More

    ದಸರಾ ಆತಿಥ್ಯಕ್ಕೆ ಸಿದ್ಧತೆ

    ಮಾವುತರು, ಕಾವಾಡಿಗಳ ವಾಸ್ತವ್ಯಕ್ಕಾಗಿ ಶೆಡ್

    ಅರಮನೆ ಅಂಗಳದಲ್ಲಿ ನಡೆದಿದೆ ತಯಾರಿ

    ಅವಿನಾಶ್ ಜೈನಹಳ್ಳಿ ಮೈಸೂರು
    ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗಿಯಾಗಲಿರುವ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬದವರಿಗೆ ಭರ್ಜರಿ ಆತಿಥ್ಯ ನೀಡಲು ಅರಣ್ಯ ಇಲಾಖೆ ಮತ್ತು ಅರಮನೆ ಮಂಡಳಿ ಮುಂದಾಗಿವೆ.


    ದಸರಾ ಜಂಬೂಸವಾರಿ ಮೆರವಣಿಗೆಯ ಪ್ರಮುಖ ಆಕರ್ಷಣೆಯಾದ ಗಜಪಡೆಯ ವಾಸ್ತವ್ಯಕ್ಕಾಗಿ ಅರಮನೆ ಅಂಗಳದಲ್ಲಿ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆನೆಗಳು, ಮಾವುತರು ಹಾಗೂ ಕಾವಾಡಿಗಳು ಉಳಿದುಕೊಳ್ಳಲು ಅನುಕೂಲವಾಗುವಂತೆ 40ಕ್ಕೂ ಹೆಚ್ಚು ಶೆಡ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಅದಕ್ಕಾಗಿ ಅಗತ್ಯವಾದ ವಸ್ತುಗಳನ್ನು ಅರಮನೆ ಅಂಗಳಕ್ಕೆ ತರಿಸಲಾಗಿದೆ.


    ಕರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಸರಳವಾಗಿ ದಸರಾ ಆಚರಿಸಲಾಯಿತು ಮತ್ತು ಅರಮನೆ ಆವರಣಕ್ಕೆ ಸೀಮಿತ ಮಾಡಲಾಗಿತ್ತು. ಜಂಬೂಸವಾರಿಯೂ ಅರಮನೆ ಅಂಗಳದಲ್ಲಿ ಜರುಗಿತ್ತು. ಹೀಗಾಗಿ, ಮಾವುತರು ಮತ್ತು ಕಾವಾಡಿಗಳಷ್ಟೇ ದಸರೆಯಲ್ಲಿ ಭಾಗಿಯಾಗಿದ್ದು, ಅವರ ಕುಟುಂಬ ಸದಸ್ಯರನ್ನು ದಸರಾ ಉತ್ಸವಕ್ಕೆ ಕರೆತಂದಿರಲಿಲ್ಲ. ಆದರೆ ಈ ಬಾರಿ ದಸರಾ ಮಹೋತ್ಸವವನ್ನು ಅದ್ದೂರಿಯಾಗಿ ಆಯೋಜಿಸಲು ಸರ್ಕಾರ ತೀರ್ಮಾನಿಸಿದ್ದು, ಅದಕ್ಕಾಗಿ ಸಾಂಸ್ಕೃತಿಕ ನಗರಿ ಸಜ್ಜಾಗುತ್ತಿದೆ. ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬ ಸದಸ್ಯರು ಎಂದಿನಂತೆ ದಸರಾ ಉತ್ಸವದ ಭಾಗವಾಗಲಿದ್ದಾರೆ.


    ಮಾವುತರು ಮತ್ತು ಕಾವಾಡಿಗಳಿಗೆ ಶೆಡ್‌ಗಳನ್ನು ನಿರ್ಮಿಸುವ ಹಾಗೂ ಆನೆಗಳನ್ನು ಕಟ್ಟಿ ಹಾಕುವ ಸ್ಥಳಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಾರದ ಹಿಂದೆಯೇ ಪರಿಶೀಲನೆ ಮಾಡಿದ್ದಾರೆ. ಅರಮನೆ ಅಂಗಳದಲ್ಲಿರುವ ಕಾಯಂ ಕಾಂಕ್ರೀಟ್ ಪ್ಲಾಟ್‌ಾರ್ಮ್ ಮೇಲೆ ಶೆಡ್‌ಗಳನ್ನು ನಿರ್ಮಿಸಲಾಗುತ್ತಿದೆ. ಇದರೊಂದಿಗೆ ಕುಡಿಯುವ ನೀರು, ತಾತ್ಕಾಲಿಕ ಶೌಚಗೃಹ ಇನ್ನಿತರ ಮೂಲಸೌಕರ್ಯ ಕಲ್ಪಿಸುವ ಕಾರ್ಯಗಳು ನಡೆಯುತ್ತಿವೆ.


    ಗಜಪಡೆ ಅರಮನೆ ಆವರಣಕ್ಕೆ ಪ್ರವೇಶಿಸಿದ ಬಳಿಕ ದಸರಾ ಆನೆಗಳನ್ನು ನೋಡಲೆಂದೇ ಪ್ರವಾಸಿಗರು ಬರುತ್ತಾರೆ. ಹೀಗೆ ಬರುವ ಪ್ರವಾಸಿಗರು ಪುಂಡಾಟಿಕೆ ನಡೆಸುವ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ ಆನೆಗಳು ಬೀಡು ಬಿಡುವ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಅರಣ್ಯ ಇಲಾಖೆ ಮುಂದಾಗಿದೆ. ಆನೆಗಳಿಗೆ ಆಹಾರ ತಯಾರಿಸುವ ಸ್ಥಳ ಸೇರಿದಂತೆ ಆಯ್ದ ಜಾಗಗಳಲ್ಲಿ ಕ್ಯಾಮರಾ ಅಳವಡಿಕೆ ಮಾಡಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಇದ್ದರೂ ಪ್ರವಾಸಿಗರು ಫೋಟೊ, ಸೆಲ್ಫಿ ತೆಗೆದುಕೊಳ್ಳುವ ಸಲುವಾಗಿ ಆನೆಗಳ ಬಳಿ ಹೋಗುವ ಪ್ರಯತ್ನ ಮಾಡುತ್ತಾರೆ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಲು ಕ್ಯಾಮರಾ ಅಳವಡಿಕೆಯಿಂದ ಅನುಕೂಲವಾಗಿದೆ.

    150 ಜನ ಬರುವ ನಿರೀಕ್ಷೆ: ಕಳೆದ ಎರಡು ವರ್ಷ 8 ಆನೆಗಳನ್ನು ಮಾತ್ರ ದಸರಾ ಮಹೋತ್ಸವಕ್ಕೆ ಕರೆತರಲಾಗಿತ್ತು. ಈ ಆನೆಗಳ ಜತೆ ಮಾವುತರು, ಕಾವಾಡಿಗಳು ಹಾಗೂ ವಿಶೇಷ ಮಾವುತರು ಸೇರಿದಂತೆ ಕೇವಲ 20 ಜನರು ಆಗಮಿಸಿದ್ದರು. ಈ ಬಾರಿ 14 ಆನೆಗಳು ದಸರಾ ಮಹೋತ್ಸವದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ಆದ್ದರಿಂದ ತಲಾ 14 ಮಾವುತರು ಮತ್ತು ಕಾವಾಡಿಗಳು, 6 ವಿಶೇಷ ಮಾವುತರು ಹಾಗೂ 6 ಅಡುಗೆ ಸಹಾಯಕರು ಮತ್ತು ಕುಟುಂಬ ಸದಸ್ಯರು ಭಾಗಿಯಾಗಲಿದ್ದು, ಒಟ್ಟಾರೆ 40 ಕುಟುಂಬಗಳಿಂದ 150ಕ್ಕೂ ಹೆಚ್ಚು ಮಂದಿ ಆನೆಗಳ ಜತೆ ಆಗಮಿಸಲಿದ್ದಾರೆ.


    ಮಕ್ಕಳಿಗೆ ಟೆಂಟ್ ಶಾಲೆ: ಮಾವುತರು, ಕಾವಾಡಿಗಳು ಹಾಗೂ ವಿಶೇಷ ಮಾವುತರ 50ಕ್ಕೂ ಹೆಚ್ಚು ಮಕ್ಕಳು ದಸರೆಯಲ್ಲಿ ಭಾಗವಹಿಸಲಿದ್ದಾರೆ. ಈ ಮಕ್ಕಳಿಗಾಗಿ ಅರಮನೆ ಅಂಗಳದಲ್ಲಿ ಟೆಂಟ್ ಶಾಲೆ ನಿರ್ಮಿಸಲಾಗುತ್ತಿದೆ. ಜತೆಗೆ, ಗ್ರಂಥಾಲಯ ಹಾಗೂ ಆಯುರ್ವೇದ ಚಿಕಿತ್ಸಾಲಯವನ್ನೂ ಸ್ಥಾಪಿಸಲಾಗುತ್ತಿದೆ.


    ವೀರನಹೊಸಹಳ್ಳಿಯಲ್ಲೂ ಸಿದ್ಧತೆ: ಆಗಸ್ಟ್ 7ರಂದು ಗಜಪಯಣ ನಡೆಯಲಿದ್ದು, ಅದಕ್ಕಾಗಿ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ವೇದಿಕೆ ಇನ್ನಿತರ ಸಿದ್ಧತಾ ಕಾರ್ಯಗಳು ಸೋಮವಾರ ಆರಂಭವಾಗಲಿವೆ. ಮೊದಲ ತಂಡದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಆಗಮಿಸಲಿದ್ದು, ಅರ್ಜುನ, ಧನಂಜಯ, ಗೋಪಾಲಸ್ವಾಮಿ, ವಿಕ್ರಮ, ಕಾವೇರಿ, ಚೈತ್ರಾ, ಲಕ್ಷ್ಮೀ, ವಿಜಯಾ ಆನೆಗಳು ಮೈಸೂರಿನ ಕಡೆ ಪ್ರಯಾಣ ಬೆಳೆಸುವ ನಿರೀಕ್ಷೆ ಇದೆ. ಈ ಆನೆಗಳು ವೀರನಹೊಸಹಳ್ಳಿಯಿಂದ ನೇರವಾಗಿ ನಗರದ ಅಶೋಕಪುರಂ ಅರಣ್ಯ ಭವನಕ್ಕೆ ಬಂದು ವಾಸ್ತವ್ಯ ಹೂಡಲಿದ್ದು, ಅಲ್ಲಿಂದ ಆಗಸ್ಟ್ 10 ರಂದು ಅರಮನೆ ಆವರಣ ಪ್ರವೇಶಿಸಲಿವೆ.

    ದಸರಾದಲ್ಲಿ ಭಾಗಿಯಾಗುವ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬದ ವಾಸ್ತವ್ಯಕ್ಕಾಗಿ ಅರಮನೆ ಅಂಗಳದಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 40ಕ್ಕೂ ಹೆಚ್ಚು ಶೆಡ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಅದಕ್ಕಾಗಿ ಬೇಕಾದ ಎಲ್ಲ ಪದಾರ್ಥೃಗಳನ್ನು ಈಗಾಗಲೇ ಅರಮನೆ ಅಂಗಳಕ್ಕೆ ತರಿಸಲಾಗಿದೆ.
    ಡಾ.ವಿ. ಕರಿಕಾಳನ್, ಡಿಸಿಎಫ್


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts