ಕೊಳ್ಳೇಗಾಲ: ತೃಪ್ತಿ, ಮಾನವೀಯತೆ ಎಂಬ ಮೌಲ್ಯಗಳನ್ನು ಮಾನವನು ಅಳವಡಿಸಿಕೊಂಡರೆ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಪ್ರತಿಪಾದಿಸಿದರು.
ಪಟ್ಟಣದ ಶ್ರೀ ಗುರುಮಲ್ಲೇಶ್ವರ ಪ್ರೌಢಶಾಲೆ ಆವರಣದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್ತು, ಸಾರ್ವಜನಿಕ ಶಿಕ್ಷಣ ಇಲಾಖೆ, ಶರಣ ಭಿಕ್ಷದಾರ್ಯ ಲಿಂ.ದೇವರಗುಡ್ಡಪ್ಪ ಮಹದೇವಮ್ಮ, ಕೊಂಗರಹಳ್ಳಿ ದತ್ತಿ, ಲಿಂಗೈಕ್ಯ ಮಂಗಲದ ತೋಟದ ಮನೆ ಮಹಾದೇವಪ್ಪ ದತ್ತಿ, ಶ್ರೀ ಸಿದ್ದಗಂಗಾ ಹಳೆಯ ವಿದ್ಯಾರ್ಥಿಗಳ ಸಂಘ, ಲಯನ್ಸ್ ಕ್ಲಬ್, ಅಖಿಲ ಭಾರತ ವೀರಶೈವ ಮಹಾಸಭಾ, ಭಾರತ ಸೇವಾದಳದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ 16ನೇ ವರ್ಷದ ವಚನ ಗಾಯನ ಸಮಾರಂಭ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಶ್ರೀಮಂತಿಕೆ ಹಾಗೂ ಉನ್ನತ ಹುದ್ದೆಗಳಿಗೆ ಪೈಪೋಟಿ ಎದ್ದಿದೆ. ಪ್ರಮಾಣಿಕರಿಗೆ ಬೆಲೆ ಇಲ್ಲದಂತಾಗಿದ್ದು, ಅವರನ್ನು ಹುಚ್ಚರಂತೆ ನೋಡಲಾಗುತ್ತಿದೆ. ಜೈಲಿನಿಂದ ಬಂದವರಿಗೆ ಸನ್ಮಾನ ಮಾಡುವ ಸಮಾಜ ನಿರ್ಮಾಣವಾಗಿದೆ. ಶಾಂತಿ ಮತ್ತು ಸೌಹಾರ್ದತೆ ಉಳಿದಿಲ್ಲ. ಶ್ರೀಮಂತಿಕೆ ಮತ್ತು ದೊಡ್ಡ ಹುದ್ದೆಗಳು ಅಪೇಕ್ಷಿಸುವುದು ತಪ್ಪಲ್ಲ. ಆದರೆ ಅದು ಕಾನೂನಿನ ಚೌಕಟ್ಟಿನಲ್ಲಿರಬೇಕು. ಅಕ್ರಮವಾಗಿ ಸಂಪಾದಿಸಿದ ಹಣ ಹಾಗೂ ಹುದ್ದೆಯಿಂದ ನೆಮ್ಮದಿ ಸಿಗುವುದಿಲ್ಲ ಎಂದರು.
ಇವೆಲ್ಲದಕ್ಕೂ ದುರಾಸೆ ಎಂಬ ರೋಗ ಕಾರಣವಾಗಿದ್ದು, ಇದಕ್ಕೆ ಮದ್ದಿಲ್ಲ. ಇದು ಕಾನೂನಿಗೂ ಹೆದರುವುದಿಲ್ಲ. ಇಂದು ಅಧಿಕಾರಿದಲ್ಲಿರುವವರು ಹಲವು ಹಗರಣಗಳು ಮಾಡಿದ್ದಾರೆ. ಸಾವಿರಾರು ಕೋಟಿ ರೂಪಾಯಿಗಳನ್ನು ಕೊಳ್ಳೆ ಹೊಡೆದಿದ್ದಾರೆ. ಏಕೆಂದರೆ, ಮನುಷ್ಯ ಇರುವುದರಲ್ಲಿ ತೃಪ್ತಿ ಹೊಂದುವ ಮನೋಭಾವವನ್ನು ಸಂಪೂರ್ಣ ತೊರೆದಿರುವುದೇ ಇದಕ್ಕೆ ಕಾರಣ ಎಂದರು.
ಹಣದುಬ್ಬರದಿಂದ ಹದಗೆಟ್ಟ ಪರಿಸ್ಥಿತಿ: ನಮ್ಮ ದೇಶದಲ್ಲಿ ಅಭಿವೃದ್ಧಿಯಾಗಿದೆ. ಹಗರಣದ ಹಣವಿದ್ದರೆ ಇನ್ನಷ್ಟು ಅಭಿವೃದ್ಧಿಯಾಗುತ್ತಿತ್ತು. ಪ್ರಸ್ತುತ ಹಣದುಬ್ಬರವಾಗಿ ಆರ್ಥಿಕ ಪರಿಸ್ಥಿತಿ ಕೆಟ್ಟಿದೆ. ಇದು ಮುಂದಿನ ಪೀಳಿಗೆಗೆ ತೊಂದರೆಯಾಗಲಿದೆ. ಭ್ರಷ್ಟಾಚಾರ ಇಡೀ ವ್ಯವಸ್ಥೆಯನ್ನು ಆವರಿಸುತ್ತದೆ. ಆದ್ದರಿಂದ ಮಕ್ಕಳು ಇದನ್ನು ಅರ್ಥ ಮಾಡಿಕೊಳ್ಳಬೇಕು. ದುರಾಸೆ ಬಿಟ್ಟು ತೃಪ್ತಿ ಜೀವನ ನಡೆಸುವುದನ್ನು ಕಲಿಯಬೇಕು. ಇನ್ನೊಬ್ಬರ ಜೇಬಿಗೆ ಕೈ ಹಾಕಿ ಹಣ ಸಂಪಾದನೆ ಮಾಡಬಾರದು. ಜತೆಗೆ ಮಾನವೀಯತೆ ಅಳವಡಿಸಿಕೊಳ್ಳಬೇಕು. ಎಲ್ಲರೂ ಸಮಾನರು ಎಂಬ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಭ್ರಷ್ಟಚಾರ ವ್ಯವಸ್ಥೆ ಹೊಗಲಾಡಿಸದಿದ್ದರೆ ದೇಶದ ಭವಿಷ್ಯಕ್ಕೆ ತೊಂದರೆ ಬರುತ್ತದೆ. ನನ್ನ ಅಧಿಕಾರವಧಿಯಲ್ಲಿ 1 ರೂ. ಭ್ರಷ್ಟಾಚಾರ ಎಸಗಿಲ್ಲ. ನನಗೆ ಬಹುಮಾನವಾಗಿ ಬಂದ ಹಣವನ್ನು ಆರೋಗ್ಯ ಸಂಸ್ಥೆಗಳಿಗೆ ದಾನ ಮಾಡಿದ್ದೇನೆ. ಇದರಿಂದ ನನಗಿರುವ ತೃಪ್ತಿ ಬೇರೆಯವರಿಗಿಲ್ಲ. ಸಮಾಜದ ಒಳಿತಿಗಾಗಿ ನಿವೃತ್ತಿ ವಯಸ್ಸಿನಲ್ಲೂ ಜನ-ಜಾಗೃತಿಗೆ ಮುಂದಾಗಿದ್ದೇನೆ ಎಂದು ಹೇಳಿದರು.
ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ದತ್ತೇಶ್ ಕುಮಾರ್ ಮಾತನಾಡಿ, ಸಮಾಜ ಚೆನ್ನಾಗಿಯೇ ಇದೆ. ಆದರೆ ಜಾತಿ, ಧರ್ಮ, ಭೇದ-ಭಾವವನ್ನು ನಮ್ಮನ್ನು ಆಳುವವರು ಸಮಾಜಕ್ಕೆ ತುಂಬುತ್ತಿದ್ದಾರೆ. ಇದರಿಂದಲೇ ಸಮಾಜದಲ್ಲಿ ಕಲ್ಮಶ ಕಾಣುತ್ತಿರುವುದು ಎಂದರು.
ಮಕ್ಕಳು ಮೊಬೈಲ್‌ನಿಂದ ದೂರ ಉಳಿಯಬೇಕು. ಮಕ್ಕಳು ಓದಬೇಕಾದರೆ ಪಾಲಕರು ಅವರ ಆಸೆ, ಆಕಾಂಕ್ಷೆಗಳನ್ನು ಪೂರೈಸಬೇಕಿದೆ. ಬೈಕ್ ತೆಗೆದು ಕೊಡದಿದ್ದರೆ ಕಾಲೇಜಿಗೆ ಮಕ್ಕಳು ಬರುವುದಿಲ್ಲ. ಪಾಲಕರು ಮಕ್ಕಳು ಮೊಬೈಲ್ ದಾಸರಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಮಾಜಿ ಶಾಸಕಿ ಪರಿಮಳ ನಾಗಪ್ಪ ಮಾತನಾಡಿ, ಎನ್.ಸಂತೋಷ್ ಹೆಗ್ಡೆ ಅವರ ನುಡಿಗಳನ್ನು ಕೇಳುವುದು ನಮ್ಮೆಲ್ಲರ ಭಾಗ್ಯವೇ ಸರಿ. ಮಕ್ಕಳು ಅವರ ನುಡಿಗಳನ್ನು ಪಾಲಿಸಬೇಕು ಎಂದರು.
ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿವೃತ್ತ ನಿರ್ದೇಶಕ ಎಸ್.ಶಿವರಾಜಪ್ಪ ಮಾತನಾಡಿ, ಬಸವಾದಿ ಶರಣರ ವಚನಗಳು ಕಲಿಕೆಯಿಂದ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದರು. ವಿಜಯವಾಣಿ ಮೈಸೂರು ಆವೃತ್ತಿಯ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ ಉಪಸ್ಥಿತರಿದ್ದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ವಿ.ಮಲ್ಲಿಕಾರ್ಜುನ ಸ್ವಾಮಿ (ದುಗಟ್ಟಿ), ತಾಲೂಕು ಅಧ್ಯಕ್ಷ ಎಸ್.ನಾಗರಾಜು ಕೊಂಗರಹಳ್ಳಿ, ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಲಯನ್ಸ್ ಶಾಲೆಯ ಕಾರ್ಯದರ್ಶಿ ಜಿ.ಎಸ್.ಎಂ.ಪ್ರಸಾದ್, ಶ್ರೀ ಗುರುಮಲ್ಲೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಚ್.ಎಂ ವೃಷಬೇಂದ್ರ, ಕದಳಿ ವೇದಿಕೆ ಅಧ್ಯಕ್ಷೆ ರೂಪ ತೋಟೇಶ್ ಮತ್ತಿತರರಿದ್ದರು.