More

    ಚಿಕ್ಕೋಡಿಯಲ್ಲಿ ಹಾಲಿ ಸಂಸದರ ವಿರುದ್ಧ ಹೊಸ ಮುಖ!

    | ಜಗದೀಶ ಹೊಂಬಳಿ ಬೆಳಗಾವಿ

    ಲೋಕಸಭಾ ಚುನಾವಣೆಗೆ 22 ದಿನಗಳು ಬಾಕಿ ಉಳಿದಿದ್ದು, ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾಳಗ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಟಕ್ಕರ್ ಕೊಡಲು ಕಾಂಗ್ರೆಸ್​ನಿಂದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ಮಧ್ಯೆ ನೇರಾನೇರ ಸ್ಪರ್ಧೆ ಏರ್ಪಟ್ಟಿದ್ದು, ಏತನ್ಮಧ್ಯೆ ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರಿಂದ ಕಾಂಗ್ರೆಸ್-ಬಿಜೆಪಿಯಲ್ಲಿ ಹೊಸ ಲೆಕ್ಕಾಚಾರಗಳು ಶುರುವಾಗಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಲ್ಲೋಳಿಕರ್, ರಾಯಬಾಗ ಮೀಸಲು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಸಿಗದಿದ್ದಕ್ಕೆ ಪಕ್ಷೇತರರಾಗಿ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ದುರ್ಯೋಧನ ಐಹೊಳೆ ವಿರುದ್ಧ 2,400 ಮತಗಳ ಅಂತರದಲ್ಲಿ ಸೋತಿದ್ದರು. ಈಗ ಲೋಕಸಭಾ ಚುನಾವಣೆಗೆ ನಾಪಪತ್ರ ಸಲ್ಲಿಸಿದ್ದರಿಂದ ಕಾಂಗ್ರೆಸ್​ಗೆ

    ಚೂರು ಡಿಸ್ಟರ್ಬ್ ಆಗಬಹುದು ಎನ್ನಲಾಗುತ್ತಿದೆ. ಜೊಲ್ಲೆ ಅವರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಜಾರಕಿಹೊಳಿ ಕುಟುಂಬವು ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದು, ತಳಮಟ್ಟದಿಂದ ಪ್ರಚಾರ ಆರಂಭಿಸಿದೆ. ಗ್ರಾಪಂ, ತಾಪಂ, ಜಿಪಂ ಸದಸ್ಯರನ್ನು ಭೇಟಿ ಮಾಡಿ ಬೆಂಬಲಿಸುವಂತೆ ಕೋರುತ್ತಿದೆೆ. ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಪ್ರಿಯಾಂಕಾ ಪರ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ.

    ಬಂಡಾಯ ಶಮನ: ಕ್ಷೇತ್ರದಲ್ಲಿ ಬಿಜೆಪಿ ಬಂಡಾಯವನ್ನು ಬಿ.ಎಸ್. ಯಡಿಯೂರಪ್ಪ ಶಮನ ಮಾಡಿದ್ದಾರೆ. ಟಿಕೆಟ್ ಆಕಾಂಕ್ಷಿಗಳಾಗಿದ್ದವರು ಮುನಿಸು ಬಿಟ್ಟು ಅಭ್ಯರ್ಥಿಗೆ ಬೆಂಬಲಿಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಪರವಾದ ಅಲೆಯೂ ಇದೆ. ಕ್ಷೇತ್ರದಲ್ಲಿ ಸ್ಥಳೀಯವಾಗಿ ಶಾಸಕರನ್ನು ಆಯ್ಕೆ ಮಾಡುವ ಕಾಂಗ್ರೆಸ್​ನ ಸಾಂಪ್ರದಾಯಿಕ ಮತದಾರರು, ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುತ್ತಿದ್ದಾರೆ ಹಾಗೂ ಕಾಂಗ್ರೆಸ್​ನ ಸಾಂಪ್ರದಾಯಿಕ ಮತಗಳು ತನ್ನ ತೆಕ್ಕೆಗೆ ಬರಲಿವೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ.

    ಮತಗಳ ಲೆಕ್ಕಾಚಾರ: ಕ್ಷೇತ್ರದ ಒಟ್ಟು ಮತದಾರರು 17,32,346. ಕ್ಷೇತ್ರದಲ್ಲಿ 4.10 ಲಕ್ಷ ಲಿಂಗಾಯತ ಮತದಾರರಿದ್ದು ಯಾರೇ ಗೆಲ್ಲಬೇಕಾದರು ಸಮುದಾಯದ ಹೆಚ್ಚಿನ ಮತದಾರರು ಬೆನ್ನಿಗೆ ನಿಲ್ಲಬೇಕಿದೆ. ಉಳಿದಂತೆ ಕುರುಬ 1.70 ಲಕ್ಷ, ಎಸ್ಸಿ 1.65 ಲಕ್ಷ ಎಸ್ಟಿ 90 ಸಾವಿರ, ಮುಸ್ಲಿಂ 1.80 ಲಕ್ಷ, ಜೈನ 1.30 ಲಕ್ಷ, ಮರಾಠ 1.70 ಲಕ್ಷ, ಇತರ ವರ್ಗಗಳ 2.55 ಲಕ್ಷ ಮತದಾರರಿದ್ದಾರೆ.

    ಹುಕ್ಕೇರಿ ನಡೆ ನಿಗೂಢ: ವಿಧಾನ ಪರಿಷತ್ ಸದಸ್ಯರಾಗಿರುವ ಕಾಂಗ್ರೆಸ್​ನ ಪ್ರಕಾಶ ಹುಕ್ಕೇರಿ ಅವರಿಗೆ ಸ್ವ-ಕ್ಷೇತ್ರವಾದರೂ ಕಾಂಗ್ರೆಸ್​ಗೆ ಪೂರ್ಣ ಮನಸ್ಸಿನಿಂದ ಬೆಂಬಲಿಸುತ್ತಾರೋ ಇಲ್ಲವೋ ಎಂಬ ಗುಸುಗುಸು ಇದೆ. ಈ ಹಿಂದೆ ಸಚಿವರಾಗಿದ್ದ ಪ್ರಕಾಶ ಹುಕ್ಕೇರಿ ಅವರನ್ನು ರಾಜೀನಾಮೆ ಕೊಡಿಸಿ ಲೋಕಸಭಾ ಚುನಾವಣೆಗೆ ನಿಲ್ಲಿಸಲಾಗಿತ್ತು. ಹುಕ್ಕೇರಿ ಅವರು ಜಾರಕಿಹೊಳಿ ಪರವಾಗಿ ನಿಲ್ಲುತ್ತಾರೆಯೇ ಎನ್ನುವುದು ಪ್ರಶ್ನೆಯಾಗಿದೆ.

    ಅಣ್ಣಾಸಾಹೇಬ ಜೊಲ್ಲೆ ಪ್ಲಸ್-ಮೈನಸ್

    1. ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಗಳ ಮೂಲಕ ಜನರನ್ನು ತಲುಪಿರುವುದು.

    2. ಪತ್ನಿ ಶಶಿಕಲಾ ಶಾಸಕಿ ಹಾಗೂ ಮರಾಠಿ ಬಲ್ಲವರಾಗಿದ್ದು, ಕ್ಷೇತ್ರದಲ್ಲಿ ಹಿಡಿತ

    3. ಮೋದಿ ಅಲೆ, ಲಿಂಗಾಯತ ಸಮುದಾಯದ ಬೆಂಬಲ

    4. 5 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿರುವುದು ಹಾಗೂ ಗ್ಯಾರಂಟಿ ಯೋಜನೆ

    5. ಸಂಸದರು ನಿಪ್ಪಾಣಿಗೆ ಸೀಮಿತ ಎಂಬುದರ ಜತೆಗೆ ಪಕ್ಷದಲ್ಲಿ ಕೆಲ ಒಡಕು

    ಪ್ರಿಯಾಂಕಾ ಜಾರಕಿಹೊಳಿ ಪ್ಲಸ್-ಮೈನಸ್

    1. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು

    2. ತಂದೆ ಸತೀಶ ಜಾರಕಿಹೊಳಿ ಸಚಿವರಾಗಿರುವುದು

    3. ಶಾಸಕ ಲಕ್ಷ್ಮಣ ಸವದಿ ಬಿರುಸಿನ ಪ್ರಚಾರ

    4. ಸ್ಥಳೀಯ ಮಟ್ಟದಲ್ಲಿ ಅಭಿವೃದ್ಧಿ ಕೊರತೆ, ಗ್ಯಾರಂಟಿಗಳಿಂದ ಇತರ ಯೋಜನೆಗಳಿಗೆ ಅನುದಾನ ಸ್ಥಗಿತ

    5. ಬರ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಹಾಗೂ ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಿಕರ್ ಸ್ಪರ್ಧೆ

    ಕೇಂದ್ರ ಸರ್ಕಾರದ ದುರಾಡಳಿತದಿಂದ ನೊಂದ ಜನರಿಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ನೆಮ್ಮದಿ ದೊರಕಿದೆ. ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುತ್ತೇನೆ. ಸುವರ್ಣ ಚಿಕ್ಕೋಡಿ ಕನಸು ನನಸು ಮಾಡುತ್ತೇನೆ.

    | ಪ್ರಿಯಾಂಕಾ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿ

    ಚಿಕ್ಕೋಡಿ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ 8,810 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಬೇರೆ ಬೇರೆ ಪಕ್ಷದ ಕಾರ್ಯಕರ್ತರು ಬಿಜೆಪಿ ಸೇರ್ಪಡೆ ಆಗುತ್ತಿರುವುದು ಮತ್ತಷ್ಟು ಶಕ್ತಿ ಬಂದಿದೆ. ಕೇಂದ್ರದಲ್ಲಿ ಮೋದಿ ಅವರು 3ನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಗ್ಯಾರಂಟಿ.

    | ಅಣ್ಣಾಸಾಹೇಬ ಜೊಲ್ಲೆ,  ಬಿಜೆಪಿ ಅಭ್ಯರ್ಥಿ

    ಲೋಕಸಮರ: ಚುನಾವಣಾ ಆಯೋಗದಿಂದ ಈವರೆಗೆ ಒಟ್ಟು 4,650 ರೂ. ಕೋಟಿಗೂ ಅಧಿಕ ನಗದು, ವಸ್ತುಗಳು ಜಪ್ತಿ

    ನಟ ಶಿವರಾಜ್​ಕುಮಾರ್​ ಆಸ್ತಿ ಮೊತ್ತ ಇಷ್ಟೊಂದಾ? ಸ್ಟಾರ್ ನಟನ ಆಸ್ತಿ ಮೌಲ್ಯ, ಸಾಲದ ಬಗ್ಗೆ ಇಲ್ಲಿದೆ ಮಾಹಿತಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts