ಚೆನ್ನೈ: ಇಲ್ಲಿನ ಚೆಪಾಕ್ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಪಾಕಿಸ್ತಾನದ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯಗಳಿಸುವ ಮೂಲಕ ಪಾಕ್ ವಿರುದ್ಧ ತನ್ನ ಮೊದಲ ಗೆಲುವನ್ನು ದಾಖಲಿಸಿದೆ.
ಇನ್ನು ಅಫ್ಘಾನಿಸ್ತಾನ ತಂಡವು ಪಾಕಿಸ್ತಾನದ ವಿರುದ್ಧ ಗೆದ್ದ ಬೆನ್ನಲ್ಲೇ ವಿಶ್ವದಾದ್ಯಂತ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದ್ದು, ಅಫ್ಘಾನಿಸ್ತಾನದಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಇದೀಗ ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್, ವೀಕ್ಷಕ ವಿವರಣೆಗಾರ ಇರ್ಫಾನ್ ಪಠಾಣ್ ಅಫ್ಘಾನಿಸ್ತಾನದ ಜಯವನ್ನು ಸಂಭ್ರಮಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅಫ್ಘಾನಿಸ್ತಾನ ತಂಡದ ಸ್ಪಿನ್ನರ್ ರಶೀದ್ ಖಾನ್ ಜತೆ ಮೈದಾನದಲ್ಲೇ ಹೆಜ್ಜೆ ಹಾಕಿದ್ದು, ತಂಡದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ರಶೀದ್ ಖಾನ್ ಅವರ ಮಾತನ್ನು ಉಳಿಸಿಕೊಂಡರು ನಾನು ನನ್ನ ಮಾತಿನ ಪ್ರಕಾರ ನಡೆದುಕೊಂಡೆ ಎಂದು ವಿಡಿಯೋಗೆ ಅಡಿಬರಹ ನೀಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೆ ಒಳಪಟ್ಟಿದೆ.
ಬಾಬರ್ ಪಡೆಗೆ ಹ್ಯಾಟ್ರಿಕ್ ಮುಖಭಂಗ
ಸೋಮವಾರ ಚೆನ್ನೈನ ಚೆಪಾಕ್ ಕ್ರಿಕೆಟ್ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು 8 ವಿಕೆಟ್ಗಳ ಭರ್ಜರಿ ಜಯಗಳಿಸಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಅಯಕ ಬಾಬರ್ ಅಜಂ (74 ರನ್, 92 ಎಸೆತ, 4 ಬೌಂಡರಿ, 1 ಸಿಕ್ಸರ್), ಅಬ್ದುಲ್ಲ ಶಫಿಕ್ (58 ರನ್, 75 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ಫಲವಾಗಿ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 282ರನ್ ಗಳಿಸಿತ್ತು.
283ರನ್ಗಳ ಗುರಿ ಬೆನ್ನತ್ತಿದ್ದ ಅಫ್ಘಾನಿಸ್ತಾನ ತಂಡವು ಆರಂಭಿಕರಾದ ಇಬ್ರಾಹಿಂ ಜರ್ದಾನ್ (85 ರನ್, 113 ಎಸೆತ, 10 ಬೌಂಡರಿ), ರೆಹಮಾನುಲ್ಲಾ ಗುರ್ಬಾಜ್ (65 ರನ್, 53 ಎಸೆತ, 9 ಬೌಂಡರಿ, 1 ಸಿಕ್ಸರ್), ರಹಮತ್ ಷಾ (77 ರನ್, 84 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ಫಲವಾಗಿ 49 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿಯನ್ನು ತಲುಪಿ ಗೆಲುವಿನ ನಗೆ ಬೀರಿತ್ತು. ಈ ಮೂಲಕ ವಿಶ್ವಕಪ್ನಲ್ಲಿ ಬಾಬರ್ ಪಡೆಗೆ ಹ್ಯಾಟ್ರಿಕ್ ಮುಖಭಂಗವಾಗಿದೆ.