ನವದೆಹಲಿ: ಇಂದು ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿಯವರು ರಾಜ್ಯಸಭಾ ಸದಸ್ಯರೊಂದಿಗೆ ವರ್ಚ್ಯುವಲ್ ಮೀಟಿಂಗ್ ನಡೆಸಿದ್ದಾರೆ.
ಆದರೆ ಈ ಸಭೆಯಲ್ಲೂ ಮತ್ತೆ ರಾಹುಲ್ ಗಾಂಧಿಯವರೇ ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂಬ ಬೇಡಿಕೆಯನ್ನು ಬಹುತೇಕ ನಾಯಕರು ಮುಂದಿಟ್ಟಿದ್ದಾರೆ.ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯಸಭಾ ಎಂಪಿ ದಿಗ್ವಿಜಯ ಸಿಂಗ್ ಅವರು ಸಭೆಯಲ್ಲಿ ಮೊದಲು ರಾಹುಲ್ ಗಾಂಧಿ ಮತ್ತೆ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಲಿ ಎಂಬ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.
ಸದ್ಯ ದೇಶದಲ್ಲಿ ಹೆಚ್ಚುತ್ತಿರುವ ಕೊವಿಡ್-19 ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿತ್ತು. ಇದರಲ್ಲಿ ಮಾತನಾಡಿದ ದಿಗ್ವಿಜಯ ಸಿಂಗ್ ಅವರು, ಕೇಂದ್ರ ಸರ್ಕಾರದ ವಿಫಲತೆಗಳನ್ನು ರಾಹುಲ್ ಗಾಂಧಿಯವರು ಎತ್ತಿ ತೋರಿಸುತ್ತಿದ್ದಾರೆ. ಅವರೇ ಮತ್ತೊಮ್ಮೆ ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸುರೇಶ್ ರೈನಾ ಭಾರತ ಪರ ಪದಾರ್ಪಣೆ ಮಾಡಿ 15 ವರ್ಷ, ಪತ್ನಿಯಿಂದ ವಿಶೇಷ ಸಂದೇಶ
ದಿಗ್ವಿಜಯ್ ಸಿಂಗ್ ಅವರ ಮಾತಿಗೆ, ರಾಜ್ಯಸಭಾ ಎಂಪಿಗಳಾದ ಶಕ್ತಿಸಿನ್ಹ್ ಗೋಹಿಲ್, ನೀರಜ್ ಡಾಂಗಿ ಮತ್ತಿತರರೂ ಧ್ವನಿಗೂಡಿಸಿದ್ದಾರೆ.
ಈ ಹಿಂದೆ ಜು.11ರಂದು ಲೋಕಸಭಾ ಸಂಸದರ ಜತೆಗೂ ಸೋನಿಯಾ ಗಾಂಧಿ ಸಭೆ ನಡೆಸಿದ್ದರು. ಆಗ ಲೋಕಸಭಾ ಸದಸ್ಯರೂ ಕೂಡ ಇದೇ ಹೇಳಿದ್ದರು.
ಸೋನಿಯಾಗಾಂಧಿಯವರ ಮಧ್ಯಂತರ ಅಧ್ಯಕ್ಷ ಸ್ಥಾನದ ಅವಧಿ ಆಗಸ್ಟ್ 10ರಂದು ಮುಕ್ತಾಯಗೊಳ್ಳಲಿದೆ. ಅದರ ನಂತರ ಮುಂದೇನು ಎಂಬ ಪ್ರಶ್ನೆ ಶುರುವಾಗಿದ್ದು, ರಾಹುಲ್ ಗಾಂಧಿಯವರೇ ಮತ್ತೆ ಅಧ್ಯಕ್ಷರಾಗುವರಾ ಎಂಬ ಕುತೂಹಲವೂ ಶುರುವಾಗಿದೆ.
ಆದರೆ ರಾಹುಲ್ ಗಾಂಧಿ ಮಾತ್ರ ಈ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡುತ್ತಿಲ್ಲ. (ಏಜೆನ್ಸೀಸ್)