More

    ಪಿಡಬ್ಲ್ಯುಡಿ ಇಲಾಖೆಗೆ ರಸ್ತೆ ದುರಸ್ತಿಗೆ ಸಂಘದಿಂದ ಮನವಿ

    ಮಡಿಕೇರಿ : ಮಡಿಕೇರಿ ತಾಲೂಕಿನ ಅರೆಕಾಡು, ಹೊಕ್ಕೇರಿ, ಅಭ್ಯತ್‌ಮಂಗಲ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸಂಚಾರ ಅಸಾಧ್ಯವಾಗಿದೆ. ಆದ್ದರಿಂದ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಕೊಡವ ವೆಲ್‌ಫೇರ್ ಆ್ಯಂಡ್ ರಿಕ್ರಿಯೇಷನ್ ಅಸೋಸಿಯೇಷನ್ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದೆ.


    ರಸ್ತೆ ಅವ್ಯವಸ್ಥೆಯಿಂದ ವಾಹನಗಳು ಮತ್ತು ಪಾದಚಾರಿಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ಹಿಂದೆ ಕೂಡ ರಸ್ತೆ ಅವ್ಯವಸ್ಥೆ ಕುರಿತು ಶಾಸಕರ ಗಮನ ಸೆಳೆಯಲಾಗಿತ್ತು. ಅಲ್ಲದೇ, ಶಾಸಕರು ಸ್ಥಳ ಪರಿಶೀಲನೆ ಮಾಡಿ ರಸ್ತೆ ಅಭಿವೃದ್ಧಿಯ ಬಗ್ಗೆ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ರಸ್ತೆ ಅಭಿವೃದ್ಧಿ ಕಂಡಿಲ್ಲ. ಬದಲಿಗೆ ಮತ್ತಷ್ಟು ಹದಗೆಟ್ಟಿದೆ. ದ್ವಿಚಕ್ರವಾಹನಗಳು ಹಾಗೂ ಪಾದಚಾರಿಗಳು ನಿಯಂತ್ರಣ ತಪ್ಪಿ ಬೀಳುತ್ತಿರುವ ಅವಘಡಗಳು ಮರುಕಳಿಸುತ್ತಿವೆ. ಅನೇಕರು ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ರಸ್ತೆ ಅಭಿವೃದ್ಧಿ ಅನಿವಾರ್ಯ ಎಂದು ಅಸೋಸಿಯೇಷನ್ ಅಧ್ಯಕ್ಷ ಕುಕ್ಕೇರ ಬಿ.ಜಯಚಿಣ್ಣಪ್ಪ ಪತ್ರದಲ್ಲಿ ತಿಳಿಸಿದ್ದಾರೆ.


    ರಸ್ತೆ ಅವ್ಯವಸ್ಥೆ ಮತ್ತು ಇಲ್ಲಿನ ಅಪಾಯಕಾರಿ ಪರಿಸ್ಥಿತಿಯ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದರೂ ಯಾರೂ ಕಾಳಜಿ ತೋರುತ್ತಿಲ್ಲ. ರಸ್ತೆ ಅಭಿವೃದ್ಧಿಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಇಲ್ಲಿಯವರೆಗೆ ಕಾಮಗಾರಿಯನ್ನು ಆರಂಭಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.
    ಈ ರಸ್ತೆಯಲ್ಲಿರುವ ಎರಡು ಮರಗಳು ಕಾಮಗಾರಿಗೆ ಅಡ್ಡಿಯಾಗಿದೆ ಎಂದು ತಿಳಿದುಬಂದಿದೆ. ಆದ್ದರಿಂದ ಅರಣ್ಯ ಇಲಾಖೆ ತ್ವರಿತವಾಗಿ ಮರವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೆಚ್ಚು ಕಾಳಜಿ ವಹಿಸಬೇಕೆಂದು ಒತ್ತಾಯಿಸಿದ್ದಾರೆ.


    ಅರೆಕಾಡು, ಹೊಕ್ಕೇರಿ ಗ್ರಾಮಸ್ಥರು ಸಹಿ ಮಾಡಿರುವ ಮನವಿಪತ್ರವನ್ನು ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಹಾಗೂ ಸಹಾಯಕ ಇಂಜಿನಿಯರ್‌ಗೆ ಬುಧವಾರ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts