More

    ಮಠದಗುಡ್ಡೆ ಸಂತ್ರಸ್ತರಿಗೆ ನಿವೇಶನ ಭಾಗ್ಯ: ಗುರುಪುರ ಮೂಳೂರಿನಲ್ಲಿ ಜಾಗ ಗುರುತು

    ಧನಂಜಯ ಗುರುಪುರ


    ಮೂರು ವರ್ಷಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ಗುರುಪುರ ಪಂಚಾಯಿತಿ ಮೂಳೂರು ಗ್ರಾಮದ ಮಠದಗುಡ್ಡೆ ಸೈಟ್ ಪ್ರದೇಶದಲ್ಲಿ ಮನೆ ಕುಸಿತವಾದ 9 ಕುಟುಂಬಗಳಿಗೆ ನಿವೇಶನ ಭಾಗ್ಯ ಲಭಿಸಿದೆ.


    ಗುಡ್ಡ ಕುಸಿದ ಸಂದರ್ಭ ಅಲ್ಲಿನ ಸುಮಾರು 70 ಮನೆಯವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಸಂತ್ರಸ್ತರೆಲ್ಲರಿಗೂ ಮುಂದಿನ ಕೆಲವು ತಿಂಗಳು ಬಾಡಿಗೆ ನೀಡಲಾಗುವುದು ಎಂದು ಆಗ ಕುಟುಂಬ ಸದಸ್ಯರಿಗೆ ಜಿಲ್ಲಾಡಳಿತ ಭರವಸೆ ನೀಡಿತ್ತು.


    ದುರಂತವೆಂದರೆ, ಘಟನೆ ನಡೆದ ಬಳಿಕ ಒಂದು ಬಾರಿ ಮಾತ್ರ ತಲಾ 10,000 ರೂ. ಪರಿಹಾರ ರೂಪದಲ್ಲಿ ಬಾಡಿಗೆ ಮೊತ್ತ ಬಂದಿತ್ತು. ಈ ಕಾರಣದಿಂದ ಸ್ಥಳಾಂತರಗೊಂಡಿದ್ದ ಎಲ್ಲ ಮನೆಯವರು ತಮ್ಮ ಮೂಲ ಸೈಟ್ ಪ್ರದೇಶಕ್ಕೆ ಮರಳಿದ್ದರು.


    ಈ ಮಧ್ಯೆ ಜಿಲ್ಲಾಡಳಿತ ನೀರುಮಾರ್ಗ ಪಂಚಾಯಿತಿ ವ್ಯಾಪ್ತಿಯ ಬೊಂಡಂತಿಲ ಗ್ರಾಮ, ಗಂಜಿಮಠ ಪಂಚಾಯಿತಿ ವ್ಯಾಪ್ತಿಯ ಮೊಗರು ಗ್ರಾಮ ಮತ್ತು ಗುರುಪುರ ಪಂಚಾಯಿತಿ ವ್ಯಾಪ್ತಿಯ ಮೂಳೂರು ಸೈಟ್ ಪ್ರದೇಶದಲ್ಲಿ (ಕುಸಿದಿರುವ ಗುಡ್ದದ ಮೇಲ್ಭಾಗದ ಗುಡ್ದದಲ್ಲಿ) ಸಂತ್ರಸ್ತರಿಗೆ ನಿವೇಶನ ಗುರುತಿಸುವ ಎಲ್ಲ ಪ್ರಯತ್ನಗಳು ವಿಫಲಗೊಂಡಿತ್ತು.


    ಮೊಗರು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿ ಗ್ರಾಮ ವ್ಯಾಸ್ತವ್ಯದ ಸಂದರ್ಭದಲ್ಲಿ ಡಾ.ಕೆ.ವಿ. ರಾಜೇಂದ್ರ ಅವರು ಗುರುಪುರ ಸೈಟ್ ಸಂತ್ರಸ್ತರಲ್ಲಿ ಕೆಲವರಿಗಾದರೂ ನಿವೇಶನ ಒದಗಿಸಬೇಕೆನ್ನುವ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ರಶ್ಮಿ ಎಸ್.ಆರ್. ಅವರಿಗೆ ನಿವೇಶನ ಗುರುತಿಸುವಂತೆ ಸೂಚಿಸಿದ್ದರು.


    ಕಂದಾಯ ಇಲಾಖೆಯ ಸಹಾಯ ಪಡೆದಿರುವ ಅವರು ಗುರುಪುರ ಮೂಳೂರು ಗ್ರಾಮದ ಮತ್ತೊಂದು ಸೈಟ್ ಪ್ರದೇಶದಲ್ಲಿರುವ ಸರ್ಕಾರಿ(ಕುಮ್ಕಿ) ಜಾಗ ಗುರುತಿಸಿ ಸರ್ವೇ ಕಾರ್ಯ ನಡೆಸಿದ್ದಾರೆ.
    ಮೂಳೂರು ಗ್ರಾಮದ 44 ಸೆಂಟ್ಸ್ ಜಾಗಕ್ಕೆ ನಿರಾಕ್ಷೇಪಣಾ ಪತ್ರ ನೀಡಲಾಗಿದೆ. ನಿರ್ದಿಷ್ಟ ಜಾಗದಲ್ಲಿ ಸರ್ವೇ ಕಾರ್ಯವೂ ನಡೆದಿದೆ ಎಂದು ಗುರುಪುರ ಪಂಚಾಯಿತಿ ಪಿಡಿಒ ಅಬೂಬಕ್ಕರ್ ಹೇಳಿದ್ದಾರೆ.


    ಸ್ಥಳಾಂತರ ಆದೇಶ: ಈ ನಡುವೆ ಸತತ ಮಳೆ ಹಿನ್ನೆಲೆಯಲ್ಲಿ ಗುರುಪುರ ಸೈಟ್‌ನಲ್ಲಿರುವ ನಿವಾಸಿಗರು ಮತ್ತು ಗುರುಪುರ ಹೋಬಳಿಗೆ ಸೇರಿರುವ ಎಲ್ಲ ಗ್ರಾಮಗಳ ಗುಡ್ಡ ಪ್ರದೇಶಗಳಲ್ಲಿರುವ ಮನೆಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಮಂಗಳೂರು ಸಹಾಯಕ ಆಯುಕ್ತರು ನಾಡಕಚೇರಿಯ ಉಪತಹಸೀಲ್ದಾರಿಗೆ ಆದೇಶ ನೀಡಿದ್ದಾರೆ. ಈ ಆದೇಶದ ಬಗ್ಗೆ ಗುರುಪುರ ಪಂಚಾಯಿತಿ ಸದಸ್ಯರಿಂದ ವಿರೋಧ ವ್ಯಕ್ತವಾಗಿದೆ.

    ಮೂಳೂರು ಗ್ರಾಮದಲ್ಲಿ 102/1ಎ/1ಎಫ್3 ಸರ್ವೇ ನಂಬ್ರದ ಸರ್ಕಾರಿ ಜಾಗದಲ್ಲಿ 44 ಸೆಂಟ್ಸ್ ಜಾಗ ಗುರುತಿಸಲಾಗಿದ್ದು, ಸರ್ವೇ ಕಾರ್ಯ ನಡೆದಿದೆ. ಇಲ್ಲಿ ಸಂತ್ರಸ್ತರಲ್ಲಿ 9ರಿಂದ 10 ಕುಟುಂಬಗಳಿಗೆ ಮನೆ ನಿವೇಶನ ಲಭ್ಯವಾಗಲಿದೆ.
    ರಶ್ಮಿ, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ (ಮಂಗಳೂರು ಪ್ರಭಾರ ತಹಸೀಲ್ದಾರ್)

    ಜಿಲ್ಲಾಡಳಿತವು ಮಳೆಗೆ ಅಪಾಯ ಎದುರಿಸುತ್ತಿರುವ ಗುಡ್ಡದ ಮೇಲಿನ ನಿವಾಸಿಗರನ್ನು ಮಳೆಗಾಲಕ್ಕೆ ಮುಂಚಿತವಾಗಿ ಪರ್ಯಾಯ ವ್ಯವಸ್ಥೆಯೊಂದಿಗೆ ಬೇರೆಡೆಗೆ ಸ್ಥಳಾಂತರ ಮಾಡುವ ಯೋಚನೆ ಮಾಡಬೇಕು. ಧಾರಾಕಾರ ಮಳೆ ಸುರಿಯುತ್ತಿರುವ ಈ ಹೊತ್ತಿನಲ್ಲಿ ಮನೆಗಳ ಸ್ಥಳಾಂತರ ಅಸಾಧ್ಯ. ಗುಡ್ಡ ಕುಸಿತದಿಂದ ಕಷ್ಟ ಅನುಭವಿಸುತ್ತಿರುವ ಸಂತ್ರಸ್ತರ ನೋವನ್ನು ನಾನು ಹತ್ತಿರದಿಂದ ಬಲ್ಲೆ. ಸಮಸ್ಯೆ ಬಗ್ಗೆ ಸಹಾಯಕ ಆಯುಕ್ತರಲ್ಲಿ ಮಾತನಾಡುವೆ.
    – ಡಾ.ಭರತ್ ಶೆಟ್ಟಿ, ಶಾಸಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts