More

    ವಿಜಯೇಂದ್ರ ಪ್ರಭಾವ ತಗ್ಗಿಸಲು ಸಂಘಟಿತ ತಂತ್ರ? ಅಸಮಾಧಾನಿತರಿಂದ ಷಡ್ಯಂತ್ರ ಶಂಕೆ

    ಬೆಂಗಳೂರು: ಪಕ್ಷದ ಪರ ಸೃಷ್ಟಿಯಾಗಿರುವ ವಾತಾವರಣ, ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸಿನ ಅಲೆಯು ಲೋಕಸಭೆ ಚುನಾವಣೆಗೆ ವರದಾನವಾಗಲಿದೆ ಎಂಬ ಲೆಕ್ಕಾಚಾರದಲ್ಲಿದ್ದ ರಾಜ್ಯ ಬಿಜೆಪಿಗೆ ‘ಒಳ ಹೊಡೆತ’ದ ದಿಗಿಲು ಆವರಿಸಿದೆ. ರಾಜ್ಯದಲ್ಲಿ 2019ರ ಲೋಕಸಭೆ ಚುನಾವಣೆ ಫಲಿತಾಂಶ ಮರುಕಳಿಸಿದರೆ ಪಕ್ಷಕ್ಕೆ ಬಲ, ಮತ್ತೊಮ್ಮೆ ಮೋದಿಗೆ ಗಮನಾರ್ಹ ಕೊಡುಗೆ ನೀಡಿದಂತಾಗಲಿದೆ ಎಂಬ ಹೆಮ್ಮೆ, ಹೆಗ್ಗಳಿಕೆ ಜಾಗದಲ್ಲಿ ಬೇರೇನೋ ಠಿಕಾಣಿ ಹೂಡಿದೆ.

    ನಿರೀಕ್ಷೆಯಂತೆ ಮೇಲುಗೈ ಸಾಧಿಸಿದರೆ ಯಾರಿಗೆಲ್ಲ ಅನುಕೂಲ, ವರ್ಚಸ್ಸು ಹೆಚ್ಚಿಸಿಕೊಳ್ಳಲಿದ್ದಾರೆ ಎಂಬ ‘ಭವಿಷ್ಯದ ದೃಷ್ಟಿ’ ನೆಟ್ಟವರು ಗೆರಿಲ್ಲಾ ಮಾದರಿ ದಾಳಿ ಪಿತೂರಿ ಆರಂಭಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಭಾವ ತಗ್ಗಿಸುವ ಒಂದಂಶದ ಕಾರ್ಯಸೂಚಿಯೊಂದಿಗೆ ಸಂಘಟಿತ ತಂತ್ರಗಾರಿಕೆ ಹೆಣೆದಿರುವ ಸಂಶಯ ಪಕ್ಷದ ಕಾರ್ಯಕರ್ತರಲ್ಲಿ ಚಿಗುರೊಡೆದಿದೆ. ಈ ನಡುವೆ ‘ಹಾನಿ ನಿಯಂತ್ರಣ’ಕ್ಕೆ ಕೇಸರಿ ಪಡೆ ಬೆವರು ಹರಿಸುತ್ತಿದ್ದು, ಅಸಮಾಧಾನಿತರ ಮನವೊಲಿಸಲು ನಾಯಕರು ಸಮರೋಪಾದಿಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.

    ಗೆರಿಲ್ಲಾ ಮಾದರಿ ದಾಳಿ: ಪಕ್ಷದ ಹಿರಿಯ ನಾಯಕ ಈಶ್ವರಪ್ಪ ಬಂಡಾಯ, ಬೆಳಗಾವಿ, ಬೆಂಗಳೂರು ಉತ್ತರ, ದಾವಣಗೆರೆ ಕ್ಷೇತ್ರಗಳಲ್ಲಿ ಅಪಸ್ವರಗಳು ಕೇಳಿಬರುತ್ತಿವೆ. ಇವೆಲ್ಲ ಸಂಘಟನಾ ಬಲ, ಕಾರ್ಯಕರ್ತರ ಮನೋಬಲ ಕುಗ್ಗಿಸುವ ‘ಗೆರಿಲ್ಲಾ ಮಾದರಿ ದಾಳಿ’ ಎಂದು ಬಿಜೆಪಿ ಎರಡನೇ ಹಂತದ ನಾಯಕರೇ ವಿಶ್ಲೇಷಿಸುತ್ತಿದ್ದಾರೆ. ಕೇಂದ್ರ ನಾಯಕರು ತಮ್ಮದೇ ಸಮೀಕ್ಷಾ ವರದಿ, ಗುಪ್ತದಳ ಮಾಹಿತಿ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿಕೊಂಡು ಅಭ್ಯರ್ಥಿಗಳ ಪಟ್ಟಿಗೆ ಅಂತಿಮ ಸ್ವರೂಪ ಕೊಟ್ಟಿದ್ದಾರೆ. ದೆಹಲಿ ಸಭೆಗೆ ಮುನ್ನವೇ ಒಬ್ಬೊಬ್ಬ ಅಭ್ಯರ್ಥಿ ಬಗ್ಗೆ ರಾಜ್ಯನಾಯಕರಿಗಿಂತ ಹೆಚ್ಚು ಅಧ್ಯಯನ ಹೈಕಮಾಂಡ್ ನಿಗಾದಲ್ಲಿ ನಡೆದಿದೆ. ನಂತರವಷ್ಟೇ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ರಾಜ್ಯ ನಾಯಕರ ಅಭಿಪ್ರಾಯಗಳನ್ನು ಕೇಳಿದ್ದರೂ ವರಿಷ್ಠರ ತೀರ್ವನವೇ ಅಂತಿಮವೆಂಬುದು ಸಾಮಾನ್ಯ ಕಾರ್ಯಕರ್ತನಿಗೆ ಗೊತ್ತಿದೆ. ವಿಶಿಷ್ಟ ಪ್ರಯೋಗ, ಬದಲಾವಣೆ, ಹೊಸ ಮುಖಗಳ ಪರಿಚಯ, ಅಚ್ಚರಿ ಆಯ್ಕೆ. ಇವೆಲ್ಲ ವರಿಷ್ಠರ ರಣವ್ಯೂಹದ ಭಾಗವಾಗಿವೆ. ಆದರೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರತ್ತ ಬೊಟ್ಟು ಮಾಡುತ್ತಿರುವುದರ ಹಿಂದೆ ‘ಬಲಿಪಶು’ ಮಾಡುವ ಯುದ್ಧ ತಂತ್ರ ಎಣೆಯಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ವಿತಂಡ ಮನಸ್ಥಿತಿ: ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ದೆಹಲಿ ನಾಯಕರ ನಿರ್ಧಾರವೇ ಅಂತಿಮವೆಂದು ಅರಿತಿರುವ ಈಶ್ವರಪ್ಪ ತಮ್ಮ ಸಿಟ್ಟಿಗೆ ನೀಡುತ್ತಿರುವ ಕಾರಣ, ಆಕ್ರೋಶವು ವಿತಂಡ ಮನಸ್ಥಿತಿ ಬಿಂಬಿಸುತ್ತಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಬೆಂಗಳೂರು ಉತ್ತರಕ್ಕೆ ಶೋಭಾ ಕರಂದ್ಲಾಜೆ ವರ್ಗಾವಣೆ, ಮೈಸೂರು ಕ್ಷೇತ್ರದಲ್ಲಿ ಪ್ರತಾಪಸಿಂಹ ಕೈಬಿಟ್ಟು ಯದುವೀರ ಒಡೆಯರ್ ಅವರನ್ನು ಕಣಕ್ಕಿಳಿಸಿರುವುದು ಅಚ್ಚರಿ ಆಯ್ಕೆ ಎನ್ನುವುದು ಸ್ಪಟಿಕದಷ್ಟೇ ನಿಚ್ಚಳ. ಹಾಲಿ ಸಂಸದರ ಪೈಕಿ ಎಂಟು ಜನರನ್ನು ಕೈಬಿಡಲಾಗಿದೆ. ರಾಜ್ಯ ನಾಯಕರೊಬ್ಬರ ಮಾತು ಕೇಳಿ ಇಂತಹ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಊಹಿಸು ವುದು ಅಸಾಧ್ಯ. ಹಿರಿಯ ನಾಯಕರಾದವರಿಗೆ ವರಿಷ್ಠರ ನಡೆಯ ಮಾಹಿತಿ ಇಲ್ಲವೆಂದರೆ ನಂಬುವುದು ಕಷ್ಟವೆಂದು ಮೂಲಗಳು ಹೇಳುತ್ತವೆ. ಮೋದಿ ಕಟ್ಟಾ ಬೆಂಬಲಿಗ ಎನ್ನುತ್ತಾ ಈಶ್ವರಪ್ಪ ಪರೋಕ್ಷವಾಗಿ ವರಿಷ್ಠರಿಗೆ ಸೆಡ್ಡು ಹೊಡೆದಿದ್ದಾರೆ. ಜತೆಗೆ ಹಿಂದುತ್ವದ ಲೇಪನ ಮಾಡಿ ಪ್ರತಾಪಸಿಂಹ, ಸಿ.ಟಿ.ರವಿಗೆ ಅನ್ಯಾಯವಾಗಿದೆ ಎನ್ನುತ್ತಿದ್ದು, ಪ್ರಭಾವಿಗಳು ಈ ಎಲ್ಲದರ ಹಿಂದೆ ನಿಂತು ಆಟವಾಡಿಸುತ್ತಿದ್ದಾರೆ ಎಂಬ ಸಂಶಯ ಬರುವಂತೆ ವರ್ತಿಸುತ್ತಿದ್ದಾರೆ. ವಿಧಾನಸಭೆ ಚುನಾವಣೆ ಪೂರ್ವ, ನಂತರ ಪ್ರಹಸನದ ಮುಂದುವರಿದ ಭಾಗದಂತೆ ಈಗಿನ ಬೆಳವಣಿಗೆ ಗೋಚರವಾಗುತ್ತದೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಒಳೇಟು, ಪರಸ್ಪರ ಎತ್ತಿಕಟ್ಟುವ, ಒಬ್ಬರು ಮತ್ತೊಬ್ಬರ ಕಾಲೆಳೆಯುವ ಪರಿಸ್ಥಿತಿಯನ್ನು ಕರ್ನಾಟಕದಲ್ಲಿ ಬಿಜೆಪಿ ಎದುರಿಸುತ್ತಿದೆ.

    ಒಬ್ಬರ ಮಾತು ಕೇಳಿ ಪಕ್ಷ ಟಿಕೆಟ್ ಕೊಡುವುದಿಲ್ಲ. ವರಿಷ್ಠರು ಎಲ್ಲರೊಂದಿಗೆ ರ್ಚಚಿಸಿದ್ದಾರೆ. ಒಮ್ಮತದ ತೀರ್ವನದಿಂದ ಅಭ್ಯರ್ಥಿಗಳ ಆಯ್ಕೆಯಾಗಿದೆ. ಹಿರಿಯ ನಾಯಕ ಈಶ್ವರಪ್ಪ ಸಿಟ್ಟು, ನೋವು ಎಲ್ಲವೂ ಸುಸೂತ್ರವಾಗಿ ಬಗೆಹರಿಯಲಿದೆ.

    | ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ

    ರಹಸ್ಯ ಕಾರ್ಯಸೂಚಿ ಪಕ್ಷಕ್ಕೆ ಮುಳುವು
    ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದ ಪ್ರಸಂಗ ಮಗ್ಗಲು ಮುಳ್ಳಾಗಿ ಬಾಧಿಸಿತ್ತು. ಈ ‘ಪತ್ರ ಪ್ರಹಸನ’ದ ಸೂತ್ರಧಾರ ಈಗಿನ ಬೆಳವಣಿಗೆ ಹಿಂದಿದ್ದಾರೆ ಎಂಬ ಸಂದೇಹ ತಲೆ ಎತ್ತಿದೆ. ಸದ್ಯದ ಬಿಕ್ಕಟ್ಟು ಶಮನವಾಗದಿದ್ದರೆ ಪಕ್ಷ ಗುರಿ ಮುಟ್ಟುವುದು ಕಷ್ಟ ಸಾಧ್ಯವಾಗಲಿದೆ. ತೆರೆಮರೆಯ ಸೂತ್ರಧಾರನ ಆಟಕ್ಕೆ ಮತ್ಯಾರದೋ ‘ಆತ್ಮಹತ್ಯೆ ರಾಜಕಾರಣ’ವಾಗಲಿದೆ ಎಂಬ ಬೇಗುದಿಯಲ್ಲಿ ಕೇಸರಿಪಡೆ ಬೇಯುತ್ತಿದೆ. ಸಹಜವಾಗಿಯೇ ಈ ಆಟದ ಪರಿಣಾಮ ಬಿಜೆಪಿ ಗೆಲುವಿನ ಪ್ರಮಾಣ ಕೂಡ ಕುಸಿಯಲಿದೆ.

    ಒಕ್ಕಲಿಗರಿಗೆ ಅನ್ಯಾಯವಾಗಿದೆ ಎಂಬ ಆರೋಪವೇ ಹುರುಳಿಲ್ಲದ್ದು. ಯಡಿಯೂರಪ್ಪ, ಈಶ್ವರಪ್ಪ ನಡುವೆ ನಾಲ್ಕು ಗೋಡೆ ಮಧ್ಯೆ ನಡೆದ ಮಾತುಕತೆ ಬಗ್ಗೆ ಗೊತ್ತಿಲ್ಲ. ಈಶ್ವರಪ್ಪ ಅವರ ಮುನಿಸು ತಣಿಸಲು ಪ್ರಯತ್ನಿಸುವೆ.

    | ಆರ್.ಅಶೋಕ್ ವಿಧಾನಸಭೆ ಪ್ರತಿಪಕ್ಷ ನಾಯಕ

    ಈಶ್ವರಪ್ಪ ಮನವೊಲಿಕೆಗೆ ಕಸರತ್ತು
    ಶಿವಮೊಗ್ಗ: ಪುತ್ರ ಕೆ.ಇ.ಕಾಂತೇಶ್​ಗೆ ಹಾವೇರಿ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ರೆಬೆಲ್ ಆಗಿ ಶಿವಮೊಗ್ಗ ಲೋಕಸಭೆಗೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೊಷಿಸಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮನವೊಲಿಸುವ ಹೈಕಮಾಂಡ್ ಪ್ರಯತ್ನ ಭಾನುವಾರವೂ ವಿಫಲಗೊಂಡಿತು.

    ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್, ಸಂಘಟನಾ ಕಾರ್ಯದರ್ಶಿ ರಾಜೇಶ್, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಎಂಎಲ್​ಸಿಗಳಾದ ಎನ್.ರವಿಕುಮಾರ್, ಡಿ.ಎಸ್.ಅರುಣ್ ಮತ್ತಿತರರು ಈಶ್ವರಪ್ಪ ಮನೆಗೆ ಭಾನುವಾರ ಬೆಳಗ್ಗೆ ಭೇಟಿ ನೀಡಿ ನಿರ್ಧಾರ ಬದಲಿಸುವಂತೆ ಮನವಿ ಮಾಡಿದರು. ರಾಷ್ಟ್ರೀಯ ನಾಯಕರೊಂದಿಗೆ ಸುದೀರ್ಘ ಚರ್ಚೆ ನಡುವೆಯೇ ಮನೆಯಿಂದ ಈಶ್ವರಪ್ಪ ಹೊರನಡೆದರು. ಸುಮಾರು ಒಂದು ತಾಸು ಕಾದರೂ ವಾಪಸ್ ಬಾರದ ಹಿನ್ನೆಲೆಯಲ್ಲಿ ನಾಯಕರು ಬರಿಗೈಲಿ ಮರಳಿದರು.

    ಸ್ಪರ್ಧೆ ನಿಶ್ಚಿತ ಎಂದ ಈಶ್ವರಪ್ಪ: ನಾನು ಈಗಾಗಲೆ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಘೊಷಿಸಿದ್ದೇನೆ. ಹಿಂದೆ ಸರಿಯುವ ಮಾತೇ ಇಲ್ಲ. ಯಡಿಯೂರಪ್ಪ ಹಿಂದುತ್ವದ ಪರವಾಗಿ ಕೆಲಸ ಮಾಡಿದವರಿಗೆ ಮೋಸ ಮಾಡಿದ್ದಾರೆ. ನಾನು ಚುನಾವಣೆಗೆ ಏಕೆ ಸ್ಪರ್ಧೆ ಮಾಡ್ತಿದ್ದೇನೆ ಎಂಬುದನ್ನು ವರಿಷ್ಠರ ಗಮನಕ್ಕೆ ತಂದಿದ್ದೇನೆ. ಪಕ್ಷ ಶುದ್ಧೀಕರಣ ಆಗಬೇಕು ಎಂಬ ಕಾರಣಕ್ಕೆ ಸ್ಪರ್ಧೆ ಮಾಡಿರುವುದಾಗಿ ಹೇಳಿದ್ದೇನೆ. ಕಾಂತೇಶ್​ಗೆ ಎಂಎಲ್​ಸಿ ಮಾಡು ತ್ತೇವೆ ಎಂಬ ಆಫರ್ ನೀಡಿದರು. ಆದರೆ ಪಕ್ಷ ಅಪ್ಪ-ಮಕ್ಕಳ ಕೈಯ ಲ್ಲಿದ್ದು ಹಿಂದುತ್ವದ ನಾಯಕರನ್ನು ತುಳಿಯುತ್ತಿದ್ದಾರೆ ಎಂದರು.

    ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ
    ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ದೇವರು. ಆದರೆ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ನೋವು ಆಗುತ್ತಿದೆ ಎಂದು ಈಶ್ವರಪ್ಪ ಹೇಳಿದರು. ಸೋಮವಾರ ನಡೆಯುವ ಬೃಹತ್ ಸಭೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂಬ ನೋವು ಆಗುತ್ತಿದೆ. ಮೋದಿ ಅವರನ್ನು ನಾನು ಭೇಟಿ ಮಾಡುತ್ತಿಲ್ಲ ಎಂದು ಹೇಳಿದರು.

    ಮಠಾಧೀಶರ ಬೆಂಬಲ
    ಮಗಳ ಮದುವೆಗೆ ಆಹ್ವಾನ ನೀಡಲು ಮಹರ್ಷಿ ಆನಂದ್ ಗುರೂಜಿ ಈಶ್ವರಪ್ಪ ಮನೆಗೆ ಭೇಟಿ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ಈಶ್ವರಪ್ಪ ಧರ್ಮದ ಪರವಾಗಿ ಹೋರಾಟ ಮಾಡಿದವರು. ಅಂತಹ ನಾಯಕತ್ವ ರಾಜ್ಯಕ್ಕೆ ಅಗತ್ಯ. ನಮ್ಮೆಲ್ಲ ಮಠಾಧೀಶರ ಬೆಂಬಲ ಈಶ್ವರಪ್ಪ ಅವರಿಗಿದೆ. ಈಶ್ವರಪ್ಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಮತ್ತು ಗೆಲ್ಲಬೇಕು ಎಂದು ಅಭಿಪ್ರಾಯಪಟ್ಟರು.

    ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇರೆಯವರಿದ್ದರು
    ಲಿಂಗಾಯತರೆಲ್ಲರೂ ಯಡಿಯೂರಪ್ಪ ಕೈಯಲ್ಲಿದ್ದಾರೆಂಬ ಭ್ರಮೆಯಲ್ಲಿ ಕೇಂದ್ರ ನಾಯಕರಿದ್ದಾರೆ. ಲಿಂಗಾಯತರೇ ಬೇಕಿದ್ದರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಥವಾ ಒಕ್ಕಲಿಗ ಸಮುದಾಯದ ಸಿ.ಟಿ.ರವಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬಹುದಿತ್ತು. ಹಿಂದುಳಿದ ವರ್ಗಗಳ ನಾಯಕನಾದ ನನಗೂ ಕೊಡಬಹುದಿತ್ತು ಎಂದು ಈಶ್ವರಪ್ಪ ಹೇಳಿದರು.

    ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮತ್ತು ನಾವು ಆತ್ಮೀಯ ಸ್ನೇಹಿತರು. ಇದೊಂದು ವೈಯಕ್ತಿಕ ಭೇಟಿ. ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಎಲ್ಲ ಗೊಂದಲವೂ ಸರಿಹೋಗುತ್ತದೆ.

    | ರಾಧಾಮೋಹನ್ ಅಗರ್ವಾಲ್ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ

    ಇನ್ನೆರಡು ದಿನದಲ್ಲಿ 2ನೇ ಪಟ್ಟಿ
    ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳ ರಾಜ್ಯದ ಎರಡನೇ ಪಟ್ಟಿ ಇನ್ನೆರಡು ದಿನಗಳಲ್ಲಿ ಪ್ರಕಟವಾಗಲಿದೆ. ಅಭ್ಯರ್ಥಿಗಳ ಆಯ್ಕೆ ಸಂಬಂಧ ಈಗಾಗಲೆ ಚರ್ಚೆಗಳಾಗಿವೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಮೊದಲ ಪಟ್ಟಿಯಲ್ಲಿ 20 ಅಭ್ಯರ್ಥಿಗಳ ಹೆಸರು ಪ್ರಕಟವಾಗಿದ್ದು, ಒಮ್ಮತದಿಂದ ತೀರ್ವನವಾಗಿವೆ. ಇನ್ನುಳಿದ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಲಿದೆ. ಯಾವುದೇ ಕ್ಷೇತ್ರಗಳ ಸಮಸ್ಯೆ ಇದ್ದರೂ ಪರಸ್ಪರ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳುತ್ತೇವೆ ಎಂದರು.

    ವಿವರ ಗೊತ್ತಿಲ್ಲ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವರಿಷ್ಠರನ್ನು ದೆಹಲಿಯಲ್ಲಿ ಶನಿವಾರ ಭೇಟಿ ಮಾಡಿರುವ ಮಾಹಿತಿಯಿದೆ. ಅಲ್ಲಿ ನಡೆದ ಚರ್ಚೆಯ ವಿವರ ಗೊತ್ತಿಲ್ಲವೆಂದರು.

    ವರಿಷ್ಠರೇ ಉತ್ತರ ಕೊಡ್ತಾರೆ
    ಶಿವಮೊಗ್ಗ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹಿರಿಯರು. ಪಕ್ಷ ಕಟ್ಟಿ ಬೆಳೆಸಿದವರು. ಯಾವುದೋ ಕಾರಣಕ್ಕೆ ನೋವಾಗಿರಬಹುದು. ವರಿಷ್ಠರು ಮನವೊಲಿಸುವ ಕೆಲಸ ಮಾಡಲಿದ್ದು ಎಲ್ಲವೂ ಸರಿಹೋಗಲಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಮಾತನಾಡಿದ ಅವರು, ಸೋಮವಾರ ಪ್ರಧಾನಿ ನರೇಂದ್ರ ಮೋದಿ ಬಂದಾಗ ವೇದಿಕೆಯಲ್ಲಿ ಈಶ್ವರಪ್ಪ ಅವರೂ ಇರುತ್ತಾರೆಂಬ ವಿಶ್ವಾಸ ನನಗಿದೆ. ಕೆ.ಇ.ಕಾಂತೇಶ್​ಗೆ ಹಾವೇರಿ ಟಿಕೆಟ್ ತಪ್ಪಲು ನಾನು ಕಾರಣನಲ್ಲ. ಕೇಂದ್ರ ಸಂಸದೀಯ ಮಂಡಳಿ ತೆಗೆದುಕೊಂಡಿರುವ ತೀರ್ವನವದು ಎಂದು ಸ್ಪಷ್ಟಪಡಿಸಿದರು. ಕರ್ನಾಟಕದಲ್ಲಿ 25ರಿಂದ 26 ಕ್ಷೇತ್ರಗಳಲ್ಲಿ ಗೆದ್ದುಕೊಂಡು ಬರುವುದಾಗಿ ಪ್ರಧಾನಿ ನರೇಂದ್ರ ಮೋದಿಗೆ ಮಾತು ಕೊಟ್ಟಿದ್ದೇನೆ. 28 ಕ್ಷೇತ್ರಗಳನ್ನೂ ಗೆಲ್ಲುವುದಕ್ಕೆ ಶ್ರಮ ಹಾಕಲಾಗುತ್ತಿದೆ. ಆದರೂ ಒಂದೆರಡು ಆಕಡೆ-ಈಕಡೆ ಆಗಬಹುದೆಂಬ ನಿರೀಕ್ಷೆಯೂ ಇದೆ. ಕನಿಷ್ಠ 26 ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬಂದು ದೆಹಲಿಯಲ್ಲಿ ಭೇಟಿ ಮಾಡುವುದಾಗಿ ಭರವಸೆ ನೀಡಿದ್ದೇನೆ ಎಂದರು.

    ಏಳು ತಿಂಗಳ ಗರ್ಭಿಣಿ ಮಾಡೋ ಕೆಲಸನಾ ಇದು? ನಟಿ ಅಮಲಾ ಪೌಲ್​ಗೆ ನೆಟ್ಟಿಗರ ತರಾಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts