More

    ನಗರಾಭಿವೃದ್ಧಿ ಯೋಜನಾ ನಿರ್ದೇಶಕರಿಗೆ ದೂರಿನ ಸುರಿಮಳೆ

    ಅರಸೀಕೆರೆ: ಬೀದಿನಾಯಿ.. ಬಿಡಾಡಿ ದನ.. ಹಂದಿಗಳ ಹಾವಳಿಗೆ ಕಡಿವಾಣ ಹಾಕಿ, ಬೀದಿ ದೀಪ-ಕಂಬಗಳ ದುರಸ್ತಿ ಮಾಡಿಸಿ.. ಹೀಗೆ ನಾನಾ ರೀತೀಯ ದೂರುಗಳನ್ನು ನಗರಸಭೆ ಕೆಲ ಸದಸ್ಯರು ಹಾಗೂ ಸಾರ್ವಜನಿಕರು ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಬಿ.ಎ.ಜಗದೀಶ್ ಅವರ ಮುಂದಿಟ್ಟರು.

    ನಗರಸಭೆಯ ಕಾರ್ಯವೈಖರಿ ಪರಿಶೀಲನೆಗೆಂದು ಬುಧವಾರ ಕಚೇರಿಗೆ ಭೇಟಿ ನೀಡಿದ್ದ ವೇಳೆ ಪೌರಾಯುಕ್ತರ ಕಚೇರಿಯಲ್ಲಿ ಜಗದೀಶ್ ಅಹವಾಲು ಸ್ವೀಕರಿಸಿದರು.

    ರಾಷ್ಟ್ರೀಯ ಹೆದ್ದಾರಿ ಮಧ್ಯೆ ರಸ್ತೆ ವಿಭಜಕಕ್ಕೆ ಹೊಂದಿಕೊಂಡಂತೆ ಅಳವಡಿಸಿರುವ ವಿದ್ಯುತ್ ಕಂಬಗಳು ಮುರಿದು ಬಿದ್ದು ತಿಂಗಳುಗಳೇ ಕಳೆದಿದೆ. ನಗರದ ಬಹುತೇಕ ವಾರ್ಡ್‌ಗಳಲ್ಲಿ ಬೀದಿನಾಯಿ, ಬಿಡಾಡಿ ದನಗಳ ಕಾಟ ಮೇರೆ ಮೀರಿದೆ. ಮಲ್ಲೇಶ್ವರ, ಸುಬ್ರಮಣ್ಯ ನಗರ ಬಡಾವಣೆಯಲ್ಲಿ ಹಂದಿಗಳಿಂದ ಎದುರಾಗುತ್ತಿರುವ ತೊಂದರೆ ಹೇಳತೀರದಾಗಿದ್ದು, ಸಮಸ್ಯೆ ಗಂಭೀರತೆ ಅರಿತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

    ಸರ್ಕಾರ ರೂಪಿಸಿರುವ ಮಾರ್ಗಸೂಚಿ ಅನ್ವಯ ಬೀದಿನಾಯಿ, ಹಂದಿಗಳ ಸೆರೆಗೆ ಟೆಂಡರ್ ಕರೆಯಲಾಗಿದೆ. ಬಿಡಾಡಿ ದನಗಳ ಕಾಟ ತಪ್ಪಿಸಲು ಮೊದಲ ಹಂತದಲ್ಲಿ ಮನವರಿಕೆ ಮಾಡಿಕೊಡಲಿದ್ದು ಉದಾಸೀನತೆ ಮುಂದುವರಿದರೆ ರಾಸುಗಳನ್ನು ಹಿಡಿದು ಗೋಶಾಲೆಗೆ ಕಳುಹಿಸುವಂತೆ ಪೌರಾಯುಕ್ತರಿಗೆ ಜನದೀಶ್ ಸೂಚಿಸಿದರು.

    ನಗರಸಭೆ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಕೆಲ ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸದೆ ಖಾತೆ ಬಿಡುಗಡೆ ಮಾಡಲಾಗಿದೆ. ರಸ್ತೆ ಒತ್ತುವರಿ, ಉದ್ಯಾನ, ರಾಜಕಾಲುವೆ ಕಬಳಿಕೆ ಮಾಡಲಾಗಿದೆ. ಈ ಸಂಬಂಧ ಪೌರಾಯುಕ್ತರಿಗೆ ದೂರು ನೀಡಿದರೂ ಇದೂವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ವಾಸ್ತವ ಮನಗಂಡು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

    ಮೂಲ ಸೌಕರ್ಯ ಕಲ್ಪಿಸದೆ ಬಡಾವಣೆ ನಿರ್ಮಿಸಿದವರಿಗೆ ತಕ್ಷಣವೇ ನೋಟಿಸ್ ನೀಡಿ ಲೋಪ ಸರಿಪಡಿಸವಂತೆ ಸೂಚನೆ ನೀಡಬೇಕು. ರಾಜಕಾಲುವೆ, ಉದ್ಯಾನ ಕಬಳಿಕೆ ಸಂಬಂಧ ಅಗತ್ಯ ವಿವರ ಸಂಗ್ರಹಿಸಿ ವರದಿ ನೀಡುವಂತೆ ಕೃಷ್ಣಮೂರ್ತಿ ಅವರಿಗೆ ಯೋಜನಾ ನಿರ್ದೇಶಕ ಜಗದೀಶ್ ಹೇಳಿದರು.
    ಜಿಲ್ಲಾ ವಕ್ಫ್‌ಬೋರ್ಡ್ ಅಧ್ಯಕ್ಷ ಸಯ್ಯದ್ ಸಿಕಂದರ್, ನಗರಸಭೆ ನಿಕಟಪೂರ್ವ ಅಧ್ಯಕ್ಷ ಸಿ.ಗಿರೀಶ್, ಸದಸ್ಯರಾದ ಈಶ್ವರಪ್ಪ, ಮೇಲುಗಿರಿಗೌಡ, ಜಾಕೀರ್ ಹುಸೇನ್, ಭಾಸ್ಕರ್, ಮುಖಂಡರಾದ ರಮೇಶ್ ನಾಯ್ಡು, ಹರ್ಷವರ್ಧನ್ ರಾಜ್, ರಮೇಶ್, ಟಿಪ್ಪು, ಮಲ್ಲಿಕಾರ್ಜುನ್, ಹರೀಶ್, ಹೇಮಂತ್ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts