More

    ಮೇದಿನಿ ಗ್ರಾಮದ ಸುವಾಸಿತ ಸಣ್ಣಕ್ಕಿ

    ಬೆಳೆಯುವ ಹಂತದಲ್ಲೇ ಇಡೀ ಊರಿಗೆ ಸುವಾಸನೆ ಬೀರುವ ಸಣ್ಣಕ್ಕಿ ಇದು. ಹಿಂದಿನ ಕಾಲದಲ್ಲಿ ರಾಜರಿಗೋಸ್ಕರ ಬೆಳೆಯುತ್ತಿದ್ದರಂತೆ. ಬೆಲೆಯೂ ತೀರಾ ದುಬಾರಿಯಲ್ಲ. ಆದರೆ ಬೆಳೆಯುವ ಕ್ಷೇತ್ರ ಕ್ರಮೇಣ ಕಡಿಮೆಯಾಗುತ್ತ ಸಾಗಿದೆ. ಮುಂದೊಂದು ದಿನ ಈ ತಳಿಯೇ ಕಣ್ಮರೆಯಾದೀತೇನೋ ಎಂಬ ಚಿಂತೆಗೆ ಕಾರಣವಾಗಿದೆ.

    ಅಕ್ಕಿ ಡಬ್ಬ ತೆರೆದರೆ ಸಾಕು ಇಡೀ ಮನೆಯ ತುಂಬ ಪರಿಮಳ ಹರಡುತ್ತದೆ. ಇದರ ಭತ್ತ ಬೆಳೆಯುವಾಗಲೇ ಊರಿನ ತುಂಬಾ ಸುವಾಸನೆ ಪಸರಿಸುತ್ತದೆ. ಅದು ಮೇದಿನಿ ಸಣ್ಣಕ್ಕಿ.

    ಬಾಸುಮತಿ ಅಕ್ಕಿಯಂತೆ ಕೆ.ಜಿ.ಗೆ ಸಾವಿರ ರೂಪಾಯಿಗೋ, ಐದು ನೂರಕ್ಕೋ ಮಾರಾಟವಾಗುವ ಪ್ಯಾಕೆಟ್ ಅಕ್ಕಿ ಇದಲ್ಲ. ಕುಗ್ರಾಮವೊಂದರಲ್ಲಿ ಸಾಂಪ್ರದಾಯಿಕ ಪದ್ಧತಿಯಿಂದ ಸಂರಕ್ಷಿಸಿಕೊಂಡು ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿರುವ ಈ ಅಕ್ಕಿಯ ಘಮ ಇಡೀ ನಾಡಿಗೆ ಪಸರಿಸುವ ಮೊದಲೇ ಮರೆಯಾಗುತ್ತಿದೆ.

    ಹೌದು, ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಕುಗ್ರಾಮ ಮೇದಿನಿ. ಸಮುದ್ರ ಮಟ್ಟದಿಂದ 2 ಸಾವಿರ ಮೀಟರ್​ಗೂ ಹೆಚ್ಚು ಎತ್ತರದಲ್ಲಿರುವ ಈ ಪ್ರದೇಶದಲ್ಲಿ ಶತಮಾನಗಳಿಂದ ಬೆಳೆಯುವ ವಿಶಿಷ್ಟ ತಳಿಯ ಭತ್ತ ‘ಮೇದಿನಿ ಸಣ್ಣಕ್ಕಿ’ ಎಂದೇ ಪ್ರಸಿದ್ಧವಾಗಿದೆ.

    ಇಲ್ಲಿರುವ 56 ಕುಟುಂಬಗಳೂ 40 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಈ ಭತ್ತವನ್ನು ಬೆಳೆಸುತ್ತಿದ್ದರು. ಇತ್ತೀಚಿನ ನಾಲ್ಕೈದು ವರ್ಷಗಳಲ್ಲಿ ಇದನ್ನು ಬೆಳೆಯುವ ರೈತರ ಪ್ರಮಾಣ 8-10ಕ್ಕೆ ಸೀಮಿತವಾಗಿದೆ. ಗದ್ದೆಯ ವ್ಯಾಪ್ತಿ 10 ಎಕರೆ ದಾಟುತ್ತಿಲ್ಲ.

    ಏನಿದರ ವಿಶೇಷ?: ಹೆಸರೇ ಹೇಳುವಂತೆ ಅತಿ ಸಣ್ಣದಾದ ಗುಂಡಾದ ಕಾಳುಗಳ ಅಕ್ಕಿ ಇದು. ಭತ್ತವೂ ಇತರ ತಳಿ ಭತ್ತಕ್ಕಿಂತ ಚಿಕ್ಕದಾಗಿರುತ್ತದೆ. ಇದರ ಹುಲ್ಲು ಹುಲುಸಾಗಿ ಬೆಳೆಯುತ್ತದೆ. ಹೈಬ್ರಿಡ್ ಅಕ್ಕಿಗಳಂತೆ ತುಂಬ ತೆನೆ ಬಾರದೆ, ತೆನೆಯಲ್ಲಿ ಬತ್ತದ ಕಾಳುಗಳು ವಿರಳವಾಗಿರುತ್ತವೆ. ತೆನೆ ಮಾಗುವ ಹೊತ್ತಿಗೆ ಪರಿಮಳ ಬರಲಾರಂಭಿಸುತ್ತದೆ. ಅನ್ನ ಮಾಡಿದ ನಂತರ ಬರುವ ಘಮ ಭೋಜನಾಸಕ್ತಿಯನ್ನು ಹೆಚ್ಚಿಸುತ್ತದೆ. ಈ ಅಕ್ಕಿ ಪಾಯಸ, ಕೇಸರಿ ಬಾತ್, ಬಿರ್ಯಾನಿ ಮಾಡಲು ಅತಿ ಪ್ರಶಸ್ತವಾಗಿದೆ. ಕುಮಟಾ, ಹೊನ್ನಾವರ, ಸಿದ್ದಾಪುರ ತಾಲೂಕಿನ ಕೆಲವು ಜನರು 8 ಕಿ.ಮೀ. ನಡೆದು ಈ ಅಕ್ಕಿಯನ್ನು ಕೊಳ್ಳಲು ಇಲ್ಲಿಗೆ ಬರುವುದುಂಟು.

    ಕಡಿಮೆ ಏಕಾಯ್ತು?: ಈ ಭತ್ತದ ಇಳುವರಿ ಕಡಿಮೆ. ಎಕರೆಗೆ ಹೆಚ್ಚೆಂದರೆ ಎಂಟರಿಂದ 10 ಕ್ವಿಂಟಾಲ್ ಭತ್ತ ಬಂದೀತು. ಪರಿಮಳಕ್ಕೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚು. ಈ ಅಕ್ಕಿಯನ್ನು ವರ್ಷವಿಡೀ ಊಟ ಮಾಡಲು ಸಾಧ್ಯವಿಲ್ಲ. ಸಾಕಷ್ಟು ಬೆಳೆದರೆ ತಲೆ ಹೊರೆಯ ಮೇಲೆ ಮೈಲುಗಟ್ಟಲೆ ನಡೆದು ಮಾರಾಟಕ್ಕೆ ತೆರಳಬೇಕು. ಇದರಿಂದ ಗ್ರಾಮಸ್ಥರು ಸಣ್ಣಕ್ಕಿ ಬದಲು ತಮಗೆ ಊಟಕ್ಕೆ ಬೇಕಾದ ಭತ್ತ ಬೆಳೆಯುತ್ತಿದ್ದಾರೆ.

    ಇನ್ನು ಕೆಲವರು ಹೆಚ್ಚು ಇಳುವರಿ ಕೊಡುವ ತಳಿ ಸಂಕರಗೊಂಡ ಹೈಬ್ರಿಡ್ ತಳಿಯ ಭತ್ತಗಳನ್ನು ಬೆಳೆಯಲಾರಂಭಿಸಿದ್ದಾರೆ. ಇದರಿಂದ ನಿಧಾನವಾಗಿ ಮೂಲ ಸಣ್ಣಕ್ಕಿಯ ತಳಿ ಮಾಸುವ ಆತಂಕವಿದೆ.

    ಅರಸರ ಊಟದ ಅಕ್ಕಿ: ಸಣ್ಣಕ್ಕಿ ಬಗ್ಗೆ ಇಲ್ಲಿ ದಂತ ಕತೆಯೂ ಇದೆ. ಸಿದ್ದಾಪುರ ತಾಲೂಕಿನ ಬಿಳಗಿಯಲ್ಲಿ ಆಳಿದ ಸಾಮಂತ ಅರಸರು ಇಲ್ಲೊಂದು ಕೋಟೆ ಕಟ್ಟಿದ್ದರು ಎನ್ನಲಾಗಿದೆ. ಗ್ರಾಮದಿಂದ 3 ಕಿಮೀ ಅಂತರದಲ್ಲಿ ಗುಡ್ಡದ ಮೇಲೆ ಐತಿಹಾಸಿಕ ಕೋಟೆಯ ಕುರುಹುಗಳೂ ಇವೆ. ಕೆರೆ, ಸುರಂಗ, ಕಲ್ಲಿನ ದೇವರ ಮೂರ್ತಿ ಮುಂತಾದ ಅವಶೇಷಗಳು ಇಲ್ಲಿವೆ. ಈ ಅರಸರ ಆಳು ಮಕ್ಕಳಾಗಿ ಬಂದವರು ನಾವು ಎಂಬುದು ಇಲ್ಲಿನ ಜನರ ನಂಬಿಕೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ ಕುಟುಂಬಗಳು ಮಾತ್ರ ಇಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿವೆ. ಆಗ ಅರಸರ ಊಟಕ್ಕೆ ಸಣ್ಣಕ್ಕಿ ಬೆಳೆಯುತ್ತಿದ್ದರು ಎನ್ನುತ್ತಾರೆ ಊರಿನ ಹಿರಿಯರು. ರಾಜರ, ಕೋಟೆಯ ವರ್ಣರಂಜಿತ ಕತೆಯನ್ನೂ ಹಿರಿಯರು ಹೇಳುತ್ತಾರೆ.

    ಬೇರೆಡೆ ಬೆಳೆಯುವುದಿಲ್ಲ: ಬೆಟ್ಟದ ಮೇಲೆ ಕಾಡಿನ ನಡುವೆ ಇರುವ ಊರು ಶೀತದ ವಾತಾವರಣ ಹೊಂದಿದೆ. ಇಲ್ಲಿನ ಮಣ್ಣು ಮತ್ತು ಹವಾ ಗುಣವೇ ಇಲ್ಲಿನ ಅಕ್ಕಿ ಅಷ್ಟು ವಿಶಿಷ್ಟವಾಗಿರಲು ಕಾರಣ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಅಭಿಪ್ರಾಯ.

    ಇಲ್ಲಿನ ಸಣ್ಣಕ್ಕಿ ಭತ್ತವನ್ನು ಬೇರೆಡೆ ಕೊಂಡೊಯ್ದು ಬೆಳೆಯುವ ಯತ್ನ ನಡೆಸಿದ್ದಾರೆ. ಆದರೆ, ಹೊರಗಿನ ಬೆಳೆಗೆ ಇಷ್ಟು ಪರಿಮಳ ಬಾರದು ಎಂಬುದು ಅನುಭವಿ ರೈತರ ಅಭಿಮತ. ಆದರೆ, ತಳಿ ಸಂರಕ್ಷಣೆಯ ಹಾಗೂ ಬೇರೆಡೆ ಬೆಳೆಯುವ ಗಂಭೀರ ಪ್ರಯತ್ನಗಳು ಇನ್ನೂ ನಡೆದೇ ಇಲ್ಲ.

    ಎಲ್ಲಿದೆ ಮೇದಿನಿ..?

    ಕುಮಟಾದಿಂದ-ಸಿದ್ದಾಪುರಕ್ಕೆ ತೆರಳುವ ದೊಡ್ಮನೆ ಮಾರ್ಗದಲ್ಲಿ 38 ಕಿಮೀ ತೆರಳಿದ ನಂತರ ಸೊಪ್ಪಿನ ಹೊಸಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸಿಗುವ ಹುಲಿದೇವರ ಕೊಡ್ಲಿನ ಸಮೀಪ ಮೇದಿನಿ ಗ್ರಾಮವಿದೆ. ಮುಖ್ಯ ರಸ್ತೆಯಿಂದ ಕಗ್ಗಾಡಿನಲ್ಲಿ 8 ಕಿಮೀ ಘಟ್ಟ ಹತ್ತಿಯೇ ಸಾಗಬೇಕು. ಗ್ರಾಮದವರೆಗೆ ಇದೇ ವರ್ಷ ಕಚ್ಚಾ ರಸ್ತೆಯಲ್ಲಿ ಕಾರು ಓಡಾಡಿದೆ. ಮಳೆಗಾಲ ಬಂದಾಕ್ಷಣ ಊರು ಸಂಪರ್ಕ ಕಳೆದುಕೊಳ್ಳುತ್ತದೆ. ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು, ಹಲವು ತಿಂಗಳು ವಿದ್ಯುತ್ ಕಡಿತವಾಗುತ್ತದೆ. ಮೊಬೈಲ್ ಸಿಗ್ನಲ್ ಇಲ್ಲ. ಅಗತ್ಯ ವಸ್ತುಗಳನ್ನು ಕೊಳ್ಳಲು ಅಂಗಡಿಯೂ ಇಲ್ಲ. ಇದೊಂದು ಸಂಪೂರ್ಣ ಕುಗ್ರಾಮ.

    ಮೇದಿನಿ ಸಣ್ಣಕ್ಕಿಯ ಪರಿಮಳ ಇಲ್ಲಿ ಬಂದು ಗ್ರಾಮ ವಾಸ್ತವ್ಯ ಮಾಡಿದಾಗ ತಿಳಿಯಿತು. ಅದಕ್ಕೆ ಜಿಯೋ ಟ್ಯಾಗ್ ಪಡೆಯುವ ಪ್ರಯತ್ನ ನಡೆಸಲಾಗುವುದು. ಆದರೆ, ಕನಿಷ್ಠ 50 ಎಕರೆ ಪ್ರದೇಶದಲ್ಲಿ ಬೆಳೆದರೆ ಮಾತ್ರ ಈ ಮಾನ್ಯತೆ ಲಭಿಸುತ್ತದೆ. ಇಲ್ಲಿ ಅಷ್ಟು ಬೆಳೆ ಇಲ್ಲದಿರುವುದು ಸಮಸ್ಯೆ. ಪರ್ಯಾಯ ಮಾರ್ಗದ ಬಗ್ಗೆ ಚಿಂತಿಸುತ್ತಿದ್ದೇವೆ.

    | ಡಾ. ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ, ಉತ್ತರ ಕನ್ನಡ

    ಸಣ್ಣಕ್ಕಿಯನ್ನು ನಮ್ಮಜ್ಜನ ಕಾಲದಿಂದ ಬೆಳೆಯುತ್ತಿದ್ದೇವೆ. ಕೂಲಿ ಕೆಲಸದ ಪದ್ಧತಿ ನಮ್ಮಲ್ಲಿಲ್ಲ. ಮುರಿಯಾಳು ಮಾಡಿಕೊಂಡು ಗದ್ದೆ ಮಾಡುತ್ತೇವೆ. ನಮ್ಮ ಪಾಲಿಗೆ ಇರುವಷ್ಟೂ ಗದ್ದೆಯಲ್ಲಿ ಸಣ್ಣಕ್ಕಿ ಬೆಳೆದರೆ ನಮಗೆ ಊಟಕ್ಕೇನೂ ಇರುವುದಿಲ್ಲ. ಹಾಗಾಗಿ ಸ್ವಲ್ಪ ಜಾಗದಲ್ಲಿ ಮಾತ್ರ ಅದನ್ನು ಬೆಳೆಯುತ್ತೇವೆ. ಭತ್ತವನ್ನು ಅಕ್ಕಿ ಮಾಡಿಸಿದ ನಂತರ ಹೆಚ್ಚು ದಿನ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಇಳುವರಿಯೂ ಕಡಿಮೆ. ಆದ್ದರಿಂದ ಬೆಳೆಯುವುದನ್ನು ಕಡಿಮೆ ಮಾಡಿದ್ದೇವೆ.

    | ವಿಷ್ಣು ಗೌಡ ಮೇದಿನಿ ಗ್ರಾಮದ ರೈತ

     

    ಉತ್ತರ ಕನ್ನಡ ಸಾವಯವ ಒಕ್ಕೂಟದ ಮೂಲಕ ಮೇದಿನಿ ಸಣ್ಣಕ್ಕಿಯ ಸಣ್ಣ ಪ್ಯಾಕೆಟ್ ಮಾಡಿ ಮಾರಾಟ ಮಾಡುವ ಯತ್ನವನ್ನು ಈ ವರ್ಷದಿಂದ ನಡೆಸಿದ್ದೇವೆ. ಸಾಕಷ್ಟು ಬೇಡಿಕೆ ಇದೆ. ಆದರೆ, ಅಷ್ಟು ಅಕ್ಕಿ ಸಿಗುತ್ತಿಲ್ಲ. ಬೀಜದ ಭತ್ತವನ್ನು ತಂದು ಕುಮಟಾದ ಬೇರೆ ಗ್ರಾಮಗಳಲ್ಲಿ ಹಾಗೂ ಹೊನ್ನಾವರದಲ್ಲಿ ಜಿಕೆವಿಕೆ ಸಹಕಾರದಿಂದ ಬೆಳೆಯುವ ಪ್ರಯೋಗ ನಡೆಸಲಾಗಿದೆ.

    | ಹೊನ್ನಪ್ಪ ಗೋವಿಂದ ಗೌಡ ಕೃಷಿ ಇಲಾಖೆ ಜಂಟಿ ನಿರ್ದೇಶಕ

    ಸುಭಾಸ ಧೂಪದಹೊಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts