More

    ಸಿಂಹಾಸನ ಏರುವುದಷ್ಟೇ ರಾಜನ ಕರ್ತವ್ಯವಲ್ಲ: ಸತ್ಯಾತ್ಮ ತೀರ್ಥಶ್ರೀ

    ಶಿವಮೊಗ್ಗ: ಸಿಂಹಾಸನದ ಮೇಲೆ ಆಸೀನವಾಗುವುದಷ್ಟೇ ರಾಜನ ಕರ್ತವ್ಯವಲ್ಲ. ತನ್ನ ಆಳ್ವಿಕೆಯ ವ್ಯಾಪ್ತಿಯಲ್ಲಿ ಧರ್ಮಾಚರಣೆಗೆ ಇರುವ ಅಡ್ಡಿ, ಆತಂಕಗಳನ್ನು ಪರಿಹಾರ ಮಾಡುವುದು ರಾಜನ ಮುಖ್ಯ ಕರ್ತವ್ಯವಾಗಬೇಕು ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳು ಹೇಳಿದರು.

    28ನೇ ಚಾತುರ್ಮಾಸ್ಯದ ಅಂಗವಾಗಿ ಮಂಗಳವಾರ ವಿದ್ವತ್ ಸಭೆಯಲ್ಲಿ ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
    ರಾಜನಾದವನು ಸ್ವತಃ ಧರ್ಮಿಷ್ಠನಾಗಿರಬೇಕು. ತಾನು ಧರ್ಮವನ್ನು ಆಚರಿಸಬೇಕು. ಧರ್ಮಾಚರಣೆ ಮಾಡುವವರಿಗೆ ಸಹಕಾರಿಯಾಗಿರಬೇಕು. ಅವರನ್ನು ಪೋಷಿಸಬೇಕು. ಸಜ್ಜನ ಕಾರ್ಯಗಳಿಗೆ ದಾರಿ ಮಾಡಿಕೊಡಬೇಕು. ಪರೀಕ್ಷಿತ ಮಹಾರಾಜ ತಾನೂ ಧರ್ಮ ಮಾರ್ಗದಲ್ಲಿದ್ದು ತನ್ನ ಪ್ರಜೆಗಳನ್ನೂ ಧರ್ಮಮಾರ್ಗದಲ್ಲಿ ಕೊಂಡೊಯ್ಯುತ್ತಿದ್ದ ಕಾರಣ ಆತ ರಾಜರ್ಷಿ ಎನಿಸಿದ್ದ ಎಂದರು.
    ಶಾಪದಿಂದಾಗಿ ಕೇವಲ ಏಳು ದಿನಗಳ ಆಯುಷ್ಯವಿದೆ ಎಂದು ತಿಳಿದಾಗ ಆತ ಸ್ವೇಚ್ಛೆಯಿಂದ ಬದುಕಬಹುದಾಗಿತ್ತು. ಆದರೆ ಆತ ಸಾಧನೆಯ ಮಾರ್ಗ ಹಿಡಿದ. ಮೃತ್ಯು ಮುಂದೆ ಕಾದಿರುವ ಸಂರ್ಭದಲ್ಲಿ ಪವಿತ್ರ ಗಂಗಾ ನದಿಯ ಸನ್ನಿಧಾನದಲ್ಲಿ ಸಾಕ್ಷಾತ್ ಶುಕಾಚಾರ್ಯರಿಂದಲೇ ಭಾಗವತ ಶ್ರವಣ ಮಾಡಿದ. ಈ ವೇಳೆ ರಾಜನೊಂದಿಗೆ ಸಹಸ್ರಾರು ಜನರೂ ಭಾಗವತ ಕೇಳಿ ಪುಣ್ಯವಂತರಾದರು. ಇಂತಹ ಧರ್ಮ ಮಾರ್ಗದ ರಾಜರಿದ್ದರೆ ಪ್ರಜೆಗಳೂ ಧರ್ಮ ಮಾರ್ಗ ಅನುಸರಿಸುತ್ತಾರೆ ಎಂದು ತಿಳಿಸಿದರು.
    ಪೂಜಾ ಕಾಲದಲ್ಲಿ ಪಂಡಿತರಾದ ಮೋಹನಾಚಾರ್ಯ ಲಿಮಾರು, ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ತಿರುಮಲಾಚಾರ್ಯ ಪ್ರವಚನ ನೀಡಿದರು. ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿ ಗುತ್ತಲ ರಂಗಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು ಇತರರಿದ್ದರು.
    ವಿಶ್ವ ಮಧ್ವ ಮಹಾಪರಿಷತ್ ಸಭೆ: ವಿಶ್ವ ಮಧ್ವ ಮಹಾಪರಿಷತ್ ವಾರ್ಷಿಕ ಸಭೆ ಹೊಳೆಹೊನ್ನೂರಿನಲ್ಲಿ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳ ಅಧ್ಯಕ್ಷತೆಯಲ್ಲಿ ನಡೆಯಿತು. ಇದುವರೆಗಿನ ಕಾರ್ಯಚಟುವಟಿಕೆಯ ವರದಿಯನ್ನು ಪರಿಷತ್ ಅಧ್ಯಕ್ಷ ಪಂಡಿತ ವಿದ್ಯಾಧೀಶಾಚಾರ್ಯ ಗುತ್ತಲ ಮಂಡಿಸಿದರು.
    ಪರಿಷತ್‌ನಿಂದ ಹೊಸದಾಗಿ ಯುವಾತ್ಮ ಎಂಬ ಹೊಸ ಪರಿಕಲ್ಪನೆಯೊಂದಿಗೆ ಮಾಧ್ವ ಯುವ ಸಮುದಾಯಕ್ಕೆ ಧರ್ಮಾಚರಣೆಯ ಸರಳ ಮಾರ್ಗದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಯಶಸ್ವಿಯಾಗಿದೆ. ಇದನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದರು. ಮಠದ ದಿವಾನ ಶಶಿ ಆಚಾರ್, ಜಿಲ್ಲಾ ಮಠಾಧಿಕಾರಿ ಬಾಳಗಾರು ಜಯತೀರ್ಥಾಚಾರ್ಯ, ವಿವಿಧ ಜಿಲ್ಲಾ ಘಟಕಗಳ ಪ್ರಮುಖರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts