More

    ಲಕ್ಷ ಲಕ್ಷ ದುಡಿತೀರಿ, ನಮ್ಗೆ ಕೊಡೋಕೇನು? ಹಣ ಕೊಟ್ರೆ ಕೆಲ್ಸ, ಇಲ್ಲದಿದ್ರೆ ಕೇಸ್​: ಪಿಎಸ್​ಐ ರತ್ನಯ್ಯನ ಆಡಿಯೋ ವೈರಲ್​

    ಬಾಗೇಪಲ್ಲಿ: ಲಕ್ಷ ಲಕ್ಷ ದುಡಿತೀರಿ, ಅದ್ರಲ್ಲಿ ಸ್ವಲ್ಪ ನಮ್ಗೆ ಕೊಡೋಕೇನು? ಹಣ ಕೊಟ್ರೆ ಕೆಲ್ಸ, ಇಲ್ಲದಿದ್ರೆ ಕೇಸ್​ ಹಾಕ್ತೀವಿ ಎಂದು ಪಿಎಸ್​ಐವೊಬ್ಬರು ಮಾತನಾಡಿರುವ ಆಟಿಯೋ ವೈರಲ್​ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಠಾಣೆಯ ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​ ರತ್ನಯ್ಯ ವಿರುದ್ಧ ಆರೋಪ ಕೇಳಿಬಂದಿದೆ. ನಾಲ್ಕೈದು ಕಡೆ ಲಂಚಕ್ಕಾಗಿ ಜನರನ್ನು ಪಿಎಸ್​ಐ ಪೀಡಿಸಿದ ಸಂದರ್ಭದಲ್ಲಿ ಸಂತ್ರಸ್ತರು ಆಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅವಾಜ್​ ಹಾಕುವ, ಕಡಿಮೆ ಹಣಕ್ಕೆ ಕಿಡಿಕಾರಿರುವ, ನಾಗರಿಕರಿಗೆ ಕಿರುಕುಳ ನೀಡಿದ್ದಾರೆ ಎನ್ನುವುದು ಆಡಿಯೋದಲ್ಲಿದೆ.

    ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಲು ಅಗತ್ಯವಿರುವ ಪಾಸ್​ಪೋರ್ಟ್​ ದಾಖಲೆ ಪರಿಶೀಲನೆ ಸಂದರ್ಭದಲ್ಲಿ ‘ವಿದೇಶದಲ್ಲಿ ಲಕ್ಷ ಲಕ್ಷ ದುಡಿತೀರಾ, ನಿಮ್ಮ ಕೆಲಸ ಮಾಡಿಕೊಡುವ ನಮಗೆ ಲಂಚ ಕೊಡೋಕೇನು?’ ಎಂದಿರುವ ಮಾತು ಚರ್ಚೆಗೆ ಗ್ರಾಸವಾಗಿದೆ. ಇದರ ಜತೆಗೆ ಪಾತಪಾಳ್ಯ ಪೊಲೀಸ್​ ಠಾಣೆಯ ಜೀಪ್​ ರಿಪೇರಿಗೆ 10 ಸಾವಿರ ರೂ. ನೀಡುವಂತೆ ಸ್ಥಳೀಯರಿಗೆ ಪಿಎಸ್​ಐ ಒತ್ತಡ ಹಾಕಿದ್ದಾರೆ ಎನ್ನಲಾದ ಮತ್ತೊಂದು ಆಡಿಯೋ ವೈರಲ್​ ಆಗಿದೆ. ಹಣ ನೀಡದಿದ್ದರೆ ಯಾವುದಾದರೊಂದು ಪ್ರಕರಣದಲ್ಲಿ ಸಿಲುಕಿಸಿ ಠಾಣೆಗೆ ಕರೆಸಿಕೊಂಡು ಬೆದರಿಸಿ ಹಣ ವಸೂಲಿ ಮಾಡಿರುವ ಆರೋಪಗಳು ಕೇಳಿಬಂದಿವೆ.

    ಇನ್ನು ವಿವಿಧ ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕಿಕೊಂಡ ಮೂರು ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುವಂತೆ ಬಾಗೇಪಲ್ಲಿ ಸಿವಿಲ್​ ನ್ಯಾಯಾಲಯದ ನ್ಯಾಯಾಧೀಶರು ಆದೇಶಿಸಿದ್ದರೂ ಪಿಎಸ್​ಐ ಕಿಮ್ಮತ್ತು ನೀಡಿಲ್ಲ. ‘ಒಂದೊಂದು ವಾಹನಕ್ಕೆ ತಲಾ ಮೂರು ಸಾವಿರ ರೂ. ಲಂಚ ಕೊಟ್ಟರೆ ಮಾತ್ರ ಬಿಡ್ತೇನೆ, ಇಲ್ಲಾಂದ್ರೆ ಇಲ್ಲ! ವಕೀಲರ ಕಡೆಯಿಂದ ಒತ್ತಡ ಹಾಕಿಸಿದ್ರೆ ವಾಹನ ಮಾಲೀಕರ ವಿರುದ್ಧ ಮತ್ತೊಂದು ಕ್ರಿಮಿನಲ್​ ಕೇಸ್​ ಹಾಕಿ ಜೈಲಿಗೆ ಕಳುಹಿಸ್ತೇನೆ’ ಎಂದು ಬೆದರಿಸಿದ ಆಡಿಯೋ ಕೂಡ ಬೆಳಕಿಗೆ ಬಂದಿದೆ. ಆಡಿಯೋ ವೈರಲ್​ಗೂ ಮುನ್ನವೇ ವಾಹನ ಮಾಲೀಕರು ವಿಧಿಯಿಲ್ಲದೆ ಹಣ ಕೊಟ್ಟು ವಾಹನ ಪಡೆದಿದ್ದಾರೆ.

    ಕಾನೂನು ವ್ಯವಸ್ಥೆಗೆ ಗೌರವ ಸಲ್ಲಿಸಬೇಕಾಗಿರುವ ಪೊಲೀಸರೇ ನ್ಯಾಯಾಲಯದ ಆದೇಶಕ್ಕೆ ಬೆಲೆ ನೀಡದೆ ಹಣ ವಸೂಲಿಗೆ ಪೀಡಿಸಿರುವುದು ಶೋಚನೀಯ ಸಂಗತಿ ಎಂದು ವಕೀಲ ನಾಗಭೂಷಣ ಅಸಮಾಧಾನ ಹೊರಹಾಕಿದ್ದಾರೆ.

    ಲಕ್ಷ ಲಕ್ಷ ದುಡಿತೀರಿ, ನಮ್ಗೆ ಕೊಡೋಕೇನು? ಹಣ ಕೊಟ್ರೆ ಕೆಲ್ಸ, ಇಲ್ಲದಿದ್ರೆ ಕೇಸ್​: ಪಿಎಸ್​ಐ ರತ್ನಯ್ಯನ ಆಡಿಯೋ ವೈರಲ್​
    ಪಿಎಸ್​ಐ ರತ್ನಯ್ಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್​ ಠಾಣೆ ಮುಂದೆ ಪ್ರತಿಭಟನೆಗೆ ಮುಂದಾಗಿದ್ದ ಜನ.

    ಪಿಎಸ್​ಐ ರತ್ನಯ್ಯರ ಲಂಚಾವತಾರದ ಆಡಿಯೋ ವೈರಲ್​ ಆಗುತ್ತಿದ್ದಂತೆ ಒಂದು ತಿಂಗಳ ಹಿಂದೆಯೇ ಅಂದರೆ ಆಗಸ್ಟ್​ 30ರಂದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಬೆಂಬಲಿಗರು ಮತ್ತು ಸಾರ್ವಜನಿಕರು ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ್ದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಳಾಗುತ್ತೆ ಎಂದು ವೃತ್ತ ನಿರೀಕ್ಷಕ ಜಿ.ಪಿ.ರಾಜು ಭರವಸೆ ನೀಡಿ ಅಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ್ದರು. ಇಷ್ಟೆಲ್ಲ ಬೆಳವಣಿಗೆ ಬಳಿಕವೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಿಟ್ಟಿಗೆದ್ದ ಸಂತ್ರಸ್ತರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳ ಮೊರೆ ಹೋಗಿದ್ದಾರೆ.

    ಪಾತಪಾಳ್ಯ ಪೊಲೀಸ್​ ಠಾಣೆಯ ಸಬ್​ ಇನ್​ಸ್ಪೆಕ್ಟರ್​ ರತ್ನಯ್ಯ ಲಂಚಕ್ಕೆ ಪೀಡಿಸಿರುವ ಆಡಿಯೋ ವೈರಲ್​ ಆಗಿರುವುದು ಗಮನಕ್ಕೆ ಬಂದಿದೆ. ಇದರ ಬಗ್ಗೆ ವರದಿ ತರಿಸಿಕೊಳ್ಳಲಾಗಿದೆ. ಇಲಾಖೆಯ ನಿಯಮಾನುಸಾರ ಅಮಾನತು ಮಾಡಲಾಗುವುದು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್​ ಕುಮಾರ್​ ಹೇಳಿದ್ದಾರೆ.

    ವಿವಾದದ ಸುಳಿಯಲ್ಲಿ ‘ಗರುಡ ಗಮನ ವೃಷಭ ವಾಹನ’ ಸಿನಿಮಾ: ಮಾದಪ್ಪ ಭಕ್ತರಿಂದ ಆಕ್ರೋಶ

    ಹಾಗೆಲ್ಲ ಮಾಡಿದ್ರೆ ಅಪ್ಪುಗೆ ದ್ರೋಹ ಮಾಡಿದಂತೆ, ಆ ವಿಷ್ಯ ಅವನೊಂದಿಗೆ ಮಣ್ಣಾಗ್ಬೇಕು ಅನ್ಕೊಂಡಿದ್ದ: ರಾಘಣ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts