More

    ತೊರೆನೂರಿನಲ್ಲಿ ಸಂಭ್ರಮದ ಹೊನ್ನಾರು ಉತ್ಸವ

    ಕುಶಾಲನಗರ: ತೊರೆನೂರು ಗ್ರಾಮದಲ್ಲಿ ಬಸವೇಶ್ವರ ದೇವಾಲಯ ಸಮಿತಿ ಆಶ್ರಯದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಜನಪದ ಸಂಸ್ಕೃತಿಯ ಪ್ರತೀಕವಾದ ಹೊನ್ನಾರು ಉತ್ಸವವನ್ನು ಮಂಗಳವಾರ ರೈತರು ಸಂಭ್ರಮದಿಂದ ಆಚರಿಸಿದರು.

    ಹಾರಂಗಿ ನೀರಾವರಿ ಬಯಲಿನ ತೊರೆನೂರು, ಶಿರಂಗಾಲ, ಹೆಬ್ಬಾಲೆ, ಹುಲುಸೆ, ಕೂಡ್ಲೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಗ್ರಾಮ ದೇವಾಲಯ ಸಮಿತಿಗಳ ವತಿಯಿಂದ ರೈತರು ಪ್ರತಿವರ್ಷ ಆಚರಿಸುವ ಯುಗಾದಿ ಸಂದರ್ಭ ಹೊನ್ನಾರು (ಚಿನ್ನದ ಉಳುಮೆ)ಉತ್ಸವವನ್ನು ಸಾಂಪ್ರಾದಾಯಿಕ ಉಳುಮೆ ಮಾಡುವ ಮೂಲಕ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಗೆ ಚಾಲನೆ ನೀಡಿದರು.

    ಹೊಸ ಸಂವತ್ಸರದ ಹೊಸ ಪಂಚಾಂಗದ ಪ್ರಕಾರ ತೊರೆನೂರು ಗ್ರಾಮದಲ್ಲಿ ರೈತ ಎಸ್.ಬಿ.ಲೋಕೇಶ್ ಎಂಬುವರು ಗ್ರಾಮದ ಬಸವೇಶ್ವರ ದೇವರ ಜಮೀನಿನಲ್ಲಿ ಮೊದಲ ಪೂಜೆ ಸಲ್ಲಿಸಿದ ನಂತರ ಹೊನ್ನಾರು ಉಳುಮೆಗೆ ಚಾಲನೆ ನೀಡಿದರು. ರೈತರು ಗ್ರಾಮದಲ್ಲಿ ಮೆರವಣಿಗೆಯಲ್ಲಿ ತೆರಳಿ ಗ್ರಾಮದ ಬಸ್ ನಿಲ್ದಾಣ ಬಳಿಯಿರುವ ಬಸವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಪೂಜೆ ಸಲ್ಲಿಸಿ ದೇಶದಲ್ಲಿ ಉತ್ತಮ ಮಳೆ ಬೆಳೆಯಾಗಿ, ಜನ ಜಾನುವಾರುಗಳಿಗೆ ಸುಭಿಕ್ಷೆ ಲಭಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

    ಅರ್ಚಕ ಟಿ.ಎಲ್.ಸೋಮಶೇಖರ್ ಮತ್ತು ನಿಂಗಪ್ಪ ಧಾರ್ಮಿಕ ಆಚರಣೆ ನಂತರ ಜಾನುವಾರುಗಳಿಗೆ ಸಾಮೂಹಿಕ ಪೂಜೆ ಸಲ್ಲಿಸಿದರು. ರೈತರು ಸಿಂಗರಿಸಿದ ಜಾನುವಾರುಗಳೊಂದಿಗೆ ತಮ್ಮ-ತಮ್ಮ ಜಮೀನಿಗೆ ತೆರಳಿ ಜಮೀನಿನಲ್ಲಿ ವರ್ಷಧಾರೆ ಉಳುಮೆ ಆರಂಭಿಸಿ ಸಂತಸ ವ್ಯಕ್ತಪಡಿಸಿದರು.ಉತ್ಸವದಲ್ಲಿ ಗ್ರಾಮ ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಎಚ್.ಬಿ.ಚಂದ್ರಪ್ಪ, ಉಪಾಧ್ಯಕ್ಷ ಟಿ.ಬಿ.ಚಿದಾನಂದ, ಕಾರ್ಯದರ್ಶಿ ಟಿ.ವಿ.ಮಹೇಶ್, ಗ್ರಾ.ಪಂ.ಸದಸ್ಯ ಟಿ.ಸಿ.ಶಿವಕುಮಾರ್, ಪ್ರಮುಖರಾದ ಕೆ.ಎಸ್.ಕೃಷ್ಣೇಗೌಡ , ಟಿ.ಡಿ.ಈಶ್ವರ್, ಟಿ.ಜಿ.ಶಿವಣ್ಣ, ಟಿ.ಎಸ್.ತೋಟೇಶ್, ಟಿ.ವೈ.ಸಿದ್ದಪ್ಪ, ಟಿ.ಪಿ.ಪ್ರಸನ್ನ, ಟಿ.ಎಂ.ಜಗದೀಶ್, ಟಿ.ಎಸ್.ಶಶಿಕುಮಾರ್, ಟಿ.ಜಿ.ರಮೇಶ್, ಟಿ.ಜಿ.ಸುಂದರೇಶ್, ಜಯಪ್ಪ, ಪ್ರೇಮ್ ಕುಮಾರ್ ಇತರರು ಇದ್ದರು.

    ಕೃಷಿ ಪರಿಕರಗಳಿಗೆ ಪೂಜೆ: ರೈತರು ಹಬ್ಬದ ಹಿನ್ನೆಲೆ ತಮ್ಮ ಜಾನುವಾರುಗಳನ್ನು ತೊಳೆದು, ಸಿಂಗರಿಸಿ ಪೂಜಿಸಿದರು. ನೇಗಿಲು, ನೊಗ, ಇತ್ಯಾದಿ ಕೃಷಿ ಪರಿಕರಗಳನ್ನು ಪೂಜಿಸಿ ಹೋಳಿಗೆ ಮತ್ತಿತರ ಭಕ್ಷೃ ಭೋಜನವನ್ನು ಎತ್ತು, ಹಸು, ಕರುಗಳಿಗೆ ತಿನ್ನಿಸಲಾಯಿತು.
    ಯುಗಾದಿ ಹಬ್ಬದ ಸಂದರ್ಭದಲ್ಲಿ ಹೊನ್ನಾರು ಉತ್ಸವವನ್ನು ತಪ್ಪದೆ ಸಾಂಪ್ರಾದಾಯಿಕವಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ದೇಶದಲ್ಲಿ ಉತ್ತಮ ಮಳೆ ಬೆಳೆಯಾಗಿ ದೇಶ ಸುಭಿಕ್ಷವಾಗಲಿ ಎಂದು ಪ್ರಕೃತಿಯನ್ನು ಪ್ರಾರ್ಥಿಸಲಾಗುತ್ತಿದೆ ಎಂದು ಗ್ರಾಮ ದೇವಸ್ಥಾನ ಸಮಿತಿ ಅಧ್ಯಕ್ಷ ಟಿ.ಬಿ.ಜಗದೀಶ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts