ಚಿಕ್ಕಮಗಳೂರು: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವ ಮಾತನ್ನು ಸಣ್ಣವರಿಂದಲೂ ಕೇಳಿಕೊಂಡು ಬಂದಿದ್ದೇವೆ. ಅದು ಈಗ ಇಂದಿನ ಮಕ್ಕಳೇ ಇಂದಿನ ಪ್ರಜೆಗಳು ಎಂದು ಬದಲಾಗಬೇಕಿದೆ ಎಂದು ಜಿಪಂ ಸಿಇಒ ಡಾ. ಬಿ.ಗೋಪಾಲಕೃಷ್ಣ ತಿಳಿಸಿದರು.
ಮುಗಳವಳ್ಳಿ ಗ್ರಾಪಂನಲ್ಲಿ ಶುಕ್ರವಾರ ಜಿಪಂ, ತಾಪಂನಿಂದ ಆಯೋಜಿಸಿದ್ದ ಮಕ್ಕಳ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿ, ಇಂದಿನ ಮಕ್ಕಳೇ ಇಂದಿನ ಪ್ರಜೆಗಳು ಎಂದು ಬದಲಿಸುವ ಪ್ರಯತ್ನ ಮಾಡೋಣ ಎಂದರು.
ಸಮಾಜದಲ್ಲಿ ಸಾಕಷ್ಟು ಸಾಮಾಜಿಕ ಪಿಡುಗುಗಳು ಮಕ್ಕಳನ್ನು ಕಾಡುತ್ತಿವೆ. ಹೆಣ್ಣುಭ್ರೂಣ ಹತ್ಯೆ ನಡೆಯುತ್ತಿದೆ. ಲಿಂಗ ತಾರತಮ್ಯ, ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ನಡೆಯುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮಕ್ಕಳಿಗಾಗಿ ಯಾವ ರೀತಿಯ ಸಮಾಜವನ್ನು ನಾವು ನಿರ್ಮಾಣ ಮಾಡಬೇಕು ಎನ್ನುವ ಬಗ್ಗೆ ಚರ್ಚೆಯಾಗಲಿ ಎಂದು ಹೇಳಿದರು.
ಆರನೇ ತರಗತಿ ವಿದ್ಯಾರ್ಥಿನಿ ದೀಪ್ತಿ ಮಾತನಾಡಿ, ಶಾಲೆಗೆ ಕುಡಿಯುವ ನೀರಿನ ನಲ್ಲಿ ಇಲ್ಲದ ಕಾರಣ ತೊಂದರೆ ಆಗುತ್ತಿದೆ. ಗ್ರಂಥಾಲಯದಲ್ಲಿ ಕಂಪ್ಯೂಟರ್ ಬಳಸಲು ವಿದ್ಯುತ್ ಇಲ್ಲ. ಹೀಗಾಗಿ ಯುಪಿಎಸ್ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು. ಈ ಸೌಲಭ್ಯ ಜಿಪಂನಿಂದ ಒದಗಿಸುವುದಾಗಿ ಸಿಇಒ ಭರವಸೆ ನೀಡಿದರು.
ಅಂಬೇಡ್ಕರ್ ಪ್ರೌಢಶಾಲೆ 4ನೇ ತರಗತಿ ಹೇಮಂತ್ ಆಚಾರ್ ಮಾತನಾಡಿ, ದೇವೀರಮ್ಮ ದೇವಾಲಯದ ಸುತ್ತಲೂ ಪಾರ್ಥೇನಿಯಂ ಕಳೆ ತೆಗೆದು ಕಾಂಕ್ರೀಟ್ ಹಾಕಿಸಿಕೊಡಬೇಕು ಎಂದು ಮನವಿ ಮಾಡಿದರು. ಶಾಲೆಯ ಅಡುಗೆ ಮನೆಗೆ ಕಿಟಕಿ ಮತ್ತು ನಲ್ಲಿ ಸಂಪರ್ಕ ಬೇಕೆಂದು ವಿದ್ಯಾರ್ಥಿ ನಿತಿನ್ ಒತ್ತಾಯಿಸಿದ.
ವಿದ್ಯಾರ್ಥಿ ಸ್ಪಂದನ್ ಮಾತನಾಡಿ, ನಾವು ಸೋಗೆಮನೆಯಲ್ಲಿ ವಾಸಿಸುತ್ತಿದ್ದೇವೆ. ಮನೆಗೆ ಹಾವುಗಳು ಬರುತ್ತವೆ. ಮಳೆಗಾಲದಲ್ಲಿ ಸೋರುತ್ತದೆ. ಹೀಗಾಗಿ ಮನೆ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದ.
ತಾಪಂ ಇಒ ತಾರಾನಾಥ್, ಮುಗುಳುವಳ್ಳಿ ಗ್ರಾಪಂ ಅಧ್ಯಕ್ಷೆ ಭಾಗ್ಯಾ, ಉಪಾಧ್ಯಕ್ಷ ಉಮೇಶ್, ಸದಸ್ಯರಾದ ರಘುನಂದನ್, ಶೇಖರ್, ಮಲ್ಲೇಶಪ್ಪ, ವನಿತಾ, ಶ್ರುತಿ, ಕಲಾವತಿ, ಸವಿತಾ, ಲೋಕೇಶ್, ಪಿಡಿಒ ಸುಮಾ ಇತರರಿದ್ದರು.