More

    ಕರೊನಾಕ್ಕೆ ಒಂಬತ್ತು ಶಿಕ್ಷಕರು ಬಲಿ!

    ಹಾವೇರಿ: ಕರೊನಾ ರಣಕೇಕೆ ಜಿಲ್ಲೆಯಲ್ಲಿ ಮುಂದುವರಿದಿದ್ದು, ಈ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದರಲ್ಲಿ ವಿದ್ಯಾಗಮ ಸೇರಿದಂತೆ ವಿದ್ಯಾರ್ಥಿಗಳ ಕಲಿಕೆಗೆ ಶ್ರಮಿಸುತ್ತಿರುವ ಶಿಕ್ಷಕರು ಸೋಂಕಿನಿಂದ ಮೃತಪಡುತ್ತಿರುವುದು ಶೈಕ್ಷಣಿಕ ವಲಯದಲ್ಲಿ ಆತಂಕ ಹೆಚ್ಚಿಸಿದೆ.

    ಹಾವೇರಿ ಜಿಲ್ಲೆಯಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 6 ಸಾವಿರದ ಗಡಿ ದಾಟಿದೆ. ಈವರೆಗೆ ಒಟ್ಟು 126 ಜನ ಸೋಂಕಿಗೆ ಬಲಿಯಾಗಿದ್ದು, ಅದರಲ್ಲಿ ಕರ್ತವ್ಯ ನಿರತ 9 ಶಿಕ್ಷಕರು ಮೃತಪಟ್ಟಿದ್ದಾರೆ. ಇದು ಶಿಕ್ಷಕರ ವಲಯದಲ್ಲಿ ಭೀತಿಯ ವಾತಾವರಣ ಮೂಡಿಸಿದೆ. ಅಲ್ಲದೆ, ವಾರದಲ್ಲಿ ಒಬ್ಬಿಬ್ಬರು ಶಿಕ್ಷಕರಿಗೆ ಸೋಂಕು ತಗುಲುತ್ತಲೇ ಇದೆ. ಇದುವರೆಗೆ ಜಿಲ್ಲೆಯಲ್ಲಿ 37 ಶಿಕ್ಷಕರಿಗೆ ಕರೊನಾ ದೃಢಪಟ್ಟಿದೆ.

    ವಿದ್ಯಾರ್ಥಿಗಳ ಕಲಿಕೆ ನಿಲ್ಲಬಾರದು ಎಂಬ ಕಾರಣಕ್ಕೆ ವಿದ್ಯಾಗಮ ಯೋಜನೆಯಡಿ ಮನೆಮನೆಗೆ ಭೇಟಿ ನೀಡಿ ಪಾಠ ಮಾಡುತ್ತಿರುವ ಶಿಕ್ಷಕರು ಕರೊನಾಕ್ಕೆ ಬಲಿಯಾಗುತ್ತಿರುವುದು ಶಿಕ್ಷಣ ವ್ಯವಸ್ಥೆ ಮೇಲೆಯೂ ಪರಿಣಾಮ ಬೀರಲಿದೆ. ಅಲ್ಲದೆ, ಮನೆಮನೆಗೆ ಹೋಗಿ ಪಾಠ ಮಾಡಲು ಶಿಕ್ಷಕರು ಹೆದರುವಂತಾಗಿದೆ.

    ಚಿಕಿತ್ಸೆ ಫಲಿಸದೇ 40ರಿಂದ 55 ವರ್ಷ ವಯಸ್ಸಿನ ಶಿಕ್ಷಕರು ಮೃತಪಡುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಮೃತರಲ್ಲಿ ಅನೇಕರು ಇನ್ನೂ ಹತ್ತಾರು ವರ್ಷ ಸೇವಾವಧಿ ಹೊಂದಿರುವವರೇ ಇದ್ದಾರೆ. ಶಿಕ್ಷಕರಲ್ಲಿ ಕರೊನಾ ಸೋಂಕು ಹೆಚ್ಚುತ್ತಿರುವುದು ಪಾಲಕರಲ್ಲೂ ಆತಂಕ ಉಂಟು ಮಾಡಿದೆ. ವಿದ್ಯಾಗಮ ಯೋಜನೆಯಲ್ಲಿ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರು ಶಾಲೆಯ ಬದಲು ಬಯಲು, ಸಮುದಾಯ ಭವನಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇಲ್ಲಿ ನಿತ್ಯ ಸೇರುವ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಈ ಸಮಯದಲ್ಲಿ ನಾನಾ ಕಾರಣಗಳಿಂದ ಮಕ್ಕಳು ಶಿಕ್ಷಕರಿಗೆ ಅತಿ ಹತ್ತಿರದಿಂದ ಮಾತನಾಡಿಸುವುದು ಸಹಜ. ಇದರಿಂದ ಸೋಂಕು ಮಕ್ಕಳಿಗೂ ಹರಡಿದರೆ ಗತಿ ಏನು ಎಂಬ ಭೀತಿಯೂ ಎದುರಾಗಿದೆ.

    ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸೆ. 21ರಿಂದ ಶಾಲಾ, ಕಾಲೇಜ್ ಆರಂಭವಾಗುವ ಸಾಧ್ಯತೆಯಿದೆ. ಇದೇ ವೇಳೆ ಶಿಕ್ಷಕರೇ ಸೋಂಕಿತರಾಗುತ್ತಿರುವುದರಿಂದ ತರಗತಿ ಶುರುವಾದರೆ ಮಕ್ಕಳ ಆರೋಗ್ಯ ಕಾಪಾಡುವುದು ಹೇಗೆ ಎಂಬ ಪ್ರಶ್ನೆಯೂ ಎದ್ದಿದೆ.

    ಜಿಲ್ಲೆಯಲ್ಲಿಯೂ ಅನೇಕ ಶಿಕ್ಷಕರು ಕರೊನಾ ಸೇನಾನಿಗಳಾಗಿ ಆಗಿ ಸೇವೆಯಲ್ಲಿದ್ದಾರೆ. ಈಗಾಗಲೇ 9 ಶಿಕ್ಷಕರು ಕರೊನಾದಿಂದ ಮೃತಪಟ್ಟಿರುವುದರಿಂದ ಶಿಕ್ಷಕರು ಭಯದ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರೊನಾ ಸೋಂಕು ತಗುಲಿ ತಾಲೂಕು ಹಾಗೂ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗುವ ಶಿಕ್ಷಕರಿಗೆ ವಿಶೇಷ ಕಾಳಜಿ ವಹಿಸಿ ಚಿಕಿತ್ಸೆ ನೀಡುವಂತೆ ಡಿಡಿಪಿಐ ಅಂದಾನಪ್ಪ ವಡಗೇರಿ ಅವರು, ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ ಅವರಿಗೆ ಪತ್ರ ಬರೆದು ವಿನಂತಿಸಿದ್ದಾರೆ.

    ಜಾಗೃತರಾಗಬೇಕಿದೆ ಶಿಕ್ಷಕರು: ವಿದ್ಯಾಗಮ ಯೋಜನೆಯಲ್ಲಿ ಮಕ್ಕಳಿಗೆ ಪಾಠ ಮಾಡುವ ಪ್ರಕ್ರಿಯೆ ನಿರಂತರವಾಗಿ ಸಾಗಿದ್ದು, ಈ ಸಮಯದಲ್ಲಿ ಶಿಕ್ಷಕರು ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಇನ್ನಿತರ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದೆ. ಈ ಕುರಿತು ಡಿಡಿಪಿಐ, ಈಗಾಗಲೇ ಎಲ್ಲ ಶಿಕ್ಷಕರಿಗೂ ಸೂಚನೆ ನೀಡಿದ್ದಾರೆ. ಆದರೂ ಕೆಲ ಶಿಕ್ಷಕರು ಅನಾರೋಗ್ಯ ಕಾಣಿಸಿಕೊಂಡ ತಕ್ಷಣ ಕರೊನಾ ಟೆಸ್ಟ್ ಮಾಡಿಸಲು ಹಿಂದೇಟು ಹಾಕಿ ಸೋಂಕು ತೀವ್ರವಾಗಿ ವ್ಯಾಪಿಸಿದ ನಂತರ ಟೆಸ್ಟ್ ಮಾಡಿಸಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕೆಲವರಿಗೆ ಕರೊನಾ ಜೊತೆಗೆ ಬಿಪಿ, ಶುಗರ್ ಸೇರಿ ಅನ್ಯ ಸಮಸ್ಯೆಗಳು ಈ ಸಮಯದಲ್ಲಿ ಉಲ್ಬಣಿಸಿ ಚಿಕಿತ್ಸೆಗೆ ಸ್ಪಂದಿಸದೆ ಅನೇಕರು ಮೃತಪಡುತ್ತಿದ್ದಾರೆ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.

    ಶಿಕ್ಷಕರಿಗೆ ಕರೊನಾ ಸೋಂಕು ತಗಲುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಇನ್ನೂ 28 ಶಿಕ್ಷಕರಿಗೆ ಪಾಸಿಟಿವ್ ಬಂದಿದೆ. ನಮ್ಮ ಶಿಕ್ಷಕರು ಆರೋಗ್ಯದ ಬಗ್ಗೆ ನಿಷ್ಕಾಳಜಿ ತೋರಬಾರದು. ಸೋಂಕಿನ ಲಕ್ಷಣ ಕಂಡ ತಕ್ಷಣವೇ ಚಿಕಿತ್ಸೆಗೆ ದಾಖಲಾಗಬೇಕು. ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಯಾವುದೇ ಕಾರಣಕ್ಕೂ ಭಯಪಡಬಾರದು.

    | ಅಂದಾನಪ್ಪ ವಡಗೇರಿ, ಡಿಡಿಪಿಐ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts