More

    ರಾಜ್ಯೋತ್ಸವ ಮೆರವಣಿಗೆಗಿಲ್ಲ ಅವಕಾಶ – ಡಿಸಿ ಹಿರೇಮಠ

    ಬೆಳಗಾವಿ: ಕೋವಿಡ್-19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮೆರವಣಿಗೆಗೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಆಯೋಜಿಸಿದ್ದ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದ ಸಿಪಿಎಡ್ ಮೈದಾನದಲ್ಲಿ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು.

    ಬಳಿಕ ಚನ್ನಮ್ಮ ವೃತ್ತದಲ್ಲಿರುವ ರಾಣಿ ಚನ್ನಮ್ಮನ ಪುತ್ಥಳಿಗೆ ಜಿಲ್ಲಾಡಳಿತ ವತಿಯಿಂದ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

    ಕಲಾ ತಂಡಗಳಿಗೆ ಕೋಕ್: ಕರೊನಾ ವೈರಸ್ ಇನ್ನೊಬ್ಬರಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕಿದ್ದರಿಂದ ಸಾಂಕೇತಿಕವಾಗಿ ರಾಜೋತ್ಸವ ಆಚರಿಸಲಾಗುತ್ತಿದೆ. ಹೀಗಾಗಿ ಯಾವುದೇ ಕಲಾ ತಂಡಗಳು ಪಾಲ್ಗೊಳ್ಳುತ್ತಿಲ್ಲ. ಭಾಷಣ, ನೃತ್ಯ ಇನ್ನಿತರ ಮನರಂಜನಾ ಕಾರ್ಯಕ್ರಮ ರದ್ದು ಪಡಿಸಲಾಗಿದೆ. ಆದರೆ, ಪೊಲೀಸ್ ಪರೇಡ್‌ಗೆ ಮಾತ್ರ ಇಲ್ಲಿ ಅವಕಾಶ ನೀಡಲಾಗಿದೆ. ಎಲ್ಲೆಡೆ ಸರಳವಾಗಿ ರಾಜ್ಯೋತ್ಸವ ಆಚರಿಸಬೇಕು ಎಂದು
    ಜಿಲ್ಲಾಧಿಕಾರಿ ಹಿರೇಮಠ ವಿನಂತಿಸಿದರು.

    ಶ್ರದ್ಧಾಂಜಲಿ: ಪೂರ್ವಭಾವಿ ಸಭೆಗೂ ಮುನ್ನ, ಕೋವಿಡ್-19 ಸೋಂಕಿನಿಂದ ಮೃತಪಟ್ಟ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಪಾಲಿಕೆ ಮಾಜಿ ಮಹಾಪೌರ ಡಾ.ಸಿದ್ಧನಗೌಡ ಪಾಟೀಲ, ಪುಷ್ಪಾ ಹುಬ್ಬಳ್ಳಿ, ಶಶಿಧರ ಘೀವಾರಿ ಸೇರಿದಂತೆ ಅಗಲಿದ ಇನ್ನಿತರ ಗಣ್ಯರಿಗೆ
    ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಚ್.ವಿ. ದರ್ಶನ, ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ, ನಗರ ಪೊಲೀಸ್ ಆಯುಕ್ತ ಡಾ. ಕೆ.ತ್ಯಾಗರಾಜನ್, ಡಿಸಿಪಿ ಡಾ.ವಿಕ್ರಂ ಅಮಟೆ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಕನ್ನಡಪರ ಸಂಘಟನೆ ಹೋರಾಟಗಾರರಾದ ಅಶೋಕ ಚಂದರಗಿ, ಮಹಾಂತೇಶ ರಣಗಟ್ಟಿಮಠ, ದೀಪಕ ಗುಡಗನಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

    ಕರಾಳ ದಿನಾಚರಣೆಗೆ ಅನುಮತಿ ನೀಡಬೇಡಿ: ರಾಜ್ಯೋತ್ಸವ ದಿನದಂದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯವರು ಕರಾಳ ದಿನ ಆಚರಿಸಲು ಮುಂದಾಗಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಮತ್ತು ನಗರ ಪೊಲೀಸ್ ಆಯುಕ್ತರು ಅನುಮತಿ ನೀಡಬಾರದು. ಪ್ರತಿವರ್ಷವೂ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಅವರಿಗೆ ಕರಾಳ ದಿನ ಆಚರಿಸಲು ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸುತ್ತಾರೆ. ಆದರೆ, ರಾಜ್ಯೋತ್ಸವ ದಿನದಂದು ಕರಾಳ ದಿನಕ್ಕೆ ಅನುಮತಿ ನೀಡುವುದಲ್ಲದೆ, ಪೊಲೀಸ್ ಭದ್ರತೆಯನ್ನೂ ನೀಡುತ್ತಾರೆ.

    ಇದು ಸರಿಯಾದ ಕ್ರಮವಲ್ಲ. ಹಾಗಾಗಿ ಈ ವರ್ಷ ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಎಂಇಎಸ್‌ನವರಿಗೆ ಕರಾಳ ದಿನ ಆಚರಿಸಲು ಅನುಮತಿ ನೀಡಬಾರದು ಎಂದು ಕನ್ನಡಪರ ಹೋರಾಟಗಾರರು ಜಿಲ್ಲಾಧಿಕಾರಿಗೆ ಒತ್ತಾಯಿಸಿದರು.

    ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಹೋರಾಟಗಾರರು ಮಾತನಾಡಿ, ಕೋವಿಡ್-19 ಹಿನ್ನೆಲೆಯಲ್ಲಿ ಸರಳವಾಗಿ ರಾಜ್ಯೋತ್ಸವ ಆಚರಿಸಲು ನಮ್ಮೆಲ್ಲರ ಸಹಕಾರವಿದೆ. ಆದರೆ, ನಗರದಲ್ಲಿನ ಅಂಗಡಿ ಮುಂಗಟ್ಟುಗಳ ಫಲಕಗಳು ಕನ್ನಡ ಭಾಷೆಯಲ್ಲಿಯೇ ಕಡ್ಡಾಯವಾಗಿ ಬರೆಯಬೇಕು. ಇಲ್ಲದಿದ್ದಲ್ಲಿ ಅಂತಹ ಅಂಗಡಿಗಳ ಪರವಾನಗಿಯನ್ನು ಮಹಾನಗರ ಪಾಲಿಕೆ ರದ್ದು ಮಾಡಬೇಕು. ಅಲ್ಲದೆ, ಪೊಲೀಸ್ ಇಲಾಖೆಯು ಸಾರ್ವಜನಿಕರಿಗೆ ವಿಧಿಸುವ ವಿವಿಧ ದಂಡಗಳ ಆದೇಶ ಮತ್ತು ವಸೂಲಾತಿ ರಶೀದಿಯನ್ನೂ ಕನ್ನಡ ಭಾಷೆಯಲ್ಲಿಯೇ ಮುದ್ರಿಸಬೇಕು ಎಂದು ಸಂಘಟನೆ ಕಾರ್ಯಕರ್ತರು ವಿನಂತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts