ಬಾಗ್ದಾದ್: 180 ಪ್ರಯಾಣಿಕರು ಮತ್ತು ಸಿಬ್ಬಂದಿ ಹೊತ್ತು ಸಾಗುತ್ತಿದ್ದ ಬೋಯಿಂಗ್ ಸಿಒ.737 ವಿಮಾನ ತಾಂತ್ರಿಕ ಸಮಸ್ಯೆಯಿಂದಾಗಿ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಇರಾನ್ನಲ್ಲಿ ಪತನವಾಗಿರುವುದಾಗಿ ಸ್ಥಳೀಯ ಮಾಧ್ಯಮಗಳು ಬುಧವಾರ ವರದಿ ಮಾಡಿವೆ.
ವಿಮಾನವು ಉಕ್ರೇನ್ಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಫ್ಲೈಟ್ರಾಡರ್24 ವೆಬ್ಸೈಟ್ ಪ್ರಕಾರ ಉಕ್ರೇನ್ ಅಂತಾರಾಷ್ಟ್ರೀಯ ವಿಮಾನವು ತೆಹ್ರಾನ್ನ ಇಮಾಮ್ ಖೊಮೆನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬುಧವಾರ ಬೆಳಗ್ಗೆ ಬಿಟ್ಟು ಉಕ್ರೇನ್ನ ಕೈವ್ ಬೋರಿಸ್ಪಿಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. ಆದರೆ, ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಕ ಸಮಸ್ಯೆಯಿಂದ ಪತನವಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಪತನದ ಬಳಿಕ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ, ಇನ್ನಷ್ಟು ಸಿಬ್ಬಂದಿಯನ್ನು ಕಳುಹಿಸಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ. ಈಗಾಗಲೇ ಕೆಲ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ ಎಂದು ಇರಾನ್ನ ತುರ್ತುಸೇವೆ ಮುಖ್ಯಸ್ಥ ಪಿರ್ಹೊಸೈನ್ ಕೌಲಿವ್ಯಾಂಡ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ, ಪ್ರಾಣಹಾನಿ ಬಗ್ಗೆ ನಿಖರವಾದ ಮಾಹಿತಿ ತಿಳಿದುಬರಬೇಕಾಗಿದೆ.
ಅಕ್ಟೋಬರ್ 2018ರಲ್ಲಿ ಹಾಗೂ ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ವಿಮಾನ ಪತನದಲ್ಲಿ 350 ಮಂದಿ ಸಾವಿಗೀಡಾಗಿದ್ದರು. ಈ ಘಟನೆಗಳಿಂದ ಬೋಯಿಂಗ್ ವಿಮಾನ ಸಂಸ್ಥೆಯು ಸಂಕಷ್ಟ ಎದುರಿಸುತ್ತಿದೆ. (ಏಜೆನ್ಸೀಸ್)