ಹಾಪುರ್ (ಉತ್ತರ ಪ್ರದೇಶ): ಇಲ್ಲಿನ ಘರ್ಮುಕ್ತೇಶ್ವರ ಪ್ರದೇಶದಲ್ಲಿ ಮನೆಯ ಹೊರಗೆ ಆಡಿಕೊಂಡಿದ್ದ 6 ವರ್ಷದ ಬಾಲಕಿಯನ್ನು ಅಪಹರಿಸಿದ ಬೈಕ್ ಸವಾರ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಆಕೆಯ ಜನನಾಂಗವನ್ನು ಮನಬಂದಂತೆ ಕೊಯ್ದು, ಹೊಲವೊಂದರಲ್ಲಿ ಆಕೆಯನ್ನು ಬಿಸಾಡಿ ಪರಾರಿಯಾಗಿದ್ದಾನೆ.
ಗುರುವಾರ (ಆ.6) ರಾತ್ರಿ ಮಗು ಘರ್ಮುಕ್ತೇಶ್ವರದಲ್ಲಿರುವ ತನ್ನ ಮನೆಯ ಮುಂದೆ ಆಟವಾಡುತ್ತಿತ್ತು. ಒಂಟಿಯಾಗಿದ್ದ ಮಗುವನ್ನು ಗಮನಿಸಿದ ಬೈಕ್ ಸವಾರ ಆಕೆಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಚೂರಿಯಿಂದ ಮಗುವಿನ ಗುಪ್ತಾಂಗವನ್ನು ಮನಬಂದಂತೆ ಕೊಯ್ದಿದ್ದಾನೆ ಎಂದು ಘರ್ಮುಕ್ತೇಶ್ವರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ರಾತ್ರಿಯೇ ದೂರು ಬಂದಿತ್ತು. ತಕ್ಷಣವೇ ಹಾಪುರ್ನ ಸುತ್ತಮುತ್ತಲ ಪ್ರದೇಶದಲ್ಲಿ ಬೆಳಗ್ಗೆ 6 ಗಂಟೆಯವರೆಗೆ ಮಗುವಿಗಾಗಿ ಹುಡುಕಾಡಿದೆವು. ಆದರೆ ಸಿಕ್ಕಿರಲಿಲ್ಲ. ಶುಕ್ರವಾರ (ಆ.7) ಬೆಳಗ್ಗೆ ಗ್ರಾಮಸ್ಥರು ಕೂಡ ಶೋಧ ಕಾರ್ಯಕ್ಕೆ ನೆರವಾದರು. ಆ ಸಂದರ್ಭದಲ್ಲಿ ಗ್ರಾಮದ ಹೊಲವೊಂದರಲ್ಲಿ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿ ಬಿದ್ದಿದ್ದ ಬಾಲಕಿ ಪತ್ತೆಯಾದಳು. ಆಕೆಯ ಗುಪ್ತಾಂಗದಿಂದ ಸಾಕಷ್ಟು ರಕ್ತಸ್ರಾವವಾಗುತ್ತಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸೋದರತ್ತೆಯಿಂದ ಬಾಲಕಿಗೆ ಲೈಂಗಿಕ ಕಿರುಕುಳ; ಪೋರ್ನ್ ದೃಶ್ಯಗಳನ್ನು ತೋರಿಸಿ ಕೃತ್ಯ
ಮೊದಲಿಗೆ ಬಾಲಕಿಯನ್ನು ಹಾಪುರ್ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ಕೊಟ್ಟ ಬಳಿಕ ಮೇರಠ್ಗೆ ಸ್ಥಳಾಂತರಿಸಲಾಯಿತು. ಆಕೆಯನ್ನು ಪರೀಕ್ಷಿಸಿದ ವೈದ್ಯರು, ಆಕೆಯ ಮೇಲೆ ಅತ್ಯಾಚಾರ ನಡೆದಿದ್ದಲ್ಲದೆ, ಗುಪ್ತಾಂಗವನ್ನು ಕೊಯ್ದಿರುವ ಬಗ್ಗೆ ಮಾಹಿತಿ ನೀಡಿದರು. ಇದೀಗ ಬಾಲಕಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣದ ತನಿಖೆ ಆರಂಭಿಸಲಾಗಿದೆ. ಶಂಕಿತನ ರೇಖಾಚಿತ್ರವನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆಗಾಗಿ 8 ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಹಾಪುರ್ ಎಸ್ಪಿ ಸಂಜೀವ್ ಸುಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
3 ಕೋಟಿ ರೂ. ಆಸ್ತಿ ಕಿತ್ತುಕೊಂಡರು; ವಯಸ್ಸಾದ ತಂದೆಯನ್ನು ಬೀದಿಗೆ ಬಿಟ್ಟ ‘ವರ’ಪುತ್ರರು ಮುಂದೆ ಏನಾದರು?