More

    ರಸ್ತೆ ಉಬ್ಬಿನಿಂದ ಪತ್ತೆಯಾದ ಕೊಲೆ

    ಅದೊಂದು ಹೆದ್ದಾರಿ. ಸಮಯ ರಾತ್ರಿ 2 ಗಂಟೆ. ರಸ್ತೆಯಲ್ಲಿ ಒಂದೋ ಎರಡೋ ಕಾರುಗಳು ಕಂಡುಬರುತ್ತಿದ್ದವು. ಅಂತಹ ಒಂದು ಕಾರಿನಲ್ಲಿ ಕುಟುಂಬವೊಂದು ತಮ್ಮೂರಿಗೆ ಹೊರಟಿತ್ತು. ಆ ಕಾರು ಪಟ್ಟಣವೊಂದನ್ನು ಅದೇ ತಾನೇ ಪ್ರವೇಶಿಸುವ ವೇಳೆಗೆ ಕಾರಿನ ಚಾಲಕನಿಗೆ ಎದುರಿಗೆ ಹೋಗುತ್ತಿದ್ದ ಸ್ಕೂಟರ್ ಕಂಡಿತು. ಅದರಲ್ಲಿ ಮೂರು ಜನರಿದ್ದರು. ನಡುರಾತ್ರಿಯಲ್ಲಿ ಇವರೆಲ್ಲಿಗೆ ಹೋಗುತ್ತಿದ್ದಾರೆ ಎಂದು ಕಾರಿನ ಚಾಲಕ ಯೋಚಿಸುತ್ತಿರುವಾಗಲೇ ವೇಗವಾಗಿ ಹೋಗುತ್ತಿದ್ದ ಸ್ಕೂಟರ್ ರಸ್ತೆಯ ಮೇಲಿದ್ದ ಎತ್ತರದ ಸ್ಪೀಡ್​ಬ್ರೇಕರ್ ದಾಟುವಾಗ ವಾಹನವು ಚಾಲಕನ ನಿಯಂತ್ರಣ ತಪ್ಪಿ ಅದರ ಮೇಲಿದ್ದ ಮೂರೂ ಜನರು ಕೆಳಗೆ ಬಿದ್ದರು.

    ರಸ್ತೆ ಉಬ್ಬಿನಿಂದ ಪತ್ತೆಯಾದ ಕೊಲೆಇದನ್ನು ಕಂಡ ಕಾರಿನ ಚಾಲಕ ಗಾಯಾಳುಗಳ ಸಹಾಯಕ್ಕೆ ಧಾವಿಸಿದ. ಬಿದ್ದಿದ್ದವರಲ್ಲಿ ಇಬ್ಬರು ಯುವಕರು ಹಾಗೂ ಒಬ್ಬ ಯುವತಿಯಿದ್ದಳು. ಅವರ ಬಳಿ ಕಾರಿನ ಚಾಲಕ ಸಹಾಯಕ್ಕೆ ಹೋಗುತ್ತಿದ್ದಂತೆ ಗಾಬರಿಯಾದಂತೆ ಕಂಡ ಒಬ್ಬ ಯುವಕ ತಮಗೇನೂ ಆಗಿಲ್ಲ ಎಂದು ಅವನಿಗೆ ಹೇಳಿ ಮುಂದೆ ಸಾಗಲು ತಿಳಿಸಿದ. ಚಾಲಕ ಅವರತ್ತ ಕಣ್ಣುಹಾಯಿಸಿದಾಗ ಇಬ್ಬರೂ ಯುವಕರಿಗೆ ಸಣ್ಣಪುಟ್ಟ ಗಾಯಗಳಾದಂತೆ ಕಂಡವು. ಆದರೆ ಆ ಯುವತಿ ತಲೆಯಿಂದ ರಕ್ತ ಸೋರುತ್ತಿತ್ತು.

    ಗಾಯಾಳುಗಳು ಸಹಾಯ ಅಪೇಕ್ಷಿಸದ ಕಾರಣ ಕಾರಿನ ಚಾಲಕ ಮುಂದೆ ಹೊರಟ. ಅರ್ಧ ಕಿ.ಮೀ. ನಂತರ ಆತ ರಸ್ತೆಯಲ್ಲಿ ಕಂಡ ಒಬ್ಬ ಬೀಟ್ ಪೊಲೀಸ್ ಅಧಿಕಾರಿಗೆ ರಸ್ತೆಯಲ್ಲಿ ಸ್ಕೂಟರ್ ಅಪಘಾತವಾಗಿರುವ ಮಾಹಿತಿ ಕೊಟ್ಟು ಮೂರು ಮಂದಿ ಗಾಯಗೊಂಡಿರುವುದಾಗಿಯೂ ಅವರಲ್ಲಿ ಒಬ್ಬ ಮಹಿಳೆಗೆ ಗಂಭೀರ ಗಾಯಗಳಾಗಿರುವಂತೆ ಕಾಣುತ್ತಿದೆಯೆಂದು ತಿಳಿಸಿದ.

    ಪೊಲೀಸ್ ನಿಯಂತ್ರಣ ಕೊಠಡಿಗೆ ಈ ಬಗ್ಗೆ ಬೀಟ್ ಪಿ.ಸಿ. ವೈರ್​ಲೆಸ್ ಸಂದೇಶ ನೀಡಿದ. ಸ್ಕೂಟರ್ ಬಿದ್ದಿದ್ದ ಸ್ಥಳಕ್ಕೆ ಪೊಲೀಸ್ ಗಸ್ತು ವಾಹನ ಬಂದಿತು. ಸ್ಕೂಟರ್​ನ ಮುಂದಿನ ಚಕ್ರಕ್ಕೆ ಹಾನಿಯಾಗಿ ಅದು ಮುಂದೆ ಚಲಿಸುವಂತಿರಲಿಲ್ಲ. ರಸ್ತೆಯ ಮೇಲೆ ಮಹಿಳೆ ಬಿದ್ದಿದ್ದು ಅವಳ ತಲೆಯಿಂದ ರಕ್ತ ಸೋರುತ್ತಿತ್ತು. ಇಬ್ಬರು ಯುವಕರ ಮೈಕೈಗೆ ತರಚಿದ ಗಾಯಗಳಾಗಿದ್ದವು. ಕೂಡಲೇ ಸ್ಥಳಕ್ಕೆ ಆಂಬ್ಯುಲೆನ್ಸ್ ಕರೆಸಿದ ಪೊಲೀಸರು ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದರು. ಆಸ್ಪತ್ರೆಯಲ್ಲಿದ್ದ ವೈದ್ಯರು ಮಹಿಳೆ ಸತ್ತಿರುವುದಾಗಿ ತಿಳಿಸಿ, ಗಾಯಗೊಂಡಿದ್ದ ಯುವಕರಿಗೆ ಪ್ರಥಮ ಚಿಕಿತ್ಸೆ ನೀಡಿದರು.

    ಮೃತಳ ಹೆಸರು ಸೌಮ್ಯ, ಅವಳಿಗೆ 22 ವರ್ಷ ವಯಸ್ಸಾಗಿತ್ತೆಂದು ತೀರಾ ಗಾಬರಿಗೊಂಡಿದ್ದ ಗಾಯಾಳುಗಳು ತಿಳಿಸಿ ತಮ್ಮ ಹೆಸರುಗಳನ್ನು ಕೃಷ್ಣ ಮತ್ತು ಪೆರುಮಾಳ್ ಎಂದರು. ತಾವು ಮೂವರೂ ಒಂದೇ ಕುಟುಂಬಕ್ಕೆ ಸೇರಿರುವುದಾಗಿ ತಿಳಿಸಿದ ಅವರು ಕುಟುಂಬದಲ್ಲಿ ಸಾವಾಗಿದ್ದ ಕಾರಣ ತುರ್ತಾಗಿ ಮುಂದಿನ ಪಟ್ಟಣಕ್ಕೆ ಹೋಗುತ್ತಿದ್ದುದಾಗಿ ತಿಳಿಸಿದರು.

    ಸ್ಕೂಟರ್ ಚಾಲಕ ಅತಿಯಾದ ವೇಗ ಮತ್ತು ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸಿ ಸಾವಿಗೆ ಕಾರಣವಾದ ಆರೋಪದ ಮೇಲೆ ಚಾಲಕ ಕೃಷ್ಣನ ವಿರುದ್ಧ ದೂರು ದಾಖಲಿಸಿ ಇಬ್ಬರೂ ಯುವಕರನ್ನು ಆ ರಾತ್ರಿ ಪೊಲೀಸ್ ಠಾಣೆಯಲ್ಲಿಯೇ ಇರುವಂತೆ ಸೂಚಿಸಿದರು. ಬೆಳಗಾದ ನಂತರ ವೈದ್ಯರು ಮೃತ ಸೌಮ್ಯಳ ದೇಹದ ಮೇಲೆ ಮರಣೋತ್ತರ ಪರೀಕ್ಷೆ ನಡೆಸಿದರು. ತನಿಖಾಧಿಕಾರಿ ಆಸ್ಪತ್ರೆಗೆ ಹೋದಾಗ, ‘ಈ ಮಹಿಳೆ ಅಪಘಾತದಲ್ಲಿ ಸತ್ತಿಲ್ಲ. ಇವಳ ಕತ್ತನ್ನು ಹಿಸುಕಿ ಕೊಲೆಮಾಡಲಾಗಿದೆ. ಅವಳ ದೇಹದ ಮೇಲಿನ ತರಚಿದ ಗಾಯಗಳು ಅವಳ ಸಾವಿನ ನಂತರ ಆಗಿರುವುದು. ಈಕೆ ಸತ್ತು 40 ಗಂಟೆಗಳು ಮೀರಿರುವಂತೆ ಕಂಡುಬರುತ್ತಿದೆ’ ಎಂದು ವೈದ್ಯರು ತಿಳಿಸಿದರು. ತನಿಖಾಧಿಕಾರಿ ಪೊಲೀಸ್ ಠಾಣೆಗೆ ಮರಳಿ ಅಲ್ಲಿದ್ದ ಇಬ್ಬರು ಯುವಕರನ್ನು ಮೊದಲಿಗೆ ಪ್ರತ್ಯೇಕವಾಗಿ ಆನಂತರ ಒಟ್ಟಿಗೆ ಪ್ರಶ್ನೆ ಮಾಡಿದರು.

    ಆಗ ಪೆರುಮಾಳ್ ಹೀಗೆಂದ:
    ‘ನಾನು ಮತ್ತು ನನ್ನ ಕುಟುಂಬ 10 ವರ್ಷಗಳ ಹಿಂದೆ ತಮಿಳುನಾಡಿನಿಂದ ಕರ್ನಾಟಕಕ್ಕೆ ವಲಸೆ ಬಂದು ರಾಜ್ಯ ರಾಜಧಾನಿಯಲ್ಲಿ ವಾಸಿಸುತ್ತಿದ್ದೇವೆ. ಕೃಷ್ಣ ನನ್ನ ಸೋದರಮಾವನ ಮಗನಾಗಿದ್ದು ನಾವಿಬ್ಬರೂ ಗಾರೆ ಕೆಲಸ ಮಾಡಿಕೊಂಡು ಜೀವಿಸುತ್ತಿದ್ದೇವೆ. ನನ್ನಕ್ಕ ದುರ್ಗಾ ಮತ್ತವಳ ಪತಿ ನಮ್ಮ ಬಡಾವಣೆಯ ಒಂದು ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ. ಅಲ್ಲಿ ವೇಶ್ಯೆಯಾಗಿ ಕೆಲಸ ಮಾಡಲು ಒಂದು ವರ್ಷದ ಹಿಂದೆ ಸೌಮ್ಯ ಬಂದಿದ್ದಳು. ಅವಳು ನನ್ನ ಅಕ್ಕನ ಮನೆಯಲ್ಲಿಯೇ ವಾಸ ಮಾಡುತ್ತಿದ್ದಳು. ಕೆಲವು ವಾರಗಳ ಹಿಂದೆ ಅಕ್ಕ ಮತ್ತು ಭಾವ ಇಬ್ಬರೂ ಊರಿಗೆ ಹೋಗಿದ್ದ ಸಮಯದಲ್ಲಿ ಸೌಮ್ಯಳು ಅಕ್ಕನ ಕೆಲವು ಒಡವೆಗಳನ್ನು ಕದ್ದು ಪರಾರಿಯಾದಳು. ಅಕ್ಕ ಮನೆಗೆ ವಾಪಸಾದ ನಂತರ ಕಳ್ಳತನ ಬೆಳಕಿಗೆ ಬಂದಿತು. ಆಕೆ ನನ್ನ ಭಾವನೊಡನೆ ಸೌಮ್ಯಳಿದ್ದ ಊರಿಗೆ ಹೋಗಿ ಅವಳನ್ನು ಬಲವಂತವಾಗಿ ನಿನ್ನೆ ಸಂಜೆ ತಮ್ಮ ಮನೆಗೆ ಕರೆದುಕೊಂಡು ಬಂದಳು. ಕಳ್ಳತನ ಮಾಡಿದ ವಸ್ತುಗಳನ್ನು ಮರಳಿಸಲು ಸೌಮ್ಯಳಿಗೆ ತಾಕೀತು ಮಾಡಿದಳು.

    ವಿಚಾರಣೆ ಸಮಯದಲ್ಲಿ ಸೌಮ್ಯ ತಾನು ಕಳ್ಳತನವನ್ನೇ ಮಾಡಿಲ್ಲ ಎಂದು ಸಾಧಿಸಿದಳು. ಕೋಪಗೊಂಡ ನನ್ನ ಭಾವ ಸೌಮ್ಯಳನ್ನು ಥಳಿಸತೊಡಗಿದ. ಆದರೂ ಅವಳು ತಪ್ಪನ್ನು ಒಪ್ಪಿಕೊಳ್ಳದಿದ್ದಾಗ ಸಿಟ್ಟಿಗೆದ್ದು ಅವಳ ಕುತ್ತಿಗೆ ಹಿಸುಕಿದ. ಆಕೆ ಉಸಿರುಗಟ್ಟಿ ಸತ್ತು ಕೆಳಗೆ ಬಿದ್ದಳು. ಅಕ್ಕ, ಭಾವನಿಗೆ ಮುಂದೇನು ಮಾಡುವುದು ಎಂದು ತೋಚಲಿಲ್ಲ. ನನ್ನನ್ನು ಅವರ ಮನೆಗೆ ಕರೆಸಿ ನಡೆದ ವಿಷಯ ತಿಳಿಸಿದರು. ಆಗ ನಾನು ಕೃಷ್ಣನಿಗೆ ಅಲ್ಲಿಗೆ ಬರಹೇಳಿದೆ. ಅವನು ಬಂದ ನಂತರ ನಾವು ನಾಲ್ಕೂ ಜನರು ಸೌಮ್ಯಳ ಸಾವನ್ನು ಹೇಗೆ ಇತರರಿಂದ ಮುಚ್ಚಿಡುವುದು ಮತ್ತು ಅವಳ ಶವವನ್ನು ಯಾರಿಗೂ ತಿಳಿಯದ ಹಾಗೆ ಹೇಗೆ ವಿಲೇವಾರಿ ಮಾಡುವುದು ಎಂದು ರ್ಚಚಿಸತೊಡಗಿದವು.

    ಅಕ್ಕ, ನೀನು ಯೋಚನೆ ಮಾಡಬೇಡ. ಇಲ್ಲಿಂದ 50- 60 ಕಿ.ಮೀ. ದೂರದಲ್ಲಿ ಕಾಡಿದೆ. ಈ ಶವವನ್ನು ಅಲ್ಲಿಯೇ ಎಸೆದು ಅದರ ಮೇಲೆ ಪೆಟ್ರೋಲ್ ಸುರಿದು ಸುಟ್ಟು ಬರುತ್ತೇವೆ. ಸೌಮ್ಯ ಸತ್ತ ಬಗ್ಗೆ ಯಾರಿಗೂ ತಿಳಿಯುವುದಿಲ್ಲ. ಅವಳನ್ನು ವಿಚಾರಿಸಿಕೊಂಡು ಯಾರಾದರೂ ಬಂದರೆ ಆಕೆ ನಿನ್ನ ಮನೆಯಿಂದ ಓಡಿಹೋಗಿದ್ದಾಳೆಂದು ಹೇಳು, ಎಂದ ಕೃಷ್ಣ. ಅಷ್ಟು ದೂರ ಹೇಗೆ ಹೆಣವನ್ನು ಸಾಗಿಸುತ್ತೀರಿ? ಎಂದು ಅಕ್ಕ ಕೇಳಿದಾಗ ಸ್ಕೂಟರ್​ನಲ್ಲಿ ಸಾಗಿಸುತ್ತೇನೆ ಎಂದಾತ ಉತ್ತರಿಸಿದ. ತನ್ನ ಸಹಾಯಕ್ಕಾಗಿ ನಾನೂ ಬರಬೇಕೆಂದು ಕೃಷ್ಣ ಕೇಳಿದಾಗ ಒಪ್ಪಿದೆ.

    ನಂತರ ನಾವಿಬ್ಬರೂ ಅಕ್ಕ ಭಾವನ ಮನೆಯಲ್ಲಿ ಮದ್ಯಪಾನ ಮಾಡಿ ಊಟ ಮಾಡಿದೆವು. ಮಧ್ಯರಾತ್ರಿ ನಂತರ ಕೃಷ್ಣ ಸ್ಕೂಟರ್​ನ ಚಾಲಕನ ಸೀಟಿನಲ್ಲಿ ಕುಳಿತ. ನಾವು ಸೌಮ್ಯಳ ಶವವನ್ನು ಅವನ ಹಿಂದೆ ಕೂರಿಸಿದೆವು. ನಂತರ ನಾನು ಶವದ ಹಿಂದೆ ಕುಳಿತು ಅದು ಕೆಳಗೆ ಬೀಳದಂತೆ ಬಿಗಿಯಾಗಿ ಹಿಡಿದುಕೊಂಡೆ. ಹೆದ್ದಾರಿಯಲ್ಲಿ ಹೊರಟೆವು. ರಸ್ತೆ ನಿರ್ಜನವಾಗಿತ್ತು. ಆ ಕಾರಣದಿಂದಲೋ ಅಥವಾ ಮದ್ಯಪಾನದ ಪ್ರಭಾವದಿಂದಲೋ ಕೃಷ್ಣ ಸ್ಪೀಡಾಗಿ ಸ್ಕೂಟರ್ ಚಲಾಯಿಸುತ್ತಿದ್ದ. ನಾವು ಈ ಪಟ್ಟಣವನ್ನು ಪ್ರವೇಶ ಮಾಡಿದ ನಂತರ ಮುಂದಿದ್ದ ರಸ್ತೆಯ ಉಬ್ಬು ಸರಿಯಾಗಿ ಕಾಣದೇ ಗಾಡಿಯ ಸ್ಪೀಡನ್ನು ತಗ್ಗಿಸದೇ ಮುನ್ನುಗ್ಗಿದ ಕೃಷ್ಣ. ಆಗ ಸ್ಕೂಟರ್ ಆಯತಪ್ಪಿ ಕೆಳಗೆ ಬಿದ್ದಿತು. ಶವದ ಸಹಿತ ನಾವಿಬ್ಬರೂ ಕೆಳಗೆ ಬಿದ್ದೆವು. ಇದನ್ನು ನಮ್ಮ ಹಿಂದಿನಿಂದ ಬರುತ್ತಿದ್ದ ಕಾರಿನ ಚಾಲಕ ನೋಡಿ ಸಹಾಯಕ್ಕೆ ಬಂದ. ‘ನಮಗೇನಾಗಿಲ್ಲ, ಮುಂದೆ ಹೋಗು’ ಎಂದು ಅವನಿಗೆ ಹೇಳಿದರೂ ಆತ ನಿಮಗೆ ತಿಳಿಸಿದ. ನಾವಿಬ್ಬರೂ ಈ ಕೊಲೆ ಮಾಡಿಲ್ಲ. ಶವ ಸಾಗಿಸುವ ಕೆಲಸ ಮಾಡಿದ್ದೇವೆ’.

    ಮುಂದೆ ಪೆರುಮಾಳ್​ನ ಅಕ್ಕ ದುರ್ಗಾಳ ಮನೆಗೆ ಹೋದ ಪೊಲೀಸರು ಅವಳನ್ನು ಪ್ರಶ್ನಿಸಿದಾಗ ಆಕೆ ತನ್ನ ಸೋದರ ಹೇಳಿದ್ದ ವಿಷಯವನ್ನು ದೃಢೀಕರಿಸಿದಳು. ಆಕೆ ಮತ್ತಾಕೆಯ ಗಂಡನನ್ನು ಬಂಧಿಸಿ ಕೊಲೆ ಮತ್ತು ಸಾಕ್ಷ್ಯನಾಶದ ಪ್ರಕರಣವನ್ನು ನಾಲ್ಕು ಆರೋಪಿಗಳ ವಿರುದ್ಧ ದಾಖಲಿಸಲಾಯಿತು. ಸೌಮ್ಯಳ ಕೊಲೆಯಾಗಿದ್ದನ್ನು ಯಾರೂ ಕಂಡಿಲ್ಲವಾದ್ದರಿಂದ ಈ ಪ್ರಕರಣವನ್ನು ನ್ಯಾಯಾಲಯದಲ್ಲಿ ಸಾಂರ್ದಭಿಕ ಸಾಕ್ಷ್ಯಗಳ ಮೂಲಕವೇ ಸಾಬೀತುಪಡಿಸಬೇಕಾಗಿದೆ. ಸೌಮ್ಯಳ ಸಾವು ಹೇಗಾಯಿತು, ಏಕಾಯಿತು ಎನ್ನುವುದನ್ನು ನ್ಯಾಯಾಲಯ ಹೇಗೆ ನಿರ್ಧರಿಸುತ್ತದೆ, ಪ್ರಕರಣ ಮುಂದೆ ಯಾವ ತಿರುವುಗಳನ್ನು ಪಡೆಯುತ್ತದೆ ಎನ್ನುವುದನ್ನು ಕುತೂಹಲದಿಂದ ಗಮನಿಸಬೇಕಾಗಿದೆ. ಒಂದು ವೇಳೆ ರಸ್ತೆ ಉಬ್ಬಿನ ಮೇಲೆ ಸ್ಕೂಟರ್ ಕೆಳಗೆ ಬೀಳದಿದ್ದರೆ ಮುಂದೇನಾಗಬಹುದಾಗಿತ್ತು ಎನ್ನುವುದೂ ತಿಳಿಯದು.

    ‘ಘಟ್ಟದ ಬೆಟ್ಟದ ಇಟ್ಟೆಡೆಯಿರುಕಿನಲಿ ಬಿಟ್ಟೋಡಿ ಬಾಳ್ವೆನೆನಬೇಡ ವಿಧಿ ಕಾಣದಿಟ್ಟೆಡೆಗಳಿಲ್ಲ ಸರ್ವಜ್ಞ’ ಎಂಬಂತೆ ಭವಿಷ್ಯದಲ್ಲಿ ಯಾವ ತಿರುವುಗಳು ಬರುತ್ತವೆ ಎಂದು ತಿಳಿಯಲು ಯಾರಿಗಾದರೂ ಸಾಧ್ಯವೇ?

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    25 ಕೋಟಿ ಮೌಲ್ಯದ ಲಕ್ಷುರಿ ಮನೆ ಹೊಂದಿರುವ ಈ ಯೂಟ್ಯೂಬರ್​ ಆದಾಯ ಕೇಳಿದ್ರೆ ದಂಗಾಗ್ತೀರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts