More

    ಮೈಸೂರಲ್ಲಿ ಪ್ರಧಾನಿ ಮೋದಿ ಜತೆ 45 ನಿಮಿಷ ಯೋಗ ಮಾಡಲಿದ್ದಾರೆ 15 ಸಾವಿರ ಜನ: 1200 ವಿದ್ಯಾರ್ಥಿಗಳೂ ಭಾಗಿ

    ಮೈಸೂರು: ಎಂಟನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಾಂಸ್ಕೃತಿಕ ನಗರಿ ಸಿದ್ಧಗೊಂಡಿದ್ದು, ಅಂಬಾವಿಲಾಸ ಅರಮನೆ ಆವರಣದಲ್ಲಿ ವೇದಿಕೆ ಸಜ್ಜುಗೊಂಡಿದೆ. ಪ್ರಧಾನಿ ನರೇಂದ್ರಮೋದಿ ಅವರೊಂದಿಗೆ ಜೂ.21ರಂದು 15 ಸಾವಿರ ಜನರು ಯೋಗ ಮಾಡಲಿದ್ದು, ಇದರಲ್ಲಿ 1200 ಶಾಲಾ ಮಕ್ಕಳು ಭಾಗವಹಿಸಲಿದ್ದಾರೆ. 45 ನಿಮಿಷ ನಡೆಯುವ ಕಾರ್ಯಕ್ರಮದಲ್ಲಿ 19 ಆಸನಗಳು ಪ್ರದರ್ಶನಗೊಳ್ಳಲಿವೆ.

    ಬೆಳಗ್ಗೆ 6.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. 5 ನಿಮಿಷ ಕೇಂದ್ರ ಆಯುಷ್​ ಸಚಿವರು, 5 ನಿಮಿಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಲಿದ್ದಾರೆ. ಬಳಿಕ 20 ನಿಮಿಷ ಪ್ರಧಾನಿ ನರೇಂದ್ರ ಮೋದಿ ಯೋಗ ಸಂದೇಶ ನೀಡಲಿದ್ದಾರೆ.

    ಇದಾದ ಬಳಿಕ ಬೆಳಗ್ಗೆ 7ರಿಂದ 7.45ರ ವರೆಗೆ ಯೋಗ ಇರಲಿದೆ. ಮೊದಲ ಒಂದು ನಿಮಿಷ ಪ್ರಾರ್ಥನೆ, 4 ನಿಮಿಷ ಚಲನ ಕ್ರಿಯೆ, 25 ನಿಮಿಷ ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧಚಕ್ರಾಸನ, ಮಕರಾಸನ, ಸೇತುಬಂಧಾಸನ, ಶಲಭಾಸನ ಸೇರಿದಂತೆ ವಿವಿಧ 19 ಆಸನಗಳು ಪ್ರದರ್ಶನಗೊಳ್ಳಲಿವೆ. ಬಳಿಕ 14 ನಿಮಿಷ ಪ್ರಾಣಾಯಾಮ, ಧ್ಯಾನ, ಸಂಕಲ್ಪ ಇರಲಿದೆ. ಒಂದು ನಿಮಿಷ ಶಾಂತಿಮಂತ್ರ, ಎರಡು ನಿಮಿಷ ಸಂಕಲ್ಪ ಇರಲಿದೆ.

    ಸುಲಲಿತವಾಗಿ ಯೋಗ ನಡೆಯಲು, ಯಾವುದೇ ಗೊಂದಲಕ್ಕೆ ಕಾರಣವಾಗದಂತೆ ಒಟ್ಟು 17 ಬ್ಲಾಕ್​ಗಳನ್ನು ರಚಿಸಲಾಗಿದೆ. ಬ್ಲಾಕಿನಲ್ಲಿ ತಲಾ ಸಾವಿರ ಜನರಿಗೆ ಅವಕಾಶ ಕಲ್ಪಿಸಲಾಗಿದ್ದು, ಅದರ ಒಳಗೆಯೇ ಆಸನಗಳನ್ನು ಮಾಡಬೇಕು. ಭಾಗವಹಿಸುವವರಿಗೆ ಈಗಾಗಲೇ ನೋಂದಣಿ ಮಾಡಿಸಿದ್ದು, ಗುರುತಿನಪತ್ರ ನೀಡಲಾಗಿದೆ. ಇವರಿಗೆ ಮಾತ್ರ ಪ್ರವೇಶ ಇರಲಿದೆ. 160 ಶೌಚಗೃಹ, ಕುಡಿಯುವ ನೀರು, ತಿಂಡಿ ವಿತರಣೆಗೆ ಸಿದ್ಧತೆ ನಡೆದಿದೆ.

    ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಎರಡು ಡೋಸ್​ ಲಸಿಕೆ ಪಡೆದಿರಬೇಕು. ಅಥವಾ 72 ಗಂಟೆಗಳ ಮುಂಚೆ ಕರೊನಾ ಪರೀಕ್ಷೆ ನೆಗೆಟಿವ್​ ವರದಿ ಇರಬೇಕು. ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕು. ಅರಮನೆ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸ್​ ಮಾಡಿಸಿಕೊಂಡು ಒಳ ಹೋಗಬೇಕು.

    ದಸರಾ ಮಾದರಿ ಸಂಭ್ರಮ: ಪ್ರಧಾನಿ ನರೇಂದ್ರಮೋದಿ ಆಗಮನದ ಹಿನ್ನೆಲೆಯಲ್ಲಿ ಮೈಸೂರು ನಗರ ದಸರಾದಂತೆ ಸಂಭ್ರಮ ಮನೆ ಮಾಡಿದೆ. ರಸ್ತೆ ಡಾಂಬರೀಕರಣ, ರಸ್ತೆ ವಿಭಜಕಗಳಿಗೆ ಬಣ್ಣ ಬಳಿದು ಸುಂದರಗೊಳಿಸಲಾಗಿದೆ. ಗಿಡಗಂಟಿಗಳನ್ನು ತೆರವುಗೊಳಿಸಿ ಫುಟ್​ಪಾತ್​ ಸ್ವಚ್ಛಗೊಳಿಸಲಾಗಿದೆ.
    ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಅಂಬಾವಿಲಾಸ ಅರಮನೆ, ಪ್ರಧಾನಿ ಸಂಚರಿಸುವ ಮಾರ್ಗಗಳಲ್ಲಿ ಆಕರ್ಷಕ ವಿದ್ಯುತ್​ ದೀಪಾಲಂಕಾರ ಮಾಡಲಾಗಿದೆ. ಅಲ್ಲದೆ, ನಗರದ ಪ್ರಮುಖ ವೃತ್ತಗಳಲ್ಲೂ ದೀಪಾಲಂಕಾರದಲ್ಲಿ ಯೋಗಪಟುಗಳು, ರಾಜರು, ಸ್ವಾತಂತ್ರ್ಯ ಹೋರಾಟಗಾರರು, ಆಧ್ಯಾತ್ಮಿಕ ಚಿಂತಕರನ್ನು ನಿರ್ಮಿಸಲಾಗಿದೆ. ಹೀಗಾಗಿ ನಗರದಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ.

    ಮಹಾರಾಜ ಕಾಲೇಜು ಮೈದಾನ ಸಿದ್ಧ: ಫಲಾನುಭವಿಗಳೊಂದಿಗೆ ಪ್ರಧಾನಿ ನೇರ ಸಂವಾದ ನಡೆಸಲು ಮಹಾರಾಜ ಕಾಲೇಜು ಮೈದಾನದಲ್ಲೂ ಸಿದ್ಧತೆಗಳು ಪೂರ್ಣಗೊಂಡಿವೆ. ಬೃಹತ್​ ವೇದಿಕೆ ನಿರ್ಮಿಸಲಾಗಿದ್ದು, ಮಂಡ್ಯ, ಹಾಸನ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಿಂದ ಸುಮಾರು 60 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ.

    ಫ್ಲೆಕ್ಸ್​, ಬಂಡಿಂಗ್ಸ್​ ತೆರವು: ಪ್ರಧಾನಿಗೆ ಸ್ವಾಗತ ಕೋರಲು ನಗರದಲ್ಲಿ ಹಾಕಿದ್ದ ಫ್ಲೆಕ್ಸ್​ ಮತ್ತು ಬಂಡಿಂಗ್ಸ್​ ತೆರವುಗೊಳಿಸಲಾಯಿತು. ಮಹಾರಾಜ ಕಾಲೇಜು ಮೈದಾನ, ಚಾಮರಾಜ ಜೋಡಿ ರಸ್ತೆ, ಅರಮನೆ ಸುತ್ತ ಮುತ್ತ ಸೇರಿದಂತೆ ಹಲವು ಕಡೆ ಸ್ವಾಗತ ಕೋರುವ ಫ್ಲೆಕ್ಸ್​​, ಬಂಡಿಂಗ್ಸ್​ ಅಳವಡಿಸಲಾಗಿತ್ತು.

    ಕನ್ನಡದಲ್ಲೇ ಟ್ವೀಟ್​ ಮಾಡಿದ ಪ್ರಧಾನಿ ನರೇಂದ್ರ ಮೋದಿ

    ಅಗ್ನಿಪಥ ವಿರುದ್ಧ ಪ್ರತಿಭಟನೆ: ಅಗ್ನಿವೀರರಿಗೆ ಉದ್ಯೋಗದ ಆಫರ್​ ಕೊಟ್ಟ ಉದ್ಯಮಿ ಆನಂದ್ ಮಹೀಂದ್ರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts