More

    ಸ್ಮಾಟ್‌ಸಿಟಿಗೆ ಹೊಂಡ-ಗುಂಡಿ ಕಪ್ಪು ಚುಕ್ಕೆ!

    ಶಿವಮೊಗ್ಗ: ಬೇರೆ ಊರುಗಳಿಂದ ಶಿವಮೊಗ್ಗಕ್ಕೆ ಆಗಮಿಸುವವರು ಈ ರಸ್ತೆಗಳನ್ನು ಕಂಡರೆ ಬಹುಶಃ ಈ ರಸ್ತೆಗೆ ಧೂಮಕೇತು ಅಪ್ಪಳಿಸಿರಬಹುದೇನೋ ಎಂದು ಲೇವಡಿ ಮಾಡದೆ ಇರಲಾರರು. ಸ್ಮಾರ್ಟ್ ಶಿವಮೊಗ್ಗ, ಬ್ರಾೃಂಡ್ ಶಿವಮೊಗ್ಗದ ಬಗ್ಗೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಈ ರಸ್ತೆಗಳು ಕಪ್ಪು ಚುಕ್ಕೆಯಂತೆ ಕಾಣುತ್ತಿವೆ.

    ಸುಗಮ ವಾಹನ ಸಂಚಾರ ಹಾಗೂ ಸಂಚಾರ ನಿಯಮ ಪಾಲನೆಗೆ ಪೊಲೀಸ್ ಇಲಾಖೆಯೇನೋ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಅಲ್ಲಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಸರ್ಕಾರದ ಬೊಕ್ಕಸ ತುಂಬಿಸುವ ಕೆಲಸವನ್ನೂ ಮಾಡುತ್ತಿದೆ. ಆದರೆ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗಿರುವ ಈ ರಸ್ತೆ ಅವ್ಯವಸ್ಥೆಗಳ ಬಗ್ಗೆ ಆಡಳಿತ ಯಂತ್ರ ಗಮನಹರಿಸದೇ ಇರುವುದು ವಿಪರ್ಯಾಸ.
    ಎನ್‌ಟಿ ರಸ್ತೆಯ ಬೈಪಾಸ್ ವೃತ್ತ ಹಾಗೂ ನ್ಯೂಮಂಡ್ಲಿ ವೃತ್ತದಲ್ಲಿರುವ ದೊಡ್ಡ ಗಾತ್ರದ ಗುಂಡಿಗಳು, ಕಿತ್ತು ಹೋಗಿರುವ ಡಾಂಬರು, ಅಭಿವೃದ್ಧಿ ಎಂಬ ಪದಕ್ಕೆ ಸಂಪೂರ್ಣ ವಿರುದ್ಧವಾಗಿ ಕಾಣಿಸುತ್ತಿವೆ. ಶಿವಮೊಗ್ಗಕ್ಕೆ ಮೊದಲ ಬಾರಿಗೆ ಬಂದವರು ಇದನ್ನು ಕಂಡು ಹೌಹಾರುವ ಪರಿಸ್ಥಿತಿಯಿದೆ. ಈ ರಸ್ತೆ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಬರುವುದರಿಂದ ನಗರ ಪಾಲಿಕೆ ಆಡಳಿತ ಯಂತ್ರ ಮೌನಕ್ಕೆ ಜಾರಿದೆ.
    ಈ ರಸ್ತೆಯ ಅಗಲೀಕರಣ ಪ್ರಸ್ತಾವನೆ ಇರುವುದರಿಂದ ಈಗ ಇದರ ತಂಟೆಗೆ ಹೋಗುವುದೇ ಬೇಡ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಸುಮ್ಮನಿದ್ದಂತಿದೆ. ಈ ರಸ್ತೆಯಲ್ಲಿ ಕೆಲವು ಕಡೆ ಎರಡೂ ಬದಿಯಲ್ಲಿ ಎರಡೆರಡು ಅಡಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಹೊಂಡ!
    ನ್ಯೂಮಂಡ್ಲಿ ವೃತ್ತದ ಸಮೀಪ ದ್ವಿಚಕ್ರ ವಾಹನ ಇಲ್ಲವೇ ಆಟೋಗಳು ಹೊಂಡಕ್ಕೆ ಇಳಿದರೆ ಅವು ಮತ್ತೆ ಮೇಲೇಳುವುದು ಕಷ್ಟಸಾಧ್ಯ. ಅದರಲ್ಲೂ ನುರಿತ ಚಾಲಕರಿದ್ದರೆ ಮಾತ್ರ ಸಲೀಸು. ಇಲ್ಲದೇ ಹೋದರೆ ಸಂಕಷ್ಟ ನಿಶ್ಚಿತ. ಈಗಾಗಲೇ ಮಳೆಗಾಲ ಮುಗಿದಿದೆ. ಇನ್ನಾದರೂ ಈ ರಸ್ತೆಯ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಹೆದ್ದಾರಿ ಪ್ರಾಧಿಕಾರ ಮುಂದಾಗಬೇಕಿದೆ.
    ಸಿಗ್ನಲ್ ದಾಟಿದರೆ ಹೊಂಡ: ಬೈಪಾಸ್ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಮಾಡಲಾಗಿದೆ. ಇಲ್ಲಿ ಗ್ರೀನ್ ಸಿಗ್ನಲ್ ಬಿದ್ದ ಕೂಡಲೆ ವೇಗ ಪಡೆದುಕೊಳ್ಳುವ ವಾಹನಗಳಿಗೆ ಧುತ್ತನೇ ಎದುರಾಗುವುದು ಹೊಂಡ. ಅದನ್ನು ತಪ್ಪಿಸಲು ಹೋದರೆ ಹಿಂದಿನಿಂದ ಬರುವ ವಾಹನಕ್ಕೆ ಬಲಿಯಾಗುವ ಆತಂಕ. ಹಾಗೆಂದು ಹೊಂಡಕ್ಕೆ ವಾಹನ ಇಳಿದರೆ ದುಬಾರಿ ರಿಪೇರಿ ಖರ್ಚಿನ ಹೊರೆ. ಎಂತಹ ನುರಿತ ಚಾಲಕರಿಗೂ ಈ ಸವಾಲು ತಪ್ಪಿದ್ದಲ್ಲ.
    ಪಾಲಿಕೆಯಿಂದ ಮಣ್ಣು: ಈ ರಸ್ತೆ ಅಗಲೀಕರಣದ ಪ್ರಸ್ತಾಪ ಹಲವು ವರ್ಷಗಳಿಂದಲೂ ಇದೆ. ಆದರೆ ಕಾಲ ಕೂಡಿ ಬಂದಿಲ್ಲ. ಈ ರಸ್ತೆಗಳಲ್ಲಿರುವ ಹೊಂಡ ಮುಚ್ಚಲು ಪಾಲಿಕೆಗೆ ಅವಕಾಶವಿಲ್ಲ. ಜತೆಗೆ ಅಷ್ಟೊಂದು ಹಣ ವ್ಯಯಿಸುವುದೂ ಹೊರೆ. ಹೀಗಾಗಿ ತಾತ್ಕಾಲಿಕವಾಗಿ ಈ ಹೊಂಡಗಳಿಗೆ ಪಾಲಿಕೆಯಿಂದಲೇ ಮಣ್ಣು ಹಾಕಲಾಗುತ್ತಿದೆ. ವಾರಕ್ಕೊಮ್ಮೆ ಮಣ್ಣು ಮುಚ್ಚುವ ಪ್ರಹಸನ ನಡೆಯುತ್ತದೆ. ಬೆಳಗ್ಗೆ ಹಾಕಿದ ಮಣ್ಣು ಸಂಜೆ ವೇಳೆಗೆ ಹಾರಿ ಹೋಗುತ್ತದೆ. ಈ ರಸ್ತೆಗಳಲ್ಲಿ ದಿನಕ್ಕೆ ಸಾವಿರಾರು ವಾಹನ ಸಂಚರಿಸುವುದರಿಂದ ಪಾಲಿಕೆಯಿಂದ ಹಾಕುವ ಮಣ್ಣು ಉಳಿಯುವುದಿಲ್ಲ. ದಿನಂಪ್ರತಿ ಈ ರಸ್ತೆಯಲ್ಲಿ ಓಡಾಡುವರ ಸಮಸ್ಯೆ ಹೇಳತೀರದಂತಾಗಿದೆ.
    ವ್ಯವಸ್ಥೆ ಸರಿಯಿಲ್ಲ-ದಂಡ ತಪ್ಪಲ್ಲ: ಸಂಚಾರ ನಿಯಮ ಪಾಲನೆ ಮಾಡದೇ ಇದ್ದರೆ ಮನೆಗೇ ನೋಟಿಸ್ ತಲುಪಿಸುವ ಆಡಳಿತ ವ್ಯವಸ್ಥೆಯಿರುವಾಗ ಸಮರ್ಪಕ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಏನು ಸಮಸ್ಯೆ ಎಂಬುದು ನಾಗರಿಕರ ಪ್ರಶ್ನೆ. ಹೊಂಡ ತಪ್ಪಿಸಿ ವಾಹನ ಚಾಲನೆ ಮಾಡಿದರೆ ಅಜಾಗರೂಕತೆಯ ಚಾಲನೆ ಎಂದು ವಾಹನ ಸವಾರರಿಗೆ ಪೊಲೀಸ್ ಇಲಾಖೆಯಿಂದ ದಂಡ ವಿಧಿಸಿರುವ ಪ್ರಸಂಗಗಳೂ ಇವೆ. ಹೀಗಿರುವಾಗ ಮೊದಲು ರಸ್ತೆ ಸರಿಮಾಡಿ ಆಮೇಲೆ ದಂಡ ವಿಧಿಸಿ ಎಂಬ ಒತ್ತಾಯವೂ ಕೇಳಿ ಬರುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts