More

    ಇಎಸ್‌ಐ ಆಸ್ಪತ್ರೆ ಯಾವಾಗ ಶುರು? ಮಂಜೂರಾಗಿ ಕಳೆದಿವೆ ವರ್ಷಗಳು ಕೋವಿಡ್ ಕೇರ್ ಸೆಂಟರ್‌ನಲ್ಲಿ ಆರಂಭಕ್ಕೆ ಪ್ರಸ್ತಾವ

    ಕೊಪ್ಪಳ: ಜಿಲ್ಲೆಗೆ 30 ಹಾಸಿಗೆಯ ರಾಜ್ಯ ವಿಮಾ ಆಸ್ಪತ್ರೆ (ಇಎಸ್‌ಐ) ಮಂಜೂರಾಗಿ ವರ್ಷಗಳೇ ಕಳೆದರೂ ಆರಂಭವಾಗುವ ಭಾಗ್ಯ ಕೂಡಿ ಬಂದಿಲ್ಲ. ಹಳೇ ಜಿಲ್ಲಾಸ್ಪತ್ರೆ, ಎಂಸಿಎಚ್, ಕಿಮ್ಸ್ ಆವರಣ ಸೇರಿ ವಿವಿಧೆಡೆ ಆರಂಭಿಸಲು ಸ್ಥಳ ಹುಡುಕಾಟ ನಡೆಸಿದ್ದು, ಅಂತಿಮವಾಗಿ ಗಿಣಿಗೇರಿ ಬಳಿ ಕಾರ್ಖಾನೆಗಳು ಸಿದ್ಧಪಡಿಸಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ತೆರೆಯಲು ಹುಬ್ಬಳ್ಳಿ ವೈದ್ಯಕೀಯ ಅಧೀಕ್ಷಕರ ತಂಡ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

    ಕಾರ್ಮಿಕರ ರಾಜ್ಯ ವಿಮಾ ನಿಗಮ 2016ರಲ್ಲಿ ಜಿಲ್ಲೆಗೆ ಇಎಸ್‌ಐ ಚಿಕಿತ್ಸಾ ಕೇಂದ್ರ ಮಂಜೂರು ಮಾಡಿದೆ. ನಗರದ ಸಿಂಪಿ ಲಿಂಗಣ್ಣ ರಸ್ತೆಯಲ್ಲಿ ತಾತ್ಕಾಲಿಕವಾಗಿ ಚಿಕಿತ್ಸಾಲಯ ತೆರೆದಿದ್ದರೂ ಶಿಫಾರಸು ಮಾಡಲಷ್ಟೇ ಸೀಮಿತವಾಗಿದೆ. ಜಿಲ್ಲೆಯಲ್ಲಿ ನೂರಾರು ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳಿವೆ. ಸಾವಿರಾರು ಕಾರ್ಮಿಕರು ಇಎಸ್‌ಐ ಸೌಲಭ್ಯ ಹೊಂದಿದ್ದಾರೆ. ಆದರೆ, ಚಿಕಿತ್ಸೆ ಪಡೆಯಲು ಹುಬ್ಬಳ್ಳಿಗೆ ತೆರಳುವ ಪರಿಸ್ಥಿತಿ ಇದೆ. ಕಾರ್ಮಿಕರಿದ್ದರೂ ನೋಂದಣಿಯಾಗಿಲ್ಲ. ಹೀಗಾಗಿ ಆಸ್ಪತ್ರೆ ಆರಂಭಕ್ಕೆ ಅವಕಾಶ ದೊರೆತಿರಲಿಲ್ಲ. ಬಳಿಕ ಕನಿಷ್ಠ 30 ಹಾಸಿಗೆಯ ಆಸ್ಪತ್ರೆಯನ್ನಾದರೂ ನಿರ್ಮಿಸಲು ಸಂಸದ ಸಂಗಣ್ಣ ಕರಡಿ ಸಲ್ಲಿಸಿದ ಮನವಿ ಪುರಸ್ಕರಿಸಿದ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆಸ್ಪತ್ರೆ ನಿರ್ಮಾಣಕ್ಕೆ ನಾಲ್ಕೈದು ವರ್ಷಗಳ ಹಿಂದೆಯೇ ಕೊಪ್ಪಳ ತಾಲೂಕಿನ ಗಿಣಿಗೇರಿ ಬಳಿ ಐದು ಎಕರೆ ಜಾಗವನ್ನು ಜಿಲ್ಲಾಡಳಿತ ಮಂಜೂರು ಮಾಡಿದೆ. ಆದರೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿಲ್ಲ.

    ಆಸ್ಪತ್ರೆ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದರೂ ಕಟ್ಟಡ ಕೊರತೆ ಕಾರಣ ಶುರು ಮಾಡಲಾಗುತ್ತಿಲ್ಲ. ತಾತ್ಕಾಲಿಕವಾಗಿ ಕಟ್ಟಡ ನೀಡಿದಲ್ಲಿ ಆಸ್ಪತ್ರೆ ಆರಂಭವಾಗಲಿದ್ದು, ಇಎಸ್‌ಐ ಸೌಲಭ್ಯವುಳ್ಳ ಕಾರ್ಮಿಕರ ಕುಟುಂಬಕ್ಕೆ ಅನುಕೂಲವಾಗಲಿದೆ. ಕಾರ್ಮಿಕ ಇಲಾಖೆ ಹುಬ್ಬಳ್ಳಿ ಇಎಸ್‌ಐ ವೈದ್ಯಕೀಯ ಅಧೀಕ್ಷಕರ ನೇತೃತ್ವದಲ್ಲಿ ತಂಡ ರಚಿಸಿ ತಾತ್ಕಾಲಿಕವಾಗಿ ಆಸ್ಪತ್ರೆ ಆರಂಭಕ್ಕೆ ಕಟ್ಟಡ ಪರಿಶೀಲಿಸುವಂತೆ ಸೂಚಿಸಿದೆ. ಇದರ ಬೆನ್ನಲ್ಲೇ ವೈದ್ಯಕೀಯ ಅಧೀಕ್ಷಕ ಡಾ.ಯೂನಸ್ ನಜ್ಮಿ, ಕೆ.ಮಲ್ಲಿಕಾರ್ಜುನ್, ಎಲ್.ಧನಂಜಯ ಹಾಗೂ ಭೀಮಪ್ಪ ಗಂಟಿ ನೇತೃತ್ವದ ತಂಡ ವಾರದ ಹಿಂದೆ ಜಿಲ್ಲೆಗೆ ಭೇಟಿ ನೀಡಿದ್ದು, ಹಲವು ಸ್ಥಳ ಪರಿಶೀಲನೆ ನಡೆಸಿದೆ.

    ಜಿಲ್ಲಾಡಳಿತ ಕೊಪ್ಪಳದ ಹಳೇ ಜಿಲ್ಲಾಸ್ಪತ್ರೆ ಅಥವಾ ಹೊಸದಾಗಿ ಆರಂಭವಾಗಿರುವ ಎಂಸಿಎಚ್ ಆಸ್ಪತ್ರೆಯಲ್ಲಿ ತಾತ್ಕಾಲಿಕವಾಗಿ ಆರಂಭಿಸುವಂತೆ ತಿಳಿಸಿದೆ. ಇದರೊಂದಿಗೆ ಕೋವಿಡ್ 2ನೇ ಅಲೆಯಲ್ಲಿ ಜಿಲ್ಲಾಡಳಿತಕ್ಕೆ ಬೆಡ್‌ಗಳ ಕೊರತೆಯಾದಾಗ ಜಿಲ್ಲೆಯಲ್ಲಿನ ಕಾರ್ಖಾನೆಗಳು ಸಿಎಸ್‌ಆರ್ ಚಟುವಟಿಕೆಯಡಿ ಗಿಣಿಗೇರಿ ಬಳಿ 100 ಹಾಸಿಗೆ ಕೋವಿಡ್ ಕೇರ್ ಸೆಂಟರ್ ನಿರ್ಮಿಸಿವೆ. ಆದರೆ, ಕೋವಿಡ್ ಅಲೆ ಕಡಿಮೆಯಾದ ಕಾರಣ ಅದನ್ನು ಬಳಕೆ ಮಾಡಿಲ್ಲ. ಸೆಂಟರ್ ಸುಸ್ಥಿತಿಯಲ್ಲಿದ್ದು, ಪರಿಶೀಲನಾ ತಂಡ ವೀಕ್ಷಿಸಿದ್ದು, ಅಲ್ಲಿಯೇ ತಾತ್ಕಾಲಿಕ ಇಎಸ್‌ಐ ಆಸ್ಪತ್ರೆ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎನ್ನಲಾಗಿದೆ. ಕಾರ್ಮಿಕ ಇಲಾಖೆ ಅನುಮೋದನೆ ನೀಡಿದಲ್ಲಿ ಆಸ್ಪತ್ರೆ ಆರಂಭವಾಗುವ ನಿರೀಕ್ಷೆ ಇದೆ.

    ಹುಡುಕಾಟದಲ್ಲೇ ಸಮಯ ವ್ಯರ್ಥ

    ಹಲವು ವರ್ಷಗಳಿಂದ ಆಸ್ಪತ್ರೆ ಆರಂಭದ ಮಾತುಗಳು ಕೇಳಿಬರುತ್ತಿದ್ದರೂ ವಾಸ್ತವವಾಗಿ ಆರಂಭವಾಗುತ್ತಿಲ್ಲ. ಸದ್ಯ ಕೊಪ್ಪಳದಿಂದ 12 ಕಿಮೀ ದೂರದಲ್ಲಿರುವ ಗಿಣಿಗೇರಿ ಬಳಿಯ ಮುಕ್ಕುಂದ್ ಸ್ಟೀಲ್ಸ್ ಆವರಣದಲ್ಲಿನ ಕೋವಿಡ್ ಕೇರ್ ಸೆಂಟರ್‌ನಲ್ಲಿ ಆಸ್ಪತ್ರೆ ಆರಂಭಿಸಬಹುದೆಂದು ಪರಿಶೀಲನಾ ತಂಡ ವರದಿ ನೀಡಿದೆ. ಹಾಸಿಗೆ, ಐಸಿಯು, ಔಷಧಾಲಯ, ಸಿಬ್ಬಂದಿಗೆ ತಾತ್ಕಾಲಿಕ ವಸತಿ ಗೃಹ ವ್ಯವಸ್ಥೆ ಇದೆ. ಗಿಣಿಗೇರಿ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಬಹುಪಾಲು ಕಾರ್ಖಾನೆಗಳಿವೆ. 3-4 ಕಿಮೀ ವ್ಯಾಪ್ತಿ ಪ್ರದೇಶದಲ್ಲಿ ಬಹುಪಾಲು ಕಾರ್ಮಿಕರು ವಾಸವಾಗಿದ್ದಾರೆ. ಕೋವಿಡ್ ಕೇರ್ ಸೆಂಟರ್‌ನಲ್ಲಿ ಆಸ್ಪತ್ರೆ ಆರಂಭಿಸಿದಲ್ಲಿ ಅವರಿಗೆಲ್ಲ ಅನುಕೂಲವಾಗಲಿದೆ. ಶೇ.20-30ರಷ್ಟು ಕಾರ್ಮಿಕರು ಕೊಪ್ಪಳದಲ್ಲಿದ್ದು, ಅವರಿಗೆಲ್ಲ ಕೊಪ್ಪಳದಲ್ಲಿರುವ ತಾತ್ಕಾಲಿಕ ಕೇಂದ್ರದಲ್ಲಿ ಚಿಕಿತ್ಸೆ ನೀಡಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

    ಜಿಲ್ಲೆಯಲ್ಲಿ ಇಎಸ್‌ಐ ಆಸ್ಪತ್ರೆ ಆರಂಭಕ್ಕೆ ಹಲವು ಜಾಗ ಪರಿಶೀಲಿಸುವಂತೆ ಅಧಿಕಾರಿಗಳ ತಂಡಕ್ಕೆ ಸೂಚಿಸಲಾಗಿದೆ. ನಮ್ಮ ಜಿಲ್ಲಾ ಆರೋಗ್ಯಾಧಿಕಾರಿಯೊಂದಿಗೆ ಸಮಾಲೋಚನೆ ನಡೆಸಿ ಸೂಕ್ತವಾದದನ್ನು ಆಯ್ಕೆ ಮಾಡಿಕೊಳ್ಳಲು ತಿಳಿಸಿದ್ದೇವೆ. ಅವರು ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದಾರೆ.
    | ಎಂ.ಸುಂದರೇಶ ಬಾಬು ಜಿಲ್ಲಾಧಿಕಾರಿ, ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts