More

    9 ಲಕ್ಷ ಮಂದಿಗೆ ಲಸಿಕೆ ಹಾಕಲು ಗುರಿ: ಜಿಲ್ಲಾಧಿಕಾರಿ ಆರ್ ಲತಾ ಮಾಹಿತಿ,ಲಸಿಕಾಕರಣಕ್ಕೆ ಚಾಲನೆ

    ಚಿಂತಾಮಣಿ : ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರ ಪೈಕಿ 9 ಲಕ್ಷ ಮಂದಿಗೆ ಲಸಿಕೆ ಹಾಕಲು ಗುರಿ ನಿಗದಿಪಡಿಸಲಾಗಿದೆ. ಈ ಪೈಕಿ ಈಗಾಗಲೇ ಶೇ.50 ರಷ್ಟು ಮಂದಿಗೆ ಲಸಿಕಾಕರಣ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಲತಾ ತಿಳಿಸಿದರು.

    ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಶ್ರೀ ಲಕ್ಷ್ಮೀ ವಿದ್ಯಾಸಂಸ್ಥೆ ಸಹಯೋಗದೊಂದಿಗೆ ಚಿಂತಾಮಣಿ ನಗರದ ವಿಕ್ರಂ ಕಾಲೇಜಿನ ಪದವಿ ವಿದ್ಯಾರ್ಥಿಗಳಿಗೆ ಮಂಗಳವಾರ ಆಯೋಜಿಸಿದ್ದ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಳೆದ ವಾರದಲ್ಲಿ ಆಯೋಜಿಸಿದ್ದ ವಿಶೇಷ ಲಸಿಕಾ ಮೇಳದಲ್ಲಿ ಅತಿ ಹೆಚ್ಚು ಮಂದಿಗೆ ಲಸಿಕೆ ಹಾಕಿಸುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಮುಂಬರುವ ದಿನಗಳಲ್ಲೂ ಲಸಿಕಾಕರಣದಲ್ಲಿ ಉತ್ತಮ ಸಾಧನೆ ತೋರುವ ನಿಟ್ಟಿನಲ್ಲಿ ಜಿಲ್ಲಾಡಳಿತ ಶ್ರಮಿಸುತ್ತಿದೆ ಎಂದರು.

    ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತೆಯರು ಯಾರೂ ಕೂಡ ಕರೊನಾ ಸೋಂಕಿನಿಂದ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಮೃತಪಟ್ಟಿಲ್ಲ. ಇದು ಲಸಿಕೆ ಪರಿಣಾಮಕಾರಿ ಎನ್ನುವುದಕ್ಕೆ ಸ್ಪಷ್ಟ ನಿದರ್ಶನ ಎಂದರು.ಸರ್ಕಾರ ಪದವಿ ಕಾಲೇಜುಗಳನ್ನು ಪ್ರಾರಂಭ ಮಾಡುವ ದಿಸೆಯಲ್ಲಿ ಎಲ್ಲ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕಾಕರಣಕ್ಕೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಲಸಿಕಾ ಅಭಿಯಾನ ಕೈಗೊಳ್ಳಲಾಗುತ್ತಿದೆ.

    ಈಗಾಗಲೇ ಜಿಲ್ಲೆಯ ಕೆಲವೊಂದು ಕಾಲೇಜುಗಳಲ್ಲಿ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಪ್ರಸ್ತುತ 26,500 ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವುದು ಬಾಕಿ ಇದೆ. ಒಂದು ವಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಗುರಿಯನ್ನು ಸಾಧಿಸಲಾಗುತ್ತದೆ. ಇದರ ಜತೆಗೆ ಆಯಾ ಕಾಲೇಜುಗಳ ಬೋಧಕ-ಬೋಧಕೇತರ ಸಿಬ್ಬಂದಿಗೂ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದರು. ಕರೊನಾ ಮೊದಲನೇ ಮತ್ತು ಎರಡನೇ ಅಲೆಯು ಪ್ರತಿಯೊಬ್ಬರ ಮೇಲೆ ದುಷ್ಪರಿಣಾಮ ಬೀರಿದೆ. ಈ ನಿಟ್ಟಿನಲ್ಲಿ ಪರಿಹಾರ ಕ್ರಮಗಳ ಅನುಷ್ಠಾನದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಪರಿಶ್ರಮವನ್ನು ಎಷ್ಟು ಬಣ್ಣಿಸಿದರೂ ಸಾಲದು ಎಂದರು.

    ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವ ಡಾ ಕೆಂಪರಾಜು ಮಾತನಾಡಿ, ಹಳ್ಳಿಗಳಲ್ಲಿ ಇನ್ನೂ ಕೆಲವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಪ್ರಜ್ಞಾವಂತ ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಳ್ಳುವುದರ ಜತೆಗೆ ಸುತ್ತಲಿನ ಜನರಲ್ಲಿ ಲಸಿಕಾಕರಣದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

    ಜಿಲ್ಲಾ ಆಯುಷ್ ಅಧಿಕಾರಿ ತಬೀಬಾ ಬಾನು ಅವರು ರೋಗನಿರೊಧಕ ಶಕ್ತಿ ವೃದ್ಧಿಸುವ ಮಾತ್ರೆಗಳನ್ನು ವಿತರಿಸಿದರು.
    ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಡಾ.ವೆಂಕಟೇಶಮೂರ್ತಿ, ಶ್ರೀ ಲಕ್ಷ್ಮೀ ವಿದ್ಯಾಸಂಸ್ಥೆಯ ಮುಖ್ಯಸ್ಥ ನರಸಿಂಹರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ, ಚಿಂತಾಮಣಿ ತಹಸೀಲ್ದಾರ್ ಹನುಮಂತರಾಯಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಸ್ವಾತಿ, ಪೌರಾಯುಕ್ತ ಚೇತನ್ ಮತ್ತಿತರರಿದ್ದರು.
    ಲಸಿಕಾಕರಣಕ್ಕೆ ಸಹಕಾರ ಅಗತ್ಯ : ಕರೊನಾ ಕಡಿಮೆಯಾಗಿದ್ದರೂ ಕಡ್ಡಾಯವಾಗಿ ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸ್ ಬಳಕೆ, ಪರಸ್ಪರ ಅಂತರ ಕಾಯ್ದುಕೊಳ್ಳುವಿಕೆಯ ಜತೆಗೆ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು. ಕರೊನಾದಿಂದ ಮುಕ್ತರಾಗಲು ಲಸಿಕೆಯೊಂದೇ ಪ್ರಮುಖ ಅಸ್ತ್ರ. ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಬಂದು ಲಸಿಕೆ ಹಾಕಿಸಿಕೊಳ್ಳುವ ಮೂಲಕ ಶೇ.100 ರಷ್ಟು ಲಸಿಕಾಕರಣಕ್ಕೆ ಸಹಕಾರ ನೀಡಬೇಕು ಎಂದು ಡಿಸಿ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts