More

    ಮೌಲ್ಯ ಪಾಲಿಸುವಂಥ ಸಮಾಜ ಮರುಸೃಷ್ಟಿ ಮಾಡಬೇಕು…; ಸೆಲೆಬ್ರಿಟಿ ಕಾರ್ನರ್​ನಲ್ಲಿ ಎನ್​.ಸಂತೋಷ್​ ಹೆಗ್ಡೆ

    ಮೌಲ್ಯ ಪಾಲಿಸುವಂಥ ಸಮಾಜ ಮರುಸೃಷ್ಟಿ ಮಾಡಬೇಕು...; ಸೆಲೆಬ್ರಿಟಿ ಕಾರ್ನರ್​ನಲ್ಲಿ ಎನ್​.ಸಂತೋಷ್​ ಹೆಗ್ಡೆಹಿರಿಯರು ಕಟ್ಟಿದ ಹಲವು ಮೌಲ್ಯಗಳನ್ನು ಒಂದೇ ಸಲ ಮರುಕಳಿಸುವುದಕ್ಕೆ ಸಾಧ್ಯವಿಲ್ಲದಿದ್ದರೂ, ಈ ಎರಡು ಮೌಲ್ಯಗಳನ್ನಾದರೂ ಅಳವಡಿಸಿಕೊಳ್ಳಬೇಕು. ಒಂದು ತೃಪ್ತಿ, ಇನ್ನೊಂದು ಮಾನವೀಯತೆ. ತೃಪ್ತಿ ಇಲ್ಲದಿದ್ದರೆ ದುರಾಸೆ ಎಂಬ ರೋಗ ಬರುತ್ತದೆ. ಆ ರೋಗಕ್ಕೆ ಮದ್ದಿಲ್ಲ. ಎಷ್ಟು ಮಾಡಿದರೂ ಸಾಲುವುದಿಲ್ಲ. ಇನ್ನೂ ಬೇಕು, ಮತ್ತೂ ಬೇಕು ಅಂತ ಅನಿಸುತ್ತಲೇ ಇರುತ್ತದೆ.

    ನಾನು ಹಲವಾರು ಹುದ್ದೆಗಳಲ್ಲಿ ಕೆಲಸ ಮಾಡಿದಂತಹ ವ್ಯಕ್ತಿ. ಆದರೆ, ಕರ್ನಾಟಕ ಲೋಕಾಯುಕ್ತಕ್ಕೆ ಬರುವವರೆಗೆ ನನಗೆ ಅನಿಸಿದ್ದು ನಾನೊಬ್ಬ ಕೂಪ ಮಂಡೂಕನಾಗಿದ್ದೆ ಎಂದು. ಅದಕ್ಕೂ ಮೊದಲು ಸಮಾಜದಲ್ಲಿ ಆಗುಹೋಗುವ ಅನ್ಯಾಯಗಳ ಬಗ್ಗೆ ನನಗೆ ಜಾಸ್ತಿ ಅರಿವು ಇರಲಿಲ್ಲ. ಇತರರು ಹೇಳುವುದನ್ನು ಕೇಳಿದ್ದೆ. ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೆ. ಆದರೆ, ವೈಯಕ್ತಿಕವಾಗಿ ಅದರ ಪರಿಣಾಮದ ಬಗ್ಗೆ ಹೆಚ್ಚು ಗೊತ್ತಾಗಿದ್ದು ಲೋಕಾಯುಕ್ತಕ್ಕೆ ಬಂದ ನಂತರವಷ್ಟೇ. ಕರ್ನಾಟಕ ಲೋಕಾಯುಕ್ತಕ್ಕೆ ನಾನು ಬಂದಾಗ ಎರಡು ರೀತಿಯ ಜವಾಬ್ದಾರಿಗಳಿದ್ದವು. ಆಡಳಿತದಿಂದ ಜನರಿಗೆ ಆಗುವ ಅನ್ಯಾಯಕ್ಕೆ ಪರಿಹಾರ ಕೊಡಿಸುವುದು ಒಂದಾದರೆ, ಲೋಕಾಯುಕ್ತ ಪೊಲೀಸರ ಸಹಾಯದಿಂದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವುದು ಎರಡನೆಯದಾಗಿತ್ತು. ಎರಡೂ ಉತ್ತಮವಾದ ಅಧಿಕಾರಗಳೇ. ಕೆಲಸ ಮಾಡುತ್ತ ಮಾಡುತ್ತ ಹಲವು ವಿಷಯಗಳನ್ನು ತಿಳಿದುಕೊಂಡೆ. ವಿಷಯಗಳು ಅರ್ಥವಾಗುತ್ತ ಹೋದಂತೆ ಮನಸ್ಸಿಗೆ ಬೇಸರವಾಯಿತು.

    ಸಂವಿಧಾನದಲ್ಲಿ ಜನರ ಸೇವೆಗಾಗಿ ಮೂರು ಸ್ತಂಭಗಳನ್ನು ಹಿರಿಯರು ಕಟ್ಟಿದ್ದಾರೆ. ಅದು- ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ. ಇಷ್ಟೊಂದು ಉತ್ತಮವಾದ ಸಂವಿಧಾನ ನಮ್ಮ ದೇಶದಲ್ಲಿ ಇದ್ದರೂ, ಜನರಿಗೆ ಆಡಳಿತದಿಂದ ಅನ್ಯಾಯವಾಗುತ್ತಲೇ ಇದೆ. ಯಾಕೆ ಹೀಗಾಗುತ್ತಿದೆ ಎಂದು ಯೋಚನೆ ಮಾಡಿದಾಗ, ಇದು ವ್ಯಕ್ತಿಗಳ ತಪ್ಪಲ್ಲ, ಸಮಾಜದ ತಪು್ಪ ಎಂಬ ಅಂಶ ಗಮನಕ್ಕೆ ಬಂತು. ನಾನು ಚಿಕ್ಕವನಿದ್ದಾಗ ಇದ್ದ ಸಮಾಜ ಬೇರೆ ತರಹ ಇತ್ತು. ಆ ಸಮಾಜ ಭ್ರಷ್ಟರನ್ನು, ಅತ್ಯಾಚಾರಿಗಳನ್ನು ಬಹಿಷ್ಕರಿಸುತ್ತಿತ್ತು. ಜೈಲಿಗೆ ಹೋದರೆ, ಆ ವ್ಯಕ್ತಿಗೆ ಸಮಾಜದಲ್ಲಿ ಜಾಗ ಇರುತ್ತಿರಲಿಲ್ಲ. ಅದು ಆ ವ್ಯಕ್ತಿಗೆ ಮಾತ್ರವಲ್ಲ, ಆತನ ಕುಟುಂಬದ ಮೇಲೂ ಪರಿಣಾಮ ಬೀರುತ್ತಿತ್ತು. ಇದರಿಂದ ಬಹಳಷ್ಟು ಜನ ಕಾನೂನಿಗೆ ವಿರುದ್ಧವಾದ ಕೆಲಸಗಳನ್ನು ಮಾಡುವುದಕ್ಕೆ ಹೆದರುತ್ತಿದ್ದರು. ಇವತ್ತು ಹಾಗಿಲ್ಲ. ಜೈಲಿಗೆ ಹೋಗಿ ಬಂದವರಿಗೆ ಹೂವು ಕೊಟ್ಟು ಬರಮಾಡಿಕೊಳ್ಳಲಾಗುತ್ತಿದೆ. ಇವತ್ತಿನ ಸಮಾಜ ಶ್ರೀಮಂತಿಕೆ ಮತ್ತು ಅಧಿಕಾರದ ಹಿಂದೆ ಬಿದ್ದಿದೆ. ಅದನ್ನೇ ಪೂಜಿಸುತ್ತಿದೆ. ಪ್ರಾಮಾಣಿಕತೆಗೆ ಯಾವುದೇ ಬೆಲೆ ಇಲ್ಲ ಎಂಬ ಪರಿಸ್ಥಿತಿ ನಿರ್ವಣವಾಗುತ್ತಿದೆ. ಪ್ರಾಮಾಣಿಕತೆ ವಿಚಾರ ಮಾತನಾಡಿದರೆ, ‘ಅವನು ಹುಚ್ಚ, ಅವನೂ ತಿನ್ನಲ್ಲ, ಬೇರೆಯವರಿಗೂ ತಿನ್ನುವುದಕ್ಕೆ ಬಿಡುವುದಿಲ್ಲ’ ಎಂಬ ಮಾತು ಕೇಳಬೇಕಾಗುತ್ತಿದೆ.

    ಈ ಸಮಾಜವನ್ನು ಬದಲಾಯಿಸಬೇಕು. ಹಿರಿಯರು ಕಟ್ಟಿದ ಮೌಲ್ಯಗಳನ್ನು ಪಾಲಿಸುವಂತಹ ಸಮಾಜವನ್ನು ಮರುಸೃಷ್ಟಿ ಮಾಡಬೇಕು. ಅದರಿಂದ ಈ ಸಮಾಜ ಮತ್ತು ದೇಶದಲ್ಲಿ ಶಾಂತಿ ಹಾಗೂ ಸೌಹಾರ್ದ ನೆಲೆಸುತ್ತದೆ. ಈ ನಿಟ್ಟಿನಲ್ಲಿ ಒಂದಿಷ್ಟು ಪ್ರಯತ್ನ ಮಾಡಿದೆ. ನನ್ನ ವಯಸ್ಸಿನವರಿಂದ ಇದು ಸಾಧ್ಯವಿಲ್ಲ, ಯುವಕ-ಯುವತಿಯರಿಂದ ಮಾತ್ರ ಸಾಧ್ಯವಿದೆ ಎಂಬುದು ಸ್ಪಷ್ಟವಾಯಿತು. ಅದಕ್ಕಾಗಿ 1600ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಿಗೆ ಹೋಗಿ, ಮಕ್ಕಳ ಹತ್ತಿರ ಮೌಲ್ಯಗಳ ಕುಸಿತದ ಬಗ್ಗೆ ಮಾತನಾಡಿದ್ದೇನೆ. ಹಿರಿಯರು ಕಟ್ಟಿದ ಹಲವು ಮೌಲ್ಯಗಳನ್ನು ಒಂದೇ ಸಲ ಮರುಕಳಿಸುವುದಕ್ಕೆ ಸಾಧ್ಯವಿಲ್ಲದಿದ್ದರೂ, ಈ ಎರಡು ಮೌಲ್ಯಗಳನ್ನಾದರೂ ಅಳವಡಿಸಿಕೊಳ್ಳಬೇಕು. ಒಂದು ತೃಪ್ತಿ, ಇನ್ನೊಂದು ಮಾನವೀಯತೆ.

    ತೃಪ್ತಿ ಇಲ್ಲದಿದ್ದರೆ ದುರಾಸೆ ಎಂಬ ರೋಗ ಬರುತ್ತದೆ. ಆ ರೋಗಕ್ಕೆ ಮದ್ದಿಲ್ಲ. ಎಷ್ಟು ಮಾಡಿದರೂ ಸಾಲುವುದಿಲ್ಲ. ಇನ್ನೂ ಬೇಕು, ಮತ್ತೂ ಬೇಕು ಅಂತ ಅನಿಸುತ್ತಲೇ ಇರುತ್ತದೆ. ನಮ್ಮ ದೇಶದಲ್ಲಿ ಕಂಡುಬಂದ ದುರಾಸೆಯ ಕೆಲವು ಉದಾಹರಣೆ ನಿಮ್ಮ ಎದುರು ಇಡುವುದಕ್ಕೆ ಬಯಸುತ್ತೇನೆ. 50ನೇ ದಶಕದಲ್ಲಿ ಜೀಪ್ ಹಗರಣ ಬೆಳಕಿಗೆ ಬಂದಿತ್ತು. ಅದರಲ್ಲಿ ದೇಶಕ್ಕಾದ ನಷ್ಟ 52 ಲಕ್ಷ ರೂ.ಗಳು. ತದನಂತರ ಮುಂದ್ರಾ ಹಗರಣ, ಭಾರತ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಮುಂತಾದ ಹಗರಣಗಳು ಬೆಳಕಿಗೆ ಬಂದವು. ಕ್ರಮೇಣ ಈ ಹಗರಣಗಳಲ್ಲಿ ಸೋರಿಕೆಯಾದ ಸೊನ್ನೆಗಳ ಲೆಕ್ಕ ಹೆಚ್ಚುತ್ತ ಹೋಯಿತು. ಆ ನಂತರ ಬೋಫೋರ್ಸ್ ಎಂಬ ಇನ್ನೊಂದು ಹಗರಣ ಬೆಳಕಿಗೆ ಬಂತು. ಆ ಹಗರಣದಲ್ಲಿ ಈ ದೇಶಕ್ಕೆ ಆದ ನಷ್ಟ 64 ಕೋಟಿ ರೂ.ಗಳು. 2007ಕ್ಕೆ ಕಾಮನ್​ವೆಲ್ತ್ ಹಗರಣದಲ್ಲಿ ದೇಶಕ್ಕಾದ ನಷ್ಟ 70 ಸಾವಿರ ಕೋಟಿ ರೂಪಾಯಿ. ಈ ಸಂಖ್ಯೆ ನನ್ನದಲ್ಲ. ವಿಚಾರಣೆ ನಂತರ ಕೇಂದ್ರ ಸರ್ಕಾರಕ್ಕೆ ಸಿಎಜಿ ಅವರು ಕೊಟ್ಟ ವರದಿ ಇದು. 2010ರಲ್ಲಿ ಟೋಲ್​ಗೇಟ್ ಹಗರಣದಿಂದ ದೇಶಕ್ಕಾದ ನಷ್ಟ 1.86 ಲಕ್ಷ ಕೋಟಿ ರೂಪಾಯಿ. 2ಜಿ ಹಗರಣದಿಂದ ನಷ್ಟವಾಗಿದ್ದು 1.70 ಲಕ್ಷ ಕೋಟಿ ರೂಪಾಯಿ. ಇಷ್ಟೊಂದು ಹಣ ಆಡಳಿತದಿಂದ ಸೋರಿ ಹೋದರೆ, ಈ ದೇಶದ ಅಭಿವೃದ್ಧಿ ಹೇಗೆ ಸಾಧ್ಯ?

    1985ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಒಂದು ಮಾತನ್ನು ಬಹಿರಂಗವಾಗಿ ಹೇಳಿದ್ದರು. ಅನುದಾನ ಅಥವಾ ಕಾಮಗಾರಿ ರೂಪದಲ್ಲಿ ಸರ್ಕಾರ ಕೊಡುತ್ತಿದ್ದ ಪ್ರತೀ ಒಂದು ರೂಪಾಯಿಯಲ್ಲಿ, ಕೊನೆಯ ಹಂತಕ್ಕೆ ಹೋಗಿ ತಲುಪುತ್ತಿದ್ದುದು 15 ಪೈಸೆ ಮಾತ್ರ. ಇನ್ನು 85 ಪೈಸೆ ಸೋರಿಕೆಯಾಗುತ್ತಿತ್ತು. ಅದು ಆಗಿನ ಮಾತು. ಈಗ ಹೇಗಾಗಿರಬಹುದು ಯೋಚಿಸಿ? ಇಂಥ ದುರಾಸೆಯ ಹಿನ್ನೆಲೆಯಲ್ಲಿ ಯಾವ ರೀತಿ ಅಭಿವೃದ್ಧಿ ಸಾಧ್ಯ? ನಾವೆಲ್ಲರೂ ‘ಮಾನವರು’ ಎಂಬ ಹಣೆಪಟ್ಟಿ ಕಟ್ಟಿಕೊಂಡೇ ಹುಟ್ಟುತ್ತೇವೆ. ಆದರೆ, ಮಾನವ ಎಂಬ ಗುಂಪು ವಿಜ್ಞಾನದಲ್ಲಿಲ್ಲ. ಅದರಲ್ಲಿರುವುದು ಹೋಮೋ ಸೆಪಿಯನ್ಸ್ ಎಂಬ ಗುಂಪು ಮಾತ್ರ. ಅದಕ್ಕೂ ಮಾನವೀಯತೆಗೂ ಯಾವುದೇ ಸಂಬಂಧವಿಲ್ಲ. ಮಾನವೀಯತೆ ಎನ್ನುವುದು ನಮ್ಮ ಹಿರಿಯರು ಕಟ್ಟಿರುವ ಒಂದು ಮೌಲ್ಯ. ಆ ಮೌಲ್ಯದಿಂದ ಮಾತ್ರ ಈ ಸಮಾಜದಲ್ಲಿ ಸೌಹಾರ್ದ ಸಾಧ್ಯ. ಈ ಬಗ್ಗೆ ಒಂದು ಉದಾಹರಣೆ. 2009ರಲ್ಲಿ ಒಬ್ಬ ವೃದ್ಧೆ ನಮ್ಮ ಆಫೀಸಿಗೆ ಬಂದಿದ್ದರು. ಮುಂಬೈನಲ್ಲಿದ್ದ ಅವರ ಮಗ ಪ್ರತಿತಿಂಗಳು -ಠಿ; 250 ಮನಿಆರ್ಡರ್ ಮೂಲಕ ಕಳಿಸುತ್ತಿದ್ದನಂತೆ. ಅದನ್ನು ತಂದುಕೊಡುವ ಪೋಸ್ಟ್​ಮ್ಯಾನ್ 10 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದನಂತೆ. ಕೊಡದಿದ್ದರೆ, ‘ಈ ವಿಳಾಸ ಸರಿ ಇಲ್ಲ’ ಎಂದು ಬರೆದುಕಳಿಸುವುದಾಗಿ ಬೆದರಿಸುತ್ತಿದ್ದನಂತೆ. ಆತನಿಗೆ ಸರ್ಕಾರ ಸಂಬಳ ಕೊಡುತ್ತದೆ. ಅವನಿಗೆ ಅದೇ ಏರಿಯಾದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದ ಅನುಭವವಿದ್ದುದರಿಂದ, ಆ ಮಹಿಳೆಯ ಕಷ್ಟ-ಸುಖದ ಬಗ್ಗೆಯೂ ಆತನಿಗೆ ಅರಿವಿತ್ತು. ಆದರೂ ಕಮಿಷನ್ ಬಯಸುತ್ತಿದ್ದ. ಎಂಥ ವಿಪರ್ಯಾಸ. ಸಂಬಳ, ಪೆನ್ಶನ್ ಎಲ್ಲವೂ ಇದ್ದಮೇಲೂ ದುರಾಸೆ ಯಾಕೆ? ಇದು ಮಾನವೀಯತೆಯಾ? ಆ ಸಮಸ್ಯೆಗೆ ಆ ನಂತರ ಪರಿಹಾರವೇನೋ ಸಿಕ್ಕಿತು. ಆದರೆ, ಈ ತರಹ ಅದೆಷ್ಟು ಪ್ರಕರಣಗಳು ಇರಬಹುದು ಯೋಚಿಸಿ.

    ಕೆಲವು ವರ್ಷಗಳ ಹಿಂದೆ, ಹರೀಶ್ ನಂಜಪ್ಪ ಎಂಬ ಬೈಕ್ ಸವಾರನಿಗೆ ಅಪಘಾತವಾಗಿ, ದೇಹ ತುಂಡಾಗಿತ್ತು. ಅಲ್ಲಿದ್ದವರೆಲ್ಲ ಅವನ ಫೋಟೋ ತೆಗೆಯುವುದರಲ್ಲಿ, ವಿಡಿಯೋ ಮಾಡುವುದರಲ್ಲಿ ಬಿಜಿಯಾಗಿದ್ದರೇ ಹೊರತು, ನೆರವಿಗೆ ಹೋಗಲಿಲ್ಲ. ನೀರು ಕೇಳಿದರೂ, ಯಾರೂ ಕೊಡಲಿಲ್ಲ. ಕೊನೆಗೆ ಆಂಬುಲೆನ್ಸ್ ಬಂದು, ಅವನನ್ನು ಚಿಕಿತ್ಸೆಗೆ ಕರೆದುಕೊಂಡು ಹೋದಾಗ, ‘ದಯವಿಟ್ಟು ನನ್ನ ಕಣ್ಣನ್ನು ದಾನ ಮಾಡುವುದಕ್ಕೆ ವೈದ್ಯರಿಗೆ ಹೇಳಿ’ ಎಂದು ಆಂಬುಲೆನ್ಸ್​ನವರಿಗೆ ಹೇಳಿದನಂತೆ. ಮಾನವೀಯತೆ ಎಂದರೆ ಇದು. ಇಂಥ ಘಟನೆಗಳು ಯಾರಿಗೂ ಆಗಬಾರದು. ಆದರೆ, ಇಂಥ ಘಟನೆಗಳಿಂದ ನಾವು ಕಲಿಯಬೇಕಾದ ಪಾಠಗಳು ಬಹಳಷ್ಟಿವೆ.

    ಮಾನವೀಯತೆಯೇ ಇಲ್ಲದಿದ್ದರೆ ಮನುಷ್ಯ ಎತ್ತರಕ್ಕೆ ಏರಲಾರ. ‘ಏನಾದರೂ ಆಗು ಮೊದಲು ಮಾನವನಾಗು’ ಎಂದು ಹಿರಿಯರು ಹೇಳಿದ್ದನ್ನು ಕೇಳಿರಬಹುದು. ಈ ಎರಡು ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡರೆ, ಮುಂದಕ್ಕೆ ಬದಲಾವಣೆ ಆಗಬಹುದು. ಇಲ್ಲಿ ಯಾವ ರೀತಿ ಬದಲಾವಣೆ ಆಗುತ್ತದೆ ಎಂಬುದು ಮುಖ್ಯವಾಗುತ್ತದೆ. ಕ್ರಾಂತಿಯಿಂದ ಬದಲಾವಣೆ ಸಾಧ್ಯವಿಲ್ಲ. ಕ್ರಾಂತಿಯಿಂದ ಸಮಾಜದಲ್ಲಿ ಒಡಕು ಮೂಡುತ್ತದೆಯೇ ಹೊರತು, ದೇಶ ಉದ್ಧಾರವಾಗುವುದಿಲ್ಲ. ಅದರ ಬದಲು ಮೌಲ್ಯದ ಆಧಾರದ ಮೇಲೆ ಬದಲಾವಣೆಯಾದರೆ, ಉತ್ತಮವಾದ ದೇಶವನ್ನು ನಾವು ಕಟ್ಟಬಹುದು.

    (ಲೇಖಕರು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts