More

    ಲಲಿತಕಲಾ ಅಕಾಡೆಮಿ ಪ್ರಶಸ್ತಿಗೆ ಜಿ.ಎಂ. ಹೆಗಡೆ ತಾರಗೋಡ ಭಾಜನ

    ವಿಜಯವಾಣಿ ಸುದ್ದಿಜಾಲ ಶಿರಸಿ: ಕಲೆಯ ಒಂದೇ ಆಯಾಮಕ್ಕೆ ಅಂಟಿಕೊಳ್ಳದೇ ಕಲಾಕೃತಿಯಲ್ಲಿ ವಿವಿಧ ಮುಖಗಳ ಅನಾವರಣ ಮಾಡಿದರೆ ಮಾತ್ರ ಕಲಾಕಾರ ವಿಭಿನ್ನ ಮಾರ್ಗದಲ್ಲಿ ಸಾಗಲು ಸಾಧ್ಯ ಎಂಬ ತತ್ವಾ್ತದರ್ಶ ಹೊಂದಿರುವ ಇಲ್ಲಿನ ತಾರಗೋಡದ ಚಿತ್ರಕಲಾಕಾರ ಜಿ.ಎಂ. ಹೆಗಡೆ ಅವರು ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಸ್ತುತ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

    1948ರಲ್ಲಿ ಜನಿಸಿದ ಜಿ.ಎಂ. ಹೆಗಡೆ ಪ್ರಾಥಮಿಕ ಶಾಲಾ ಹಂತದಿಂದಲೇ ನಾಟಕ, ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಪ್ರೌಢಶಾಲಾ ಹಂತದಲ್ಲಿ ಕಲಾಭ್ಯಾಸ ಮಾಡುವ ಮೂಲಕ ತಮ್ಮ ಆಸಕ್ತಿಗೆ ನೀರೆರೆದರು. ನಂತರ ಗದುಗಿನ ಕಲಾವಿದರಾದ ಎಂ.ಎ. ಚೆಟ್ಟಿ ಹಾಗೂ ಟಿ.ಪಿ. ಅಕ್ಕಿ ಶಿಷ್ಯನಾಗಿ ಇದೇ ಕ್ಷೇತ್ರದಲ್ಲಿ ಮುಂದುವರಿದರು. 1970ರಲ್ಲಿ ಅಂತಾರಾಷ್ಟ್ರೀಯ ಕಲಾವಿದ ಎಂಟಿವಿ ಆಚಾರ್ಯರ ಮಾರ್ಗದರ್ಶನ ಇವರಿಗೆ ಲಭಿಸಿದ್ದು, ಕಲಾ ಕ್ಷೇತ್ರದಲ್ಲಿ ಇವರ ಬೆಳವಣಿಗೆಗೆ ಪೂರಕವಾಯಿತು. ಕಲಾಕೃತಿಯಲ್ಲಿ ಕೇವಲ ಒಂದೇ ಪ್ರಕಾರಕ್ಕೆ ಅಂಟಿಕೊಳ್ಳದ ಇವರು ವಿವಿಧ ಆಯಾಮಗಳನ್ನು ಕಲಾಕೃತಿಯಲ್ಲಿ ತೋರ್ಪಡಿಸುತ್ತ ಬಂದಿದ್ದು ವಿಶೇಷ.

    1982ರಲ್ಲಿ ಮೈಸೂರಿನಲ್ಲಿ ಪ್ರಥಮ ಬಾರಿಗೆ ಏಕವ್ಯಕ್ತಿ ಕಲಾ ಪ್ರದರ್ಶನ ನೀಡುವುದರೊಂದಿಗೆ ಸತತವಾಗಿ ರಾಜ್ಯದ ಕಲಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಾಜ್ಯದ ಪ್ರಮುಖ ದೈನಿಕ, ವಾರಪತ್ರಿಕೆಗಳು ಇವರ ಕಲಾಕೃತಿಗಳನ್ನು ಪ್ರಕಟಿಸುವ ಜತೆಗೆ ಕಲಾ ವಿಮರ್ಶೆ ಮಾಡಿವೆ. ಜಲವರ್ಣ ಮಾಧ್ಯಮದಲ್ಲಿ ಇವರು ರಚಿಸಿದ ವಿಶ್ವಾಮಿತ್ರ ಮೇನಕೆ, ಶಬರಾರ್ಜುನ, ದುಷ್ಯಂತ- ಶಕುಂತಲೆ, ವಿದುರ, ರುಕ್ಮಾಂಗದ, ಮೋಹಿನಿಯಂತಹ ಪೌರಾಣಿಕ ಕೃತಿಗಳು ಜನಪ್ರಿಯವಾಗಿವೆ. ಹಂಪಿಯ ಕಲ್ಲಿನ ರಥ, ಉತ್ತರ ಕನ್ನಡದ ಹಲವು ದೇವಾಲಯಗಳು, ಜಲಪಾತಗಳು ಕೂಡ ಮನಮೋಹಕ ಎಂಬಷ್ಟು ಅದ್ಭುತವಾಗಿ ಮೂಡಿಬಂದಿವೆ.

    ಹೆಗಡೆ ಅವರು ಅಂಚೆ ಕಲಾ ಶಿಕ್ಷಣ ಸಂಸ್ಥೆಯ ನಿರ್ದೇಶಕರಾಗಿ, ಉಡುಪಿಯ ಆರ್ಟಿಸ್ಟ್ ಫೋರಂ ಅಜೀವ ಸದಸ್ಯರಾಗಿ, ಉತ್ತರ ಕನ್ನಡ ಜಿಲ್ಲೆ ಚಿತ್ರಕಲಾ ಪರಿಷತ್ ಸ್ಥಾಪಕ ಅಧ್ಯಕ್ಷ ಹಾಗೂ ನಿರ್ದೇಶಕ ಸೇರಿದಂತೆ ಹಲವು ಸಂಘ,ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಹೋಮಿಯೋಪಥಿ ಔಷಧ ನೀಡುವ ವೈದ್ಯರಾಗಿರುವ ಇವರು, ಹವ್ಯಾಸಿ ಲೇಖಕರೂ ಆಗಿರುವುದು ವಿಶೇಷ. ಇವರ ಕಲಾ ಸಾಧನೆಗೆ ಗುರುತಿಸಿ ಎಂಟಿವಿ ಆಚಾರ್ಯ ರಾಷ್ಟ್ರೀಯ ಪ್ರಶಸ್ತಿ, ಆರ್ಯಭಟ ರಾಷ್ಟ್ರೀಯ ಪ್ರಶಸ್ತಿ, ನಾಡರತ್ನ ಪಿ. ಲಂಕೇಶ ಪ್ರಶಸ್ತಿ, ರಾಷ್ಟ್ರಭೂಷಣ ಪ್ರಶಸ್ತಿ, ಡಾ. ರಾಜಕುಮಾರ ಪ್ರಶಸ್ತಿ, ಕಲಾಶ್ರೀ ಪ್ರಶಸ್ತಿ, ಉತ್ತಮ ಕಲಾ ಶಿಕ್ಷಕ ಪ್ರಶಸ್ತಿ, ಅಖಿಲ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಒಲಿದು ಬಂದಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts