಪಲಿನ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಬಂಧ ಈಗಾಗಲೇ 40 ಕೋಟಿ ರೂ.ವೆಚ್ಚದಲ್ಲಿ ಅನುಮೋದನೆಯಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಕಾಮಗಾರಿ ಕೈಗೊಂಡು ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದರೆ, ಪಿಡಬ್ಯುಡಿ ಎಇಇ ಚಿನ್ನಣ್ಣ ಮಾತನಾಡಿ, ಕಾಡಂಚಿನ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಸಂಬಂಧ 45 ಕಿ.ಮೀ ಸರ್ವೇ ಕಾರ್ಯ ನಡೆಸಿ ಅದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಹಾಗಾಗಿ ಅನುಮೋದನೆಗೊಂಡು ಅನುದಾನ ಬಿಡುಗಡೆಯಾದ ಬಳಿಕ ರಸ್ತೆ ನಿರ್ಮಿಸುವುದಾಗಿ ಭರವಸೆ ನೀಡಿದರು.


    ಆರ್‌ಎಫ್‌ಒ ಭಾರತಿ ನಂದಿಹಳ್ಳಿ ಮಾತನಾಡಿ, ಮ.ಬೆಟ್ಟದಿಂದ ನಾಗಮಲೆಗೆ ಚಾರಣಕ್ಕೆ ಆನ್‌ಲೈನ್ ಜಾರಿಯಾದ ಬಳಿಕ ಇಚ್ಛೆಯುಳ್ಳವರು ನೋಂದಾಯಿಸಿಕೊಂಡು ಭಕ್ತರನ್ನು ಕರೆದೊಯ್ದು ಮತ್ತೆ ಮ.ಬೆಟ್ಟಕ್ಕೆ ಕರೆ ತರಬೇಕು. ನಿಯಮಕ್ಕೆ ಅನುಗುಣವಾಗಿ ಜೀಪ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು. ಆದರೆ ಇದಕ್ಕೆ ಒಪ್ಪದ ಗ್ರಾಮಸ್ಥರು ಜೀಪ್‌ಗಳ ಸಂಚಾರ ನಿಷೇಧದಿಂದಾಗಿ ಈಗಾಗಲೇ ತುಂಬಾ ತೊಂದರೆ ಎದುರಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.


    ಜಲಜೀವನ ಮಿಷನ್ ಇಂಜಿನಿಯರ್ ಹರೀಶ್, ಆರ್‌ಐ ಶಿವಕುಮಾರ್, ಪಿಡಿಒ ಕಿರಣ್‌ಕುಮಾರ್, ಗ್ರಾಮ ಆಡಳಿತ ಅಧಿಕಾರಿ ವಿನೋದ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts