More

    ಶಿಮುಲ್‌ನಿಂದ ಹೈನು ಉತ್ಪಾದಕರಿಗೆ ಬರೆ: ಹೈನುಗಾರರ ಪ್ರತಿಭಟನೆ

    ಶಿವಮೊಗ್ಗ: ಹಾಲು ಉತ್ಪಾದಕರಿಗೆ ನೀಡಲಾಗುವ ಹಾಲಿನ ದರ ಕಡಿತಗೊಳಿಸಿರುವುದು ಹಾಗೂ ಪಶು ಆಹಾರ ದರ ಹೆಚ್ಚಳ ಮಾಡಿರುವುದನ್ನು ಖಂಡಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೈನುಗಾರರು ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಮಂಗಳವಾರ ಮಾಚೇನಹಳ್ಳಿಯ ಶಿಮುಲ್ ಎದುರು ಒಂದು ತಾಸಿಗೂ ಅಧಿಕ ಸಮಯ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

    ಹೈನು ಉತ್ಪಾದಕರ ಆಕ್ರೋಶಕ್ಕೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಪ್ರತಿಭಟನಾನಿರತ ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು. ಶಿಮುಲ್ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿ ರಸ್ತೆಗೆ ಹಾಲು ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
    ಕಳೆದ ವರ್ಷ ಆಗಸ್ಟ್‌ನಲ್ಲಿ ಹಾಲು ಖರೀದಿ ದರ ಲೀಟರ್‌ಗೆ ಮೂರು ರೂ. ಏರಿಕೆ ಮಾಡಲಾಗಿತ್ತು. ಆಗ ಪ್ರತಿ ಲೀಟರ್‌ಗೆ 33.50 ರೂ. ಹೈನುಗಾರರಿಗೆ ದೊರೆಯುತ್ತಿತ್ತು. ಬಳಿಕ ಅಕ್ಟೋಬರ್‌ನಲ್ಲಿ ಲೀಟರ್‌ಗೆ 1.25 ರೂ. ಹಾಗೂ ಇತ್ತೀಚೆಗೆ ಎರಡು ರೂ. ಕಡಿಮೆ ಮಾಡಲಾಗಿದೆ. ಎರಡು ರೂ. ಹೆಚ್ಚಳ ಮಾಡಿ 8 ತಿಂಗಳಲ್ಲಿ 3.70 ರೂ. ಕಡಿತಗೊಳಿಸಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
    ಒಂದು ಕಡೆ ಹಾಲು ಖರೀದಿ ದರ ಕಡಿತಗೊಳಿಸಿ ಹೈನುಗಾರರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿ ಇನ್ನೊಂದೆಡೆ ಪಶು ಆಹಾರದ ಬೆಲೆ ಹೆಚ್ಚಿಸಿ ಗಾಯದ ಮೇಲೆ ಬರೆ ಎಳೆಯಲಾಗಿದೆ. ಹಾಲು ಉತ್ಪಾದನೆಗೆ ತಗುಲುವ ವೆಚ್ಚಕ್ಕೂ ಶಿಮುಲ್‌ನಿಂದ ನೀಡುವ ದರಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಕೂಡಲೇ ಈ ಅಸಮಾನತೆ ಸರಿಪಡಿಸಬೇಕೆಂದು ಆಗ್ರಹಿಸಿದರು.
    ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಶಿಮುಲ್ ಆಡಳಿತ ಮಂಡಳಿ ನಮಗೆ ಸ್ಪಂದಿಸದಿದ್ದರೆ ಪ್ರತಿ ಗ್ರಾಮದಲ್ಲೂ ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಹೈನುಗಾರರು ಎಚ್ಚರಿಸಿದರು. ಶಿಮುಲ್ ಅಧ್ಯಕ್ಷ ಎನ್.ಎಚ್.ಶ್ರೀಪಾದ ರಾವ್ ಸ್ಥಳಕ್ಕೆ ಬಂದು ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಸ್ಥಗಿತಗೊಳಿಸಿದರು.
    ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಕೆ.ಸಿ.ಸದಾಶಿವಪ್ಪ, ಕಾರ್ಯದರ್ಶಿ ಪ್ರವೀಣ್ ಪಟೇಲ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಭೀಮರಾವ್, ಪ್ರಮುಖರಾದ ಗಂಗಾಧರ ಕಾಸರಗೋಡು, ಸುಧಾ ಪರಮೇಶ್ವರಪ್ಪ, ಅಮೃತಾ ಚಳ್ಳಕೆರೆ ಮುಂತಾದವರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts