More

    ಡಿಸೆಂಬರ್​ನಲ್ಲಿ ಗೋವಿನಜೋಳಕ್ಕೆ 79 ಕೋಟಿ ರೂ. ಮಧ್ಯಂತರ ಪರಿಹಾರ

    ಹಾನಗಲ್ಲ: ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಸುರಿದ ಅಧಿಕ ಮಳೆಯಿಂದ ಹಾನಿಯಾದ ಗೋವಿನಜೋಳ ಬೆಳೆಗೆ ಬೆಳೆ ವಿಮೆ ಕಂಪನಿ ಶೇ. 25ರ ಮಧ್ಯಂತರ ಪರಿಹಾರವನ್ನು ಡಿಸೆಂಬರ್ ಮೊದಲ ವಾರದಲ್ಲಿ ಬಿಡುಗಡೆಗೊಳಿಸಲಿದೆ ಎಂದು ಸಂಸದ ಶಿವಕುಮಾರ ಉದಾಸಿ ತಿಳಿಸಿದರು.

    ಪಟ್ಟಣದ ತಮ್ಮ ಗೃಹಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಜಿಲ್ಲೆಯಲ್ಲಿ ಅತಿವೃಷ್ಟಿಯ ಹಿನ್ನೆಲೆಯಲ್ಲಿ 1,36,830 ರೈತರ ಖಾತೆಗೆ ಗೋವಿನಜೋಳದ ಬೆಳೆ ವಿಮೆ ಮಧ್ಯಂತರ ಪರಿಹಾರವಾಗಿ 79.37 ಕೋಟಿ ರೂಪಾಯಿ ಜಮಾ ಆಗಲಿವೆ. ಹಾನಗಲ್ಲ ತಾಲೂಕಿನ 21,363 ರೈತರ ಖಾತೆಗೆ 10.96 ಕೋಟಿ ರೂಪಾಯಿ ಜಮೆಯಾಗಲಿದೆ. ಹಾನಗಲ್ಲ ತಾಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ಇದುವರೆಗೆ ಒಟ್ಟು 1153 ಮನೆಗಳು ಹಾನಿಯಾದ ವರದಿಯಾಗಿದೆ. ಈ ಕುರಿತಂತೆ ತಾಲೂಕು ಆಡಳಿತದಿಂದ 10.41 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ತಾಲೂಕಿನಲ್ಲಿ 11,520 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆಗಳು ಹಾನಿಯಾಗಿದೆ. 223 ಹೆ. ತೋಟಗಾರಿಕೆ ಬೆಳೆ ಹಾನಿಯಾಗಿದೆ. 18,649 ರೈತರಿಗೆ ಆರು ಹಂತದಲ್ಲಿ 26.48 ಕೋಟಿ ರೂ. ಬೆಳೆ ಹಾನಿ ಪರಿಹಾರ ಜಮಾ ಮಾಡಲಾಗಿದೆ ಎಂದು ವಿವರಿಸಿದರು.

    270 ಕಿ.ಮೀ. ಗ್ರಾಮೀಣ ರಸ್ತೆಗಳು ಹಾಳಾಗಿದ್ದು, ಎನ್​ಡಿಆರ್​ಎಫ್​ನಿಂದ ಪರಿಹಾರ ಹಣ ಮಂಜೂರಾಗಬೇಕಿದೆ. ಜಿಲ್ಲಾಧಿಕಾರಿಗೆ ಹಣ ಬಿಡುಗಡೆ ಮಾಡಲು ಸೂಚಿಸಲಾಗಿದೆ. ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 28,509 ವಿದ್ಯಾರ್ಥಿಗಳಿಗೆ ಒಟ್ಟು 10.53 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ. ಹಾನಗಲ್ಲ ತಾಲೂಕಿನ 4708 ವಿದ್ಯಾರ್ಥಿಗಳಿಗೆ 1.57 ಕೋಟಿ ರೂ. ಬಿಡುಗಡೆಯಾಗಿದೆ. ಈ ಯೋಜನೆಯನ್ನು ನೇಕಾರರು, ಮೀನುಗಾರರು, ಆಟೋ, ಟ್ಯಾಕ್ಸಿ ಚಾಲಕರ ಮಕ್ಕಳಿಗೂ ವಿಸ್ತರಿಸಲಾಗಿದೆ. ಅರ್ಹರು ಈ ಯೋಜನೆಯ ಸೌಲಭ್ಯ ಪಡೆಯಬೇಕು ಎಂದರು.

    ಅತಿವೃಷ್ಟಿಯಿಂದಾಗಿ ತಾಲೂಕಿನ 300 ಶಾಲೆಗಳು ಬಹುತೇಕ ಹಾನಿಗೊಳಗಾಗಿದ್ದು, ಇವುಗಳಲ್ಲಿ 145 ಕೊಠಡಿಗಳು ಸಂಪೂರ್ಣ ಶಿಥಿಲವಾಗಿವೆ. ಈಗಾಗಲೇ ಪ್ರತಿ ತಾಲೂಕಿನಲ್ಲಿ 20 ಶಾಲೆಗಳ ನಿರ್ವಣಕ್ಕೆ ಮುಖ್ಯಮಂತ್ರಿಗಳು ಆನ್​ಲೈನ್ ಮೂಲಕ ಕಾಮಗಾರಿಗೆ ಚಾಲನೆ ನೀಡುತ್ತಿದ್ದಾರೆ. ತಾಲೂಕಿನ ಎಲ್ಲ ಶಾಲೆಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ. ಉದ್ಯೋಗಖಾತ್ರಿ ಯೋಜನೆಯಡಿ ಗ್ರಾಪಂ ವ್ಯಾಪ್ತಿಯಲ್ಲಿ 54 ಕಿ.ಮೀ. ಚರಂಡಿ ನಿರ್ವಿುಸಲಾಗಿದೆ. ಇನ್ನೂ 160 ಕಿ.ಮೀ.ಗಳಷ್ಟು ಚರಂಡಿ ನಿರ್ಮಾಣ ಬಾಕಿ ಉಳಿದಿದೆ. ಸ್ವಚ್ಛಭಾರತ ಯೋಜನೆಯಡಿ ಈ ಚರಂಡಿ ನೀರನ್ನು (ಬೂದು ನೀರು ನಿರ್ವಹಣೆ) ಶುದ್ಧೀಕರಿಸಿ ಕೆರೆ-ಕಟ್ಟೆಗಳಿಗೆ ಹರಿಸಲು ಸೂಚಿಸಲಾಗಿದೆ ಎಂದು ಶಿವಕುಮಾರ ಉದಾಸಿ ಸ್ಪಷ್ಟಪಡಿಸಿದರು.

    ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ, ತಾಪಂ ಇಒ ಬಿ.ಸುನೀಲಕುಮಾರ, ಬಿಇಒ ಆರ್.ಎನ್. ಹುರಳಿ, ವಿವಿಧ ಇಲಾಖೆ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ಅತಿವೃಷ್ಟಿಯಿಂದ ಅಡಕೆ ಬೆಳೆಯೂ ಹಾನಿಯಾಗಿದೆ. ಅಡಕೆಗೂ ಮಧ್ಯಂತರ ಪರಿಹಾರ ವಿತರಣೆ ಮಾಡುವಂತೆ ವಿಮೆ ಕಂಪನಿ ಒತ್ತಾಯಿಸಲಾಗಿದೆ. ಈಗಾಗಲೇ ಕಂದಾಯ, ತೋಟಗಾರಿಕೆ ಇಲಾಖೆ ಸಿಬ್ಬಂದಿ ಅಡಕೆ ಫಸಲು ಹಾನಿ ಕುರಿತು ಸರ್ವೆ ಕೈಗೊಂಡಿದ್ದು, ಶೀಘ್ರದಲ್ಲಿ ವರದಿ ಸಲ್ಲಿಸಲಿದ್ದಾರೆ. ನಂತರ ಮಧ್ಯಂತರ ಪರಿಹಾರದ ಅಂದಾಜು ಮೊತ್ತ ನಿರ್ಧಾರವಾಗಲಿದೆ.

    | ಶಿವಕುಮಾರ ಉದಾಸಿ, ಸಂಸದ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts