ಅಹಮದಾಬಾದ್: ವಿಶ್ವದ ಅತಿದೊಡ್ಡ ಮೊಟೇರಾ ಕ್ರಿಕೆಟ್ ಕ್ರೀಡಾಂಗಣ ಉದ್ಘಾಟಿಸಲು ಫೆ.24ರಂದು ಗುಜರಾತಿನ ಅಹಮದಾಬಾದ್ಗೆ ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಕಾನ್ಪುರದ ವಿಶೇಷ ಹಾಗೂ ಸಾಂಪ್ರದಾಯಿಕ ಸ್ವೀಟ್ಸ್ ಅನ್ನು ಉಡುಗೊರೆಯಾಗಿ ನೀಡಲು ಬಿಜೆಪಿ ಕಾರ್ಯಕರ್ತರು ಯೋಜನೆ ಹಾಕಿಕೊಂಡಿದ್ದಾರೆ.
ಇದಕ್ಕಾಗಿ ಈಗಾಗಲೇ ತಯಾರಿ ಮಾಡಿಕೊಂಡಿರುವ ಕಾರ್ಯಕರ್ತರು ಕಾನ್ಪುರದ ರೈಲ್ ಬಜಾರ್ನಲ್ಲಿರುವ ಶಾಂತಿ ಸ್ವೀಟ್ ಹೌಸ್ಗೆ ಆರ್ಡರ್ ನೀಡಿದ್ದಾರೆ. ಆರ್ಡರ್ ಸ್ವೀಕರಿಸಿದ್ದಕ್ಕೆ ಹೆಮ್ಮೆ ಇದೆ ಎಂದು ಶಾಪ್ ಮಾಲೀಕ ಅಜಯ್ ಗುಪ್ತಾ(ರಾಜು) ಅವರು ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಗುಪ್ತಾ, ಯುಎಸ್ ಅಧ್ಯಕ್ಷ ಟ್ರಂಪ್ ಅವರಿಗೆ ಗಿಫ್ಟ್ ನೀಡಲು ಬಿಜೆಪಿ ಕಾರ್ಯಕರ್ತರು ನೀಡಿರುವ ಆರ್ಡರ್ ಅನ್ನು ಸ್ವೀಕರಿಸಿದ್ದೇನೆ. ನಾವು ಸಾಂಪ್ರದಾಯಿಕ ಕಾನ್ಪುರ ಸ್ವೀಟ್ಸ್ ಅನ್ನು ತಯಾರಿಸುತ್ತಿದ್ದೇವೆ. ಇದಕ್ಕಾಗಿ ನಮಗೆ ಹೆಮ್ಮೆ ಇದೆ. ಅಲ್ಲದೆ, ಸ್ವೀಟ್ಸ್ ಬಾಕ್ಸ್ ಮೇಲೆ “ನಮಸ್ತೆ ಟ್ರಂಪ್” ಎಂಬ ಘೋಷಣೆಯನ್ನು ಹಾಕಲಾಗಿದೆ ಎಂದು ಮಾಹಿತಿ ನೀಡಿದರು.
ಸ್ಥಳೀಯ ಬಿಜೆಪಿ ಮುಖಂಡ ಜ್ಞಾನೇಶ್ ಮಿಶ್ರಾ ಮಾತನಾಡಿ, ನಾನು ಅಹಮದಾಬಾದ್ನಲ್ಲಿರುವ ಮೊಟೇರಾ ಕ್ರೀಡಾಂಗಣಕ್ಕೆ ತೆರಳಿ ಡೊನಾಲ್ಡ್ ಟ್ರಂಪ್ ಅವರಿಗೆ ಕಾನ್ಪುರ ಸ್ವೀಟ್ಸ್ ಅನ್ನು ಉಡುಗೊರೆಯಾಗಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಟ್ರಂಪ್ ತಮ್ಮ ಪತ್ನಿ ಮೆಲೆನಿಯಾ ಟ್ರಂಪ್ ಮಗಳು ಇವಾಂಕ ಹಾಗೂ ಅಳಿಯ ಜರೇದ್ ಕುಶ್ನರ್ರೊಂದಿಗೆ ಫೆ. 24ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅಹಮದಾಬಾದ್ನಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಮೊಟೇರಾ ಕ್ರೀಡಾಂಗಣದಲ್ಲಿ “ನಮಸ್ತೆ ಟ್ರಂಪ್” ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ಮೋದಿ ಮತ್ತು ಟ್ರಂಪ್ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. (ಏಜೆನ್ಸೀಸ್)