More

    ಒಂದು ಮಹಾನಿರಾಸೆಯ ಗಂಭೀರ ತಿರುಗುನೋಟ!

    ಫೈನಲ್ ಪಂದ್ಯಕ್ಕೆ ನಿಗದಿಯಾಗಿದ್ದ ಪಿಚ್ ಯೋಗ್ಯವಾಗಿರಲಿಲ್ಲ ಎಂಬ ಚರ್ಚೆ ಬೇರೆಯ ವಿಷಯ. ಪಿಚ್ ಹೇಗಿದ್ದರೂ, ಅದಕ್ಕೆ ತಕ್ಕಂತೆ ಆಡುವ ಮನೋಸ್ಥಿತಿ ತಂಡಕ್ಕಿರಬೇಕು. ವಿಶೇಷವೆಂದರೆ, ಭಾರತ 10 ಪಂದ್ಯಗಳಲ್ಲಿ ಥೇಟ್ ಆಸೀಸ್ ಮಾದರಿಯಲ್ಲಿ ನಿರ್ಭೀತವಾಗಿ ಆಡಿ, ಗೆಲುವು ತನ್ನದಾಗಿಸಿಕೊಂಡಿತು. ಆದರೆ, ಫೈನಲ್​ನಲ್ಲಿ ಆತ್ಮವಿಶ್ವಾಸದ ಕೊರತೆ ಆವರಿಸಿಕೊಂಡಿತ್ತು.

    Savyasachiಭಾರತ ಚೊಚ್ಚಲ ಟಿ20 ವಿಶ್ವಕಪ್ 2007ರಲ್ಲಿ ಗೆದ್ದ ಬಳಿಕ ನಾಯಕ ಮಹೇಂದ್ರ ಸಿಂಗ್ ಧೋನಿ ಸೂಪರ್​ಸ್ಟಾರ್ ಪಟ್ಟಕ್ಕೇರಿದರು. ಧೋನಿ ನಾಯಕತ್ವವನ್ನು ಎಲ್ಲರೂ ಪ್ರಶಂಸಿಸಿದರು. ಕೊನೆಯ ಓವರ್ ಬೌಲಿಂಗ್ ಮಾಡಿದ ಜೋಗಿಂದರ್ ಶರ್ಮರನ್ನು, ಮಿಸ್ಬಾ ಉಲ್ ಹಕ್​ರ ಕ್ಯಾಚ್ ಹಿಡಿದ ಶ್ರೀಶಾಂತ್​ರನ್ನು ಎಲ್ಲರೂ ಕೊಂಡಾಡಿದರು. ಪಂದ್ಯದಲ್ಲಿ 3 ವಿಕೆಟ್ ಕಬಳಿಸಿದ ಇರ್ಫಾನ್ ಪಠಾಣ್ ಮ್ಯಾನ್ ಆಫ್ ದಿ ಮ್ಯಾಚ್ ಆದರು. ಆದರೆ, ಪಾಕಿಸ್ತಾನದ ವಿರುದ್ಧ ಆ ಫೈನಲ್ ಪಂದ್ಯದಲ್ಲಿ ಭಾರತದ ಗೆಲುವಿಗೆ ಅಡಿಪಾಯ ಹಾಕಿದ್ದವರು ಗೌತಮ್ ಗಂಭೀರ್. ಕೆಚ್ಚೆದೆಯ ಎಡಗೈ ಆರಂಭಿಕ 54 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್​ನ 75 ರನ್ ಬಾರಿಸದೇ ಹೋಗಿದ್ದರೆ ಭಾರತ 157 ರನ್ ಮೊತ್ತ ಪೇರಿಸುವುದೂ ಸಾಧ್ಯವಿರಲಿಲ್ಲ. ಪಾಕ್ ವಿರುದ್ಧ ಗೆಲುವಿನ ಕನಸು ಕಾಣುವುದೂ ಸಾಧ್ಯವಿರಲಿಲ್ಲ.

    ಅಂದು ಜೊಹಾನ್ಸ್​ಬರ್ಗ್​ನ ಕಠಿಣ ಪಿಚ್​ನಲ್ಲಿ, ಪಾಕಿಸ್ತಾನದ ಪ್ರಬಲ ಬೌಲಿಂಗ್ ಎದುರು ಎಲ್ಲ ಬ್ಯಾಟ್ಸ್​ಮನ್​ಗಳು ಪರದಾಡಿದ್ದರು. ಆರಂಭದಲ್ಲಿ ಯೂಸುಫ್ ಪಠಾಣ್ 8 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್​ನ 15 ರನ್ ಗಳಿಸಿ ಔಟಾದ ಬಳಿಕ, ರಾಬಿನ್ ಉತ್ತಪ್ಪ 8 ರನ್​ಗಾಗಿ 11 ಎಸೆತ ಆಡಿದ್ದರು. ಯುವರಾಜ್ ಸಿಂಗ್ 3.1 ಓವರ್ (19 ಎಸೆತ) ಎದುರಿಸಿದರೂ ಗಳಿಸಿದ್ದು ಒಂದೇ ಬೌಂಡರಿಯ 14 ರನ್ ಮಾತ್ರ. ಧೋನಿ 10 ಎಸೆತ ಆಡಿ ಒಂದೂ ಬೌಂಡರಿ ಹೊಡೆಯದೆ 6 ರನ್​ಗೆ ಔಟಾಗಿದ್ದರು. ಹೀಗೆ ಒಂದು ತುದಿಯಲ್ಲಿ ಬ್ಯಾಟ್ಸ್​ಮನ್​ಗಳು ರನ್ ಗಳಿಸಲು ಒದ್ದಾಡುತ್ತಿದ್ದರೂ, ಗಂಭೀರ್ ಮಾತ್ರ ಪಾಕ್ ಬೌಲರ್​ಗಳನ್ನು ನಿರ್ಭಯದಿಂದ ಚೆಂಡಾಡಿ ರನ್ ಗಳಿಸಿದ್ದರು. 3ನೇ ವಿಕೆಟ್​ಗೆ ಯುವರಾಜ್ ಸಿಂಗ್ ಜತೆಯಾಟದಲ್ಲಿ ಬಂದ 63 ರನ್​ಗಳಲ್ಲಿ ಗಂಭೀರ್ 49 ರನ್ ಗಳಿಸಿದ್ದರು. 18ನೇ ಓವರ್​ವರೆಗೂ ಪಾಕ್ ದಾಳಿ ಎದುರಿಸಿ ನಿಂತ ಗಂಭೀರ್ ದಿಟ್ಟ ಆಟ ಹಾಗೂ ಕೊನೆಯಲ್ಲಿ ರೋಹಿತ್ ಶರ್ಮ 16 ಎಸೆತಗಳಲ್ಲಿ 2 ಬೌಂಡರಿ 1 ಸಿಕ್ಸರ್​ನ 30 ರನ್ ಗಳಿಸಿದ್ದರಿಂದ ಭಾರತ 157 ರನ್ ಮೊತ್ತ ಪೇರಿಸಿ ಸವಾಲೊಡ್ಡುವಂತಾಗಿತ್ತು. ಫೈನಲ್ ಪಂದ್ಯದ ಗೆಲುವಿನಲ್ಲಿ ಧೋನಿಯ ಚಾಣಾಕ್ಷ ನಾಯಕತ್ವ, ಬೌಲರ್​ಗಳ ಸಾಹಸದಷ್ಟೇ ಗಂಭೀರ್ ಗಳಿಸಿದ 75 ರನ್​ಗಳ ಆಟವೂ ಚಿನ್ನದ ತೂಕ ಹೊಂದಿತ್ತು. ಆದರೆ, ಈ ವಿಶ್ವಕಪ್ ಬಳಿಕ ಭಾರತ ತಂಡದಲ್ಲಿ ಹಲವರು ಸೂಪರ್​ಸ್ಟಾರ್ ಪಟ್ಟಕ್ಕೇರಿದರೂ, ಗಂಭೀರ್ ಆರಂಭಿಕ ಬ್ಯಾಟ್ಸ್ ಮನ್ ಆಗಷ್ಟೇ ಉಳಿದುಕೊಂಡರು.

    ಭಾರತದ ಜಂಟಿ ಆತಿಥ್ಯದಲ್ಲಿ ನಡೆದ 2011ರ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಮಹೇಲ ಜಯವರ್ಧನೆ ಶತಕದ ಬಲದಿಂದ ಶ್ರೀಲಂಕಾ 274 ರನ್ ಪೇರಿಸಿದ ಬಳಿಕ ಭಾರತದ ಬ್ಯಾಟಿಂಗ್ ಒತ್ತಡದಲ್ಲೇ ಆರಂಭಗೊಂಡಿತ್ತು. ರನ್ ಖಾತೆ ತೆರೆಯುವ ಮುನ್ನವೇ ವೀರೇಂದ್ರ ಸೆಹ್ವಾಗ್ ಔಟಾಗಿದ್ದರು. ಸಚಿನ್ ತೆಂಡುಲ್ಕರ್ ಭರವಸೆ ಮೂಡಿಸುವ ಹಂತದಲ್ಲೇ (18) ನಿರ್ಗಮಿಸುವುದರೊಂದಿಗೆ ಭಾರತ 31 ರನ್​ಗೆ 2 ವಿಕೆಟ್ ಕಳೆದುಕೊಂಡಿತ್ತು. ಲಸಿತ್ ಮಾಲಿಂಗ, ನುವಾನ್ ಕುಲಶೇಖರ, ಮುತ್ತಯ್ಯ ಮುರಳೀಧರನ್, ತಿಲಕರತ್ನೆ ದಿಲ್ಶಾನ್ ಮೊದಲಾದ ಅನುಭವಿ ಬೌಲರ್​ಗಳ ಎದುರು ಭಾರತ ಆತಂಕಕ್ಕೆ ಸಿಲುಕಿತ್ತು. ಆದರೆ, ಆ ದಿನವೂ ಒಬ್ಬ ಬ್ಯಾಟ್ಸ್​ಮನ್ ವಿಶ್ವಕಪ್ ಫೈನಲ್​ನ ಒತ್ತಡ ಮೆಟ್ಟಿನಿಂತು ಲಂಕಾಗೆ ಸೆಡ್ಡು ಹೊಡೆದಿದ್ದರು. ಅವರೇ ಗೌತಮ್ ಗಂಭೀರ್. ಭಾರತ ಖಾತೆ ತೆರೆಯುವ ಮುನ್ನವೇ 3ನೇ ಕ್ರಮಾಂಕದಲ್ಲಿ ಕ್ರೀಸಿಗೆ ಬಂದಿದ್ದ ಗಂಭೀರ್ 42ನೇ ಓವರ್​ವರೆಗೂ ಹಲ್ಲುಕಚ್ಚಿ ಆಡಿದರು. ವಿರಾಟ್ ಕೊಹ್ಲಿ ಜತೆ 3ನೇ ವಿಕೆಟ್​ಗೆ 83 ರನ್, ನಾಯಕ ಧೋನಿ ಜತೆ 4ನೇ ವಿಕೆಟ್​ಗೆ 109 ರನ್ ಜತೆಯಾಟ ಆಡಿ ಭಾರತದ ಗೆಲುವಿನ ಹಾದಿ ಸುಗಮಗೊಳಿಸಿದರು. ಪಂದ್ಯದ ಸನ್ನಿವೇಶ, ಒತ್ತಡ ಏನೇ ಇದ್ದರೂ ರನ್ ಗತಿ ಕುಸಿಯದಂತೆ ನೋಡಿಕೊಂಡ ಗಂಭೀರ್ 122 ಎಸೆತಗಳಲ್ಲಿ 9 ಬೌಂಡರಿಗಳ 97 ರನ್ ಗಳಿಸಿದ್ದಾಗ ಥಿಸ್ಸರ ಪೆರೀರ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಅರ್ಹ ಶತಕದಿಂದ ವಂಚಿತರಾದರು. ಆದರೆ, ಆ ಹೊತ್ತಿಗೆ ಭಾರತ 41 ಓವರ್​ಗಳಲ್ಲಿ 4 ವಿಕೆಟ್​ಗೆ 223 ರನ್ ಗಳಿಸಿ ಗೆಲುವಿಗೆ ಹತ್ತಿರ ಸುಳಿದಾಗಿತ್ತು. ಆ ಫೈನಲ್​ನಲ್ಲಿ ನಾಯಕ ಧೋನಿ 79 ಎಸೆತಗಳಲ್ಲಿ 8 ಬೌಂಡರಿ 2 ಸಿಕ್ಸರ್ ಒಳಗೊಂಡ 91 ರನ್ ಬಾರಿಸಿ ಅವಿಸ್ಮರಣೀಯ ಇನಿಂಗ್ಸ್ ಆಡಿದರು. ಭಾರತದ ವಿಶ್ವಕಪ್ ವಿಜಯದ ರನ್ ಕೂಡ ಧೋನಿ ಸಿಕ್ಸರ್ ಮೂಲಕವೇ ಬಂತು. ಆದರೂ, ಆ ಫೈನಲ್​ನಲ್ಲಿ ಗಂಭೀರ್ ಹಲ್ಲುಕಚ್ಚಿ ನಿಂತು ಇನಿಂಗ್ಸ್ ಕಟ್ಟಿದ್ದು ಅತ್ಯಮೂಲ್ಯವಾಗಿತ್ತು. ಹೀಗೆ ಭಾರತದ ಎರಡು ವಿಶ್ವಕಪ್ ವಿಜಯಗಳ ಫೈನಲ್​ನಲ್ಲಿ ಗಂಭೀರ್ ನಿರ್ಣಾಯಕ ಬ್ಯಾಟಿಂಗ್ ಮಾಡಿದ್ದರು.

    ಈ ಎರಡು ಯಶಸ್ವಿ ಫೈನಲ್​ಗಳ ಹಿನ್ನೆಲೆಯಲ್ಲಿ ಮೊನ್ನೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ವಿಶ್ವಕಪ್ ಫೈನಲ್ ಪಂದ್ಯವನ್ನು ತಿರುಗಿನೋಡುವುದಾದರೆ… ತುಂಬ ಕೆಟ್ಟದಾಗಿತ್ತು ಎಂದು ಎಲ್ಲರೂ ಅಭಿಪ್ರಾಯ ಪಟ್ಟ ಪಿಚ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಭರ್ಜರಿ ಆರಂಭವನ್ನೇ ಪಡೆದಿತ್ತು. ನಾಯಕ ರೋಹಿತ್ ಶರ್ಮ ಈ ಪಂದ್ಯದಲ್ಲೂ ಹೊಡೆಬಡಿ ಆಟದ ಮೂಲಕ ಬಿರುಸಿನ ಆರಂಭ ಒದಗಿಸಿದರು. 31 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಿತ ಅವರು ಚಚ್ಚಿದ 47 ರನ್​ಗಳು ಆಸೀಸ್ ಕಂಗೆಡುವಂತೆ ಮಾಡಿತ್ತು. ಆದರೆ, ವ್ಯಕ್ತಿಗತ ಮೈಲಿಗಲ್ಲುಗಳಿಗೆ ಹಪಹಪಿಸದೆ, ಶತಕಾರ್ಧ, ಶತಕ ಹೊಡೆಯಬೇಕೆಂದು ಆಟ ನಿಧಾನ ಮಾಡದೆ, ಚೆಂಡಿರುವುದೇ ಹೊಡೆಯುವುದಕ್ಕೆ ಎಂಬ ಅವರ ಬೀಸುಗಾರಿಕೆಯೇ ಮತ್ತೊಮ್ಮೆ ಮುಳುವಾಯಿತು. ಹಿಂದಿನ ಹತ್ತು ಪಂದ್ಯಗಳಲ್ಲಿ ರೋಹಿತ್ ಭರ್ಜರಿ ಆರಂಭ ಕೊಡಿಸಿ, ಶತಕ, ಅರ್ಧ ಶತಕದ ಗಡಿಯಲ್ಲಿ ಔಟಾದಾಗ, ಇವರ ಆಟದ ಬುನಾದಿಯ ಮೇಲೆ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ರನ್​ಗಳ ಸೌಧ ಕಟ್ಟಿದ್ದರು. ಆದರೆ, ಫೈನಲ್​ನಲ್ಲಿ ರೋಹಿತ್ ಔಟಾದ ಬಳಿಕ ತಂಡದ ರನ್ ಗತಿ ಪಾತಾಳಕ್ಕೆ ಕುಸಿಯಿತು. ರೋಹಿತ್ ಅಬ್ಬರಿಸಿದ ಪಿಚ್​ನಲ್ಲಿ ಉಳಿದ ಬ್ಯಾಟ್ಸ್​ಮನ್​ಗಳು ಬೌಂಡರಿಯನ್ನೂ ಬಾರಿಸಲಾಗದೆ ಪರದಾಡಿದರು. 9.4ನೇ ಓವರ್​ನಲ್ಲಿ ರೋಹಿತ್ ಔಟಾಗುವ ಸಂದರ್ಭದಲ್ಲಿ 20 ಎಸೆತಗಳಿಂದ 4 ಬೌಂಡರಿ ಒಳಗೊಂಡ 23 ರನ್ ಗಳಿಸಿದ್ದ ಕೊಹ್ಲಿ, ಆನಂತರ ಎದುರಿಸಿದ 43 ಎಸೆತಗಳಲ್ಲಿ 31 ರನ್ ಗಳಿಸಿದರೂ ಒಂದೂ ಬೌಂಡರಿ ಹೊಡೆಯಲಿಲ್ಲ. 10ನೇ ಓವರ್​ನ 3ನೇ ಎಸೆತದಿಂದ 28ನೇ ಓವರ್​ನ 3ನೇ ಎಸೆತದವರೆಗೆ ಕೊಹ್ಲಿ- ಕೆ.ಎಲ್. ರಾಹುಲ್ 18 ಓವರ್ ಜತೆಯಾಟದಲ್ಲಿ ಬಂದಿದ್ದು 67 ರನ್ ಮಾತ್ರ. ಕೆಎಲ್ ರಾಹುಲ್ 107 ಎಸೆತಗಳ (17.5 ಓವರ್) ಸುದೀರ್ಘ ಇನಿಂಗ್ಸ್ ಆಡಿದರೂ, ಹೊಡೆದಿದ್ದು ಒಂದೇ ಬೌಂಡರಿಯ 66 ರನ್. ರಾಹುಲ್, ಕೊಹ್ಲಿ ಜತೆ 18 ಓವರ್, ಜಡೇಜಾ ಜತೆ 7 ಓವರ್, ಸೂರ್ಯಕುಮಾರ್ ಜತೆ 6 ಓವರ್ ಜತೆಯಾಟ ಆಡಿದರೂ, ರನ್ ವೇಗ ಹೆಚ್ಚಿಸಲು ಸಾಧ್ಯವಾಗಲಿಲ್ಲ. ರೋಹಿತ್ ಔಟಾದ ಬಳಿಕ ಪೂರ್ತಿ 40 ಓವರ್​ಗಳಲ್ಲಿ ಭಾರತೀಯರು ಹೊಡೆದಿದ್ದು ಬರೀ 5 ಬೌಂಡರಿ, ಅದರಲ್ಲೂ 10ರಿಂದ 40 ಓವರ್ ನಡುವೆ ಬಂದಿದ್ದು ಒಂದೇ ಬೌಂಡರಿ. ಇದೇ ಪಿಚ್​ನಲ್ಲಿ ರೋಹಿತ್ ಆರ್ಭಟಿಸಿದ್ದರು. ಆಸೀಸ್ ಆರಂಭಿಕ ಟ್ರಾವಿಸ್ ಹೆಡ್ 15 ಬೌಂಡರಿ, 4 ಸಿಕ್ಸರ್ ಸಹಿತ 120 ಎಸೆತಗಳಲ್ಲಿ 137 ರನ್ ಚಚ್ಚಿದ್ದರು. ಆದರೆ, ಭಾರತೀಯರು ಆಡುವಾಗ ಅದು ಬೇರೆಯೇ ಪಿಚ್​ನಂತೆ ಭಾಸವಾಗುತ್ತಿತ್ತು.

    ಇದೆಲ್ಲ ಒಟ್ಟಾರೆ ಹೇಳಿದ್ದೇನೆಂದರೆ, ಭಾರತಕ್ಕೆ ಫೈನಲ್​ನಲ್ಲಿ ಗೌತಮ್ ಗಂಭೀರ್​ರಂಥ ಗಟ್ಟಿ ಮನೋಬಲದ ಆಟಗಾರನ ಕೊರತೆ ಕಾಡಿತ್ತು! ಹೌದು. 2007ರ ಟಿ20 ವಿಶ್ವಕಪ್​ನಲ್ಲಿ, 2011ರ ವಿಶ್ವಕಪ್​ನಲ್ಲಿ ಗಂಭೀರ್ ಆಡಿದಂತೆ ಮೊನ್ನೆ ಏಕದಿನ ವಿಶ್ವಕಪ್ ಫೈನಲ್​ನಲ್ಲೂ ಆಸ್ಟ್ರೇಲಿಯಾ ಬೌಲರ್​ಗಳಿಗೆ ಮೇಲುಗೈ ಸಿಗದಂತೆ ದಿಟ್ಟ ಬ್ಯಾಟಿಂಗ್ ಮಾಡಬಲ್ಲ ಗಂಭೀರ್ ಮನೋಸ್ಥಿತಿಯ ಓರ್ವ ಬ್ಯಾಟರ್ ಅಗತ್ಯವಿತ್ತು. ರೋಹಿತ್ ಔಟಾದ ಬಳಿಕ ಭಾರತೀಯರು ಪೂರ್ತಿ 50 ಓವರ್ ಆಡಿಕೊಂಡರೂ, ತಂಡವನ್ನು ಅಪಾಯದಿಂದ ಪಾರು ಮಾಡುವುದು ಯಾರಿಗೂ ಸಾಧ್ಯವಾಗಲಿಲ್ಲ. ಗೆಲುವಿಗೆ ಅಗತ್ಯವಿದ್ದ ರನ್​ಗಳು ಬರಲಿಲ್ಲ. ಫೈನಲ್ ಪಂದ್ಯಕ್ಕೆ ನಿಗದಿಯಾಗಿದ್ದ ಪಿಚ್ ಯೋಗ್ಯವಾಗಿರಲಿಲ್ಲ ಎಂಬ ಚರ್ಚೆ ಬೇರೆಯ ವಿಷಯ. ಪಿಚ್ ಹೇಗೇ ಇದ್ದರೂ, ಅದಕ್ಕೆ ತಕ್ಕಂತೆ ಆಡುವ ಮನೋಸ್ಥಿತಿ ತಂಡಕ್ಕಿರಬೇಕು. ಒಂದು ವಿಶೇಷವೆಂದರೆ, ಭಾರತ ಎಲ್ಲ ಲೀಗ್ ಪಂದ್ಯಗಳು ಹಾಗೂ ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ಮಾದರಿಯಲ್ಲಿ ನಿರ್ಭೀತ, ನಿರ್ದಯ, ನಿಷ್ಕಾರುಣ್ಯದ ಕ್ರಿಕೆಟ್ ಆಡಿ ಎದುರಾಳಿಗಳನ್ನು ಹೊಸಕಿಹಾಕಿತ್ತು. ಆದರೆ, ಫೈನಲ್​ನಲ್ಲಿ ಭಾರತೀಯ ಮನೋಸ್ಥಿತಿಯೇ ಮರುಕಳಿಸಿತ್ತು. ಪ್ರತಿಯಾಗಿ ಆಸೀಸ್ ಲೀಗ್ ಹಂತದಲ್ಲಿ ಭಾರತದ ತಂಡಗಳಂತೆ ಏಳುಬೀಳಿನ ದುರ್ಬಲ ಆಟವಾಡಿದರೆ, ಫೈನಲ್​ನಲ್ಲಿ ಆಸೀಸ್ ಮನೋಸ್ಥಿತಿಯ ಆಟಕ್ಕೆ ಹೊರಳಿತ್ತು.

    ಸಾಧನೆ ಕೈತಪ್ಪಿದ ಮೇಲೆ ಕಾರಣಗಳನ್ನು ಪಟ್ಟಿ ಮಾಡುವುದು ಸುಲಭ. ಆದರೆ, ಯಶಸ್ಸು ಕೈಜಾರದಂತೆ ತಂತ್ರಗಾರಿಕೆ ರೂಪಿಸುವುದು ಕಷ್ಟ. ಆಸ್ಟ್ರೇಲಿಯನ್ನರು ಭಾರತ ತಂಡದ ಪ್ರತಿಯೊಬ್ಬರಿಗೂ ಒಂದೊಂದು ಪ್ಲಾ್ಯನ್ ಮಾಡಿದ್ದರು. ರೋಹಿತ್ ಶರ್ಮ ವೇಗಿಗಳನ್ನು ಚೆಂಡಾಡುತ್ತಿದ್ದಾಗ ನಾಯಕ ಕಮಿನ್ಸ್ ತಂಡದ ನಂ.1 ಸ್ಪಿನ್ನರ್ ಜಂಪಾರನ್ನು ದಾಳಿಗಿಳಿಸಲಿಲ್ಲ. ಬದಲಿಗೆ ಪಾರ್ಟ್​ಟೈಮ್ ಸ್ಪಿನ್ನರ್ ಮ್ಯಾಕ್ಸ್​ವೆಲ್ ಕೈಗೆ ಚೆಂಡು ಕೊಟ್ಟರು. ಪರಿಣಾಮ.. ಸತತ ಎಸೆತಗಳಲ್ಲಿ ಬೌಂಡರಿ, ಸಿಕ್ಸರ್ ಬಾರಿಸಿದ ರೋಹಿತ್, ಮೂರನೇ ಎಸೆತದಲ್ಲಿ ಕ್ಯಾಚಿತ್ತರು. ವಿರಾಟ್ ಕೊಹ್ಲಿಯ ಕವರ್​ಡ್ರೖೆವ್​ಗಳು ಬೌಂಡರಿ ತಲುಪದಂತೆ ಆಸೀಸ್ ಫೀಲ್ಡರ್​ಗಳು ಅತ್ಯುತ್ತಮವಾಗಿ ಕ್ಷೇತ್ರರಕ್ಷಣೆ ಮಾಡಿದರು. ಕೆಎಲ್ ರಾಹುಲ್​ಗೆ, ಶ್ರೇಯಸ್ ಅಯ್ಯರ್​ಗೆ ಅವರ ನೆಚ್ಚಿನ ಹೊಡೆತಗಳನ್ನು ಆಡುವುದಕ್ಕೆ ಅವಕಾಶವನ್ನೇ ಕೊಡಲಿಲ್ಲ. ಸೂರ್ಯಕುಮಾರ್ ಯಾದವ್ ಕ್ರೀಸಿನಲ್ಲಿದ್ದಾಗ ವೇಗಿಗಳು ಬೌನ್ಸರ್ ಅನ್ನೂ ನಿಧಾನಗತಿಯಲ್ಲಿ ಹಾಕಿದರು!

    ಭಾರತ ಕೂಡ 240 ರನ್​ಗಳ ಸಣ್ಣ ಮೊತ್ತ ಪೇರಿಸಿದ ಮೇಲೆ ಅದನ್ನು ರಕ್ಷಿಸಿಕೊಳ್ಳಲು ಬೇಕಾದ ಮಾಡು-ಇಲ್ಲವೇ- ಮಡಿ ಮನೋಸ್ಥಿತಿಯಿಂದ ಕಣಕ್ಕಿಳಿಯಲಿಲ್ಲ. ಆರಂಭದ 2 ಓವರ್​ಗಳಲ್ಲೇ 28 ರನ್ ಗಳಿಸಿದ ಆಸೀಸ್ ಆ ಮೇಲುಗೈ ಅನ್ನೂ ಯಾವ ಹಂತದಲ್ಲೂ ಬಿಟ್ಟುಕೊಡಲಿಲ್ಲ. ಭಾರತ ಹೊಸ ಚೆಂಡಿನಲ್ಲಿ ಶಮಿಗೆ ಅವಕಾಶ ಕೊಡುವುದರೊಂದಿಗೆ 16 ಓವರ್ ಬಳಿಕ ದಾಳಿಗೆ ಇಳಿದ ಮೊಹಮದ್ ಸಿರಾಜ್ ಸ್ವಿಂಗ್ ಸಿಗದೆ ಮೊನಚು ಕಳೆದುಕೊಂಡಿದ್ದರು. ಉಭಯ ತಂಡಗಳಿಗೆ 24 ಗಂಟೆ ಮೊದಲೇ ಪಿಚ್​ನ ಸ್ವರೂಪದ ಬಗ್ಗೆ ಮಾಹಿತಿ ಇತ್ತು. ಹಾಗಾಗಿ ಭಾರತ ಫೈನಲ್​ನಲ್ಲಾದರೂ ಸಿರಾಜ್ ಬದಲು ಬಲಗೈ ಲೆಗ್​ಸ್ಪಿನ್ನರ್ ಅಶ್ವಿನ್​ಗೆ ಅವಕಾಶ ನೀಡಿ, ಸೂರ್ಯ ಬದಲು ವೇಗದ ಬೌಲಿಂಗ್ ಆಲ್ರೌಂಡರ್ ಶಾರ್ದೂಲ್ ಥಾಕುರ್​ರನ್ನು ಆಡಿಸುವ ಬಗ್ಗೆ ಯೋಚಿಸಬಹುದಿತ್ತು. ಬ್ಯಾಟಿಂಗ್ ಮಾಡುವಾಗಲೂ ಕೊಹ್ಲಿ ಔಟಾದ ಬಳಿಕ ಜಡೇಜಾ ಬದಲು ಸೂರ್ಯರನ್ನೇ ಕ್ರೀಸಿಗೆ ಕಳಿಸಿದ್ದರೆ ಹಣೆಬರಹ ಬದಲಾಗುತ್ತಿತ್ತೋ ಏನೋ. ಒಟ್ಟಿನಲ್ಲಿ ಫೈನಲ್​ನಲ್ಲಿ ಭಾರತದ ಯಾವ ನಿರ್ಧಾರ, ಪ್ರಯೋಗಗಳೂ ಫಲ ನೀಡಲಿಲ್ಲ.

    ಈ ವಿಶ್ವಕಪ್ ಸೋಲು ಜಗತ್ತಿನ ಕೊನೆಯೇನೂ ಅಲ್ಲ. ಮುಂದೆಯೂ ಸಾಲುಸಾಲು ವಿಶ್ವಕಪ್​ಗಳು ಬರುತ್ತವೆ. ಆದರೆ, ಭಾರತೀಯ ಕ್ರಿಕೆಟ್ ತಂಡಗಳ ಮನೋಸ್ಥಿತಿ ಬದಲಾಗದಿದ್ದರೆ, ನಾಕೌಟ್ ಪಂದ್ಯಗಳಲ್ಲಿ ನಾಕೌಟ್ ಪಂಚ್ ನೀಡುವಂಥ ಎದೆಗಾರಿಕೆ ತೋರದಿದ್ದರೆ, ಪರಿಸ್ಥಿತಿಯೂ ಬದಲಾಗುವುದಿಲ್ಲ. ಆಟಗಾರರಿಗೆ ದೊಡ್ಡ ಪಂದ್ಯಗಳನ್ನು ದಿಟ್ಟೆದೆಯಿಂದ ಆಡುವ ಮಾನಸಿಕ ತರಬೇತಿ ಸದ್ಯದ ತುರ್ತಅಗತ್ಯ.

    ಅಂತೂ 45 ದಿನಗಳ ಕಾಲ ‘ಈ ಬಾರಿ ಭಾರತಕ್ಕೇ ವಿಶ್ವಕಪ್’ ಎಂಬಂತಿದ್ದ ಭರವಸೆ 46ನೇ ದಿನ ಮುಷ್ಟಿಯಲ್ಲಿ ಹಿಡಿದ ಮರಳಿನಂತೆ ಬೆರಳಸಂದಿಯಿಂದ ಜಾರಿಹೋಯಿತಲ್ಲ ಎಂಬ ಭ್ರಮನಿರಸನ ಯಾವತ್ತೂ ಮರೆಯಾಗುವುದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts