More

    ಹಿಜಾಬ್​ ಬ್ಯಾನ್​ ಕುರಿತು ಸುಪ್ರೀಂಕೋರ್ಟ್​ನಲ್ಲೇ ವಿಭಿನ್ನ ತೀರ್ಪು! 10 ದಿನಗಳ ಸುದೀರ್ಘ ವಿಚಾರಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ

    ನವದೆಹಲಿ: ಹಿಜಾಬ್​ ಬ್ಯಾನ್​ ಕುರಿತು ಕರ್ನಾಟಕ ಹೈಕೋರ್ಟ್​ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗಳನ್ನು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ ದ್ವಿಸದಸ್ಯ ಪೀಠ, ಇಂದು(ಗುರುವಾರ) ವಿಭಿನ್ನ ತೀರ್ಪು ಪ್ರಕಟಿಸಿದೆ. ಓರ್ವ ನ್ಯಾಯಮೂರ್ತಿ ಮುಸ್ಲಿಂ ವಿದ್ಯಾರ್ಥಿನಿಯರ ಮೇಲ್ಮನವಿಯನ್ನು ವಜಾಗೊಳಿಸಿದರೆ, ಇನ್ನೊರ್ವರು ಹೈಕೋರ್ಟ್​ ಆದೇಶವನ್ನೇ ರದ್ದು ಮಾಡಿದರು. ಇದೀಗ ಹಿಜಾಬ್​ ಪ್ರಕರಣವನ್ನು ಸಿಜೆಐ ಪೀಠಕ್ಕೆ ವರ್ಗಾಯಿಸಲಾಗಿದೆ.

    ನ್ಯಾಯಪೀಠದ ಸದಸ್ಯ ನ್ಯಾಯಮೂರ್ತಿ ಹೇಮಂತ್​ ಗುಪ್ತಾ ಅವರು ಅ.16ರಂದು ನಿವೃತ್ತಿ ಆಗುತ್ತಿರುವುದರಿಂದ ಶುಕ್ರವಾರ ಅವರ ಕರ್ತವ್ಯದ ಕೊನೆಯ ದಿನ. ಹೀಗಾಗಿ, ನಿವೃತ್ತಿಗೆ ಮುನ್ನ ದಿನವಾದ ಗುರುವಾರವೇ ಅವರು ತೀರ್ಪು ಪ್ರಕಟಿಸಿದ್ದಾರೆ. ಮುಸ್ಲಿಂ ವಿದ್ಯಾರ್ಥಿನಿಯರ ಮೇಲ್ಮನವಿಯನ್ನು ಹೇಮಂತ್​ ಗುಪ್ತಾ ವಜಾಗೊಳಸಿದರೆ, ಮತ್ತೋರ್ವ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಹಿಬಾಜ್​ ಬ್ಯಾನ್​ ಮಾಡಿ ಹೈಕೋರ್ಟ್​ ಹೊರಡಿಸಿದ್ದ ಆದೇಶವನ್ನೇ ರದ್ದು ಮಾಡಿದರು.

    ಇನ್ನು ಈ ಪ್ರಕರಣದಲ್ಲಿ ಹಿಜಾಬ್​ ಪರ 17 ವಕೀಲರು ವಾದಿಸಿದ್ದರೆ, ಶಾಲೆಗಳಲ್ಲಿ ಹಿಜಾಬ್​ ಧಾರಣೆ ವಿರೋಧಿಸುವ ರಾಜ್ಯ ಸರ್ಕಾರದ ಆದೇಶ ಸಮರ್ಥಿಸಿ ಕೇಂದ್ರದ ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ, ಹೆಚ್ಚುವರಿ ಸಾಲಿಸಿಟರ್​ ಜನರಲ್​ ಕೆಎಂ ನಟರಾಜ್​, ರಾಜ್ಯ ಅಡ್ವೊಕೇಟ್​ ಜನರಲ್​ ಪ್ರಭುಲಿಂಗ ನಾವದಗಿ, ಶಾಲೆಗಳ ಶಿಕ್ಷಕರ ಪರ ಹಿರಿಯ ವಕೀಲ ಆರ್​. ವೆಂಕಟರಮಣಿ (ಹಾಲಿ ಅಟಾರ್ನಿ ಜನರಲ್​) ವಾದಿಸಿದ್ದರು. 10 ದಿನಗಳ ಕಾಲ ಸುದೀರ್ಘ ವಿಚಾರಣೆ ಕೈಗೊಂಡಿದ್ದ ನ್ಯಾಯಪೀಠ, ಸೆ.22ರಂದು ತೀರ್ಪು ಕಾದಿರಿಸಿತ್ತು. ಇಂದು ನ್ಯಾಯಮೂರ್ತಿಗಳಲ್ಲೇ ವಿಭಿನ್ನ ತೀರ್ಪು ಪ್ರಕಟವಾಗಿದ್ದು, ಜನರಲ್ಲಿನ ಗೊಂದಲ ಮತ್ತಷ್ಟು ಹೆಚ್ಚಾಗಿದೆ.

    ಹಿಜಾಬ್‌ ಪರ ವಕೀಲರ ವಾದದ ಕೆಲ ಅಂಶಗಳು
    – ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆಯಾಗಬೇಕು
    – ಹಿಜಾಬ್‌ ನಂತರ ಸೂಕ್ಷ್ಮ ವಿಚಾರವನ್ನು ದ್ವಿಸದಸ್ಯ ಪೀಠ ವಿಚಾರಣೆ ಮಾಡಬಾರದು
    – ಅರ್ಜಿದಾರರ ಪರ ವಕೀಲರಲ್ಲಿ ಕೆಲವರು ಹಿಜಾಬ್‌ ಇಸ್ಲಾಂನ ಅಗತ್ಯ ಧಾರ್ಮಿಕ ಆಚರಣೆ ಎಂದು ಹೇಳಿದ್ದರೆ, ಮತ್ತೆ ಕೆಲವರು ಈ ಅಂಶ ಪ್ರಸ್ತಾಪಿಸಲು ಹೋಗಿಲ್ಲ
    – ಹಿಜಾಬ್‌ ಎನ್ನುವುದು ಮುಸ್ಲಿಂ ಮಹಿಳೆಯರ ಪ್ರಮುಖ ಗುರುತು
    – ಹಿಜಾಬ್‌ ಬೇಡ ಎನ್ನುವುದು ಸಂವಿಧಾನ ನೀಡಿರುವ ಖಾಸಗಿ ಹಕ್ಕಿನ ಉಲ್ಲಂಘನೆ
    – ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಳೀಯ ಶಾಸಕರೇ ಸಮತಿ ಅಧ್ಯಕ್ಷರು
    – ಅವರು ಹಿಜಾಬ್‌ ವಿರೋಧಿ ಧೋರಣೆ ಹೊಂದಿದ್ದಾರೆ
    – ಇಂಥವರಿಂದ ಪಾರದರ್ಶಕತೆ ನಿರೀಕ್ಷಿಸಲು ಸಾಧ್ಯವಿಲ್ಲ.
    – ಹಿಜಾಬ್‌ ವಿರುದ್ಧ ಅಭಿಯಾನ ಮಾಡಿ, ವಿದ್ಯಾರ್ಥಿನಿಯರ ಬಳಿ ಒತ್ತಾಯದಿಂದ ಹಿಜಾಬ್‌ ಧರಿಸಿ ಬರುವುದಿಲ್ಲ ಎಂದು ಸಹಿ ಮಾಡಿಕೊಂಡಿದ್ದಾರೆ
    – ಈ ಹಿಂದೆಯೂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಶಾಲೆಗೆ ಬರುತ್ತಿದ್ದರು ಮತ್ತು ಅದಕ್ಕೆ ದಾಖಲೆಗಳಿವೆ
    – ಕೇಂದ್ರ ಸರ್ಕಾರದ ಕೇಂದ್ರೀಯ ವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರಿಗೆ ಹೆಡ್‌ಸ್ಕಾರ್ಫ್‌ (ಹಿಜಾಬ್) ಧರಿಸಲು ಅವಕಾಶವಿದೆ. ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಏಕಿಲ್ಲ?
    – ದಕ್ಷಿಣ ಭಾರತದಲ್ಲಿ ಶಾಲೆಗೆ ಹೋಗುವ ಬಹುಪಾಲು ವಿದ್ಯಾರ್ಥಿಗಳು ಶಾಲೆಯಲ್ಲಿ ತಮ್ಮ ಧಾರ್ಮಿಕ ಗುರುತನ್ನು ಪ್ರದರ್ಶಿಸುತ್ತಾರೆ
    – ಸಂಧ್ಯಾವಂದನೆ ಮಾಡಿದ ವಿದ್ಯಾರ್ಥಿ ಹಣೆಯಲ್ಲಿ ಗಂಧದ ಗುರುತು, ರುದ್ರಾಕ್ಷಿ ಮಾಲೆ ಅಥವಾ ಶಿಲುಬೆ ಹೀಗೆ… ಇವೆಲ್ಲ ಧಾರ್ಮಿಕತೆ ಸಂಕೇತಗಳೇ ಆಗಿವೆ
    – ನಿರ್ದಿಷ್ಟ ಸಮುದಾಯದ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ಗುರುತನ್ನು ಪ್ರದರ್ಶಿಸುವಂತಿಲ್ಲ ಎನ್ನುವುದು ಜಾತ್ಯತೀತತೆಯ ವ್ಯಾಖ್ಯಾನವಲ್ಲ
    – ಒಂದು ಸಮುದಾಯವನ್ನು ಗುರಿಯಾಗಿಸಿ ಶಾಲೆಗಳಲ್ಲಿ ಹಿಜಾಬ್‌ ನಿಷೇಧಿಸುವ ರಾಜ್ಯ ಸರ್ಕಾರದ ಆದೇಶ ಧನಾತ್ಮಕ ಜಾತ್ಯತೀತತೆಗೆ ವಿರುದ್ಧವಾಗಿದೆ
    – ಸಿಖ್ಖರಂತೆ ಇಸ್ಲಾಂ ಧರ್ಮೀಯರಿಗೂ ಹಿಜಾಬ್‌ ಧರಿಸುವುದು ಅತಿಮುಖ್ಯ
    – ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಹಿಜಾಬ್‌ನ್ನು ಧರ್ಮದ ಭಾಗವಲ್ಲ ಎಂದಿದ್ದರೂ, ಸಾಂಸ್ಕೃತಿಕವಾಗಿ ಅಳವಡಿಸಿಕೊಂಡ ಪದ್ಧತಿ ಎಂದಿದೆ
    – ಪಗಡಿಗೆ ನೀಡಿರುವ ಕಾನೂನಾತ್ಮಕ ರಕ್ಷಣೆ ಹಿಜಾಬ್‌ಗೂ ಇರಬೇಕು
    – ಸಾರ್ವಜನಿಕ ಸುವ್ಯವಸ್ಥೆ ಹೆಸರಲ್ಲಿ ಹಿಜಾಬ್‌ ನಿಷೇಧಿಸುವುದು ಅಕ್ಷಮ್ಯ
    – ಸರ್ಕಾರದ ಆದೇಶಗಳು ನೈಜವಾಗಿರಬೇಕು ಅಥವಾ ನೈಜತೆಗೆ ಹತ್ತಿರವಾಗಿರಬೇಕು ಅಥವಾ ಸಮೀಪದಲ್ಲಿರಬೇಕು.
    – ಸರ್ಕಾರಿ ಆದೇಶ ಗಂಗಾಜಲದಂತೆ ಸ್ಪಷ್ಟವಾಗಿದೆ ಎಂದು ಹೈಕೋರ್ಟ್ ಹೇಳಿತ್ತು. ಆದರೆ ನಮ್ಮ ಪ್ರಕಾರ ಇದು ಸಂಪೂರ್ಣ ಕೆಸರುಮಯ
    – ಹಿಂದುಗಳು ದೇವತೆಗಳನ್ನು ಪೂಜಿಸುತ್ತಾರೆ. ಕಿಸೆಯಲ್ಲಿ ಕೃಷ್ಣ ಅಥವಾ ರಾಮನ ಫೋಟೋ ಇಟ್ಟುಕೊಳ್ಳುತ್ತಾರೆ. ಅದರಿಂದ ಭದ್ರತೆ ಸಿಗುತ್ತದೆ ಎಂಬ ನಂಬಿಕೆ ನಮ್ಮದು. ಇವೆಲ್ಲವೂ ಇದು ಧಾರ್ಮಿಕ ಸ್ವಾತಂತ್ರ್ಯದ ಭಾಗವೇ ಆಗಿದೆ. ಹಾಗೆಯೇ ಹಿಜಾಬ್‌ ಕೂಡ.
    – ಹಿಜಾಬ್‌ ಧಾರಣೆ ಇಸ್ಲಾಂ ಧರ್ಮದ ಅಗತ್ಯ ಆಚರಣೆಯಲ್ಲ ಎಂಬ ಹೈಕೋರ್ಟ್‌ ತೀರ್ಪನ್ನು ವಿರೋಧಿಸಿದ ವಕೀಲ ನಿಜಾಮ್‌ ಪಾಶಾ, ಕುರಾನ್‌ನಲ್ಲಿ ಹಿಜಾಬ್‌ಗೆ ಖಿಮಾರ್‌ ಎನ್ನಲಾಗುತ್ತದೆ. ಭಾರತದಲ್ಲಿ ಹಿಜಾಬ್‌ ಎಂದು ಕರೆಯುತ್ತೇವೆ.
    – ಖಿಮಾರ್‌ನ್ನು ಆಕ್ಸ್‌ಫರ್ಡ್‌ ನಿಘಂಟಿನಲ್ಲಿ ತಲೆಯನ್ನು ಮುಚ್ಚುವ ಬಟ್ಟೆಯ ತುಂಡು ಎಂದು ವ್ಯಾಖ್ಯಾನಿಸಲಾಗಿದೆ.
    – ಇದು ಮುಸ್ಲಿಂ ಮಹಿಳೆಯರ ಗುರುತಿನ ಜತೆಗೆ ರಕ್ಷಿಸುವುದಲ್ಲದೆ ಕಿರುಕುಳ, ಹಲ್ಲೆಯಂತಹ ಘಟನೆಗಳಿಂದಲೂ ರಕ್ಷಿಸುತ್ತದೆ.
    – ಹೆಂಗಸರು ತಮ್ಮ ಮನೆಯವರಲ್ಲದ ಬೇರೆ ಹೆಂಗಸರನ್ನು ಭೇಟಿ ಮಾಡುವಾಗಲೂ ಹಿಜಾಬ್‌ ಧರಿಸಬೇಕು ಸೂರಾ 24 ಖಿಮಾರ್‌ನಲ್ಲಿ ಉಲ್ಲೇಖವಿದೆ.
    – ಇದನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಹೈಕೋರ್ಟ್‌, ಹಿಜಾಬ್‌ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂಬ ತೀರ್ಮಾನಕ್ಕೆ ಬಂದಿದೆ.
    – ಹದೀಸ್‌ನಲ್ಲಿ ಪ್ರವಾದಿಯವರ ಪತ್ನಿ ಆಯಿಷಾ ಹೆಂಗಸರು ತಮ್ಮ ಎದೆಯ ಮೇಲೆ ಮುಸುಕು ಹಾಕುತ್ತಿದ್ದರು ಎಂದಿದ್ದಾರೆ.
    – ಧಾರ್ಮಿಕ ನಂಬಿಕೆ ಪಾಲಿಸುವ ಹುಡುಗಿಗೆ ಹಿಜಾಬ್‌ ಮತ್ತು ಶಿಕ್ಷಣದ ಮಧ್ಯೆ ಒಂದನ್ನು ಆಯ್ಕೆ ಮಾಡಿ ಎನ್ನುವುದು ಅವಳ ಹಕ್ಕನ್ನು ಕಸಿದುಕೊಂಡಂತೆ.
    – ಸರ್ಕಾರವು ವೈವಿಧ್ಯತೆಯನ್ನು ಉತ್ತೇಜಿಸಬೇಕೆ ವಿನಃ ಎಲ್ಲ ಆಚರಣೆಗಳಲ್ಲಿ ಏಕರೂಪತೆ ಇರಬೇಕು ಎನ್ನುವುದು ಅತಾರ್ಕಿಕ.
    – ಸಮುದಾಯವೊಂದರ ಧಾರ್ಮಿಕ ಆಚರಣೆ ಜಾತ್ಯತೀತ ಶಿಕ್ಷಣ ಅಥವಾ ಏಕತೆಗೆ ಅಡ್ಡಿಯಾಗುತ್ತವೆ ಎಂದು ಏಕೆ ಭಾವಿಸಬೇಕು?
    – ವಿದ್ಯಾರ್ಥಿನಿಯೊಬ್ಬಳು ಹಿಜಾಬ್‌ ಧರಿಸಿ ಹೋದರೆ ಅದು ಮತ್ತೊಬ್ಬರನ್ನು ಏಕೆ ಪ್ರಚೋದಿಸಬೇಕು?
    – ಇದು ಮತ್ತೋರ್ವ ವಿದ್ಯಾರ್ಥಿಗೆ ಏಕೆ ತೊಂದರೆ ಉಂಟುಮಾಡಬೇಕು?
    – ಯಾರನ್ನಾದರೂ ಅದು ಪ್ರಚೋದಿಸಿದರೆ, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕೆ ವಿನಃ ಬೆದರಿಸುವ ವರ್ತನೆಯನ್ನು ಪ್ರೋತ್ಸಾಹಿಸುವಂತಿರಬಾರದು.

    ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳು ಹೊರಹಾಕಿದ್ದ ಮೌಖಿಕ ಅನಿಸಿಕೆಗಳು
    – ಸಮವಸ್ತ್ರ ಸಂಹಿತೆ ಅಳವಡಿಸಿಕೊಂಡ ಸರ್ಕಾರಿ ಶಿಕ್ಷಣ ಸಂಸ್ಥೆಗೆ ವಿದ್ಯಾರ್ಥಿನಿಯರು ಮಿನಿಸ್ಕರ್ಟ್‌, ಮಿಡಿ ಸೇರಿ ಸ್ವ-ಇಚ್ಛೆಯ ಉಡುಪುಗಳನ್ನು ಧರಿಸಿಕೊಂಡು ಬರಬಹುದೇ? ಸಮವಸ್ತ್ರ ನಿಯಮ ಅಳವಡಿಸಿಕೊಂಡ ಮಾತ್ರಕ್ಕೆ ಮಕ್ಕಳ ಶಿಕ್ಷಣ ಹಕ್ಕನ್ನು ಕಿತ್ತುಕೊಂಡಂತಾಗುತ್ತದೆಯೇ?
    – ಶಿಕ್ಷಣ ಸಂಸ್ಥೆಗಳು ನಿಯಮಗಳನ್ನು ಹೇರುವಂತಿಲ್ಲ ಎನ್ನುತ್ತೀರಿ. ಸಮವಸ್ತ್ರ ಸಂಹಿತೆಯ ಉಲ್ಲಂಘನೆಯಾದಾಗ ಏನು ಮಾಡಬೇಕು? ವಿದ್ಯಾರ್ಥಿನಿಯರು ಮಿನಿಸ್ಕರ್ಟ್‌, ಮಿಡಿ ಅಥವಾ ತಮಗೆ ತೋಚಿದ್ದನ್ನು ಧರಿಸಿಕೊಂಡು ಬರಬಹುದೇ? ಪ್ರತಿಯೊಬ್ಬರಿಗೂ ಧಾರ್ಮಿಕ ಹಕ್ಕಿದೆ. ಹಾಗಂತ, ಸಮವಸ್ತ್ರ ಸಂಹಿತೆ ನಿಯಮ ಅಳವಡಿಸಿಕೊಂಡ ಶಾಲೆಯ ಆವರಣದೊಳಗೂ ಧಾರ್ಮಿಕ ಹಕ್ಕನ್ನು ಚಲಾಯಿಸಲು ಅವಕಾಶವಿರಬೇಕೆ? ಹಿಜಾಬ್‌, ಸ್ಕಾರ್ಫ್‌ ಧರಿಸಬೇಕೆಂದು ನಿಮಗನಿಸಬಹುದು. ಆದರೆ, ನಿರ್ದಿಷ್ಟ ನಿಯಮಕ್ಕೆ ಒಳಪಟ್ಟ ನೀವು (ವಿದ್ಯಾರ್ಥಿನಿಯರು) ಸಮವಸ್ತ್ರವನ್ನು ಧರಿಸಿಕೊಂಡೇ ಬನ್ನಿ ಎಂದಷ್ಟೇ ರಾಜ್ಯ ಸರ್ಕಾರ ಹೇಳುತ್ತಿದೆ. ಹೀಗೆ ಹೇಳುವ ಮೂಲಕ ಸರ್ಕಾರ ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕನ್ನೇನೂ ಕಿತ್ತುಕೊಂಡಿಲ್ಲ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ.
    – ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ನೀವು ಧರ್ಮಕ್ಕೆ ಸಂಬಂಧಿಸಿದ ಬಟ್ಟೆ ಹಾಕಲು ಅನುಮತಿ ಕೇಳುತ್ತಿದ್ದೀರಿ. ಸಂವಿಧಾನದ ಪ್ರಕಾರ ನಮ್ಮದು ಜಾತ್ಯತೀತ ದೇಶ. ಜಾತ್ಯತೀತ ರಾಷ್ಟ್ರದ ಸರ್ಕಾರಿ ಸಂಸ್ಥೆಯಲ್ಲಿ ಧಾರ್ಮಿಕ ಬಟ್ಟೆ ಧರಿಸಬೇಕು ಎಂದು ಹೇಳಬಹುದೇ?
    – ಉಡುಗೆ ಧರಿಸುವ ಹಕ್ಕು ಮೂಲಭೂತ ಹಕ್ಕು ಎನ್ನುವುದಾದರೆ ವಿವಸ್ತ್ರಗೊಳ್ಳುವುದೂ ಮೂಲಭೂತ ಹಕ್ಕಾಗಿ ಬದಲಾಗಬಹುದು.
    – ಹಿಜಾಬ್‌ನ್ನು ಸಿಖ್​ ಧರ್ಮದ ಅಗತ್ಯ ಆಚರಣೆಗಳಲ್ಲಿ ಒಂದಾಗಿರುವ ಪಗಡಿ ಧಾರಣೆಗೆ ಹೋಲಿಸುವುದು ಸರಿಯಲ್ಲ.
    – ಸಿಖ್​ರ ಐದು ಅತ್ಯಗತ್ಯ ಆಚರಣೆಗಳ ಭಾಗವಾಗಿರುವ ಪಗಡಿ ಧಾರಣೆ ಹಾಗೂ ಕಿರ್ಪಾನ್‌ (ಚೂರಿ) ಇಟ್ಟುಕೊಳ್ಳುವುದನ್ನು ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠವೇ ಮಾನ್ಯ ಮಾಡಿದೆ. ಈ ಆಚರಣೆಗೆ ಸಾಂವಿಧಾನಿಕ ಸಿಂಧುತ್ವವಿದೆ. ಹಿಜಾಬ್‌ನ್ನು ಪಗಡಿ ಹೋಲಿಸಲಾಗದು.
    – ಸಿಖ್ ಧರ್ಮದ ಆಚರಣೆಗಳು ಭಾರತೀಯ ಸಮಾಜದಲ್ಲಿ ದೃಢವಾಗಿ ಬೇರೂರಿವೆ. ದಯವಿಟ್ಟು ಆ ಧರ್ಮದೊಂದಿಗೆ ಯಾವುದೇ ಹೋಲಿಕೆ ಮಾಡಬೇಡಿ. ಇವೆಲ್ಲಾ ಸ್ಥಾಪಿತವಾಗಿರುವ ಆಚರಣೆಗಳು, ದೇಶದ ಸಂಸ್ಕೃತಿಯಲ್ಲೂ ಚೆನ್ನಾಗಿ ಬೇರೂರಿವೆ.
    – ಸಮಾನತೆ ಹಾಗೂ ಶಿಸ್ತಿನ ಹೆಸರಲ್ಲಿ ಧಾರ್ಮಿಕ ಗುರುತಿನ ತೊಡುಗೆಗೆ ನಿರ್ಬಂಧ ಹೇರುವುದಾದರೆ, ಧಾರ್ಮಿಕ-ಸಾಂಸ್ಕೃತಿಕ ವೈವಿಧ್ಯತೆಗೆ ವಿದ್ಯಾರ್ಥಿಗಳನ್ನು ತೆರೆದುಕೊಳ್ಳಲು ಏನು ಮಾಡುತ್ತೀರಿ? ದೇಶದ ವೈವಿಧ್ಯತೆಯ ಪರಿಚಯದೊಂದಿಗೆ ಸಾಂಸ್ಕೃತಿಕವಾಗಿ ಸಂವೇದನಾಶೀಲರಾಗಿರುವಂತೆ ಮಾಡಲು ಧಾರ್ಮಿಕ ಗುರುತು ವಿದ್ಯಾರ್ಥಿಗಳಿಗೆ ಒಂದು ಅವಕಾಶವಾಗಬಹುದಲ್ಲವೇ

    ಹಿಜಾಬ್‌ ಬ್ಯಾನ್‌ ಮಾಡಿದ್ದಕ್ಕೆ ಸರ್ಕಾರ ನೀಡಿದ ಸಮರ್ಥನೆ
    – ಉಡುಪಿ ಶಾಲೆಯಲ್ಲಿ ಹಿಜಾಬ್‌ ಧರಿಸಿದ್ದರಿಂದ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲುಗಳನ್ನು ಧರಿಸಿಕೊಂಡು ಬಂದಿದ್ದರು. ಇದು ಶಾಲೆಯಲ್ಲಿ ಅಶಾಂತಿಗೆ ಕಾರಣವಾಗಿತ್ತು
    – ರಾಜ್ಯ ಸರ್ಕಾರದಿಂದ ಸೂಕ್ತ ಮಾರ್ಗದರ್ಶನ ಕೋರಿ ಶಾಲೆ ಅಧಿಕಾರಿಗಳು ಪತ್ರ ಬರೆದಿದ್ದರು. ಸಮವಸ್ತ್ರ ನೀತಿ ಅಳವಡಿಕೆ ಬಗ್ಗೆ ರಾಜ್ಯ ಸರ್ಕಾರ ಯಾವುದೇ ನಿಯಮ ಹೇರಿಲ್ಲ. ಇದನ್ನು ಆಯಾ ಶಿಕ್ಷಣ ಸಂಸ್ಥೆಗಳ ವಿವೇಚನೆಗೆ ಬಿಡಲಾಗಿದೆ.
    – ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪ್ರತ್ಯೇಕತೆಯ ಬೇಲಿ ಇರಬಾರದು.
    – ಜ್ಞಾನದ ಪ್ರಸಾರ ಖಚಿತಪಡಿಸಿಕೊಳ್ಳಲು ಶಾಲೆಗಳು ಧರ್ಮಾಚರಣೆಗಳಿಂದ ಮುಕ್ತವಾಗಿರಬೇಕು.
    – ಇಲ್ಲವಾದಲ್ಲಿ ಮಕ್ಕಳಲ್ಲಿ ಮೌಲ್ಯವನ್ನು ಹೇಗೆ ತುಂಬುತ್ತೀರಿ ಎಂಬ ಪ್ರಶ್ನೆ ಮುಂದಿಟ್ಟರು.
    – ಧಾರ್ಮಿಕ ಗುರುತುಗಳ ಹೊರತಾಗಿ ಯೋಚಿಸುವ ಪರಿಸರದಲ್ಲಿ ನಾವು ಕೆಲಸ ಮಾಡುತ್ತೇವೆ.
    – ಅಂಥವುಗಳ ಅನುಪಸ್ಥಿತಿಯಿದ್ದಾಗ ಮಾತ್ರ ನೀವು ವ್ಯಕ್ತಿಗಳನ್ನು ಗೌರವಿಸಲು ಪ್ರಾರಂಭಿಸಬಹುದು.
    – ಇಲ್ಲದಿದ್ದಲ್ಲಿ ಶಿಕ್ಷಕರ ಕೈ ಕಟ್ಟಿ ಹಾಕಿದಂತಾಗಲಿದೆ.
    – ಸ್ವರೂಪದಿಂದಲೇ ಶಾಲೆಯೆಂಬುದು ವಿಶಿಷ್ಟ ಸಾರ್ವಜನಿಕ ಸ್ಥಳ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು.
    – ಸಂವಿಧಾನದ ಧಾರ್ಮಿಕ ಹಕ್ಕಿಗಿಂತ (ಆರ್ಟಿಕಲ್‌ 25) ಸಮಾನತೆಯ ಹಕ್ಕು (ಆರ್ಟಿಕಲ್‌ 14) ಪ್ರಮುಖವಾಗಿದೆ ಮತ್ತು ಮೇಲುಗೈ ಸಾಧಿಸಿದೆ.
    – ಶಾಲೆಗಳಲ್ಲಿ ಸಮಾನತೆಯ ಧ್ಯೇಯೋದ್ದೇಶ ಪಾಲಿಸುವ ಸಲುವಾಗಿ ರಾಜ್ಯ ಸರ್ಕಾರ ಸಮವಸ್ತ್ರ ಮತ್ತು ಏಕರೂಪತೆಯ ನೀತಿಗೆ ಆದ್ಯತೆ ನೀಡಿತು.
    – ವಿದ್ಯಾರ್ಥಿಗಳಲ್ಲಿ ಏಕತೆ ಉತ್ತೇಜಿಸುವ ಈ ಕ್ರಮದ ಬಗ್ಗೆ ಜಾತ್ಯತೀತ ಶಿಕ್ಷಣ ಸಂಸ್ಥೆಗಳಲ್ಲಿ ದೂರನ್ನು ಹೇಳುವಂತಿಲ್ಲ
    – ನಾವು ಯಾರನ್ನೂ ಶಾಲೆಗೆ ಬರಬೇಡಿ ಎಂದು ನಿಯಂತ್ರಿಸುತ್ತಿಲ್ಲ. ಸಮವಸ್ತ್ರ ನಿಯಮ ಪಾಲಿಸಿ ಎನ್ನುತ್ತಿದ್ದೇವಷ್ಟೇ.
    – ಹಿಜಾಬ್‌ನ್ನು ಸಾರ್ವಜನಿಕ ಪರಿಸರದಲ್ಲಿ ಸರ್ಕಾರ ನಿಷೇಧಿಸಿಲ್ಲ ಎನ್ನುವುದಿಲ್ಲಿ ಮುಖ್ಯ.
    – ಶಾಲೆಗಳಲ್ಲಿ ಧರ್ಮಾಧರಿತ ವರ್ಗೀಕರಣವನ್ನು ಅನುಮತಿಸಲಾಗುವುದಿಲ್ಲ ಎಂಬ ಅಂಶದ ಬಗ್ಗೆ ಸರ್ಕಾರ ಜಾಗೃತವಾಗಿದೆ.
    – ಸಂಪೂರ್ಣ ಹಕ್ಕಿನ ಹೆಸರಲ್ಲಿ ಒಬ್ಬ ಹಿಂದು ಧರ್ಮೀಯ ಇಂಡಿಯಾ ಗೇಟ್‌ನಲ್ಲಿ ಅಥವಾ ನ್ಯಾಯಾಲಯದಲ್ಲಿ ಹೋಮ-ಹವನ ಮಾಡಲಾದೀತೆ
    – ಎಲ್ಲಾ ಧಾರ್ಮಿಕ ಹಕ್ಕುಗಳಲ್ಲೂ ಸಮತೋಲನ ಕಾಪಾಡುವುದು ಮುಖ್ಯ ಮತ್ತು ಯಾರೂ ತಮಗೆ ಸಂಪೂರ್ಣ ಹಕ್ಕಿದೆ ಎಂದು ವಾದಿಸಲಾಗುವುದಿಲ್ಲ.
    – ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತಿನ್ನು ಪಾಲಿಸುವ ಸರಳ ಪ್ರಕರಣ ಇದಾಗಿದ್ದು, ಯಾವುದೇ ಧರ್ಮ ಅಥವಾ ವ್ಯಕ್ತಿಯ ವಿರುದ್ಧ ತಾರತಮ್ಯ ಮಾಡಿಲ್ಲ
    ವಿದ್ಯಾರ್ಥಿಯು ತಪ್ಪು ಸಮವಸ್ತ್ರ ಧರಿಸಿದ್ದಕ್ಕಾಗಿ ಶಿಕ್ಷಕರು ಆತನನ್ನು ವಾಪಸ್‌ ಕಳುಹಿಸಿದರೆ, ವಿದ್ಯಾರ್ಥಿಯು ನ್ಯಾಯಾಲಯದ ಮೊರೆಹೋಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರಲು ಯಾವುದೇ ಕಾರಣವಿಲ್ಲ ಎನ್ನಬಹುದೇ?
    – ಹಿಜಾಬ್‌ ಎಂದಿಗೂ ಇಸ್ಲಾಂನ ಅಗತ್ಯ ಧಾರ್ಮಿಕ ಆಚರಣೆಯಾಗಿಲ್ಲ. ಈಗಂತೂ ಎಷ್ಟೋ ಮಹಿಳೆಯರು ಹಿಜಾಬ್‌ ಧರಿಸುತ್ತಲೇ ಇಲ್ಲ.
    – ಹಾಗಂತ ಅವರೆಲ್ಲ ಇಸ್ಲಾಂ ಧರ್ಮ ತ್ಯಜಿಸಿದ್ದಾರೆಂದಲ್ಲ. ಹಿಜಾಬ್‌ ಧರಿಸುವುದು ಅವರಿಗೆ ಅಗತ್ಯ ಎಂದು ಅನಿಸಿಲ್ಲವಷ್ಟೇ.
    – ಹಿಜಾಬ್‌ ಧರಿಸುವುದು ಕಡ್ಡಾಯ ಅಥವಾ ಅನಿವಾರ್ಯ ಎನ್ನುವುದಾದರೆ ಮೊದಲು ಅಗತ್ಯ ಧಾರ್ಮಿಕ ಆಚರಣೆ ಹೌದೋ ಅಲ್ಲವೋ ಎಂಬುದರ ಪರಿಶೀಲನೆಯಾಗಬೇಕು.

    ದಕ್ಷಿಣ ಆಫ್ರಿಕಾ ಉದಾಹರಣೆ
    ದಕ್ಷಿಣ ಆಫ್ರಿಕಾದಲ್ಲಿ ಓದುತ್ತಿದ್ದ ತಮಿಳುನಾಡಿನ ಹಿಂದು ವಿದ್ಯಾರ್ಥಿನಿಯೊಬ್ಬರಿಗೆ ಶಾಲೆಗೆ ಮೂಗುತಿ ಧರಿಸಲು ಅವಕಾಶ ಸಿಕ್ಕಿರಲಿಲ್ಲ. ಆದರೆ, ಅಲ್ಲಿನ ಸಾಂವಿಧಾನಿಕ ನ್ಯಾಯಾಲಯವು ಶಾಲೆಯ ನಿಲುವನ್ನು ತಳ್ಳಿಹಾಕಿ ಮೂಗುತಿ ಧಾರ್ಮಿಕ ಗುರುತಲ್ಲ. ವಿದ್ಯಾರ್ಥಿನಿಯ ಗುರುತಿನ ಭಾಗವಾಗಿ ಆಕೆ ಅದನ್ನು ಧರಿಸಬಹುದು ಎಂದು ತೀರ್ಪು ನೀಡಿತ್ತು ಎಂದು ಕಾಮತ್ ಉಲ್ಲೇಖಿಸಿದ್ದರು. ಅದೇ ರೀತಿ ಅಮೆರಿಕ ಕೆನಡಾ ದೇಶಗಳ ಉದಾಹರಣೆಯನ್ನೂ ನೀಡಿದಾಗ, “ನಾವು ವಿದೇಶಗಳನ್ನು ಭಾರತಕ್ಕೆ ಹೋಲಿಸಬಹುದೇ? ನಮ್ಮದು ಸಂಪ್ರದಾಯವಾದಿ ದೇಶವಲ್ಲವೇ ಎಂದ ನ್ಯಾ. ಗುಪ್ತಾ, ಮಂಗಲಸೂತ್ರ ಧರ್ಮವನ್ನು ಪ್ರತಿಬಿಂಬಿಸಿದರೂ, ಮೂಗುತಿ ಧಾರಣೆ ಧರ್ಮದ ಸಂಕೇತವೇನಲ್ಲ. ವಿಶ್ವದೆಲ್ಲೆಡೆ ಜನರು ಕಿವಿಯೋಲೆ ಧರಿಸುವುದನ್ನು ನೋಡಿದ್ದೇವೆ. ಆದರೆ ಅದು ಧರ್ಮಾಚರಣೆಯ ಭಾಗವಲ್ಲ ಎಂದು ತಿಳಿಸಿದರು. ವಿದೇಶದ ನ್ಯಾಯಾಲಯಗಳು ತಮ್ಮ ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ಥಿತಿ-ಗತಿಗಳಿಗೆ ಅನುಗುಣವಾಗಿ ತೀರ್ಪನ್ನು ನೀಡುತ್ತವೆ ಎಂದು ನ್ಯಾ. ಸುಧಾಂಶು ಧುಲಿಯಾ ದನಿಗೂಡಿಸಿದ್ದರು.

    ಕಾನೂನಿನ ಸಮಾನ ರಕ್ಷಣೆ ಎಂದರೆ ಎಲ್ಲರನ್ನೂ ಬೇರೆ ಬೇರೆಯಾಗಿ ನೋಡುವುದಲ್ಲ. ವಿದ್ಯಾರ್ಥಿಗಳೆಲ್ಲರೂ ಸೇರಿ ಒಂದು ತರಗತಿ ಮತ್ತು ವರ್ಗ. ಧರ್ಮವು ವಿಭಜನೆಯ ಸಂಕೇತ. ಪ್ರತ್ಯೇಕ ಧರ್ಮಗಳಿಗೆ ಪ್ರತ್ಯೇಕ ಕಾನೂನು ಎಂಬುದಿಲ್ಲ. ಇದ್ದಿದ್ದರೆ, ಜಾತ್ಯತೀತ ಸಂಸ್ಥೆಯಲ್ಲಿ ಧರ್ಮದ ಆಧಾರದ ಮೇಲೆ ತಾರತಮ್ಯ ಶುರುವಾಗಿ, ಒಬ್ಬರು ಹಿಜಾಬ್ ಧರಿಸುವುದು ನನ್ನ ಹಕ್ಕು ಎನ್ನುತ್ತಾರೆ. ಇನ್ನೊಬ್ಬರು ಶಾಲು ಹಾಕಬೇಕೆಂದು ಹೇಳುತ್ತಾರೆ. ಮತ್ತೊಬ್ಬರು ಮತ್ತೇನೇನೋ ಹಾಕಬೇಕೆಂದು ಬಯಸುತ್ತಾರೆ. ಜಾತ್ಯತೀತ ಶಿಕ್ಷಣ ಸಂಸ್ಥೆಯಲ್ಲಿ ಧಾರ್ಮಿಕ ಗುರುತಿಗೆ ಎಲ್ಲಿದೆ ಅವಕಾಶ? ಜಾತ್ಯತೀತ ಶಿಕ್ಷಣದಲ್ಲಿ ಇವುಗಳಿಗೆಲ್ಲ ಆದ್ಯತೆ ಇರಕೂಡದು.
    | ಕೆ.ಎಂ. ನಟರಾಜ್‌ ಕೇಂದ್ರದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ (ರಾಜ್ಯ ಸರ್ಕಾರದ ಪರ)

    ಕರ್ನಾಟಕ ಹಿಜಾಬ್​ ಬ್ಯಾನ್​ ಕೇಸ್​: ಇಬ್ಬರು ನ್ಯಾಯಮೂರ್ತಿಗಳಿಂದ ವಿಭಿನ್ನ ತೀರ್ಪು, ಸಿಜೆಐ ಪೀಠಕ್ಕೆ ವರ್ಗಾವಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts