More

    ಸೇತುವೆ ದುರಸ್ತಿಗೆ ಬಾರದ ಮುಹೂರ್ತ

    ಹಳಿಯಾಳ: ಖಾನಾಪುರ-ತಾಳಗುಪ್ಪ ರಾಜ್ಯ ಹೆದ್ದಾರಿಯ ದುಸಗಿ ಗ್ರಾಮದ ಬಳಿಯ ಸೇತುವೆ ಹಾಳಾಗಿ ಮೂರು ವರ್ಷವಾದರೂ ದುರಸ್ತಿಗೆ ಮುಹೂರ್ತ ಕೂಡಿ ಬರುತ್ತಿಲ್ಲ.
    ಖಾನಾಪುರ-ತಾಳಗುಪ್ಪ ರಾಜ್ಯ ಹೆದ್ದಾರಿಯ ರಸ್ತೆ ಕಾಮಗಾರಿ ವೇಳೆ ದುಸಗಿ ಬಳಿ ಇರುವ ಹಳೆಯ ಸೇತುವೆಯ ಪಕ್ಕದಲ್ಲಿಯೇ 2003ರಲ್ಲಿ ಹೊಸ ಸೇತುವೆಯನ್ನು ನಿರ್ವಿುಸಲಾಗಿತ್ತು. 2019ರ ಆಗಸ್ಟ್ ತಿಂಗಳಲ್ಲಿ ತಟ್ಟಿಹಳ್ಳ ಪ್ರವಾಹಕ್ಕೆ ಈ ಹೊಸ ಸೇತುವೆ ಹಾನಿಗೊಳಗಾಗಿತ್ತು.
    ವಾಲಿದ ಸೇತುವೆ ಕಂಬ: ಪ್ರವಾಹದ ತೀವ್ರತೆಗೆ ಸೇತುವೆಗೆ ಸಂಪರ್ಕ ಕಲ್ಪಿಸುವ ಡಾಂಬರ್ ರಸ್ತೆ ಕಿತ್ತು ಐವತ್ತು ಮೀಟರ್ ದೂರ ಹೋಗಿ ಬಿದ್ದಿದ್ದರಿಂದ ದುಸಗಿ ಸೇತುವೆಯ ಮೇಲಿಂದ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಪಕ್ಕದ ಹಳೆಯ ಸೇತುವೆಯ ಮೇಲಿಂದ ಸಂಚಾರವನ್ನು ಆರಂಭಿಸಲಾಗಿತ್ತು.
    ತಟ್ಟಿಹಳ್ಳದಲ್ಲಿ ನೀರಿನ ಪ್ರವಾಹ ಇಳಿಕೆಯಾದ ಮೇಲೆ ಈ ದುಸಗಿ ಸೇತುವೆಯ ಕಂಬದ ಅಡಿಯಲ್ಲಿನ ಮಣ್ಣು ಕುಸಿದು ಕಂಬ ವಾಲಿರುವುದು ಲೋಕೋಪಯೋಗಿ ಇಲಾಖೆಯ ಗಮನಕ್ಕೆ ಬಂದಿತು. ತಕ್ಷಣ ಇಲಾಖೆಯವರು ಸೇತುವೆ ನಿರ್ಮಾಣ ಮತ್ತು ದುರಸ್ತಿ ಪರಿಣತರನ್ನು ಕರೆತಂದು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಸೇತುವೆ ರಿಪೇರಿ ಯೋಜನೆಯನ್ನು ರೂಪಿಸಿದರು.
    ಜಾಕ್-ಕ್ರೇನ್ ಮೂಲಕ ರಿಪೇರಿ: ಜಾಕ್ ಮೂಲಕ ಸೇತುವೆಯನ್ನು ತುಸು ಎತ್ತಿ ವಾಲಿರುವ ಕಂಬವನ್ನು ಕ್ರೇನ್ ಹಾಗೂ ಹಗ್ಗ ಬಳಸಿ ಎಳೆದು ನೆರವಾಗಿ ನಿಲ್ಲಿಸುವ ಯೋಜನೆ ಇದಾಗಿತ್ತು. ಆದರೆ, 2020 ಮಾರ್ಚ ತಿಂಗಳಲ್ಲಿ ಲಾಕ್ ಡೌನ್ ಆರಂಭವಾಗಿದ್ದರಿಂದ ಈ ಕಾಮಗಾರಿ ನನೆಗುದಿಗೆ ಬಿದ್ದಿತ್ತು.
    ಅಪಾಯಕಾರಿ ಯೋಜನೆ: 2020ರಲ್ಲಿ ನವೆಂಬರ್ ಡಿಸೆಂಬರ್ ತಿಂಗಳಲ್ಲಿ ತಟ್ಟಿಹಳ್ಳದಲ್ಲಿ ನೀರಿನ ಹರಿವು ಕಡಿಮೆಯಾದ ನಂತರ ಬೆಂಗಳೂರು ಹಾಗೂ ಹೈದ್ರಾಬಾದ್ ಮೂಲದ ಸೇತುವೆ ನಿರ್ಮಾಣ ಮತ್ತು ದುರಸ್ತಿ ಪರಿಣತರನ್ನು ಕರೆಯಿಸಿ ಸೇತುವೆಯ ಗುಣಮಟ್ಟ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸೇತುವೆಯ ಇನ್ನೊಂದು ಕಂಬವೂ ಶಿಥಿಲಗೊಂಡಿರುವುದು ಬೆಳಕಿಗೆ ಬಂದಿತು.
    ಸೇತುವೆ ಪರಿಶೀಲನೆಗೆ ಬಂದ ತಂತ್ರಜ್ಞರು ಕ್ರೇನ್ ಹಾಗೂ ಹಗ್ಗ ಬಳಸಿ ಕಂಬವನ್ನು ನೆರವಾಗಿ ನಿಲ್ಲಿಸುವ ಕಾರ್ಯವು ಅಪಾಯಕಾರಿಯಾಗಲಿದ್ದು, ಇದರಿಂದ ಸೇತುವೆಗೆ ದಕ್ಕೆಯಾಗಲಿದೆ ಎಂದು ಎಚ್ಚರಿಸಿದ್ದರಿಂದ 2019ರಲ್ಲಿ ರೂಪಿಸಿದ ಅಪಾಯಕಾರಿ ಯೋಜನೆಯನ್ನು ಇಲಾಖೆಯು ಕೈಬಿಟ್ಟಿತು.
    ಹೊಸ ಯೋಜನೆ: ಈಗ ಬೆಂಗಳೂರಿನ ಸೇತುವೆ ಪುನಶ್ಚೇತನ ತಂತ್ರಜ್ಞರು ಸೇತುವೆ ದುರಸ್ತಿಗೆ ನೂತನ ನೀಲಿನಕ್ಷೆಯನ್ನು ಸಿದ್ಧಪಡಿಸಿದ್ದಾರೆ. ಈಗ ಹೊಸ ಡಿಸೈನ್ ಆಧರಿಸಿ 80 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ.
    ಈ ವರ್ಷ ಮಳೆಗಾಲದ ನಂತರ ತಟ್ಟಿಹಳ್ಳದಲ್ಲಿ ನೀರಿನ ಪ್ರವಾಹ ಕಡಿಮೆಯಾದ ನಂತರ ಕಾಮಗಾರಿ ಆರಂಭವಾಗುವ ಸಾಧ್ಯತೆಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts