More

    ಸವಣೂರಲ್ಲಿ ಚಿಗುರೊಡೆದ ದೊಡ್ಡಹುಣಸೆ ಮರ

    ಸವಣೂರ: ಗೆದ್ದಲು ಹಿಡಿದು ಧರೆಗುರುಳಿದ್ದ ಇಲ್ಲಿನ ಇತಿಹಾಸ ಪ್ರಸಿದ್ಧ ದೊಡ್ಡಹುಣಸೆ ಕಲ್ಮಠದ ಆವರಣದಲ್ಲಿನ ಮರವನ್ನು ಮರು ನಾಟಿ ಮಾಡಿದ್ದು, ಇದೀಗ ಮರವು ಚಿಗುರೊಡೆದಿರುವುದು ಭಕ್ತರಲ್ಲಿ ಸಂತಸ ಮೂಡಿಸಿದೆ.

    ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ 80 ಟನ್ ತೂಕ, 12.6 ಮೀಟರ್ ವ್ಯಾಸ ಹಾಗೂ 18 ಮೀಟರ್ ಎತ್ತರವಿದ್ದ ಮರ ಗೆದ್ದಲು ತಿಂದು ಜುಲೈ 7ರಂದು ಧರೆಗುರುಳಿತ್ತು. ಜುಲೈ 13ರಂದು ಜಿಲ್ಲಾಡಳಿತ, ತಾಲೂಕು ಆಡಳಿತ, ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರು ಮರು ನಾಟಿ ಮಾಡಿದ್ದರು.

    ವಿಷಕಾರಿ ಪದಾರ್ಥಗಳು ಒಳ ಬರದಂತೆ ದೊಡ್ಡಹುಣಸೆ ಮರದ ಕೊಂಬೆಗಳನ್ನು ಸಂಸ್ಕರಿಸಿ, ಮಳೆ ನೀರು ಪ್ರವೇಶಿಸದಂತೆ ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಲಾಗಿತ್ತು. ತಜ್ಞರ ಸಲಹೆಯಂತೆ ಇದೇ ಜಾಗದಲ್ಲಿ ಎಂಟು ಅಡಿ ಆಳದ ಗುಂಡಿ ತೋಡಿ ಬೇರುಗಳು ಬೆಳೆಯಲು ಸಾವಯವ, ರಾಸಾಯನಿಕ ಮತ್ತು ಗೊಬ್ಬರ ಹಾಕಿದರೆ ಮರವು ಬದುಕುಳಿಯುತ್ತದೆ ಎಂದು ಅರಣ್ಯಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದರು.

    ದೊಡ್ಡ ಹುಣಸೆಮರ ಧರೆಗುರುಳಿರುವುದನ್ನು ಮರಳಿ ನೆಡಲು ಸಸ್ಯ ಪ್ರೇಮಿಗಳು, ದಾನಿಗಳು, ಸಾರ್ವಜನಿಕರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಹಕಾರ ನೀಡಿದ್ದರು. 20 ಲಕ್ಷ ರೂಪಾಯಿ ವೆಚ್ಚದಲ್ಲಿ ಮರವನ್ನು ಮರುನಾಟಿ ಮಾಡಲಾಗಿತ್ತು.

    ಬೃಹದಾಕಾರದ ಮರ ಚಿಗುರೊಡೆದಿರುವುದು ಸಾರ್ವಜನಿಕರಲ್ಲಿ ಸಂತಸ ತಂದಿದೆ.

    ಸರ್ಕಾರದಿಂದ ನೀರಸ ಪ್ರತಿಕ್ರಿಯೆ:

    ಪ್ರತಿ ವರ್ಷ ಅರಣ್ಯಗಳ ಅಭಿವೃದ್ಧಿ, ಸಸ್ಯ ಸಂಕುಲಗಳ ಬೆಳವಣಿಗೆಗೆ ಸರ್ಕಾರ ನೂರಾರು ಕೋಟಿ ರೂಪಾಯಿ ವ್ಯಯ ಮಾಡುತ್ತಿದೆ. ಆದರೆ, ಸಾವಿರಾರು ವರ್ಷದ ಇತಿಹಾಸ ಹೊಂದಿರುವ ದೊಡ್ಡ ಹುಣಸೆ ಮರ ಅಭಿವೃದ್ಧಿಗೆ ಸರ್ಕಾರ ಮನಸು ಮಾಡುತ್ತಿಲ್ಲ.

    ಸಸ್ಯ ತಜ್ಞ, ವೈದ್ಯರ ಮಾರ್ಗದರ್ಶನದಲ್ಲಿ ನೆಟ್ಟರೆ ಮರಳಿ ಜೀವ ತುಂಬಲು ನೆರವು ನೀಡುವಂತೆ ಒತ್ತಾಯಿಸಿ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲರಿಗೆ ಪತ್ರ ಸಲ್ಲಿಸಲಾಗಿತ್ತು. ಸಸ್ಯ ಸಂಕುಲದ ಜೀಣೋದ್ಧಾರ ಹಾಗೂ ಉದ್ಯಾನ ನಿರ್ಮಾಣ ಮಾಡಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೂ ಮನವಿಪತ್ರ ಸಲ್ಲಿಸಲಾಗಿತ್ತು. ಆದರೆ, ಸರ್ಕಾರದಿಂದ ಹಾರಿಕೆಯ ಉತ್ತರ ಬರುತ್ತಿದ ಹೊರತು, ಸಹಕಾರ ದೊರೆಯದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

    ವಿಜ್ಞಾನಿಗಳ ಮಾರ್ಗದರ್ಶನ ಹಾಗೂ ಭಕ್ತರ ನಿರಂತರ ಸಹಕಾರ, ಪ್ರಾರ್ಥನೆ, ಹಾರೈಕೆಯಿಂದಾಗಿ ಸವಣೂರಿನ ಹೆಮ್ಮೆಯ ದೊಡ್ಡಹುಣಸೆ ಮರ ಮತ್ತೆ ಚಿಗುರೊಡೆದಿದೆ. ಆದರೆ, ಈ ಮರದ ವಿಷಯದಲ್ಲಿ ಸರ್ಕಾರದ ನಿರ್ಲಕ್ಷ್ಯತೀವ್ರ ಬೇಸರ ತರಿಸಿದೆ.

    | ಚನ್ನಬಸವ ಸ್ವಾಮೀಜಿ, ದೊಡ್ಡಹುಣಸೆ ಕಲ್ಮಠ ಸವಣೂರ

    ಪ್ರಕೃತಿ ವಿಕೋಪದಿಂದ ಧರೆಗೆ ಉರುಳಿದ್ದ ಪುರಾತನ ಇತಿಹಾಸ ಹೊಂದಿರುವ ಮರದ ಮರು ನಾಟಿಗೆ ಪ್ರೋತ್ಸಾಹ ಹಾಗೂ ಸಹಕಾರ ದೊರೆತ ಹಿನ್ನ್ನೆಲೆಯಲ್ಲಿ ಮರಕ್ಕೆ ಮರು ಜೀವ ನೀಡುವ ಇಂತಹ ಸಾಧನೆ ಸಾಧ್ಯವಾಗಿದೆ.

    | ಬಾಲಕೃಷ್ಣ ಎಸ್., ಉಪ ಅರಣ್ಯ ಸಂರಕ್ಷಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts