More

    ಶೇ. 90 ರಷ್ಟು ನೌಕರರು ಕರ್ತವ್ಯಕ್ಕೆ

    ಕಾರವಾರ: 6 ನೇ ವೇತನ ಆಯೋಗ ಶಿಫಾರಸು ಜಾರಿಗೆ ಆಗ್ರಹಿಸಿ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರು ನಡೆಸಿದ್ದ ಮುಷ್ಕರ ಭಾಗಶಃ ಅಂತ್ಯವಾಗಿದೆ. ಜಿಲ್ಲೆಯ ಶಿರಸಿ ವಿಭಾಗದಲ್ಲಿ ಬುಧವಾರ ಶೇ. 90 ರಷ್ಟು ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
    ಹೈಕೋರ್ಟ್ ಸೂಚನೆಯ ನಂತರ ಮುಷ್ಕರ ನಿರತ ನೌಕರರು ಕರ್ತವ್ಯಕ್ಕೆ ಮರಳಿದ್ದಾರೆ. ಶಿರಸಿ ವಿಭಾಗ ವ್ಯಾಪ್ತಿಗೆ ಬರುವ ಕಾರವಾರ, ಅಂಕೋಲಾ, ಕುಮಟಾ, ಭಟ್ಕಳ, ಶಿರಸಿ, ಯಲ್ಲಾಪುರ ಡಿಪೋಗಳ ವ್ಯಾಪ್ತಿಯಲ್ಲಿ 304 ಬಸ್​ಗಳು ಓಡಾಟ ನಡೆಸಬೇಕಿದ್ದು, ಬುಧವಾರ ಮಧ್ಯಾಹ್ನದವರೆಗೆ 215 ಬಸ್​ಗಳು ಸಂಚರಿಸಿವೆ. ಅಲ್ಲದೆ, ಧಾರವಾಡ ವಿಭಾಗಕ್ಕೆ ಸೇರಿದ ಹಳಿಯಾಳ ಹಾಗೂ ದಾಂಡೇಲಿ ಡಿಪೋಗಳ ವ್ಯಾಪ್ತಿಯಲ್ಲೂ ಬಸ್ ಸಂಚಾರ ಮರು ಪ್ರಾರಂಭವಾಗಿದೆ. ಕಳೆದ ಒಂದು ವಾರದಿಂದ ಶೇ. 30 ರಿಂದ 60 ಬಸ್​ಗಳು ಜಿಲ್ಲೆಯ ವ್ಯಾಪ್ತಿಯಲ್ಲಿ ಮಾತ್ರ ಓಡಾಡುತ್ತಿದ್ದವು. ಬುಧವಾರದಿಂದ ಜಿಲ್ಲೆಯ ಒಳಗೆ ಮಾತ್ರವಲ್ಲದೇ ಪಕ್ಕದ ಬೆಳಗಾವಿ, ಧಾರವಾಡ, ಉಡುಪಿ, ಮಂಗಳೂರು ಜಿಲ್ಲೆಗಳಿಗೆ ಬಸ್​ಗಳು ಸಂಚಾರ ನಡೆಸಿದವು. ಅಲ್ಲದೆ, ಗೋವಾಕ್ಕೂ ಎನ್​ಡಬ್ಲ್ಯುಕೆಆರ್​ಟಿಸಿ ಬಸ್ ಓಡಾಟ ಪ್ರಾರಂಭವಾಗಿದೆ.
    ಪ್ರಯಾಣಿಕರ ಕೊರತೆ: ಏಪ್ರಿಲ್ 7 ರಿಂದ ಸಾರಿಗೆ ಸಂಸ್ಥೆ ಮುಷ್ಕರ ನಡೆದಿದೆ. ಎರಡು ವಾರದಿಂದ ಬಸ್ ಸರಿಯಾದ ಸಮಯಕ್ಕೆ ಬರುತ್ತದೆ ಎಂಬ ಯಾವುದೇ ವಿಶ್ವಾಸ ಇಲ್ಲದ ಕಾರಣ ಬುಧವಾರ ಪ್ರಯಾಣಿಕರ ಸಂಖ್ಯೆಯೂ ಕಡಿಮೆ ಇತ್ತು. ಬಸ್ ಹಾಗೂ ಅದನ್ನು ಓಡಿಸಲು ನೌಕರರು ಇದ್ದರೂ ಪ್ರಯಾಣಿಕರಿಲ್ಲದ ಕಾರಣ ಕೆಲವು ಬಸ್​ಗಳನ್ನು ರದ್ದು ಮಾಡಲಾಯಿತು.


    ಶೇ. 90 ರಷ್ಟು ನೌಕರರು ಕರ್ತವ್ಯಕ್ಕೆ ಮರಳಿದ್ದಾರೆ. ಪ್ರಯಾಣಿಕರ ಲಭ್ಯತೆಯನ್ನು ನೋಡಿಕೊಂಡು ಬಸ್ ಓಡಿಸುತ್ತಿದ್ದೇವೆ. ದಿನೊಪ್ಪತ್ತಿನಲ್ಲಿ ಎಲ್ಲ ಬಸ್​ಗಳ ಸಂಚಾರ ವೇಳಾಪಟ್ಟಿಯಂತೆ ಆಗಲಿದೆ ಎಂಬ ವಿಶ್ವಾಸವಿದೆ.
    ರಾಜಕುಮಾರ್ ವಿಭಾಗೀಯ ನಿಯಂತ್ರಣಾಧಿಕಾರಿ ಶಿರಸಿ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts