More

    ಮಳೆಯಾದರೂ ತುಂಬಿಕೊಳ್ಳದ ಡ್ಯಾಮ್, ತುಂಬೆ, ಎಎಂಆರ್, ಬಿಳಿಯೂರು ಡ್ಯಾಮ್ ನೀರಿನ ಮಟ್ಟ ಕುಸಿತ

    ಮಂಗಳೂರು: ಕಳೆದ ಒಂಡೆರಡು ದಿನಗಳಲ್ಲಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮಳೆಯಾದರೂ ಜಿಲ್ಲೆಯ ಪ್ರಮುಖ ನೀರು ಪೂರೈಕಾ ಟ್ಯಾಂಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿಲ್ಲ.

    ಚಾರ್ಮಾಡಿ, ಸುಬ್ರಹ್ಮಣ್ಯ, ಕಡಬ ಭಾಗದಲ್ಲಿ ಮಳೆಯಾಗಿದ್ದು, ಪ್ರತಿದಿನ ಉತ್ತಮ ಮಳೆ ಮುಂದುವರಿದರೆ ಮಾತ್ರ ಡ್ಯಾಂಗಳಿಗೆ ನೀರು ಹರಿದು ಬರಲು ಸಾಧ್ಯವಿದೆ. ಸಧ್ಯಕ್ಕಂತೂ ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ನೀರಿನ ಸಂಗ್ರಹ 3.76 ಮೀಟರ್‌ಗೆ ಇಳಿಕೆಯಾಗಿದೆ. ಇದು ಎಂಟು ವರ್ಷಗಳಲ್ಲಿ ದಾಖಲೆ ಇಳಿಕೆಯಾಗಿದೆ. ಎಎಂಆರ್ ಡ್ಯಾಂನಲ್ಲೂ 15.30 ಮೀ.ಗೆ ನೀರು ತಲುಪಿದೆ. ಗ್ರಾಮೀಣ ಭಾಗದ ನೇತ್ರಾವತಿ ನದಿಯ ಬಿಳಿಯೂರು ಅಣೆಕಟ್ಟಿನಲ್ಲಿ ಈ ವರ್ಷಾರಂಭದಲ್ಲಿ 4 ಮೀಟರ್‌ಎತ್ತರದಷ್ಟು ನೀರು ಉಳಿಕೆಯಾಗಿದ್ದ ಬಿಳಿಯೂರು ಅಣೆಕಟ್ಟಿನಲ್ಲಿ ಬೇಸಗೆಯ ಕಾರಣಕ್ಕೆ ನೀರಿನ ಪ್ರಮಾಣದಲ್ಲಿ ಕುಸಿತ ಕಂಡು 3.7 ಮೀಟರ್‌ದಾಖಲಾಗಿತ್ತು. ಕಳೆದ ಏ. 18 ರಂದು ಸರಪಾಡಿ ಹಾಗೂ ಕಡೆಶಿವಾಲಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅಣೆಕಟ್ಟಿಗೆ 2.1 ಮೀಟರ್‌ನೀರನ್ನು ಹರಿಯ ಬಿಟ್ಟ ಕಾರಣ ಬಿಳಿಯೂರು ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರಿನ ಪ್ರಮಾಣ 1.6 ಮೀಟರ್‌ನಷ್ಟು ಮಾತ್ರ ಆಗಿತ್ತು.

    * ತುಂಬಿಕೊಳ್ಳದ ಡ್ಯಾಮ್

    ಕಳೆದ ಒಂದೆರಡು ದಿನದಿಂದ ಜಿಲ್ಲೆಯ ಹಲವೆಡೆ ಮಳೆಯಾದರೂ ಡ್ಯಾಂಗಳು ತುಂಬುವಂತಹ ಮಳೆ ಸುರಿದಿಲ್ಲ. ಲಭ್ಯ ಮಾಹಿತಿ ಪ್ರಕಾರ ಕಳೆದ 1 ವಾರದಿಂದ ಬೆಳ್ತಂಗಡಿಯಲ್ಲಿ 2.7 ಮಿಮಿ, ಸುಳ್ಯ 3.1ಮಿಮಿ., ಪುತ್ತೂರು 2.1, ಬಂಟ್ವಾಳ 1.7 ಮಿಮಿ, ಮಂಗಳೂರು 1 ಮಿಮಿ, ಮೂಡುಬಿದರೆ 2.1 ಮಿಮಿ ಸರಾಸರಿ ಮಳೆಯಾಗಿದ್ದು, ಈ ಮಳೆ ಇಳೆಯನ್ನು ಹಲವು ಗಂಟೆಯವರೆಗೆ ತಂಪಾಗಿರಿಸಿದ್ದು ಹೊರತುಪಡಿಸಿ ತೋಡುಗಳಲ್ಲಿ ಹರಿಯುವಷ್ಟು ಮಳೆಯಾಗಿಲ್ಲ. ಸಧ್ಯಕ್ಕೆ ಮಳೆಯಾದರೂ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಏರಿಲ್ಲ, ರೇಷನಿಂಗ್ ಮಾಡಿದರೂ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿಯುತ್ತಿರುವುದರಿಂದ ನಗರದಲ್ಲಿ ನೀರಿನ ರೇಷನಿಂಗ್ ಮುಂದುವರಿದಿದೆ. ಮುಂದಿನ 15-20 ದಿನ ಮಾತ್ರ ತುಂಬೆಯಿಂದ ನೀರು ಮೇಲೆತ್ತಲು ಸಾಧ್ಯ. ಮುಂದಿನ ಒಂದೆರಡು ವಾರದೊಳಗೆ ಉತ್ತಮ ಮಳೆಯಾಗದಿದ್ದರೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆಯಾಗುವ ಸಾಧ್ಯತೆ ಅಧಿಕ.

    ——————–

    ತುಂಬೆ ಡ್ಯಾಂನಲ್ಲಿ ದಾಖಲೆ ಇಳಿಕೆ

    ನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ಭಾನುವಾರ ನೀರಿನ ಸಂಗ್ರಹ 3.75 ಮೀಟರ್‌ಗೆ ದಾಖಲೆಯ ಇಳಿಕೆಯಾಗಿದೆ. ಎಎಂಆರ್ ಡ್ಯಾಂನಲ್ಲೂ ನೀರಿನ ಮಟ್ಟ 15.30 ಮೀಟರ್‌ಗೆ ಇಳಿಕೆಯಾಗಿದೆ. ತುಂಬೆ ಡ್ಯಾಂಗೆ ಹರೇಕಳ ಡ್ಯಾಂನಿಂದ ನೀರು ಪಂಪಿಂಗ್ ಮಾಡುವ ಪ್ರಕ್ರಿಯೆ ನಿರಂತರವಾಗಿ ಮುಂದುವರಿದಿದೆ. ರೇಶನಿಂಗ್ ಆರಂಭವಾದ ಬಳಿಕ ನಗರದಲ್ಲಿ ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚಾಗಿದೆ. ಗ್ರಾಮೀಣ ಭಾಗದಲ್ಲೂ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ನೀರಿನ ಅಭಾವ ಉಂಟಾಗಿದೆ.

    ——————–

    ವಿದ್ಯುತ್ ಚಕ್ತಿ ಸಂಪರ್ಕ ಕಡಿತ

    ಜಿಲ್ಲೆಯಲ್ಲಿರುವ ಜಲಾಶಯ, ಡ್ಯಾಂ ಮತ್ತು ಮುಂತಾದ ನೀರಿನ ಮೂಲಗಳಲ್ಲಿ ಲಭ್ಯವಿರುವ ನೀರನ್ನು ಕೃಷಿ/ತೋಟಗಾರಿಕಾ ಬೆಳೆಗಳ ಉದ್ದೇಶಕ್ಕಾಗಿ ಬಳಸದಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಆದರೆ ಹಲವಡೆ ಜಿಲ್ಲಾಧಿಕಾರಿಗಳ ಈ ನಡೆಯನ್ನು ರೈತರು ವಿರೋಧಿಸಿ ಕೃಷಿಗೆ ನೀರಿನ ಬಳಕೆ ನಿರಂತರವಾಗಿ ನಡೆಯಿತು. ಈ ದಿಸೆಯಲ್ಲಿ ಜಿಲ್ಲಾದ್ಯಂತ ಕುಡಿಯುವ ನೀರು ಹೊರತುಪಡಿಸಿ ಕೃಷಿ ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ನೀರು ಪೂರೈಕೆ ಮಾಡುವ ವಿದ್ಯುತ್ ಚಕ್ತಿ ಸಂಪರ್ಕ ಕಡಿತಗೊಳಿಸುವಂತೆ ಮೆಸ್ಕಾಂಗೆ ಜಲ್ಲಾಧಿಕಾರಿ ಸೂಚಿಸಿದ್ದರಿಂದ ಶೇ.75ರಷ್ಟು ಸಂಪರ್ಕ ಕಡಿತಗೊಂಡಿದೆ.

    ———————

    ಕುಡಿಯುವ ನೀರಿನ ಸಮರ್ಪಕ ಸರಬರಾಜು ಮಾಡುವ ಬಗ್ಗೆ ಎಲ್ಲಾ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಸದ್ಯಕ್ಕೆ ತುಂಬೆ ನೀರಿನ ಮಟ್ಟ ನಿರಂತರ ಇಳಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹರೆಕಳ ಡ್ಯಾಂ ನೀರನ್ನೇ ಹೆಚ್ಚಾಗಿ ತುಂಬೆಗೆ ಪಂಪಿಂಗ್ ಮಾಡಲಾಗುತ್ತಿದೆ. ಕಳೆದ 1-2 ದಿನದಿಂದ ಗ್ರಾಮೀಣ ಭಾಗದಲ್ಲಿ ಮಳೆಯಾದರೂ ಡ್ಯಾಂ ತುಂಬಿಲ್ಲ.

    ಸುಧೀರ್ ಶೆಟ್ಟಿ ಕಣ್ಣೂರು, ಮೇಯರ್, ಮಂಗಳೂರು

    —————–

    ಸಧ್ಯಕ್ಕೆ ಜಿಲ್ಲಾಡಳಿತದಿಂದ ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಮಳೆಯಾದರೂ ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಕುಡಿಯುವ ನೀರಿನ ಪೂರೈಕೆಗೆ ಬೇಕಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ.

    ಮುಲ್ಲೈ ಮುಗಿಲನ್, ದ.ಕ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts