More

    ಮಂಡ್ಯದಲ್ಲಿ ನಕಲಿ ಸಾವಯವ ಗೊಬ್ಬರ ಉತ್ಪಾದನಾ ಘಟಕ ಪತ್ತೆ: ಹಲವು ರೈತರಿಗೆ ವಂಚನೆ

    ಮದ್ದೂರು: ಮಂಡ್ಯ ಜಿಲ್ಲೆಯಲ್ಲಿ ಪಾಲಿಶ್​​ ಅಕ್ಕಿ ದಂಧೆ ಪತ್ತೆಯಾದ ಬೆನ್ನಲ್ಲೇ ನಕಲಿ ಸಾವಯವ ಗೊಬ್ಬರ ದಂಧೆಯೂ ಬೆಳಕಿಗೆ ಬಂದಿದೆ. ಸಾವಯವ ಗೊಬ್ಬರದ ಹೆಸರಲ್ಲಿ ಕೃಷಿಕರಿಗೆ ವಂಚಿಸುತ್ತಿದ್ದ ಆರೋಪಿಗಳು, ನಕಲಿ ಸಾವಯವ ಗೊಬ್ಬರ ತಯಾರಿಸಿ ಮಂಗಳೂರು, ಬೆಂಗಳೂರು, ಮೈಸೂರು ಜಿಲ್ಲೆ ಸೇರಿದಂತೆ ಇತರೆಡೆಗೂ ಸರಬರಾಜು ಮಾಡುತ್ತಿದ್ದರು ಎನ್ನಲಾಗಿದೆ.

    ಮದ್ದೂರು ತಾಲೂಕಿನ ಕೊಪ್ಪ ಹೋಬಳಿ ಮರಳಿಗ ಗ್ರಾಮದ ಸಮೀಪದ ಗೊಲ್ಲರದೊಡ್ಡಿಯ ಹೊರವಲಯದ ಜಮೀನಿನಲ್ಲಿದ್ದ ನಕಲಿ ಸಾವಯವ ಗೊಬ್ಬರದ ಘಟಕ ಮೇಲೆ ಕೃಷಿ ಅಧಿಕಾರಿಗಳು ಗುರುವಾರ ದಿಢೀರ್​ ದಾಳಿ ನಡೆಸಿ ಲಾರಿಯಲ್ಲಿದ್ದ 25 ಟನ್​ ನಕಲಿ ಸಾವಯವ ಗೊಬ್ಬರ ಹಾಗೂ ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
    ಮಂಡ್ಯದಲ್ಲಿ ನಕಲಿ ಸಾವಯವ ಗೊಬ್ಬರ ಉತ್ಪಾದನಾ ಘಟಕ ಪತ್ತೆ: ಹಲವು ರೈತರಿಗೆ ವಂಚನೆ

    ನಕಲಿ ಸಾವಯವ ಗೊಬ್ಬರ ತಯಾರು ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಆಧರಿಸಿ ಕೃಷಿ ಇಲಾಖೆಯ ಜಂಟಿ ಉಪ ನಿರ್ದೇಶಕ ಚಂದ್ರಶೇಖರ್​ ಮಾರ್ಗದರ್ಶನದಲ್ಲಿ, ಉಪ ನಿರ್ದೇಶಕಿ ಮಾಲತಿ, ತಾಲೂಕು ಕೃಷಿ ಅಧಿಕಾರಿ ಶ್ರೀನಾಥ್​, ಕೃಷಿ ಅಧಿಕಾರಿ ಕೃಷ್ಣೇಗೌಡ, ತಾಂತ್ರಿಕ ಅಧಿಕಾರಿ ಮಂಜು ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಲಾರಿಗೆ ಗೊಬ್ಬರದ ಮೂಟೆಗಳನ್ನು ತುಂಬುತ್ತಿದ್ದ ಕೆಲಸಗಾರರು ಅಧಿಕಾರಿಗಳನ್ನು ಕಂಡು ಪರಾರಿಯಾಗಿದ್ದಾರೆ. ಲಾರಿ ಚಾಲಕ ಶ್ರೀನಿವಾಸ್​ನನ್ನು ಅಧಿಕಾರಿಗಳು ವಶಕ್ಕೆ ಪಡೆದು ಬೆಸಗರಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸಕ್ಕರೆ ಕಾರ್ಖಾನೆಯಲ್ಲಿ ಸಿಗುವ ಮಡ್ಡಿಯನ್ನು ತಂದು ಅದಕ್ಕೆ ಸ್ಪೆಂಟ್​ ವಾಸ್​ ಮಿಶ್ರಣ ಮಾಡಿ ನಿಸರ್ಗ ಬಯೋಟೆಕ್​ ಶಿರಾ ಎಂಬ ಹೆಸರಿನ ಚೀಲದಲ್ಲಿ 25 ಕೆಜಿ ಬ್ಯಾಗಿನಲ್ಲಿ ತುಂಬಿ ಲಾರಿಯಲ್ಲಿ ಸಾಗಿಸಲು ಸಿದ್ಧಗೊಳಿಸಲಾಗುತ್ತಿತ್ತು. ಜಮೀನಿನ ಮಾಲೀಕ ಹಾಗೂ ನಕಲಿ ರಸಗೊಬ್ಬರ ಮಾಡುತ್ತಿದ್ದವರು ಯಾರು? ಎಂಬುವುದರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

    ಇತ್ತೀಚಿಗೆ ಮಳವಳ್ಳಿ ಮತ್ತು ಮದ್ದೂರಿನಲ್ಲಿ ನಕಲಿ ಗೊಬ್ಬರ ದಂಧೆ ಪತ್ತೆಯಾದ ಬೆನ್ನೆಲ್ಲೇ ಮರಳಿಗ ಗ್ರಾಮದ ಗೊಲ್ಲರದೊಡ್ಡಿ ಹೊರವಲಯದಲ್ಲಿ ನಕಲಿ ರಸಗೊಬ್ಬರ ಉತ್ಪಾದನಾ ಘಟಕ ಪತ್ತೆಯಾಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts