More

    ಬಿಜೆಪಿ ಆಡಳಿತದಲ್ಲಿ ಜೀವನ ದುಸ್ತರ

    ಚೇಳೂರು: ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ಜನಸಾಮಾನ್ಯರು ಜೀವನ ನಡೆಸುವುದು ಕಷ್ಟವಾಗಿದೆ ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ಆರೋಪ ಮಾಡಿದರು.


    ಗುಬ್ಬಿ ತಾಲೂಕು ಕಾಂಗ್ರೆಸ್ ಘಟಕದ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಚೇಳೂರಿನ ಶ್ರೀ ಮರಳು ಬಸವೇಶ್ವರ ಸ್ವಾಮಿ ದೇವಾಲಯದಿಂದ ಸರ್ಕಲ್‌ವರೆಗೆ ಭಾನುವಾರ ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.


    ರೈತರು, ಕಾರ್ಮಿಕರು, ಹಿಂದುಳಿದವರು, ದಲಿತರು, ಶ್ರಮಿಕರು ಬದುಕು ನಡೆಸಬೇಕು ಎಂದರೆ ಉತ್ತಮ ಸರ್ಕಾರದ ಆವಶ್ಯಕತೆ ಇದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಕೈ ಹಿಡಿಯುವ ಮೂಲಕ ಉತ್ತಮ ಸಮಾಜಕ್ಕೆ ತಾವೆಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.


    ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶಂಕರಾನಂದ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಹಲವು ಭಾಗ್ಯಗಳನ್ನು ನೀಡಿ ಆ ಮೂಲಕ ಜನರ ಕೈಹಿಡಿದಿತ್ತು. ಆದರೆ ಬಿಜೆಪಿ ಸರ್ಕಾರ ಕೇಂದ್ರ ಮತ್ತು ರಾಜ್ಯದಲ್ಲಿ ಎರಡು ಕಡೆಯೂ ಜನರಿಗೆ ಹೊರೆಹಾಕುವಂತಹ ಜಿಎಸ್‌ಟಿ, ಪೆಟ್ರೋಲ್ ದರ ಹೆಚ್ಚಳ, ತಿನ್ನುವ ಅನ್ನಕ್ಕೋ ಬರೆ ಹಾಕುವಂತಹ ಕೆಲಸಕ್ಕೆ ಮುಂದಾಗಿರುವುದು ಬೇಸರದ ಸಂಗತಿ. 70 ವರ್ಷಗಳ ಆಡಳಿತ ಮಾಡಿದ ಕಾಂಗ್ರೆಸ್ ಯಾರನ್ನೂ ಒಕ್ಕಲೆಬ್ಬಿಸುವ, ಬಡತನಕ್ಕೆ ನೂಕುವ ಕೆಲಸ ಮಾಡಿರಲಿಲ್ಲ. ಆದರೆ ಬಿಜೆಪಿ ಸರ್ಕಾರಿ ಉದ್ಯೋಗ ಕೊಡುತ್ತೇವೆ, ತಲಾ ಆದಾಯ ಹೆಚ್ಚಿಸುತ್ತೇವೆ ಎಂದು ಅಧಿಕಾರಕ್ಕೆ ಬಂದು ಇಂದು ಆರ್ಥಿಕವಾಗಿ ದಿವಾಳಿ ಮಾಡುತ್ತಿದೆ ಎಂದು ಕಿಡಿಕಾರಿದರು.


    ವಿಧಾನಸಭಾ ಚುನಾವಣೆ ಆಕಾಂಕ್ಷಿ ಪ್ರಸನ್ನಕುಮಾರ್ ಮಾತನಾಡಿ, ಅಭಿವೃದ್ಧಿ ವಿಚಾರವನ್ನು ಮಾತನಾಡದೇ ಬಿಜೆಪಿ ಸರ್ಕಾರ ಕೇವಲ ಧರ್ಮ, ಜಾತಿಗಳ ನಡುವೆ ವೈಷಮ್ಯ ತಂದು ನಮ್ಮನ್ನು ಬೇರೆ ಬೇರೆ ಮಾಡಲು ಮುಂದಾಗಿದೆ. ಅಭಿವೃದ್ಧಿ ವಿಚಾರ ಮಾತನಾಡದೆ ಕೇವಲ ಧರ್ಮದ ಆಫೀಮನ್ನು ದೇಶಕ್ಕೆ ಅಂಟಿಸಿ ಪ್ರಜಾಪ್ರಭುತ್ವ ದೇಶಕ್ಕೆ ಕಳಂಕವನ್ನು ತರಲು ಮುಂದಾಗಿದ್ದಾರೆ ಎಂದು ದೂರಿದರು. ಮುಖಂಡರಾದ ಹೊನ್ನಗಿರಿಗೌಡ, ಶ್ರೀನಿವಾಸ್, ಶಾರದಮ್ಮ, ಗಂಗಾಧರಯ್ಯ, ಸಲೀಂ ಪಾಷಾ, ಮಂಜುನಾಥ್, ಚಿಕ್ಕರಂಗೇಗೌಡ, ಸೇರಿ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts